ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಯಕರ್ತರು ಒತ್ತಡ ತಂದರೆ ಕೆಜೆಪಿಗೆ: ಅಪ್ಪು

`ಯತ್ನಾಳ ಬಿಜೆಪಿಗೆ ಬರಲ್ಲ; ಬಂದ್ರೆ ನೋಡೋಣ'
Last Updated 5 ಡಿಸೆಂಬರ್ 2012, 6:34 IST
ಅಕ್ಷರ ಗಾತ್ರ

ವಿಜಾಪುರ: `ನಾನು ಸದ್ಯ ಬಿಜೆಪಿಯಲ್ಲಿದ್ದೇನೆ. ಹಾವೇರಿಯಲ್ಲಿ ನಡೆಯಲಿರುವ ಕರ್ನಾಟಕ ಜನತಾ ಪಕ್ಷ(ಕೆಜೆಪಿ)ದ ಸಮಾವೇಶದಲ್ಲಿ ಭಾಗವಹಿಸುವ ಪ್ರಸಂಗದ ಸದ್ಯಕ್ಕಂತೂ ಇಲ್ಲ. ಒಂದೊಮ್ಮೆ ನಮ್ಮ ಕಾರ್ಯಕರ್ತರು ಒತ್ತಡ ತಂದರೆ ಕೆಜೆಪಿಗೆ ಹೋಗುವ ಕುರಿತು ಚಿಂತಿಸುತ್ತೇನೆ' ಎಂದು ವಿಜಾಪುರ ನಗರ ಮತಕ್ಷೇತ್ರದ ಶಾಸಕ ಅಪ್ಪು ಪಟ್ಟಣಶೆಟ್ಟಿ ಹೇಳಿದರು.

ಕೃಷ್ಣಾ ನದಿಯಿಂದ ವಿಜಾಪುರ ನಗರಕ್ಕೆ ನೀರು ಪೂರೈಸುವ ಯೋಜನೆಯ ಸುಧಾರಣೆಯ ಕಾಮಗಾರಿ ಪರಿಶೀಲಿಸಿ ಕೊಲ್ಹಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

`ಬಸನಗೌಡ ಪಾಟೀಲ ಯತ್ನಾಳರನ್ನು ಬಿಜೆಪಿಗೆ ಸೇರಿಸಿಕೊಳ್ಳುವ ಸಾಧ್ಯತೆ ಇಲ್ಲ. ಪಕ್ಷದಿಂದ ಆ ಕುರಿತು ನಮಗೆ ಯಾವುದೇ ಸೂಚನೆಯೂ ಬಂದಿಲ್ಲ. ಯಡಿಯೂರಪ್ಪ ಪಕ್ಷ ಬಿಟ್ಟಿರುವುದರಿಂದ ಯತ್ನಾಳ ಬಿಜೆಪಿಗೆ ಬರುತ್ತಾರೆ. ಅಪ್ಪು ಕೆಜೆಪಿಗೆ ಹೋಗುತ್ತಾರೆ ಎಂಬುದು ಕೇವಲ ವದಂತಿ. ಯತ್ನಾಳ ಬಿಜೆಪಿಗೆ ಬರುವ ಪ್ರಸಂಗ ಇಲ್ಲ. ಒಂದೊಮ್ಮೆ ಅವರು ಬಿಜೆಪಿಗೆ ಬಂದರೆ ನೋಡೋಣ' ಎಂದರು.

`ಆದಾಗ್ಯೂ ಯಾರನ್ನು ಪಕ್ಷಕ್ಕೆ ಸೇರಿಸಿಕೊಳ್ಳಬೇಕು. ಯಾರನ್ನು ಪಕ್ಷದಿಂದ ಹೊರಹಾಕಬೇಕು ಎಂಬುದು ಪಕ್ಷದ ಹೈಕಮಾಂಡ್‌ನ ವಿವೇಚನೆಗೆ ಬಿಟ್ಟ ವಿಷಯ' ಎಂದು ಹೇಳಿದರು.

ಸವಾಲು: `ವಿಜಾಪುರ ನಗರಸಭೆ ಕಟ್ಟಡದ ಪಕ್ಕದಲ್ಲಿದ್ದ ಅಗ್ನಿ ಶಾಮಕ ಉಪ ಠಾಣೆಯನ್ನು ಟಕ್ಕೆಗೆ ಸ್ಥಳಾಂತರಿಸಿ ಬಹಳ ವರ್ಷ ಆಗಿವೆ. ಆ ಕಟ್ಟಡವನ್ನು ಗುತ್ತಿಗೆ ನೀಡಿರುವುದು ನಗರಸಭೆಯ ಎಲ್ಲ ಸದಸ್ಯರ ನಿರ್ಧಾರ. ಅದಕ್ಕೆ ಸರ್ಕಾರವೂ ಅನುಮೋದನೆ ನೀಡಿದೆ. ನಾನು ನನ್ನ ಸಂಬಂಧಿಕರಿಗೆ ಆ ಕಟ್ಟಡ ಗುತ್ತಿಗೆ ಕೊಡಿಸಿಲ್ಲ' ಎಂದು ಅಪ್ಪು ಹೇಳಿದರು.

`ವಿಜಾಪುರ ನಗರಸಭೆಯ ಆಸ್ತಿಯನ್ನು ನನ್ನ ಸ್ವಂತಕ್ಕೆ ಪಡೆದಿದ್ದರೆ ಯತ್ನಾಳರು ಅದನ್ನು ಸಾಬೀತು ಪಡಿಸಲಿ. ಪದೇ ಪದೇ ಆರೋಪ ಮಾಡಿದರೆ ಜನರು ಅದನ್ನೇ ನಂಬುತ್ತಾರೆ ಎಂದು ಯತ್ನಾಳ ತಿಳಿದಂತಿದೆ. ಅದೇ ಕಾರಣಕ್ಕೆ ವಿನಾಕಾರಣ ಆರೋಪ ಮಾಡುತ್ತಿದ್ದಾರೆ' ಎಂದು ಕಿಡಿಕಾರಿದರು.

ನೀರಿನ ಸಮಸ್ಯೆ ಪರಿಹಾರ: `ಕೃಷ್ಣಾ ನದಿಯಿಂದ ವಿಜಾಪುರ ನಗರಕ್ಕೆ ನೀರು ಪೂರೈಸುವ ಸುಧಾರಿತ ಯೋಜನೆಯನ್ನು ಕಳೆದ 15 ದಿನಗಳಿಂದ ಪ್ರಾಯೋಗಿಕವಾಗಿ ಆರಂಭಿಸಲಾಗಿದೆ. ನಿತ್ಯ 65 ಎಂಎಲ್‌ಡಿ ನೀರು ಬರುತ್ತಿದ್ದು, 50 ವರ್ಷಗಳಿಂದ ವಿಜಾಪುರ ನಗರ ಎದುರಿಸುತ್ತಿದ್ದ ನೀರಿನ ಸಮಸ್ಯೆ ನಿವಾರಣೆಯಾದಂತಾಗಿದೆ' ಎಂದು ಜಲಮಂಡಳಿಯ ಕಾರ್ಯನಿರ್ವಾಹಕ ಎಂಜಿನಿಯರ್ ಶಿವಾನಂದ ಶೆಟ್ಟರ್ ಹೇಳಿದರು.

ನಗರಸಭೆ ಅಧ್ಯಕ್ಷ ಪರಶುರಾಮ ರಜಪೂತ, ಉಪಾಧ್ಯಕ್ಷ ಚನ್ನಪ್ಪ ಬಜಂತ್ರಿ, ನಗರಸಭೆ ಸದಸ್ಯರಾದ ಉಮೇಶ ವಂದಾಲ, ಆನಂದ ಧುಮಾಳೆ, ಜಲಮಂಡಳಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ವಿ.ಜಿ. ವಸ್ತ್ರದ ಇತರರು ಈ ಸಂದರ್ಭದಲ್ಲಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT