ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಕಾರ್ಮಿಕರಿಗೆ ಕಾನೂನು ತಿಳಿವಳಿಕೆ ಅಗತ್ಯ'

Last Updated 18 ಡಿಸೆಂಬರ್ 2012, 9:41 IST
ಅಕ್ಷರ ಗಾತ್ರ

ಹಾವೇರಿ: `ಕೇಂದ್ರ ಹಾಗೂ ರಾಜ್ಯ ಸರ್ಕಾರ ಕಟ್ಟಡ ಹಾಗೂ ಇತರೆ ಕಾರ್ಮಿಕರಿಗೆ  ಕಲ್ಯಾಣ ಮಂಡಳಿ ರಚಿಸುವ ಮೂಲಕ ಹಲವು ಸೌಲಭ್ಯಗಳನ್ನು ನೀಡುತ್ತಿದ್ದು, ಅವುಗಳ ಪ್ರಯೋಜನ ಪಡೆಯಲು ಕಾರ್ಮಿಕರಿಗೆ ಕಾನೂನು ತಿಳಿವಳಿಕೆ ಅತ್ಯಗತ್ಯವಾಗಿದೆ' ಎಂದು ಜಿಲ್ಲಾ ನ್ಯಾಯಾಧೀಶ ಎಚ್.ಪಿ. ಸಂದೇಶ್ ಹೇಳಿದರು.

ನಗರದ ಸರ್ಕಾರಿ ನೌಕರರ ಸಭಾಭವನದಲ್ಲಿ ಭಾನುವಾರ ಜಿಲ್ಲಾ ಆಡಳಿತ, ಜಿ.ಪಂ. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಕಾರ್ಮಿಕರ ಕಲ್ಯಾಣ ಮಂಡಳಿ ಆಶ್ರಯದಲ್ಲಿ ನಡೆದ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರ ಅಸಂಘಟಿತ ವಲಯದ ಕಾರ್ಮಿಕರಿಗೆ ಅಪಘಾತ, ಆರೋಗ್ಯ, ಶಿಕ್ಷಣ ಇತ್ಯಾದಿ ವಿಮಾ ಸೌಲಭ್ಯಗಳನ್ನು ಜಾರಿಗೆ ತಂದಿದೆ. ಕಾರ್ಮಿಕರು ಈ ಮಂಡಳಿ ಸದಸ್ಯರಾಗಿ ಗುರುತಿನ ಚೀಟಿ ಪಡೆದು, ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದು ಸಲಹೆ ಮಾಡಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಎಚ್.ಜಿ. ಶ್ರೀವರ ಮಾತನಾಡಿ, ಕಾರ್ಮಿಕ ಕಲ್ಯಾಣ ಮಂಡಳಿ ನೋಂದಾಯಿತ ಕಟ್ಟಡ ಕಾರ್ಮಿಕ ಫಲಾನುಭವಿಗಳಿಗೆ ಒಂದು ಲಕ್ಷ ರೂಪಾಯಿ ಧನಸಹಾಯ ಹಾಗೂ ಹೃದ್ರೋಗ, ಕಿಡ್ನಿ, ಕ್ಯಾನ್ಸರ್, ಮೂತ್ರಪಿಂಡ, ಮೆದುಳಿನ ರಕ್ತಸ್ರಾವ ಹಾಗೂ ಅಲ್ಸರ್‌ನಂತ ಪ್ರಮುಖ ಖಾಯಿಲೆಗೆ ಒಳಗಾದಲ್ಲಿ ಗರಿಷ್ಠ 50 ಸಾವಿರ ರೂ.ಗಳವರೆಗೆ ಧನ ಸಹಾಯಕ್ಕೆ ಮತ್ತು ಮಾಸಿಕ ರೂ 300 ಪಿಂಚಣಿಗೆ ಸೌಲಭ್ಯ ಪಡೆಯದೆಂದು ತಿಳಿಸಿದರು.

ಕಾರ್ಮಿಕರ ಇಬ್ಬರು ಮಕ್ಕಳ ವಿದ್ಯಾಭ್ಯಾಸಕ್ಕೆ 8ನೇ ತರಗತಿಯಿಂದ ವೈದ್ಯಕೀಯ ಮತ್ತು ಎಂಜನಿಯರಿಂಗ್ ಇತ್ಯಾದಿ ವೃತ್ತಿಪರ ಕೋರ್ಸ್‌ಗಳಿಗೆ ಸಹಾಯ ಧನ ಸೌಲಭ್ಯವಿಗಳಿವೆ. ಐದು ವರ್ಷ ಸದಸ್ಯತ್ವ ಪೂರ್ಣಗೊಳಿಸಿದ ಫಲಾನುಭವಿಗಳಿಗೆ ಮಾಹೆ 500 ರೂ.ಗಳ ಪಿಂಚಣಿ ಸೌಲಭ್ಯ, 50 ವರ್ಷ ಪೂರೈಸಿದ ಮಹಿಳಾ ಕಾರ್ಮಿಕರು ಹಾಗೂ 55 ವರ್ಷ ಪೂರೈಸಿದ ಪುರುಷ ಕಾರ್ಮಿಕರಿಗೆ 50 ಸಾವಿರ ರೂ.ಗಳವರೆಗೆ ವಾರ್ಷಿಕ ಶೇ 5ರ ಬಡ್ಡಿದರದಲ್ಲಿ ಮನೆ ಸಾಲ ನೀಡಲು ಅವಕಾಶವಿದೆ ಎಂದು ಹೇಳಿದರು.

ಬೆಂಗಳೂರು ಕಾರ್ಮಿಕ ಕಚೇರಿ ಸಹಾಯಕ ಆಯುಕ್ತ ಗಿರೀಶ ಪಾಟೀಲ ಮಾತನಾಡಿ, ಅರ್ಹ ಕಾರ್ಮಿಕ ಫಲಾನುಭವಿಗಳಿಗೆ ಸೌಲಭ್ಯಗಳು ತಲುಪಲು ವಿಳಂಬವಾದಲ್ಲಿ 10042, 52838 ಅಥವಾ 9939231678 ಉಚಿತವಾಗಿ ಈ ದೂರವಾಣಿ ಸಂಖ್ಯೆ ದಿನದ 24 ಗಂಟೆಗಳ ಕಾಲ ಸಂಪರ್ಕಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದೆಂದು ತಿಳಿಸಿದರು.

ಕಾರ್ಮಿಕ ಸಂಘಗಳ ಸದಸ್ಯರು ಹಾಗೂ ಪದಾಧಿಕಾರಿಗಳಾದ ಮಂಜುನಾಥ ರಾಜನಹಳ್ಳಿ, ರವಿ ವಾಟವೆ, ಲಿಂಗಾಚಾರ ಮಾಯಾಚಾರ, ನಾಗರಾಜ ಉಪ್ಪಾರ, ಅಬ್ದುಲ್‌ಮಜೀದ್ ಮಾಳಗೆಮನಿ, ದಾವಲಸಾಬ್ ಹಿರೇಮುಗದೂರ ಮಾತನಾಡಿ, ಇಎಸ್‌ಐ ಆಸ್ಪತ್ರೆ ಸೌಲಭ್ಯವಿಲ್ಲದ ಕಡೆ ಖಾಸಗಿ ಆಸ್ಪತ್ರೆಯಲ್ಲಿ ಕಾರ್ಮಿಕರಿಗೆ ವೈದ್ಯಕೀಯ ಸೌಲಭ್ಯ ಕಲ್ಪಿಸಿಕೊಡಬೇಕು. ಕಾರ್ಮಿಕ ಪಿಂಚಣಿ ಮೊತ್ತವನ್ನು 500 ರೂ.ಗಳಿಂದ ಹೆಚ್ಚಿಸಬೇಕು. ತಾಲ್ಲೂಕುಗಳಲ್ಲಿ ಶಿಬಿರಗಳನ್ನು ಸಂಘಟಿಸಿ, ಕಟ್ಟಡ ಕಾರ್ಮಿಕರಿಗೆ ಸೌಲಭ್ಯಗಳ ಅರಿವು ಮೂಡಿಸಬೇಕು ಎಂದು ಸಲಹೆ ಮಾಡಿದರು.

ನ್ಯಾಯಾಧೀಶರಾದ ವೆಂಕಟೇಶ, ಶಿಗ್ಗಾವಿ ತಾಲ್ಲೂಕು ದಂಡಾಧಿಕಾರಿ ಕುಮಾರ್, ಹುಬ್ಬಳ್ಳಿ ಕಾರ್ಮಿಕ ಕಚೇರಿಯ ಸಹಾಯಕ ಆಯುಕ್ತ ಎಂ.ಎಸ್.ತಿಮ್ಮೊಲಿ, ಜಿಲ್ಲೆಯ ಏಳು ತಾಲ್ಲೂಕುಗಳ ಕಾರ್ಮಿಕ ನಿರೀಕ್ಷಕರು, ವಿವಿಧ ಕಟ್ಟಡ ಕಾರ್ಮಿಕ ಸಂಘಗಳ ಪದಾಧಿಕಾರಿಗಳು ಮತ್ತು ಸದಸ್ಯರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.ತಾಲ್ಲೂಕು ಕಾರ್ಮಿಕ ನಿರೀಕ್ಷಕ ಪರಮೇಶ ಸಿಂದಗಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT