ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಮಿಕ ಮಕ್ಕಳ ಶಾಲೆ ನಿರ್ವಹಣೆ ಡಿಪಿಎಸ್‌ಗೆ!

Last Updated 11 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಎಲ್ಲ ಮಹಾ­ನಗರ­ಪಾಲಿಕೆ ವ್ಯಾಪ್ತಿಯಲ್ಲಿ ಕಾರ್ಮಿ­ಕರ ಮಕ್ಕಳಿಗಾಗಿ ಆರಂಭಿಸಲು ಉದ್ದೇ­ಶಿಸಿ­ರುವ  11 ವಸತಿ ಶಾಲೆಗಳ ನಿರ್ವ­ಹಣೆ­ಯನ್ನು ದೆಹಲಿ ಪಬ್ಲಿಕ್‌ ಶಾಲೆ (ಡಿಪಿಎಸ್‌) ಆಡಳಿತ ಮಂಡಳಿಗೆ ವಹಿ­ಸಲು  ಸರ್ಕಾರ ಮುಂದಾಗಿದೆ ಎಂದು ಕಾರ್ಮಿಕ ಇಲಾಖೆ ಸಚಿವ ಪಿ.ಟಿ. ಪರಮೇಶ್ವರ್‌ ನಾಯ್ಕ ತಿಳಿಸಿದರು.

‘ಡಿಪಿಎಸ್‌ನಲ್ಲಿ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಈ ಬಗ್ಗೆ ಹಲವರು ಸಲಹೆ ನೀಡಿದರು. ಡಿಪಿಎಸ್‌ಗೆ ನಿರ್ವಹಣೆ ಜವಾಬ್ದಾರಿ ನೀಡಬಹುದು ಎಂದು ಮುಖ್ಯಮಂತ್ರಿ ಸಹ ತಿಳಿಸಿದರು. ಆದ್ದರಿಂದ ಈ ಶಾಲೆಗಳ ನಿರ್ವ­ಹಣೆಯನ್ನು ಡಿಪಿಎಸ್‌ಗೆ ವಹಿಸುವ ಚಿಂತನೆ ಇದೆ ಎಂದು ತಿಳಿಸಿದರು.
ಕಾಂಗ್ರೆಸ್‌ ಪಕ್ಷದ ಹಿರಿಯ ಮುಖಂಡರು ಈ ಶಾಲಾ ಆಡಳಿತ ಮಂಡಳಿಯಲ್ಲಿರುವುದರಿಂದ ಹೊರ­ಗುತ್ತಿಗೆ ಮಾದರಿಯಲ್ಲಿ ವಸತಿ ಶಾಲೆ­ಗಳನ್ನು ನಿರ್ವಹಣೆಯನ್ನು ನೀಡ­ಲಾ­ಗುತ್ತಿದೆಯೇ ಎನ್ನುವ ಪ್ರಶ್ನೆಗೆ ಉತ್ತರಿ­ಸಿದ ಸಚಿವರು, ‘ಈ ವಿಷಯ ಗೊತ್ತಿಲ್ಲ. ಶಾಲೆಗಳನ್ನು ಡಿಪಿಎಸ್‌ಗೆ ವಹಿಸುವ ಬಗ್ಗೆ  ತೀರ್ಮಾನ ಕೈ­ಗೊಂಡಿಲ್ಲ. ಕೇವಲ ಚಿಂತನೆ ಮಾಡಿದ್ದೇವೆ’ ಎಂದರು.

ಪ್ರತಿ ವಸತಿ ಶಾಲೆಗಳ ಕಟ್ಟಡ ಮತ್ತು ಮೂಲಸೌಕರ್ಯ ಕಲ್ಪಿಸಲು 3 ಕೋಟಿ ರೂಪಾಯಿ ವೆಚ್ಚ ಮಾಡ­ಲಾ­ಗು­ವುದು. ಎಲ್ಲ ಸೌಲಭ್ಯಗಳನ್ನು ಕಲ್ಪಿ­ಸಿದ ನಂತರವೇ ನಿರ್ವಹಣೆ ಜವಾ­ಬ್ದಾರಿ ನೀಡಲಾಗುವುದು’ ಎಂದರು. ಈಗಾಗಲೇ ಬಳ್ಳಾರಿ, ಮೈಸೂರು, ಹುಬ್ಬಳ್ಳಿ–ಧಾರವಾಡದಲ್ಲಿ ಶಾಲೆಗಳಿಗೆ ಸ್ಥಳ ಗುರುತಿಸಲಾಗಿದೆ. ಕೆಲವೆಡೆ ಕರ್ನಾಟಕ ಕೈಗಾರಿಕಾ ಪ್ರದೇಶಾ­ಭಿವೃದ್ಧಿ ಮಂಡಳಿ (ಕೆಐಎಡಿಬಿ) ಜಾಗ ಪಡೆದು­ಕೊಳ್ಳಲಾಗುವುದು.

ಈ ಶಾಲೆಗಳಲ್ಲಿ ಕಟ್ಟಡ ಕಾರ್ಮಿಕರ ಮಕ್ಕಳ ಪ್ರವೇಶಕ್ಕೆ ಮೊದಲ ಆದ್ಯತೆ ನೀಡಲಾಗುವುದು. ನಂತರ ಇತರ ಕಾರ್ಮಿಕರ ಮಕ್ಕಳಿಗೆ  ಅವಕಾಶ ಕಲ್ಪಿಸ­ಲಾಗುವುದು. 5ನೇ ತರಗತಿಯಿಂದ ಪಿಯುವರೆಗೆ ಶಿಕ್ಷಣ ನೀಡಲಾಗು­ವುದು. ಮುಂದಿನ ಶೈಕ್ಷಣಿಕ ವರ್ಷ­ದಿಂದಲೇ ಈ ಶಾಲೆಗಳನ್ನು ಆರಂಭಿಸ­ಲಾಗುವುದು ಎಂದು ತಿಳಿಸಿದರು.

ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ­­­ಯಲ್ಲಿ 2066 ಕೋಟಿ ರೂಪಾಯಿ ಲಭ್ಯವಿದ್ದು, ಕಾರ್ಮಿಕರ ಮಕ್ಕಳಿಗೆ ಶಿಕ್ಷಣ ಸೇರಿದಂತೆ ವಿವಿಧ ಯೋಜನೆಗಳಿಗೆ ಸಾವಿರ ಕೋಟಿ  ಬಳಸಿಕೊಳ್ಳ­ಲಾಗು­ವುದು ಎಂದರು. 200 ಕೋಟಿ ರೂಪಾಯಿ ವೆಚ್ಚ­ದಲ್ಲಿ ಸರ್‌ ಎಂ. ವಿಶ್ವೇಶ್ವರಯ್ಯ ಕಟ್ಟಡ ನಿರ್ಮಾಣ ಅಕಾಡೆಮಿ ಸ್ಥಾಪಿಸಲಾಗು­ವುದು. ಅಧಿಕಾರಿಗಳಿಗೆ ಮತ್ತು ಕಟ್ಟಡ ಕಾರ್ಮಿಕರಿಗೆ ಅಕಾಡೆಮಿಯಲ್ಲಿ ತರಬೇತಿ ನೀಡಲಾಗುವುದು ಎಂದು ತಿಳಿಸಿದರು.ರಾಜ್ಯದಲ್ಲಿ 100 ಕೌಶಲ್ಯ ಕೇಂದ್ರಗಳನ್ನು ಆರಂಭಿಸಿ ಕಟ್ಟಡ ಕಾರ್ಮಿಕರಿಗೆ ಕೌಶಲ್ಯ ವೃದ್ಧಿಸುವ ತರಬೇತಿ ನೀಡಲಾಗುವುದು ಎಂದು ತಿಳಿಸಿದರು.

ಹಸ್ತಕ್ಷೇಪ ಇಲ್ಲ: ಬಳ್ಳಾರಿ ಜಿಲ್ಲಾಡಳಿತದಲ್ಲಿ ತಾವು ಅನಗತ್ಯವಾಗಿ ಹಸ್ತಕ್ಷೇಪ ಮಾಡಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಆಗಿರುವ ಪರಮೇಶ್ವರ ನಾಯಕ್‌ ತಿಳಿಸಿದರು.

ಬಳ್ಳಾರಿ ಅಭಿವೃದ್ಧಿಗೆ ಕೆಲವರು ಅಡ್ಡಿ ಮಾಡುತ್ತಿದ್ದಾರೆ ಎಂದು ಶಾಸಕ ಅನಿಲ್‌ ಲಾಡ್‌ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, ಅನಿಲ್‌ ಲಾಡ್‌ ಜತೆ ಯಾವುದೇ ರೀತಿಯ ಭಿನ್ನಾಭಿಪ್ರಾಯ ಇಲ್ಲ. ತಾವು ಸಚಿವ ಸ್ಥಾನಕ್ಕೂ ಲಾಬಿ ಮಾಡಿಲ್ಲ. ಪಕ್ಷದ ಹೈಕಮಾಂಡ್‌ ನಿರ್ದೇಶನದಂತೆ ನಡೆದುಕೊಂಡಿದ್ದೇನೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT