ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಮಿಕರಿಂದ ಪ್ರತಿಭಟನಾ ಮೆರವಣಿಗೆ

ಕಟ್ಟಡ ಕಾಮಗಾರಿ ಸಾಮಗ್ರಿಗಳ ಮೇಲಿನ ಸರ್ಕಾರದ ನಿರ್ಬಂಧಕ್ಕೆ ವಿರೋಧ
Last Updated 13 ಡಿಸೆಂಬರ್ 2013, 6:04 IST
ಅಕ್ಷರ ಗಾತ್ರ

ಹಾನಗಲ್‌:ಮರಳು ಸೇರಿದಂತೆ ಕಟ್ಟಡ ಕಾಮಗಾರಿ ಸಾಮಗ್ರಿಗಳ ಮೇಲಿನ ಸರ್ಕಾರದ ನಿರ್ಬಂಧ ವಿರೋಧಿಸಿ ತಾಲ್ಲೂಕು ಕಟ್ಟಡ ಕೂಲಿ ಕಾರ್ಮಿಕರ ಸಂಘ, ಗುತ್ತಿಗೆದಾರರ ಸಂಘ ಮತ್ತು ಇಟ್ಟಿಗೆ ತಯಾರಕರ ಸಂಘದಿಂದ ಗುರುವಾರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬೃಹತ್‌ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

ಇಲ್ಲಿನ ಕುಮಾರೇಶ್ವರ ಮಠದಿಂದ ಹೊರಟ ಮೆರವಣಿಗೆಯಲ್ಲಿ ತಾಲ್ಲೂಕಿನ ಕಟ್ಟಡ ಕಾಮಗಾರಿಯ ಕಾರ್ಮಿಕರು, ಗುತ್ತಿಗೆದಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಸರ್ಕಾರದ ವಿಳಂಬ ನೀತಿಯನ್ನು ಖಂಡಿಸಿ ಘೊೋಷಣೆ ಕೂಗಿದರು. ಗಾಂಧಿವೃತ್ತದಲ್ಲಿ ಕೆಲಕಾಲ ರಸ್ತೆ ತಡೆ ನಡೆಸಿದ ಪ್ರತಿಭಟನಾಕಾರರು ಟೈಯರ್‌ಗಳಿಗೆ ಬೆಂಕಿಹಚ್ಚಿ ವಿರೋಧ ವ್ಯಕ್ತಪಡಿಸಿದರು.

   ನಂತರ ಪ್ರತಿಭಟನಾ ಮೆರವಣಿಗೆಯು ತಹಶೀಲ್ದಾರ್‌ ಕಚೇರಿಗೆ ತಲುಪಿತು. ಈ ಸಂದರ್ಭದಲ್ಲಿ ಹಲವು ಮುಖಂಡರು ಮಾತನಾಡಿ ಸಮಸ್ಯೆ ಇತ್ಯರ್ಥಕ್ಕೆ ಸರ್ಕಾರ ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಪ್ರಭಾರಿ ತಹಶೀಲ್ದಾರ್‌ ಸವಣೂರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

‘ಮರಳು, ಜೆಲ್ಲಿ, ಕಲ್ಲು, ಇಟ್ಟಿಗೆ ಮತ್ತಿತರ ಸಾಮಗ್ರಿಗಳ ಸಾಗಾಟಕ್ಕೆ ನಿರ್ಬಂಧ ವಿಧಿಸಿರುವ ಕಾರಣ ಕಾಮಗಾರಿಗಳು ಸ್ಥಗಿತಗೊಂಡಿವೆ. ಕಟ್ಟಡ ಕಾರ್ಮಿಕರು ಈಗ ನಿರುದ್ಯೋಗಿಗಳಾಗಿದ್ದಾರೆ. ಈ ವೃತ್ತಿ ಹೊರತುಪಡಿಸಿ ಬೇರೆ ಮಾರ್ಗ ಗೊತ್ತಿಲ್ಲದ ಅನೇಕ ಕುಟುಂಬಗಳು ಬೀದಿ ಪಾಲಾಗುತ್ತಿವೆ. ಇದು ವಲಸೆ ಹೋಗುವ ಪರಿಸ್ಥಿತಿಯನ್ನು ನಿರ್ಮಾಣ ಮಾಡಿದೆ. ಕೂಡಲೇ ಸರ್ಕಾರ ಮರಳು ನೀತಿ ಸರಿಪಡಿಸಬೇಕು. ಅಲ್ಲದೆ, ನಿತ್ಯ ಉಪಯೋಗದ ಮರಳು, ಜೆಲ್ಲಿ, ಕಲ್ಲು, ಇಟ್ಟಿಗೆ ಮುಂತಾದ ಸಾಮಗ್ರಿಗಳಿಗೆ ಗಣಿಗಾರಿಕೆಯ ಕಾನೂನು ಅಳವಡಿಸದೇ ಸರಳಗೊಳಿಸಬೇಕು’ ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಗುತ್ತಿಗೆದಾರ ಸಂಘದ ಕುಮಾರ ಹತ್ತಿಕಾಳ, ಶಿವಕುಮಾರ ದೇಶಮುಖ, ಟಿ.ಆರ್‌.ಬಂಕಾಪೂರ, ಪಿ.ರುದ್ರಗೌಡ, ವಿಶ್ವಾಸ ಕೊಟೇಶ್ವರ, ಪಿ.ಬಿ.ಹಾವೇರಿ, ನಾಸೀರ ಇಮ್ಮುಸಾಬನವರ, ಈರಣ್ಣ ಗೌಳಿ, ರವಿ ದೇಶಪಾಂಡೆ, ಎಂ.ಎಂ.ಮಠಾಯಿಗಾರ, ಎ.ಎಂ.ನಾಶಿಪುಡಿ, ಎ.ಎಂ.ಗುತ್ತಲ, ಸುರೇಶ ರಾಯ್ಕರ, ಎಸ್‌.ಆರ್‌.ಹಾದಿಮನಿ ಮತ್ತು ಕಟ್ಟಡ ಕಾಮಗಾರಿ ಕಾರ್ಮಿಕರ ಸಂಘದ ಮಖಬೂಲ್‌ಅಹ್ಮದ್‌ , ದುದ್ದು ಅಕ್ಕಿವಳ್ಳಿ, ಅಬ್ದುಲ್‌ಸಾಬ್‌, ಮುಕ್ತಾರ್‌ ಕೇಣಿ, ನಜೀರ್‌ಅಹ್ಮದ್‌ನಿ, ಮಂಜುನಾಥ, ಪರಶುರಾಮ, ಸಯ್ಯದ್‌ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT