ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಯಪ್ಪ 113

Last Updated 23 ಜನವರಿ 2012, 19:30 IST
ಅಕ್ಷರ ಗಾತ್ರ

ಕೊಡಗಿನ ಶನಿವಾರ ಸಂತೆಯಲ್ಲಿ 1900ರ ಜನವರಿ 28 ರಂದು ಕೊಡಂದೇರ ಮೇದಪ್ಪ ಮತ್ತು ಕಾವೇರಿ ದಂಪತಿಗಳ ಎರಡನೇ ಪುತ್ರನಾಗಿ ಜನಿಸಿದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪನವರ ಜೀವನವೇ (ನಿಧನ 1993 ಮೇ 15) ರೋಚಕ, ರೋಮಾಂಚಕ. ಅವರ ಶಿಸ್ತಿನ ಬದುಕು ಎಂದಿಗೂ ಮಾದರಿ.

ಅವರು ಕೊಡಗಿನ ವೀರ ಶೂರ ಪರಂಪರೆಯ ಕಣ್ಮಣಿ. ಇಂಥ ಮಹಾನ್ ಸೇನಾನಿಯ 113ನೇ ಜನ್ಮದಿನವನ್ನು ಜ. 28ರಂದು ವಿವಿಧೆಡೆ ಆಚರಿಸಲಾಗುತ್ತಿದೆ.

ಮಡಿಕೇರಿಯ ಸೆಂಟ್ರಲ್ ಹೈಸ್ಕೂಲ್, ಮದ್ರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಓದಿದ ಅವರು ಒಳ್ಳೆಯ ಕ್ರೀಡಾಪಟುವೂ ಹೌದು. ಸ್ವಂತ ಇಚ್ಛೆ ಮತ್ತು ತಂದೆಯ ಬೆಂಬಲದೊಂದಿಗೆ ಬ್ರಿಟಿಷ್ ಇಂಡಿಯಾ ಸೇನೆ ಸೇರಿದರು.
 
ಕೂರ್ಗ್ ಕರ್ನಾಟಕ ಇನ್‌ಫೆಂಟ್ರಿ, ಡೋಗ್ರಾ ಮತ್ತು ರಜಪೂತ್ ಬೆಟಾಲಿಯನ್‌ನಲ್ಲಿ ಸೇವೆ ಸಲ್ಲಿಸಿದರು. ನೀಪಿಯರ್ಸ್ ರೈಫಲ್ಸ್ ತಂಡದೊಂದಿಗೆ ಇರಾಕ್‌ಗೆ ತೆರಳಿದರು. ಆರಂಭಿಕ ಸೇವಾವಧಿಯಲ್ಲಿ ಚೀನಾ, ಜಪಾನ್, ಅಮೆರಿಕ, ಕೆನಡಾ, ಬ್ರಿಟನ್, ಫ್ರಾನ್ಸ್, ಜರ್ಮನಿ ಹಾಗೂ ಸ್ವಿಜರ್‌ಲ್ಯಾಂಡ್‌ಗಳನ್ನೆಲ್ಲಾ ಸುತ್ತಿದ್ದರು. ಅಲ್ಲಿನ ಜನಜೀವನ, ಸೇನಾ ವ್ಯವಸ್ಥೆಯನ್ನು ಅಭ್ಯಾಸ ಮಾಡಿದ್ದರು. 1928ರಿಂದ 30ರ ತನಕ ವಾಜಿರಿಸ್ತಾನ್‌ನಲ್ಲಿದ್ದರು.

1947ರಲ್ಲಿ ಮೇಜರ್ ಜನರಲ್ ಹುದ್ದೆಗೇರಿದರು. ಭಾರತ ವಿಭಜನೆಯಾದಾಗ, ಅವಿಭಜಿತ ಭಾರತ ಸೇನೆಯನ್ನು ಎರಡೂ ದೇಶಗಳ ನಡುವೆ ಹಂಚುವ ಕಾರ್ಯವನ್ನು ನಿಭಾಯಿಸಿದರು. 1949 ಜನವರಿ 15 ರಂದು ಭೂಸೇನೆಯ ಮಹಾ ದಂಡನಾಯಕರಾಗಿ ಅಧಿಕಾರ ಸ್ವೀಕರಿಸಿ 1953ರ ಜನವರಿ 14 ರಂದು ನಿವೃತ್ತರಾದರು. ನಂತರ 1953 ಜುಲೈನಲ್ಲಿ ಆಸ್ಟ್ರೇಲಿಯಾ, ನ್ಯೂಜಿಲೆಂಡ್‌ನ ಹೈಕಮಿಷನರ್ ಆಗಿ ನೇಮಕಗೊಂಡು ಮೂರು ವರ್ಷ ಅಲ್ಲಿದ್ದರು.

ಮಡಿಕೇರಿಯ ಸುಮಾರು 38 ಎಕ್ರೆ ವಿಸ್ತಾರದ ಜಾಗದಲ್ಲಿನ, ತಮ್ಮ ಹಳೆಯ ಮನೆ ರೋಶನಾರವನ್ನು ವಸ್ತು ಸಂಗ್ರಹಾಲಯವಾಗಿ ಪರಿವರ್ತಿಸಿದರು. ಮನೆಯ ಸುತ್ತಲಿನ ಕಾಡನ್ನು ಕಡಿದು ಕಾಫಿ ತೋಟ ಮಾಡಿದ್ದರೆ ದೊಡ್ಡ ಪ್ಲಾಂಟರ್ ಆಗಿಬಿಡುತ್ತಿದ್ದರು.

ಆದರೆ ಅವರಿಗೆ ಮರ ಕಡಿದು ತೋಟ ಮಾಡುವುದಕ್ಕೆ ಮನಸ್ಸು ಬರಲಿಲ್ಲ. ದೇಶದ ಬಗ್ಗೆ, ಯುವ ಜನಾಂಗದ ಬಗ್ಗೆ ಹೆಚ್ಚು ಕಾಳಜಿ ಇಟ್ಟುಕೊಂಡಿದ್ದ ಅವರು ದುಂದು ವೆಚ್ಚ ಮಾಡುತ್ತಿರಲಿಲ್ಲ. ಸದಾ ಸೂಟು-ಬೂಟು ಧರಿಸಿ ಶಿಸ್ತಿನ ವ್ಯಕ್ತಿ ಎಂದೇ ಹೆಸರಾಗಿದ್ದರು. ಸಮಯಕ್ಕೆ ಅತಿ ಹೆಚ್ಚು ಬೆಲೆ ಕೊಡುತ್ತಿದ್ದರು.

1960 ರ ದಶಕದಲ್ಲಿ ಕ್ಷಾಮ ತಲೆತೋರಿದಾಗ ಸಕ್ಕರೆ ಅಭಾವ ಅರಿತು ಸಕ್ಕರೆ ಇಲ್ಲದ ಕಾಫಿ ಕುಡಿಯುತಿದ್ದರು. ಕಾರಿನಲ್ಲಿ ತೆರಳುವಾಗ  ರಸ್ತೆ ಬದಿಯಲ್ಲಿ ಯುವಕರು ಕಾಲಹರಣ  ಮಾಡುವುದನ್ನು ಕಂಡರೆ ಅವರಿಗೆ ಅಸಾಧ್ಯ ಕೋಪ. ಕಾರು ನಿಲ್ಲಿಸಿ ಇಳಿದು ಯುವಕರನ್ನು ಕರೆದು ಬುದ್ಧಿವಾದ ಹೇಳುತ್ತಿದ್ದರು. ಸೇನೆ ಸೇರಿ ದೇಶ ಸೇವೆ ಮಾಡಿ ಎಂದು ಹುರಿದುಂಬಿಸುತ್ತಿದ್ದರು.

ಭ್ರಷ್ಟಾಚಾರದ ಕಡು ವಿರೋಧಿಯಾಗಿದ್ದ ಅವರು ಲೋಕಸಭೆಗೆ ಮುಂಬೈಯಿಂದ ಸ್ಪರ್ಧಿಸಿ ಸೋತರು. ನಂತರ ಮತ್ತೆ ರಾಜಕೀಯಕ್ಕೆ ಇಳಿಯಲು ಹೋಗಲಿಲ್ಲ.

1986 ಏ. 28 ರಂದು ಅವರಿಗೆ ಭಾರತ ಸರ್ಕಾರ ಫೀಲ್ಡ್‌ಮಾರ್ಷಲ್ ಪದವಿ ನೀಡಿ ಸನ್ಮಾನಿಸಿತು. ಅನೇಕ ವಿವಿಗಳು ಗೌರವ ಡಾಕ್ಟರೇಟ್ ನೀಡಿ ಗೌರವಿಸಿದ್ದವು. ನೇಪಾಳ ಸೇನೆಯ ಗೌರವ ಕಮಾಂಡರ್, ಬ್ರಿಟಿಷ್ ಸರ್ಕಾರದ ಆರ್ಡರ್ ಆಫ್ ದಿ ಬ್ರಿಟಿಷ್ ಎಂಪೈರ್ ಗೌರವಕ್ಕೆ ಪಾತ್ರರಾಗಿದ್ದರು.

ಕೊಡಗಿನಲ್ಲಿ ಸ್ಮರಣೆ
ಇತ್ತೀಚೆಗೆ ಸ್ಥಾಪನೆಯಾದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ವೇದಿಕೆ ಶನಿವಾರ ಬೆಳಿಗ್ಗೆ 10 ಗಂಟೆಗೆ ಮಡಿಕೇರಿಯ ಸುದರ್ಶನ್ ಸರ್ಕಲ್‌ನ ಕಾರ್ಯಪ್ಪ ಪ್ರತಿಮೆ ಬಳಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಸಹಯೋಗದಲ್ಲಿ ಸ್ಮರಣಾ ಸಮಾರಂಭ ಏರ್ಪಡಿಸಿದೆ. ಅತಿಥಿ: ಸೇನೆಯ ದಕ್ಷಿಣ ವಲಯದ ಮುಖ್ಯಸ್ಥ ಲೆಪ್ಟಿನೆಂಟ್ ಜನರಲ್ ಎ.ಕೆ.ಸಿಂಗ್.

ಇದಲ್ಲದೆ ಕೊಡಗಿನ ವಿದ್ಯಾರ್ಥಿಗಳಿಗೆ ಮಡಿಕೇರಿ ಮತ್ತು ಗೋಣಿಕೊಪ್ಪದಲ್ಲಿ `ನಾನು ಅರಿತ ಫೀಲ್ಡ್ ಮಾರ್ಷಲ್~ ಎಂಬ ವಿಷಯದ ಬಗ್ಗೆ ಕೊಡವ, ಕನ್ನಡ ಹಾಗೂ ಇಂಗ್ಲಿಷ್‌ನಲ್ಲಿ ಪ್ರಬಂಧ ಸ್ಪರ್ಧೆ, ಕವಾಯತು ಮತ್ತು ರಾಷ್ಟ್ರಗೀತೆ ಗಾಯನ ಸ್ಪರ್ಧೆ ನಡೆಸಲಾಗುತ್ತಿದೆ ಎಂದು ವೇದಿಕೆ  ಕಾರ್ಯದರ್ಶಿ ಉಳ್ಳಿಯಡ ಎಂ. ಪೂವಯ್ಯ ಹೇಳುತ್ತಾರೆ.

ಬೆಂಗಳೂರಿನಲ್ಲಿ
ವಸಂತನಗರದ ಕೊಡವ ಸಮಾಜದ ಹರದಾಸ ಅಪ್ಪನೆರವಂಡ ಅಪ್ಪಚ್ಚಕವಿ ಸಭಾಂಗಣದಲ್ಲಿ ಶನಿವಾರ ಸಂಜೆ 6.30ಕ್ಕೆ ಸಮಾಜದ ಅಧ್ಯಕ್ಷರಾದ ಚೆಪ್ಪುಡಿರ ಎಂ. ಸುಬ್ಬಯ್ಯನವರ ಅಧ್ಯಕ್ಷತೆಯಲ್ಲಿ ಕಾರ್ಯಪ್ಪನವರ ಜನ್ಮದಿನ.  ಅತಿಥಿ: ಬ್ರಿಗೇಡಿಯರ್ ಕಾಳೇಂಗಡ ಸಿ. ಕಾರ್ಯಪ್ಪ. ನಂತರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT