ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಮಿಕರ ಅಂತ್ಯಕ್ರಿಯೆಗೆ ಗ್ರಾಮಸ್ಥರ ನೆರವಿನ ಹಸ್ತ

ನೆರವಿಗೆ ಬಾರದ ಸರ್ಕಾರ
Last Updated 9 ಜನವರಿ 2014, 7:44 IST
ಅಕ್ಷರ ಗಾತ್ರ

ಹೂವಿನಹಡಗಲಿ: ಗೋವಾದ ಕಾಣ­ಕೋಣ­ದಲ್ಲಿ ಬಹುಮಹಡಿ ಕಟ್ಟಡ ಅವಶೇಷ­ಗಳಡಿ ಸಿಲುಕಿ ಸಾವಿಗೀಡಾದ  ಕಾರ್ಮಿ­ಕರಾದ ಬಂಗಾರಿ ಉದಯ (32), ಬಳಿಗಾರ ಜಬೀವುಲ್ಲಾ (20) ಅವರ  ಅಂತ್ಯಕ್ರಿಯೆ ಬುಧವಾರ  ಸ್ವಗ್ರಾಮ ಹಿರೇಹಡಗಲಿಯಲ್ಲಿ ನೆರವೇರಿತು.

ಬೆಳಗಿನ ಜಾವ ಶವಗಳು ಗ್ರಾಮಕ್ಕೆ ಬರುತ್ತಿದ್ದಂತೆ ಸಂಬಂಧಿಗಳ ರೋದನ ಮುಗಿಲು ಮುಟ್ಟಿತ್ತು. ಕುಟುಂಬದ ಆಧಾರಸ್ತಂಭವಾಗಿದ್ದ ಕಾರ್ಮಿಕರಿಬ್ಬರ  ದುರಂತ ಸಾವಿಗೆ  ಗ್ರಾಮಸ್ಥರು ಮಮ್ಮಲ ಮರುಗಿದರು. ಗಂಡನ ಅಂತ್ಯಕ್ರಿಯೆಗೆ ತವರೂರಿನಿಂದ ತಿಂಗಳ ಕೂಸು ಕಟ್ಟಿಕೊಂಡು ಬಂದಿದ್ದ ಉದಯನ ಪತ್ನಿಯ ಆಕ್ರಂದನ ಕಂಡು ನೆರೆದಿದ್ದವರ ಕಣ್ಣಾಲೆಗಳು ತೇವಗೊಂಡಿದ್ದವು.

ತಾಲ್ಲೂಕು ಆಡಳಿತದ ಪರವಾಗಿ ಕಂದಾಯ ನಿರೀಕ್ಷಕ  ಸಾಣ್ಯಾನಾಯ್ಕ, ಜಿ.ಪಂ. ಸದಸ್ಯ ಜಿ.ವಸಂತ, ಗ್ರಾ.ಪಂ. ಸದಸ್ಯ ಹಲಿಗೇರಿ ಸೋಮಶೇಖರ, ಯುವ  ಮುಖಂಡ ಗುಂಡಿ ಚರಣರಾಜ ಇತರರು  ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.

ಕಟ್ಟಡ ಅವಶೇಷಗಳಡಿ ಸಿಲುಕಿ ದುರಂತ ಸಾವಿಗೀಡಾದ  ಬಡ ಕೂಲಿ ಕಾರ್ಮಿಕರ ಶವಗಳನ್ನು  ಪಡೆಯಲು ಎರಡು ದಿನ ಪರದಾಡಿದ ಸಂಬಂಧಿಗಳು ಅಲ್ಲಿನ ವಿಧಿ ವಿಧಾನಗಳನ್ನು ಪೂರೈಸಿ ಶವಗಳನ್ನು  ಸ್ವಗ್ರಾಮಕ್ಕೆ ತರುವಷ್ಟರಲ್ಲಿ ಹೈರಾಣಾಗಿದ್ದಾರೆ. ಶವ ಹೊತ್ತು ತಂದ ವಾಹನದ ಬಾಡಿಗೆ, ಅಂತ್ಯಸಂಸ್ಕಾರ ಖರ್ಚುಗಳನ್ನು ಭರಿಸಲು ಸಾಧ್ಯವಾಗದೇ ಬಡ ಕುಟುಂಬಗಳು  ಕೈಚೆಲ್ಲಿ ಕುಳಿತಾಗ ಗ್ರಾಮಸ್ಥರು ವಂತಿಗೆ ಹಾಕಿ ಅಂತ್ಯಸಂಸ್ಕಾರದ ವಿಧಿ ವಿಧಾನಗಳನ್ನು ಪೂರೈಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಸರ್ಕಾರ ಮತ್ತು ಜನಪ್ರತಿನಿಧಿಗಳಿಂದ ಯಾವ ನೆರವು ಬಾರದ್ದನ್ನು ಅರಿತ ಗ್ರಾಮಸ್ಥರು ಅರ್ಧ ಗಂಟೆಯಲ್ಲೇ  ₨ 14 ಸಾವಿರ ದೇಣಿಗೆ  ಸಂಗ್ರಹಿಸಿ, ಶವ ಹೊತ್ತು ತಂದ ವಾಹನಕ್ಕೆ ಬಾಡಿಗೆ  ಹಣ ನೀಡಿ, ಬಡ ಕಾರ್ಮಿಕರ ಅಂತ್ಯ ಸಂಸ್ಕಾರಕ್ಕೆ ನೆರವಾಗಿದ್ದಾರೆ. ಕಟ್ಟಡ ದುರಂತದಲ್ಲಿ  ಸಾವಿಗೀಡಾಗಿರುವ ಕಾರ್ಮಿ­ಕರ ಅವಲಂಬಿತರಿಗೆ  ಪರಿಹಾರವಾಗಿ ಬಿಡಿಗಾಸು ನೀಡದ ಗೋವಾ ಮತ್ತು ರಾಜ್ಯ ಸರ್ಕಾರದ ವಿರುದ್ಧ  ಗ್ರಾಮಸ್ಥರು ಆಕ್ರೋಶ ವ್ಯಕ್ತ­ಪ­ಡಿಸಿದರು.  ಕ್ಷೇತ್ರ ಪ್ರತಿನಿಧಿಸುವ  ಪಿ.ಟಿ. ಪರಮೇಶ್ವರನಾಯ್ಕ  ರಾಜ್ಯದ ಕಾರ್ಮಿಕ ಸಚಿವರಾಗಿದ್ದರೂ  ಮಾನವೀಯತೆಗಾದರೂ  ಕಾರ್ಮಿಕರ  ಕುಟುಂ­ಬಕ್ಕೆ ನೆರವಿನ ಹಸ್ತಚಾಚದೇ  ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಹರಿಹಾಯ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT