ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಮಿಕ ಸಂಘಟನೆ ಮುಷ್ಕರಕ್ಕೆ ಉಡುಪಿ ಜಿಲ್ಲೆ ಮಿಶ್ರ ಪ್ರತಿಕ್ರಿಯೆ

Last Updated 29 ಫೆಬ್ರುವರಿ 2012, 10:35 IST
ಅಕ್ಷರ ಗಾತ್ರ

ಕುಂದಾಪುರ: ಏರುತ್ತಿರುವ ಅಗತ್ಯ ವಸ್ತುಗಳ ಬೆಲೆ ನಿಯಂತ್ರಿಸಲು ಸರ್ಕಾರ ಯಾವುದೆ ಕ್ರಮ ಕೈಗೊಳ್ಳುತ್ತಿಲ್ಲ. ಪದೇ ಪದೇ ಪೆಟ್ರೋಲ್ ಬೆಲೆ ಏರಿಸುವ ಮೂಲಕ ಪರೋಕ್ಷವಾಗಿ ಬೆಲೆ ಏರಿಕೆಗೆ ಕುಮುಕ್ಕು ನೀಡುತ್ತಿದೆ ಎಂದು ಸಿ.ಐ.ಟಿ.ಯು ಜಿಲ್ಲಾ ಘಟಕ ಉಪಾಧ್ಯಕ್ಷ ಮಹಾಬಲ ವಡೇರಹೋಬಳಿ ಇಲ್ಲಿ ದೂರಿದರು.

ದೇಶದ ಪ್ರಮುಖ ಕಾರ್ಮಿಕ ಸಂಘಟನೆಗಳು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜನವಿರೋಧಿ ನೀತಿ ವಿರೋಧಿಸಿ ಮಂಗಳವಾರ ದೇಶವ್ಯಾಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ಹಿನ್ನೆಲೆಯಲ್ಲಿ ಕುಂದಾಪುರ ಶಾಸ್ತ್ರಿ ವೃತ್ತ ಬಳಿ ನಡೆದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.

ಸರ್ಕಾರಿ ಒಡೆತನದ ಉದ್ದಿಮೆಗಳನ್ನು ಒಳಗೊಂಡಂತೆ ಎಲ್ಲೆಡೆ ನಿರಂತರವಾಗಿ ನಡೆಯಬೇಕಾದ ಕೆಲಸಗಳನ್ನು ಗುತ್ತಿಗೆ ಪದ್ಧತಿಯಲ್ಲಿ ನಿರ್ವಹಿಸುವ ಮೂಲಕ ಕಾರ್ಮಿಕರನ್ನು ಬಿಡಿಗಾಸಿಗೆ ದುಡಿಸಿಕೊಳ್ಳಲಾಗುತ್ತಿದೆ.

ಸರ್ಕಾರವೇ ನಿಗದಿ ಪಡಿಸಿದ ಕನಿಷ್ಠ ವೇತನ ಹಾಗೂ ಇತರ ಸವಲತ್ತು ನಿರಾಕರಿಸಲಾಗುತ್ತಿದೆ. ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸುವ ಸರ್ಕಾರದ ಯೋಜನೆಗೆ ಸೂಕ್ತ ಸಂಪನ್ಮೂಲ ಒದಗಿಸುತ್ತಿಲ್ಲ ಎಂದು ಅವರು ಆರೋಪಿಸಿದರು.

ಕಾರ್ಮಿಕರ ಹಕ್ಕು ಮೊಟಕುಗೊಳಿಸಲು ಸರ್ಕಾರಗಳು ಬಹುರಾಷ್ಟ್ರೀಯ ಕಂಪೆನಿಗಳೊಂದಿಗೆ ಶಾಮೀಲಾಗಿದೆ ಎಂದು ದೂರಿದರು.

ಸಿ.ಐ.ಟಿ.ಯು ಜಿಲ್ಲಾ ಘಟಕ ಅಧ್ಯಕ್ಷ ಕೆ.ಶಂಕರ ಮಾತನಾಡಿ, ತಾಲ್ಲೂಕು ಸಂಘಟನೆ ಅಧ್ಯಕ್ಷ ಎಚ್.ನರಸಿಂಹ, ಕಾರ್ಯದರ್ಶಿ ಸುರೇಶ್ ಕಲ್ಲಾಗಾರ್ ಸೇರಿದಂತೆ ಪ್ರಮುಖ ಕಾರ್ಮಿಕ ಸಂಘಟನೆ ಮುಖಂಡರು ಬೆಲೆಯೇರಿಕೆ ನಿಯಂತ್ರಿಸಲು ಸರ್ಕಾರಗಳು ಕೂಡಲೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

45 ದಿನಗಳ ಒಳಗೆ ಕಾರ್ಮಿಕ ಸಂಘಟನೆಗಳ ಕಡ್ಡಾಯ ನೋಂದಣಿ, ಬೀಡಿ ಕಾರ್ಮಿಕರಿಗೆ ಕನಿಷ್ಠ ವೇತನ ಜಾರಿ, ವಸತಿ ಹಾಗೂ ನಿವೇಶನ ರಹಿತ ಕಾರ್ಮಿಕರಿಗೆ ವಸತಿ ಹಾಗೂ ನಿವೇಶನ ಒದಗಿಸಲು ಕ್ರಮ, ರಿಕ್ಷಾ ಚಾಲಕರಿಗಾಗಿ ಕಲ್ಯಾಣ ಮಂಡಳಿ ರಚಿಸಿ ಅವರಿಗೆ ಕಾನೂನು ಬದ್ಧ ಸವಲತ್ತು ನೀಡುವಂತೆ ಆಗ್ರಹಿಸಲು ನಿರ್ಣಯ ಕೈಗೊಳ್ಳಲಾಯಿತು.

ಪ್ರತಿಭಟನಾ ಸಭೆ ಮುನ್ನ ವಿವಿಧ ಕಾರ್ಮಿಕ ಸಂಘಟನೆ ಸದಸ್ಯರು ಕುಂದಾಪುರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ ಸರ್ಕಾರದ ನೀತಿಯನ್ನು ಖಂಡಿಸಿ ಘೋಷಣೆ ಕೂಗಿದರು.

ಮುಷ್ಕರ ಬೆಂಬಲಿಸಿ ಮುದ್ರಿಸಲಾಗಿದ್ದ ಕರಪತ್ರದಲ್ಲಿ ಬಿಎಂಎಸ್, ಇಂಟಕ್ ಸಂಘಟನೆ ಪ್ರಮುಖರ ಹೆಸರು ಇದ್ದರೂ, ಮಂಗಳವಾರ ನಡೆದ ಪ್ರತಿಭಟನಾ ಮೆರವಣಿಗೆ ಹಾಗೂ ಸಭೆಯಲ್ಲಿ ಕುಂದಾಪುರದ ಇಂಟಕ್ ಸಂಘಟನೆ ವಾಹನ ಚಾಲಕ-ಮಾಲಿಕರ ಸಂಘಟನೆ ಅಧ್ಯಕ್ಷ ಲಕ್ಷಣ ಶೆಟ್ಟಿ ಹೊರತು ಪಡಿಸಿ ಇತರ ಸಂಘಟನೆಗಳ ಪ್ರಮುಖರ ಹಾಜರಿರಲಿಲ್ಲ.

ಕುಂದಾಪುರ- ಉತ್ತಮ ಪ್ರತಿಕ್ರಿಯೆ: ಮಂಗಳವಾರ ಕರೆ ನೀಡಿದ್ದ ದೇಶವ್ಯಾಪಿ ಬಂದ್‌ಗೆ ಕುಂದಾಪುರದಲ್ಲಿ ಉತ್ತಮ ಪ್ರತಿಕ್ರಿಕೆ ವ್ಯಕ್ತವಾಗಿದೆ.

ಮಂಗಳವಾರ ಬೆಳಿಗ್ಗೆ ನಗರದ ಶಾಸ್ತ್ರಿ ಸರ್ಕಲ್ ಬಳಿಯಲ್ಲಿ ಒಟ್ಟಾಗಿದ್ದ ವಿವಿಧ ಕಾರ್ಮಿಕ ಸಂಘಟನೆ ಕಾರ್ಯಕರ್ತರ ಮನವಿಗೆ ಸ್ಪಂದಿಸಿದ ಸಾರ್ವಜನಿಕರು ವ್ಯಾಪಾರ ವಹಿವಾಟು ಮುಚ್ಚಿದರು.

ಮುಂಜಾನೆಯಿಂದಲೆ ತಾಲ್ಲೂಕಿನಾದ್ಯಾಂತ ಬಸ್ ಸಂಚಾರ ಸ್ಥಗಿತಗೊಂಡಿದ್ದರಿಂದ ತಾಲ್ಲೂಕಿನ ವಿವಿಧ ಭಾಗಗಳಿಂದ ನಗರಕ್ಕೆ ಬರಬೇಕಾಗಿದ್ದ ವಿದ್ಯಾರ್ಥಿಗಳು, ಸರ್ಕಾರಿ ಹಾಗೂ ಖಾಸಗಿ ನೌಕರರು, ಸಾರ್ವಜನಿಕರು ಬಂದ್ ಹಿನ್ನೆಲೆಯಲ್ಲಿ ಖಾಸಗಿ ವಾಹನಗಳನ್ನು ಆಶ್ರಯಿಸಿದರು.

ನಗರದ ಶಾಲೆ-ಕಾಲೇಜುಗಳು ಮುಚ್ಚಿದ್ದವು, ಸರ್ಕಾರಿ ಕಚೇರಿಗಳು ಕರ್ತವ್ಯ ನಿರ್ವಹಿಸಿದ್ದರೂ, ಸಾರ್ವಜನಿಕರ ಒತ್ತಡ, ಸಿಬ್ಬಂದಿ ಹಾಜರಿ ಕಡಿಮೆಯಾಗಿತ್ತು.

ಬ್ಯಾಂಕ್, ಖಾಸಗಿ ರಂಗದ ಉದ್ದಿಮೆ ಸಿಬ್ಬಂದಿ ಮುಷ್ಕರದಲ್ಲಿ ಭಾಗಿಯಾಗಿದ್ದರಿಂದ ಎಟಿಎಂ ಕೇಂದ್ರಗಳ ಮುಂಭಾಗ ಸಾರ್ವಜನಿಕರು ಸಾಲಾಗಿ ನಿಂತಿದ್ದರು.  ಕೋಟೇಶ್ವರ, ಹಾಲಾಡಿ, ಗೋಳಿಯಂಗಡಿ, ಸಿದ್ದಾಪುರ, ಬಸ್ರೂರು ಕಡೆ ವ್ಯಾಪಾರ ವಹಿವಾಟುಗಳು ಎಂದಿನಂತೆ ನಡೆದಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT