ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಲಮಿತಿಯೊಳಗೆ ಕಾರ್ಯನಿರ್ವಹಿಸಿ

Last Updated 15 ಸೆಪ್ಟೆಂಬರ್ 2011, 9:35 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಎಲ್ಲ ಕಾಮಗಾರಿ ಮತ್ತು ಕಡತ ವಿಲೇವಾರಿಯನ್ನು ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳಿಸುವಂತೆ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ರಾತ್ರಿ ಜಿಲ್ಲಾಮಟ್ಟದ ಪ್ರಗತಿ ಪರಿಶೀಲನೆ ಸಭೆ ನಡೆಸಿ, ಅವರು ಮಾತನಾಡಿದರು.

ಕಾರಣವಿಲ್ಲದ ವಿಳಂಬ ಸಹಿಸಲಾಗದು. ಮುಂದಿನ 2 ತಿಂಗಳೊಳಗೆ ಪ್ರಸಕ್ತ ಸಾಲಿನ ಗುರಿ ಸಾಧನೆಯಲ್ಲಿ ಶೇ.80ರಷ್ಟು ತಲುಪಬೇಕು. ಪ್ರತಿಯೊಂದು ಕಡತ ವಿಲೇವಾರಿಯನ್ನು 15 ದಿನಗಳೊಳಗೆ ಪೂರ್ಣಗೊಳಿಸಬೇಕು ಎಂದು ಅವರು ತಿಳಿಸಿದರು.

ಮುಂದಿನ ಒಂದು ವರ್ಷದ ನಂತರ ಸಾಧನೆ ಹೇಗಿರಬೇಕು ಎಂಬುದರ ಯೋಜನೆಯನ್ನು ಅಧಿಕಾರಿಗಳು  ಈಗಲೇ ಮಾಡಬೇಕು. ಸಾರ್ವಜನಿಕವಾಗಿ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಬೇಕು. ಜಿಲ್ಲೆ ಮುಖ್ಯಂತ್ರಿಗಳ ಜಿಲ್ಲೆ ಎಂಬುದನ್ನು ಗಮನದಲ್ಲಿಟ್ಟು ಅಧಿಕಾರಿಗಳು ಕೆಲಸ ಮಾಡಬೇಕು. ಇದರಿಂದ ಜಿಲ್ಲೆಯ ಅಭಿವೃದ್ಧಿ ಇತರೆಡೆಗಳಿಗೆ ವ್ಯಕ್ತವಾಗಿ ತೋರಲಿದೆ ಎಂದು ಹೇಳಿದರು.

ಕಡೂರು ತಾಲ್ಲೂಕಿನಲ್ಲಿ ಮಳೆಯ ಕೊರತೆಯಿಂದಾಗಿ ಬರಪರಿಸ್ಥಿತಿ ತಲೆದೋರಿದ್ದು, ಈ ಬಗ್ಗೆ 3 ದಿನಗಳೊಳಗೆ ಅಧಿಕಾರಿಗಳು ಜನಪ್ರತಿನಿಧಿಗಳೊಂದಿಗೆ ಸಭೆ ನಡೆಸಿ ಸಮಗ್ರ ವರದಿ ಸಲ್ಲಿಸಬೇಕು. ಸರ್ಕಾರ ಇದಕ್ಕೆ ತಕ್ಷಣವೇ ಸ್ಪಂದಿಸಲಿದೆ. ಎಲ್ಲಿಯೂ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಮುಂಜಾಗರೂಕತೆ ವಹಿಸಬೇಕು ಎಂದು ಸದಾನಂದಗೌಡ ಸೂಚಿಸಿದರು.

ಅತಿವೃಷ್ಟಿಯಿಂದ ಜಿಲ್ಲೆಯಲ್ಲಿ ಹಾಳಾಗಿರುವ ರಸ್ತೆ ದುರಸ್ತಿಗೆ ಹಣ ಬಿಡುಗಡೆ ಮಾಡಲಾಗುವುದು. ಮಳೆಗಾಲ ಮುಗಿದ ತಕ್ಷಣ ಶಾಶ್ವತ ದುರಸ್ತಿಗೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಈ ಹಿನ್ನೆಲೆಯಲ್ಲಿ ಟೆಂಡರ್ ಪ್ರಕ್ರಿಯೆ ಮುಗಿಸಿ, ಅವಶ್ಯಕ ಸಾಮಗ್ರಿ ಸಂಗ್ರಹಿಸಿಡಲು ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ತಿಳಿಸಿದರು.
ಜಿಲ್ಲೆಯಲ್ಲಿ ರಸಗೊಬ್ಬರ ಕೊರತೆಯಾಗದಂತೆ ವಿತರಣಾ ವ್ಯವಸ್ಥೆಯನ್ನು ತ್ವರಿತಗೊಳಿಸಬೇಕು.

ಕಾಳಸಂತೆಯಲ್ಲಿ ರಸಗೊಬ್ಬರ ಮಾರಾಟವಾಗುವುದನ್ನು ತಡೆಗಟ್ಟಲು ಕಾರ್ಯಾಚರಣೆ ನಡೆಸಬೇಕು, ಮುಚ್ಚಿರುವ ಗೊಬ್ಬರ ಸೊಸೈಟಿಗಳಿಗೆ ಗೊಬ್ಬರ ಸರಬರಾಜಾಗುತ್ತಿರುವ ಕುರಿತು ಕೂಡಲೇ ಗಮನಹರಿಸಿಸಬೇಕು. ರಸಗೊಬ್ಬರ ಗೋದಾಮು ನಿರ್ಮಿಸಲು ಚಿಕ್ಕಮಗಳೂರಿನಲ್ಲಿ 5 ಎಕರೆ ಜಾಗ ಮಂಜೂರು ಮಾಡುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದರು.

ಕೆರೆ ಕಾಮಗಾರಿಗೆ ಜಿಲ್ಲೆಯಲ್ಲಿ ರೂ.5.93 ಕೋಟಿ ಮಂಜೂರಾಗಿದ್ದು, 213 ಕಾಮಗಾರಿಗೆ ಅನುಮೋದನೆ ಸಿಕ್ಕಿದೆ. ಜಿಲ್ಲೆಯ ಎಲ್ಲ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಆಧ್ಯತೆ ನೀಡಲಾಗುವುದು. ಸುವರ್ಣ ಭೂಮಿ ಯೋಜನೆಯ ಎಲ್ಲ ನಿಗದಿತ ಫಲಾನುಭವಿಗಳಿಗೂ ಸಹಾಯಧನ ಮಂಜೂರು ಮಾಡಲಾಗುತ್ತಿದ್ದು,

ಸಂಬಂಧಿತ ಇಲಾಖೆಗಳು ಸಮನ್ವತೆಯಿಂದ ಈ ಬಗ್ಗೆ ಕಾರ್ಯ ನಿರ್ವಹಿಸಬೇಕು ಎಂದು ಅವರು ತಿಳಿಸಿದರು.
ಅಭಿವೃದ್ಧಿ ಕೆಲಸಗಳಲ್ಲಿ ಬಿಗಿಯಾಗಿ ವರ್ತಿಸದಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಸಂಧ್ಯಾ ಸುರಕ್ಷಾ, ವೃದ್ಧಾಪ್ಯ ವೇತನ, ಅಂಗವಿಕಲರ ವೇತನ ಮತ್ತಿತರ ಪಿಂಚಣಿ ಯೋಜನೆಗಳಲ್ಲಿ ಒಮ್ಮೆ ಮಂಜೂರಾಗಿದ್ದರೆ ಅದನ್ನು ನಿರಂತರವಾಗಿ ಮುಂದುವರಿಸಬೇಕು, ಯಾವುದೇ ಕಾರಣಕ್ಕೂ ಮಧ್ಯದಲ್ಲಿ ತಡೆಹಿಡಿಯಬಾರದು ಎಂದರು.

ಪ್ರತಿ 2 ತಿಂಗಳಿಗೊಮ್ಮೆ ಜಿಲ್ಲೆಯ ಪ್ರಗತಿ ಪರಿಶೀಲನೆ ನಡೆಸುವುದಾಗಿ ತಿಳಿಸಿದ ಅವರು, ಯೋಜನೆಗೆ ನಿಗದಿತ ಅನುಧಾನವನ್ನು ಸಮರ್ಪಕವಾಗಿ ಬಳಸಿ, ಕೇಂದ್ರ ಸರ್ಕಾರದ ವಿವಿಧ ಯೋಜನೆಗಳಲ್ಲಿ ಬರುವ ಅನುಧಾನವನ್ನೂ ಸಂಪೂರ್ಣವಾಗಿ ಬಳಸಬೇಕು ಎಂದು ಹೇಳಿದರು.
 
ಮುಖ್ಯ ಸಚೇತಕ ಡಿ.ಜೀವರಾಜ್ ಮಾತನಾಡಿ, ಬಾಳೆಹೊಳೆ-ಮಾಗುಂಡಿ ಎಕ್ಸ್‌ಪ್ರೆಸ್ ವಿದ್ಯುತ್ ಲೈನ್ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದರೂ, ಈಗ ಅರಣ್ಯ ಇಲಾಖೆಯ ತಕರಾರು ಎತ್ತಿದೆ ಎಂದರು.

ಶಾಸಕ ಸಿ.ಟಿ.ರವಿ ಮಾತನಾಡಿ, ಚಿಕ್ಕಮಗಳೂರು ಜಿಲ್ಲಾ ಆಸ್ಪತ್ರೆ, ನಗರಸಭೆಯಲ್ಲಿ ಸಿಬ್ಬಂದಿ ಕೊರತೆಯಿದ್ದು, ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದರು. ಶಾಸಕ ಎಂ.ಪಿ.ಕುಮಾರಸ್ವಾಮಿ ಮಾತನಾಡಿ, ಮೂಡಿಗೆರೆ ತಾಲ್ಲೂಕಿನಲ್ಲಿ ಆನೆ ಹಾವಳಿ ಸಮಸ್ಯೆ ಇದೆ ಎಂದು ಹೇಳಿದರು.

ಶಾಸಕ ಡಾ.ವೈ.ಸಿ.ವಿಶ್ವನಾಥ್ ಮಾತನಾಡಿ, ಕಡೂರು ತಾಲ್ಲೂಕಿನಲ್ಲಿ ತೀವ್ರ ಬರಗಾಲ ತೆದೋರಿದ್ದು, ಅಗತ್ಯ ಕ್ರಮಗಳನ್ನು ತಕ್ಷಣವೇ ಕೈಗೊಳ್ಳಬೇಕು ಎಂದರು. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸುರೇಶ್ ಕುಮಾರ್, ಜಿ.ಪಂ. ಅಧ್ಯಕ್ಷೆ ಪ್ರಫುಲ್ಲಾ ಮಂಜುನಾಥ್, ತೆಂಗುನಾರು ಅಭಿವೃದ್ಧಿ ಮಂಡಳಿ ಅಧ್ಯಕ್ಷೆ ರೇಖಾ ಹುಲಿಯಪ್ಪ ಗೌಡ, ಅರಣ್ಯ ವಸತಿ ವಿಹಾರ ನಿಗಮ ಅಧ್ಯಕ್ಷ ಪ್ರಾಣೇಶ್, ಜಿಲ್ಲಾಧಿಕಾರಿ ಡಿ.ಕೆ.ರಂಗಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT