ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಮಿಕರ ಕೈ ಕಟ್ಟಿಹಾಕಿದ ರೈತರು

Last Updated 12 ಮಾರ್ಚ್ 2011, 8:30 IST
ಅಕ್ಷರ ಗಾತ್ರ

ಮೂಡಿಗೆರೆ(ಆಲ್ದೂರು): ಬಣಕಲ್ ಹೋಬಳಿ ಯಲ್ಲಿ ಹಾದು ಹೋಗಲಿರುವ ಯುಪಿ ಸಿಎಲ್ ವಿದ್ಯುತ್ ಯೋಜನೆಯ ತಂತಿ ಮಾರ್ಗಕ್ಕಾಗಿ ಸ್ವಾಧೀನಪಡಿಸಿಕೊಂಡ ಕೃಷಿ ಭೂಮಿಗೆ ಪರಿಹಾರ ನೀಡದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ರೈತರು, ಕಾಮ ಗಾರಿಗಾಗಿ ಆಗಮಿಸಿದ 18 ಕಾರ್ಮಿಕರ ಕೈ ಗಳನ್ನು ಹಗ್ಗದಿಂದ ಕಟ್ಟಿಹಾಕಿದ ಘಟನೆ ತಾಲ್ಲೂಕಿನ ಹಳ್ಳಿಬೈಲಿನಲ್ಲಿ ಶುಕ್ರವಾರ ನಡೆದಿದೆ.

ಉಡುಪಿ ಜಿಲ್ಲೆ ಪಡುಬಿದ್ರಿಯ ಯುಪಿಸಿ ಎಲ್ ವಿದ್ಯುತ್ ಸ್ಥಾವರದಿಂದ ಹಾಸನದ ಶಾಂತಿಗ್ರಾಮದವರೆಗೆ ಭಾರಿ ಗಾತ್ರದ ತಂತಿ ಮಾರ್ಗ ಅಳವಡಿಕೆ ಕೆಲಸ ಪಶ್ಚಿಮ ಘಟ್ಟ ವ್ಯಾಪ್ತಿಯಲ್ಲಿ ನಡೆಯುತ್ತಿದೆ. ಮೂಡಿಗೆರೆ ತಾಲ್ಲೂಕಿನ ಗುತ್ತಿ, ಹಳ್ಳಿಬೈಲು, ಕಿತ್ತಲೆಗಂಡಿ, ಮಣ್ಣಿಕೆರೆ, ಜೇನುಬೈಲು, ಅಣಜೂರು ಗ್ರಾಮದ ಎಂಟು ರೈತರ ಐದು ಎಕರೆ ಕೃಷಿಭೂಮಿಯಲ್ಲಿಯೂ ತಂತಿಮಾರ್ಗ ಹೋಗಲಿದೆ. ಬೆಂಗಳೂರು ಮೂಲದ ದೀಪಕ್ ಕೇಬಲ್ ಸಂಸ್ಥೆ ಕಾಮಗಾರಿ ನಿರ್ವಹಿಸುತ್ತಿದ್ದು, ಶುಕ್ರವಾರ ಆಗಮಿಸಿದ 18 ಕಾರ್ಮಿಕರು ಗಣೇಶ್ ಮತ್ತು ಸುಧಾಕರ್ ಎಂಬವರ ಕಾಫಿ, ಅಡಿಕೆ, ಬಾಳೆ ಗಿಡ ಕತ್ತರಿಸಲಾರಂಭಿಸಿದರು. ಭೂಮಿ ಮಾಲೀಕರು ಕೆಲಸ ನಿಲ್ಲಿಸಲು ಹೇಳಿದರೂ ಒಪ್ಪದ ಕಾರ್ಮಿಕರನ್ನು ನೂರಾರು ರೈತರು ಹಿಡಿದು ಹಗ್ಗದಿಂದ ಕೈಗಳನ್ನು ಕಟ್ಟಿಹಾಕಿದರು. ನಂತರ ಯುಪಿಸಿ ಎಲ್ ಯೋಜನೆ ವಿರುದ್ಧ ಘೋಷಣೆ ಕೂಗಿ ಪ್ರತಿಭಟಿಸಿದರು.

ತಂತಿ ಮಾರ್ಗಕ್ಕಾಗಿ ಭೂಮಿ ಗುರುತಿಸಿ ವಶಕ್ಕೆ ಪಡೆದು 150 ಅಡಿ ಎತ್ತರದ ಗೋಪು ರವನ್ನೂ ನಿರ್ಮಿಸಲಾಗಿದೆ. ತಂತಿ ಕೆಲಸ ಆರಂಭಿಸಿದ್ದು, ಮಾರ್ಗದುದ್ದಕ್ಕೂ 75 ಅಡಿಯಷ್ಟು ಅಗಲ ಭೂಮಿ ತೆರವುಗೊಳಿಸಲಾಗಿದೆ. ಟವರ್‌ನಲ್ಲಿ 25 ತಂತಿ ಎಳೆಯಲಿದ್ದು, 85 ಅಡಿಗೂ ಹೆಚ್ಚು ಅಗಲ ಭೂಮಿಯಲ್ಲಿ ಕೃಷಿ ಕಷ್ಟವಿದೆ. ಅಲ್ಲದೆ, ರೈತರ ಜಮೀನಿಗೆ ಈವರೆಗೆ ಪರಿಹಾರವನ್ನೂ ನೀಡಿಲ್ಲ ಎಂದು ದೂರಿದ ರೈತರು, ಪರಿಹಾರ ನೀಡುವವರೆಗೂ ಕೆಲಸ ಮಾಡಲು ಬಿಡುವುದಿಲ್ಲ ಎಂದರು.

ಸ್ಥಳಕ್ಕೆ ಭೇಟಿ ನೀಡಿದ ಬಣಕಲ್ ಪಿಎಸ್‌ಐ ರಾಮಕೃಷ್ಣ ಕಂಪೆನಿ ಅಧಿಕಾರಿಗಳ ಜತೆ ದೂರವಾಣಿ ಮೂಲಕ ಮಾತನಾಡಿದ ನಂತರ 4 ದಿನದೊಳಗೆ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ದೊರೆಯಿತು. ರೈತರು ಕಾರ್ಮಿಕರನ್ನು ಬಿಡುಗಡೆ ಮಾಡಿ ವಶಪಡಿಸಿಕೊಂಡಿದ್ದ ಎಲ್ಲಾ ಪರಿಕರಗಳೊಂದಿಗೆ ವಾಪಸ್ ಕಳುಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT