ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಯಪ್ರಗತಿ ಸಂತಸ ನೀಡಿದೆ

Last Updated 24 ಜನವರಿ 2011, 19:30 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ):ವಿಶ್ವಕಪ್ ಕ್ರಿಕೆಟ್ ಪಂದ್ಯಗಳು ನಡೆಯುವ ಕೆಲವು ಕ್ರೀಡಾಂಗಣಗಳಲ್ಲಿ ಸಿದ್ಧತೆ ನಿಧಾನವಾಗಿ ಸಾಗಿದೆ ಎನ್ನುವ ದೂರುಗಳನ್ನು ತಳ್ಳಿಹಾಕಿರುವ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಪರಿಶೀಲನಾ ತಂಡವು ‘ಕಾರ್ಯಪ್ರಗತಿ ಸಂತಸ ನೀಡಿದೆ’ ಎಂದು ಸ್ಪಷ್ಟಪಡಿಸಿದೆ.

ಭಾರತದ ಎರಡು ಕ್ರೀಡಾಂಗಣಗಳಲ್ಲಿ ಹಾಗೂ ಶ್ರೀಲಂಕಾದಲ್ಲಿನ ಒಂದು ಕ್ರಿಕೆಟ್ ಕೇಂದ್ರದಲ್ಲಿ ನವೀಕರಣ ಕಾರ್ಯವು ಮಂದಗತಿಯಲ್ಲಿ ಸಾಗಿದೆ ಎನ್ನುವ ಮಾಧ್ಯಮ ವರದಿಗಳನ್ನು ಟೂರ್ನಿ ನಿರ್ದೇಶಕ ರತ್ನಾಕರ್ ಶೆಟ್ಟಿ ಅವರು ಅಲ್ಲಗಳೆದಿದ್ದರು.

ಅದಕ್ಕೆ ಬೆಂಬಲ ನೀಡುವಂಥ ಪ್ರತಿಕ್ರಿಯೆಯನ್ನು ಐಸಿಸಿ ತಂಡವು ಸೋಮವಾರ ಇಲ್ಲಿ ನೀಡಿದೆ.ವಾಂಖೇಡೆ ಕ್ರೀಡಾಂಗಣ ಹಾಗೂ ಕೋಲ್ಕತ್ತದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಇನ್ನೂ ನವೀಕರಣ ಕೆಲಸ ಪೂರ್ಣಗೊಂಡಿಲ್ಲ ಎನ್ನುವ ಅಭಿಪ್ರಾಯ ತಪ್ಪು.ಎಲ್ಲವೂ ವ್ಯವಸ್ಥಿತವಾಗಿದೆ. ಕೊನೆಯ ಹಂತದ ಅಲಂಕಾರದ ಕೆಲಸವು ಈಗ ಪ್ರಗತಿಯಲ್ಲಿದೆ ಎಂದು ಮೂರು ಸದಸ್ಯರ ಪರಿಶೀಲನಾ ಸಮಿತಿ ಸ್ಪಷ್ಟಪಡಿಸಿದೆ.

ಏಪ್ರಿಲ್ 2ರಂದು ಫೈನಲ್ ಪಂದ್ಯ ನಡೆಯಲಿರುವ ವಾಂಖೇಡೆ ಕ್ರೀಡಾಂಗಣವನ್ನು ಸಮಿತಿಯು ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರತ್ನಾಕರ್ ‘ಪಂದ್ಯಗಳನ್ನು ಆಯೋಜಿಸುವುದಕ್ಕೆ ಆಯ್ಕೆ ಮಾಡಿರುವ ಎಲ್ಲ ಹದಿಮೂರು ಕ್ರೀಡಾಂಗಣಗಳು ಉನ್ನತ ಮಟ್ಟದ ಸೌಲಭ್ಯಗಳಿಂದ ಸಜ್ಜಾಗಿವೆ.ಆದರೆ ಕೆಲವು ಮಾಧ್ಯಮದವರು ಸಂಘಟನಾ ಸಮಿತಿಗಿಂತ ಹೆಚ್ಚು ಆತಂಕಗೊಂಡವರಂತೆ ತಪ್ಪು ಮಾಹಿತಿಯನ್ನು ಜನರಿಗೆ ನೀಡುತ್ತಿದ್ದಾರೆ’ ಎಂದರು.

‘ಇಲ್ಲಿ ಕೇವಲ ಫೈನಲ್ ಪಂದ್ಯವಲ್ಲ, ಅದಕ್ಕೂ ಮುನ್ನ ಎರಡು ಲೀಗ್ ಪಂದ್ಯಗಳೂ ನಡೆಯಲಿವೆ. ಆದ್ದರಿಂದ ಅದಕ್ಕೂ ಮುನ್ನವೇ ಕ್ರೀಡಾಂಗಣವು ತಂಡಗಳಿಗೆ ಲಭ್ಯವಾಗಬೇಕು. ಅದು ಸಂಘಟನಾ ಸಮಿತಿಗೂ ಗೊತ್ತು’ ಎಂದ ಅವರು ‘ಕ್ರೀಡಾಂಗಣದಲ್ಲಿ ಈಗ ನಡೆಯುತ್ತಿರುವುದು ಕೊನೆಯ ಹಂತದ ತಯಾರಿ. ನಿರ್ಮಾಣ ಕಾರ್ಯಗಳೆಲ್ಲಾ ಮುಗಿದು ಸಾಕಷ್ಟು ದಿನಗಳು ಕಳೆದಿವೆ’ ಎಂದು ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT