ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಮಿಕರ ಸೌಲಭ್ಯಕ್ಕೆ ಕತ್ತರಿ: ಟೀಕೆ

Last Updated 16 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು:  `ಕಾರ್ಮಿಕ ಕಾನೂನುಗಳನ್ನು ಸಡಿಲಗೊಳಿಸುವ ಮೂಲಕ ಕಾರ್ಮಿಕರಿಗೆ ಸಿಗಬೇಕಾದ ಮೂಲ ಸೌಲಭ್ಯಗಳನ್ನು ಕಡಿಮೆ ಮಾಡಲು ಸರ್ಕಾರಗಳು ಪ್ರಯತ್ನ ನಡೆಸುತ್ತಿವೆ~ ಎಂದು ಅಖಿಲ ಭಾರತ ಸಿಐಟಿಯು ಸಂಘಟನೆಯ ಉಪಾಧ್ಯಕ್ಷ ವಿ.ಜೆ.ಕೆ.ನಾಯರ್ ಇಲ್ಲಿ ಆರೋಪಿಸಿದರು.

ಸಿಂಡಿಕೇಟ್ ಬ್ಯಾಂಕ್ ನೌಕರರ ಸಂಘದ ರಾಜ್ಯ ಘಟಕವು ಭಾನುವಾರ ಇಲ್ಲಿ ಏರ್ಪಡಿಸಿದ್ದ 10ನೇ ರಾಜ್ಯ ಮಟ್ಟದ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

`ಸರ್ಕಾರಗಳು ಕಾರ್ಮಿಕರಿಗೆ ಅಗತ್ಯ ಸೌಲಭ್ಯಗಳನ್ನು ನೀಡದೆ ಸಂಘಟನೆಗಳ ಶಕ್ತಿ  ಕುಂದಿಸಲು ಯತ್ನ ಮಾಡುತ್ತಿದೆ. ಎಲ್ಲಾ ಸಂಘಟನೆಗಳು ಒಂದಾಗಿ ಕಾರ್ಮಿಕರ ಸಿಗಬೇಕಾದ ಸೌಲಭ್ಯಗಳನ್ನು ಪಡೆಯಲು ಹೋರಾಟ ಮಾಡಬೇಕಾದ ಅನಿವಾರ್ಯತೆ ಇದೆ~ ಎಂದರು.

`ದೇಶದಲ್ಲಿ ವಿದೇಶಿ ಬ್ಯಾಂಕ್‌ಗಳ ಪ್ರಭಾವ ಸಾಕಷ್ಟು ಹೆಚ್ಚುತ್ತಿದೆ. ದೇಶದ ಅರ್ಥವ್ಯವಸ್ಥೆಗೆ ಹಿಂದೆ ರಾಷ್ಟ್ರೀಕೃತ ಬ್ಯಾಂಕ್‌ಗಳು ನೀಡಿದ ಕೊಡುಗೆಯನ್ನು ಸರ್ಕಾರ ಮರೆತಿದೆ. ರಾಷ್ಟ್ರೀಕೃತ ಬ್ಯಾಂಕ್‌ಗಳನ್ನು ಖಾಸಗೀಕರಣಗೊಳಿಸಲು ಪ್ರಯತ್ನ ನಡೆಸುತ್ತಿದೆ. ಕಾರ್ಮಿಕ ಸಂಘಟನೆಗಳು ಬ್ಯಾಂಕ್‌ಗಳು ಖಾಸಗೀಕರಣಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಬೇಕು~ ಎಂದು ಸಲಹೆ ನೀಡಿದರು.

`ದೇಶದಲ್ಲಿ ಮಾತ್ರವಲ್ಲ ವಿಶ್ವದ ಪ್ರಬಲ ರಾಷ್ಟ್ರಗಳಲ್ಲಿ ಬ್ಯಾಂಕ್‌ಗಳು ದಿವಾಳಿಯಾಗುತ್ತಿವೆ. ವಿದೇಶಗಳ ಮಾದರಿಯಲ್ಲೇ ನಮ್ಮ ದೇಶದ ಆರ್ಥಿಕ ನೀತಿಯು ಸಾಗುತ್ತಿದೆ. ಈ ಪ್ರಕ್ರಿಯೆ ಹೀಗೆ ಮುಂದುವರಿದರೆ ದೇಶದ ಬ್ಯಾಂಕಿಂಗ್ ಹಾಗೂ ಆರ್ಥಿಕ ವ್ಯವಸ್ಥೆಗೆ ಅಪಾಯವಿದೆ. ಈ ಸಮಸ್ಯೆಯನ್ನು ಎದುರಿಸಲು ಎಲ್ಲರೂ ಸಿದ್ದರಾಗಬೇಕು~ ಎಂದು ಅಖಿಲ ಭಾರತ ಬ್ಯಾಂಕ್ ನೌಕರರ ಸಂಘಟನೆಗಳ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಎಂ.ಆರ್.ಶೆಣೈ ಹೇಳಿದರು.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಮನ್ಸುಳಿ ಮಾತನಾಡಿ, `ಬ್ಯಾಂಕಿಂಗ್ ವಲಯದಲ್ಲೂ ಗುತ್ತಿಗೆ ಆಧಾರದ ನೇಮಕಾತಿಗಳು ನಡೆಯುತ್ತಿವೆ. ಇದರಿಂದ ಕಾರ್ಮಿಕರಿಗೆ ಭದ್ರತೆ ಇಲ್ಲದಾಗಿದೆ. ಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿರುವ ಕಾರ್ಮಿಕರಿಗೆ ಸೂಕ್ತ ವೇತನ, ಸೌಲಭ್ಯಗಳು ಸಿಗುತ್ತಿಲ್ಲ. ಅವರನ್ನು ಕಾಯಂ ನೌಕರರಾಗಿ ನೇಮಕ ಮಾಡಿಕೊಳ್ಳಬೇಕು~ ಎಂದು ಒತ್ತಾಯಿಸಿದರು.

ನೌಕರರ ನೇಮಕಾತಿಯಲ್ಲಿ ಸೂಕ್ತ ನೀತಿ ಜಾರಿಗೆ ತರುವುದು, ಸ್ವಯಂ ನಿವೃತ್ತಿ ಪಡೆದಿರುವ ನೌಕರರಿಗೆ ಪಿಂಚಣಿ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸಿಲು ತೀರ್ಮಾನಿಸಲಾಯಿತು. ಅಖಿಲ ಭಾರತ ಸಿಂಡಿಕೇಟ್ ಬ್ಯಾಂಕ್ ನೌಕರರ ಒಕ್ಕೂಟದ ಅಧ್ಯಕ್ಷ ಸುಬ್ರಹ್ಮಣ್ಯ, ರಾಜ್ಯ ಘಟಕದ ಅಧಕ್ಷ ಜಿ.ವಿಕ್ರಂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT