ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಲಮಿತಿಯಲ್ಲಿ ಕಾಮಗಾರಿ ಪೂರ್ಣ ಸಂಕಲ್ಪ

ಬಿಬಿಎಂಪಿಗೆ ಸೇರ್ಪಡೆಯಾದ ಪ್ರದೇಶಗಳ ಒಳಚರಂಡಿ ಕಾಮಗಾರಿ
Last Updated 3 ಜುಲೈ 2013, 20:08 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರಿಗೆ ಹೊಸದಾಗಿ ಸೇರ್ಪಡೆಯಾದ ಏಳು ನಗರಸಭೆಗಳು ಹಾಗೂ ಒಂದು ಪುರಸಭೆ ವ್ಯಾಪ್ತಿಯಲ್ಲಿ ಒಳಚರಂಡಿ (ಯುಜಿಡಿ) ವ್ಯವಸ್ಥೆ ಅಳವಡಿಕೆ ಕಾರ್ಯಕ್ಕೆ ವೇಗ ಸಿಕ್ಕಿದ್ದು, ಶೇ 74ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಕಾಮಗಾರಿಯನ್ನು 2014ರ ಮಾರ್ಚ್ ತಿಂಗಳೊಳಗೆ ಪೂರ್ಣಗೊಳಿಸಬೇಕು ಎಂದು ಜಲಮಂಡಳಿ ಯೋಜಿಸಿದೆ.

ಇತ್ತೀಚಿನ ವರ್ಷಗಳಲ್ಲಿ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಿಗಡಾಯಿಸಿದೆ. ಬಿಬಿಎಂಪಿ ವ್ಯಾಪ್ತಿ ವಿಸ್ತಾರಗೊಂಡ ಬಳಿಕ ನೀರಿನ ಸಮಸ್ಯೆ ದುಪ್ಪಟ್ಟಾಯಿತು. ಯಲಹಂಕ, ಬ್ಯಾಟರಾಯನಪುರ, ಕೃಷ್ಣರಾಜಪುರ, ಮಹದೇವಪುರ, ಬೊಮ್ಮನಹಳ್ಳಿ, ರಾಜರಾಜೇಶ್ವರಿ ನಗರ, ದಾಸರಹಳ್ಳಿ ಹಾಗೂ ಕೆಂಗೇರಿಗಳಿಗೆ ಕುಡಿಯುವ ನೀರು ಪೂರೈಕೆ ಮಾಡಲು ಕಾವೇರಿ ನಾಲ್ಕನೇ ಹಂತ 2ನೇ ಘಟ್ಟದ ನೀರು ಪೂರೈಕೆ ಯೋಜನೆಗೆ 2012ರಲ್ಲಿ ಚಾಲನೆ ನೀಡಲಾಯಿತು. ಈ ಪ್ರದೇಶಗಳಿಗೆ ಪ್ರಸ್ತುತ 250 ದಶಲಕ್ಷ ಲೀಟರ್ ನೀರು ಪೂರೈಕೆ ಮಾಡಲಾಗುತ್ತಿದೆ. ಕುಡಿಯುವ ನೀರು ಪೂರೈಕೆಯೊಂದಿಗೆ ಒಳಚರಂಡಿ ವ್ಯವಸ್ಥೆ ಕಲ್ಪಿಸುವ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಯಿತು. ಈ ಕಾಮಗಾರಿಗೆ 2010ರಲ್ಲಿ ಚಾಲನೆ ನೀಡಲಾಯಿತು.

ಈ ಯೋಜನೆಯಡಿ 2,250 ಕಿ.ಮೀ. ಒಳಚರಂಡಿ ಕೊಳವೆಗಳನ್ನು ಅಳವಡಿಸಲಾಗುತ್ತಿದೆ. ಯೋಜನೆಯ ಮೊತ್ತ 1,192 ಕೋಟಿ ರೂಪಾಯಿ. ಯೋಜನೆಗೆ ವಿಶ್ವಬ್ಯಾಂಕ್ 567 ಕೋಟಿ ರೂಪಾಯಿ ಸಾಲ ರೂಪದಲ್ಲಿ ನೀಡಿದೆ. ಜೆನರ್ಮ್ ಯೋಜನೆಯಲ್ಲಿ 383.43 ಕೋಟಿ ರೂಪಾಯಿ ಅನುದಾನ ಮಂಜೂರಾಗಿದೆ. ಉಳಿದ ಮೊತ್ತವನ್ನು ಜಲಮಂಡಳಿಯಿಂದ ಭರಿಸಲಾಗುತ್ತಿದೆ. 2036ರ ಜನಸಂಖ್ಯೆಯನ್ನು (35 ಲಕ್ಷ) ಗಮನದಲ್ಲಿರಿಸಿಕೊಂಡು ಯೋಜನೆಯ ವಿನ್ಯಾಸ ಮಾಡಲಾಗಿದೆ. 2021ರ ವೇಳೆಗೆ ದಿನಕ್ಕೆ 365 ದಶಲಕ್ಷ ಲೀಟರ್ ಕೊಳಚೆ ನೀರು ಹಾಗೂ 2036ರ ವೇಳೆಗೆ 475 ದಶಲಕ್ಷ ಲೀಟರ್ ಕೊಳಚೆ ನೀರು ಉತ್ಪತ್ತಿಯಾಗಲಿದೆ ಎಂದು ಅಂದಾಜಿಸಲಾಗಿದೆ. ಮಂಡಳಿ ವತಿಯಿಂದ ಈಗಾಗಲೇ ಇರುವ 14 ಕೊಳಚೆ ನೀರು ಸಂಸ್ಕರಣಾ ಘಟಕಗಳು ಹಾಗೂ ಹೊಸದಾಗಿ ನಿರ್ಮಾಣವಾಗಲಿರುವ 10 ಕೇಂದ್ರಗಳ ಮೂಲಕ ಈ ನೀರನ್ನು ಸಂಸ್ಕರಿಸಲು ಯೋಜಿಸಲಾಗಿದೆ.

ಕಾಮಗಾರಿಗಳನ್ನು 24 ಪ್ಯಾಕೇಜ್‌ಗಳಾಗಿ ವಿಂಗಡಿಸಿ ಮೂರು ಹಂತದಲ್ಲಿ ಕಾಮಗಾರಿ ಆರಂಭಿಸಲಾಗಿತ್ತು. ಏಳು ಪ್ಯಾಕೇಜ್‌ಗಳ ಕಾಮಗಾರಿಯು 2010ರ ಫೆಬ್ರುವರಿಯಲ್ಲಿ, 10 ಪ್ಯಾಕೇಜ್ 2010ರ ಮೇ ತಿಂಗಳಿನಲ್ಲಿ, ಏಳು ಪ್ಯಾಕೇಜ್‌ಗಳ ಕಾಮಗಾರಿ 2011ರ ಫೆಬ್ರುವರಿಯಲ್ಲಿ ಆರಂಭಿಸಲಾಗಿದೆ. ಈಗಾಗಲೇ 1,555 ಕಿ.ಮೀ. ವ್ಯಾಪ್ತಿಯಲ್ಲಿ ಕೊಳವೆ ಅಳವಡಿಕೆ ಕಾರ್ಯ ಪೂರ್ಣಗೊಂಡಿದೆ. 1,03,366 ಮನೆಗಳಿಗೆ ಒಳಚರಂಡಿ ಸಂಪರ್ಕ ವ್ಯವಸ್ಥೆ ಕಲ್ಪಿಸಲಾಗಿದೆ. 

ಯೋಜನೆಯೊಳಗೆ: `ಒಳಚರಂಡಿ ಕೊಳವೆ ಅಳವಡಿಸಲು ಅಗೆದ ರಸ್ತೆಗಳನ್ನು ಯಥಾಸ್ಥಿತಿಗೆ ತರುವ ಕಾಮಗಾರಿಯೂ ಇದರಲ್ಲಿ ಸೇರಿದೆ. 2,83,623 ಮನೆಗಳಿಗೆ ಒಳಚರಂಡಿ ಸಂಪರ್ಕ ವ್ಯವಸ್ಥೆ ಕಲ್ಪಿಸುವ ಕೆಲಸವೂ ಇದರಲ್ಲಿ ಇದೆ. ಜಾಗ ಮತ್ತಿತರ ವಿಷಯಗಳಿಗೆ ಸಂಬಂಧಿಸಿದಂತೆ ಕಾಮಗಾರಿ ಶುರು ಮಾಡುವ ಹೊತ್ತಿನಲ್ಲಿ  ಕೆರೆ ಅಭಿವೃದ್ಧಿ ಪ್ರಾಧಿಕಾರದಿಂದ 22, ರೈಲ್ವೆಯಿಂದ 22, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ 13, ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದಿಂದ ಮೂರು, ಬಿಬಿಎಂಪಿಯಿಂದ 24, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಒಂಬತ್ತು ಸೇರಿದಂತೆ 117 ರಹದಾರಿ ಹಕ್ಕು ಅನುಮತಿಗಳನ್ನು ಪಡೆಯಲಾಗಿದೆ' ಎಂದು ಜಲಮಂಡಳಿಯ ಮುಖ್ಯ ಎಂಜಿನಿಯರ್ (ಯೋಜನೆ) ರಾಮಸ್ವಾಮಿ ಹೇಳುತ್ತಾರೆ.

`ರೈಲು ಮಾರ್ಗಗಳನ್ನು ಕೊಳವೆಗಳು ಹಾದು ಹೋಗುವಾಗ ಕಂದಕರಹಿತ (ಟ್ರೆಂಚ್‌ಲೆಸ್) ವಿಧಾನ ಅಳವಡಿಸಿ ಅತ್ಯಾಧುನಿಕ ತಂತ್ರಜ್ಞಾನದ ನೆರವಿನಿಂದ ಕೆಲಸ ಮಾಡಲಾಗಿದೆ. ಕೆರೆಗಳ ಪಕ್ಕದಲ್ಲಿ ಕೊಳವೆಗಳನ್ನು ಅಳವಡಿಸುವಾಗ ಕೊಳಚೆ ನೀರು ಕೆರೆಗೆ ಸೇರದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕೊಳೆಗೇರಿ, ಸಣ್ಣ ರಸ್ತೆಗಳು ಹಾಗೂ ತಿರುವು ರಸ್ತೆಗಳಲ್ಲಿ ಕಾಮಗಾರಿ ನಡೆಸುವುದು ಕ್ಲಿಷ್ಟಕರವಾಗಿದೆ' ಎಂದು ಅವರು ಮಾಹಿತಿ ನೀಡಿದರು.

ಗುತ್ತಿಗೆದಾರರ ಬದಲಾವಣೆ: `24 ಪ್ಯಾಕೇಜ್‌ಗಳ ಪೈಕಿ ನಾಲ್ಕು ಪ್ಯಾಕೇಜ್‌ಗಳಲ್ಲಿ ಗುತ್ತಿಗೆದಾರರು ಸರಿಯಾಗಿ ಕಾರ್ಯನಿರ್ವಹಿಸದ ಹಿನ್ನೆಲೆಯಲ್ಲಿ ಕಾಮಗಾರಿಯಲ್ಲಿ ಸ್ವಲ್ಪ ಮಟ್ಟಿಗೆ ವಿಳಂಬವಾಗಿದೆ. ಮಹದೇವಪುರದ ಎರಡು,ರಾಜರಾಜೇಶ್ವರಿ ನಗರದ ಒಂದು ಹಾಗೂ ಕೆಂಗೇರಿಯ ಒಂದು ಪ್ಯಾಕೇಜ್ ಕಾಮಗಾರಿಯನ್ನು ಗುತ್ತಿಗೆದಾರರು ಆಮೆಗತಿಯಲ್ಲಿ ನಿರ್ವಹಿಸಿದರು. ಹಲವು ಬಾರಿ ಎಚ್ಚರಿಕೆ ನೀಡಿದರೂ ಕಾಮಗಾರಿಗೆ ವೇಗ ದೊರಕಲಿಲ್ಲ. ಈ ಹಿನ್ನೆಲೆಯಲ್ಲಿ 2012ರ ಮೇ ತಿಂಗಳಿನಲ್ಲಿ ಈ ನಾಲ್ಕು ಪ್ಯಾಕೇಜ್‌ಗಳ ಗುತ್ತಿಗೆದಾರನನ್ನು ವಜಾ ಮಾಡಿ ಹೊಸ ಅಂದಾಜು ಪಟ್ಟಿ ತಯಾರಿಸಿ ಟೆಂಡರ್ ಕರೆದು ಹೊಸ ಗುತ್ತಿಗೆದಾರರಿಗೆ ಕಾಮಗಾರಿ ವಹಿಸಲಾಗಿದೆ. ಈ ಕಾಮಗಾರಿಗಳು ಆರಂಭ ಆಗಿವೆ' ಎಂದು ರಾಮಸ್ವಾಮಿ ಹೇಳಿದರು. `ಮನೆಯ ಕಾಂಪೌಂಡ್ ವರೆಗೆ ಒಳಚರಂಡಿ ಸಂಪರ್ಕದ ವ್ಯವಸ್ಥೆ ಮಾಡಲಾಗುತ್ತದೆ.

ಮನೆಯೊಳಗೆ ಸಂಪರ್ಕದ ವ್ಯವಸ್ಥೆಯನ್ನು ಮನೆಯವರೇ ಮಾಡಿಕೊಳ್ಳಬೇಕು. ಪದೇ ಪದೇ ರಸ್ತೆ ಅಗೆದು ಕಾಮಗಾರಿ ನಡೆಸುವ ಸ್ಥಿತಿ ನಿರ್ಮಾಣವಾಗಬಾರದು ಎಂಬ ಉದ್ದೇಶದಿಂದ ಮನೆಯ ಕಾಂಪೌಂಡ್ ತನಕ ಸಂಪರ್ಕ ಕಲ್ಪಿಸಲಾಗುತ್ತಿದೆ' ಎಂದು ಅವರು ತಿಳಿಸಿದರು.

ಕೊಳೆಗೇರಿಗಳಿಗೆ ಶೌಚಾಲಯ
`ಒಳಚರಂಡಿ ಕಾಮಗಾರಿಯ ಜೊತೆಗೆ ಕೊಳೆಗೇರಿಗಳ ಕಡು ಬಡವರಿಗೆ ನೈರ್ಮಲೀಕರಣ ಯೋಜನೆಯಡಿ ಶೌಚಾಲಯ ನಿರ್ಮಿಸಿ ಕೊಡಲಾಗುತ್ತಿದೆ. ಈ ಯೋಜನೆಯ ವೆಚ್ಚ 29 ಕೋಟಿ ರೂಪಾಯಿ. ವಿಶ್ವ ಬ್ಯಾಂಕ್ ಅನುದಾನದ ನೆರವಿನಿಂದ ಈ ಕಾರ್ಯ ಮಾಡಲಾಗುತ್ತಿದೆ. ಏಳು ನಗರಸಭೆ ಹಾಗೂ ಒಂದು ಪುರಸಭೆ ವ್ಯಾಪ್ತಿಯಲ್ಲಿ 117 ಕೊಳೆಗೇರಿಗಳಿದ್ದು, ಇಲ್ಲಿ 29,553 ಮನೆಗಳಿವೆ. ಈ ಪೈಕಿ 2,614 ಮನೆಗಳಲ್ಲಿ ಶೌಚಾಲಯ ವ್ಯವಸ್ಥೆ ಇಲ್ಲ. ಈ ಮನೆಗಳಿಗೆ ಶೌಚಾಲಯ ನಿರ್ಮಿಸಿ ಕೊಡಲಾಗುತ್ತಿದೆ. ಇದರಲ್ಲಿ 565 ಮನೆಗಳಿಗೆ ಈಗಾಗಲೇ ಶೌಚಾಲಯ ನಿರ್ಮಿಸಿ ಕೊಡಲಾಗಿದೆ. ಶೌಚಾಲಯಕ್ಕೆ ಶೇ 50 ಮೊತ್ತವನ್ನು ಜಲಮಂಡಳಿ ಭರಿಸಿದರೆ, ಉಳಿದ ಮೊತ್ತವನ್ನು ಮನೆಯವರು ನೀಡಬೇಕು. ಬಯಲು ಶೌಚಾಲಯಕ್ಕೆ ಕಡಿವಾಣ ಹಾಕಿ ಪರಿಸರ ಸಂರಕ್ಷಣೆ ಈ ಕಾಮಗಾರಿಯ ಉದ್ದೇಶ' ಎಂದು ಜಲಮಂಡಳಿಯ ಅಧಿಕಾರಿಗಳು         ಹೇಳುತ್ತಾರೆ.

ಕೆರೆಗಳಿಗೆ ಕೊಳಚೆ ನೀರು ಸೇರುವುದು ತಪ್ಪಲಿದೆ
20 ಪ್ಯಾಕೇಜ್‌ಗಳ ಕಾಮಗಾರಿ 2014ರ ಮಾರ್ಚ್ ತಿಂಗಳೊಳಗೆ ಪೂರ್ಣಗೊಳ್ಳಲಿದೆ. ಉಳಿದ ಎರಡು ಪ್ಯಾಕೇಜ್‌ಗಳ ಕಾಮಗಾರಿ 2014ರ ಅಕ್ಟೋಬರ್‌ನಲ್ಲಿ, ಮತ್ತೆರಡು ಪ್ಯಾಕೇಜ್‌ಗಳ ಕಾಮಗಾರಿ 2015ರ ಅಕ್ಟೋಬರ್‌ನಲ್ಲಿ ಪೂರ್ಣಗೊಳ್ಳಲಿವೆ. ಯೋಜನಾ ವೆಚ್ಚದಲ್ಲಿ ಹೆಚ್ಚಳ ಆಗುವುದಿಲ್ಲ. ಒಬ್ಬ ಗುತ್ತಿಗೆದಾರ ನಿಧಾನಗತಿಯಲ್ಲಿ ಕೆಲಸ ಮಾಡಿದ್ದರಿಂದ ನಾಲ್ಕು ಪ್ಯಾಕೇಜ್‌ಗಳ ಕಾಮಗಾರಿ ವಿಳಂಬವಾಗಿದೆ. ಈ ಯೋಜನೆಯಿಂದಾಗಿ 39 ಕೆರೆಗಳಿಗೆ ಕೊಳಚೆ ನೀರು ಸೇರುವುದು ತಪ್ಪಲಿದೆ.
-ರಾಮಸ್ವಾಮಿ, ಮುಖ್ಯ ಎಂಜಿನಿಯರ್ (ಯೋಜನೆ), ಜಲಮಂಡಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT