ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಮಿಕರ ಹಿತರಕ್ಷಣೆಗೆ ಆಗ್ರಹ

Last Updated 26 ಮೇ 2012, 8:45 IST
ಅಕ್ಷರ ಗಾತ್ರ

ಯಾದಗಿರಿ: ಕೃಷಿಕರು, ಕಟ್ಟಡ ಕಾರ್ಮಿಕರು, ಕೂಲಿಕಾರರ ಸಮಸ್ಯೆಗಳ ಪರಿಹಾರ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಟೋಕರಿ ಕೋಲಿ ಸಮಾಜದ ಜಿಲ್ಲಾ ಘಟಕದ ವತಿಯಿಂದ ಶುಕ್ರವಾರ ನಗರದಲ್ಲಿ ವಿನೂತನ ಪ್ರತಿಭಟನೆ ನಡೆಸಲಾಯಿತು.

ಇಲ್ಲಿಯ ಪದವಿ ಕಾಲೇಜು ಮೈದಾನದಿಂದ ಬೈಕ್ ರ‌್ಯಾಲಿ ಆರಂಭಿಸಿದ ಕಾರ್ಯಕರ್ತರು, ನಗರದ ಗಂಜ್ ಪ್ರದೇಶ, ಗಾಂಧಿ ವೃತ್ತದ ಮೂಲಕ ಶಾಸ್ತ್ರಿ ವೃತ್ತಕ್ಕೆ ಆಗಮಿಸಿದರು. ನಂತರ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಮುಖವಾಡ ಧರಿಸಿದ ಶ್ವಾನಗಳೊಂದಿಗೆ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಮೆರವಣಿಗೆ ನಡೆಸಿದರು. ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಜಿಲ್ಲೆಯಾದ್ಯಂತ ಕೃಷಿ ಹಾಗೂ ಕಟ್ಟಡ ಕೂಲಿ ಕಾರ್ಮಿಕರಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಂದ ಅನ್ಯಾಯವಾಗುತ್ತಿದೆ. ಬಡ ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ರಾಜ್ಯದಲ್ಲಿ ಭೀಕರ ಬರಗಾಲವಿದ್ದು, ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ಕಾರ್ಮಿಕರು ತುತ್ತು ಅನ್ನಕ್ಕಾಗಿ ಪರದಾಡುವಂತಾಗಿದೆ ಎಂದು ದೂರಿದರು.

ಕಟ್ಟಡ ನಿರ್ಮಾಣಕ್ಕೆ ಅಗತ್ಯವಾಗಿರುವ ಮರಳು ಸಿಗದೇ ಇರುವುದರಿಂದ ಕಟ್ಟಡ ಕಾರ್ಮಿಕರು ಕೆಲಸ ಇಲ್ಲದಂತಾಗಿದ್ದಾರೆ. ಹಗಲಿರುಳೆನ್ನದೇ ಕೃಷ್ಣಾ ಹಾಗೂ ಭೀಮಾ ನದಿಗಳಲ್ಲಿ ಹಳ್ಳ-ಕೊಳ್ಳಗಳಲ್ಲಿನ  ಮರಳನ್ನು ಲಾರಿಗಳ ಮೂಲಕ ಹೊರ ರಾಜ್ಯಗಳಿಗೆ ಸಾಗಿಸಲಾಗುತ್ತಿದೆ. ಮರಳು ಕದಿಯುವವರ ವಿರುದ್ಧ ಕ್ರಮ ಕೈಗೊಳ್ಳದ ಸರ್ಕಾರ, ಸಾಮಾನ್ಯ ಬಡ ರೈತರು ಟ್ರಾಕ್ಟರ್ ಮೂಲಕ ಮರಳು ಸಾಗಾಣಿಕೆ ಮಾಡಲು ನಿರ್ಬಂಧ ಹೇರಿರುವುದು ಎಷ್ಟು ಸಮಂಜಸ ಎಂದು ಪ್ರಶ್ನಿಸಿದರು.

ಮುಗ್ದ ಬಡ ಕೂಲಿ ಕಾರ್ಮಿಕರ ಶೋಷಣೆ ತಪ್ಪಿಲ್ಲ. ಕೂಡಲೇ ಸರ್ಕಾರ ಎಚ್ಚೆತ್ತುಕೊಳ್ಳಬೇಕು. ಬಡವರಿಗಾಗುವ ಅನ್ಯಾಯ ಸರಿಪಡಿಸಲು ಗಮನ ಹರಿಸಬೇಕು. ಮುಗ್ದ ಜನತೆಯ ಮೇಲೆ ಪೊಲೀಸ್ ದೌರ್ಜನ್ಯ ನಡೆಯುತ್ತಿದ್ದು, ದುರ್ಬಲರು ಧ್ವನಿ ಎತ್ತದಂತೆ ಮಾಡಲಾಗುತ್ತಿದೆ. ಬಡ ರೈತ ಹಾಗೂ ಕೃಷಿ, ಕಟ್ಟಡ ಕಾರ್ಮಿಕರಿಗೆ ಯಾವುದೇ ಸೌಲಭ್ಯ ಒದಗಿಸದ ಸರ್ಕಾರ, ಮುಂದಾದರೂ ಮುಗ್ಧ ಜನತೆಯ ಬಗ್ಗೆ ಕಾಳಜಿ ವಹಿಸಬೇಕು ಎಂದು ಒತ್ತಾಯಿಸಿದರು.

ರಾಜ್ಯ ಸರ್ಕಾರ ಅಸ್ಥಿರವಾಗಿದ್ದು, ಪ್ರತಿಕ್ಷಣ ಆತಂಕದಲ್ಲಿ ಕಳೆಯುತ್ತಿದೆ. ಸ್ಥಾನ ಭದ್ರತೆಗಾಗಿ ಚಿಂತಿಸುತ್ತಿರುವ ಜನಪ್ರತಿನಿಧಿಗಳು, ಪ್ರಜೆಗಳಿಗೆ, ಕಾರ್ಮಿಕರಿಗೆ ಸೌಲಭ್ಯ ಒದಗಿಸುವತ್ತ ಗಮನ ನೀಡಬೇಕು. ಪಾರದರ್ಶಕತೆಗೆ ಹೆಚ್ಚಿನ ಒಲವು ತೋರಿ, ಅಧಿಕಾರಿಗಳ ಬೆನ್ನತ್ತಿ ಸಾರ್ವಜನಿಕರಿಗೆ ಅನುಕೂಲವಾಗುವಂತಹ ಕಾರ್ಯಗಳನ್ನು ಮಾಡಬೇಕು ಎಂದು ಆಗ್ರಹಿಸಿದರು.

ರೈತಾಪಿ ಜನ ಈ ಭೀಕರ ಬರಗಾಲಕ್ಕೆ ತುತ್ತಾಗಿದ್ದು, ಸ್ವಂತ ಟ್ರ್ಯಾಕ್ಟರ್‌ಗಳ ಮೂಲಕ ಮರಳು ಸಾಗಿಸಲು ಮುಕ್ತ ಅವಕಾಶ ಕೊಡಬೇಕು. ಮರಳು ಸಾಗಾಣಿಕೆ ಮಾಡುವುದನ್ನು ತಡೆಹಿಡಿಯುವುದರಿಂದ ಇದರ ದುರುಪಯೋಗ ಪಡೆದ ಕೆಲವು ಸಿಬ್ಬಂದಿಗಳು ಭ್ರಷ್ಟಾಚಾರ ನಡೆಸಲು ಅನುವು ಮಾಡಿಕೊಟ್ಟಂತಾಗಿದೆ. ಸಾಗಾಣಿಕೆ ನಿರ್ಬಂಧ ತಡೆಯುವುದರಿಂದ ರೈತರಿಗೆ ಅನುಕೂಲ ಮಾಡಿಕೊಟ್ಟಂತಾಗುತ್ತದೆ ಎಂದು ಮನವಿಯಲ್ಲಿ ತಿಳಿಸಿದರು.

ಗ್ರಾಮೀಣ ಠಾಣೆಯ ಸಬ್‌ಇನ್ಸ್ ಪೆಕ್ಟರ್ ಅವರನ್ನು ತಕ್ಷಣ ಅಮಾನತುಗೊಳಿಸಬೇಕು. ಯಾದಗಿರಿ ನಗರ ಕಟ್ಟಡ ಕಾರ್ಮಿಕರ ಸಮುದಾಯ ಭವನ ನಿರ್ಮಾಣಕ್ಕೆ ಸರ್ಕಾರದ ನಿವೇಶನ ನೀಡಿ ತಕ್ಷಣ ರೂ. 50 ಲಕ್ಷ ಅನುದಾನ ಬಿಡುಗಡೆ ಮಾಡಬೇಕು. ಕಟ್ಟಡ ಕಾರ್ಮಿಕರ ಹಾಗೂ ಕೃಷಿ ಕೂಲಿಕಾರ್ಮಿಕರ ವಿಶೇಷ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು. ಮುಂಬರುವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಟೋಕರಿ ಕೋಲಿ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಉಮೇಶ ಮುದ್ನಾಳ, ಕಟ್ಟಡ ಕಾರ್ಮಿಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಸೈದಪ್ಪ ಗುತ್ತೇದಾರ, ಕೆ.ಎಂ.ಸಿ. ಜಿಲ್ಲಾ ಘಟಕದ ಅಧ್ಯಕ್ಷ ಚಾಂದಪಾಷಾ ಸೌದಾಗರ, ರಾಮು ಗಣಪೂರ, ಹಣಮಂತ, ಮಲ್ಲಪ್ಪ, ಬಾಬುಮಿಯಾ, ನಾನು, ದೇವಜಿ, ರೆಹಮಾನ್, ಗೋಪಾಲ, ಸೋಮು, ರಾಜು, ಹಣಮಂತ, ಗೋಪಾಲ, ಶಾಂತಪ್ಪ, ರಮೇಶ, ವೆಂಕಟೇಶ, ಮಲ್ಲು, ಮಂಜು, ಯಲ್ಲಪ್ಪ, ಕಟ್ಟಡ, ಕೂಲಿ, ಕೃಷಿ, ಕಾರ್ಮಿಕರು ಮತ್ತು ಮಹಿಳೆಯರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT