ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಲಿಟ್ಟ ಮುಂಗಾರು : ರಾಜ್ಯ ಪ್ರವೇಶಿಸಲು ಪ್ರಶಸ್ತ ವಾತಾವರಣ

Last Updated 5 ಜೂನ್ 2012, 19:30 IST
ಅಕ್ಷರ ಗಾತ್ರ

ತಿರುವನಂತಪುರ/ ನವದೆಹಲಿ (ಪಿಟಿಐ, ಐಎಎನ್‌ಎಸ್): ರಾಷ್ಟ್ರದ ಕೃಷಿ ಪ್ರಧಾನ ಆರ್ಥಿಕತೆಯ ಜೀವನಾಡಿಯಾದ ನೈಋತ್ಯ ಮುಂಗಾರು ಮಂಗಳವಾರ ಕೇರಳ ಪ್ರವೇಶಿಸಿದ್ದು, ಆ ರಾಜ್ಯದ ಬಹುತೇಕ ಭಾಗಗಳಲ್ಲಿ ಮಳೆ ಸುರಿದಿದೆ.

ನೈಋತ್ಯ ಮುಂಗಾರು ಸಾಮಾನ್ಯವಾಗಿ ಜೂನ್ 1ರ ವೇಳೆಗೆ ಕೇರಳ ಪ್ರವೇಶಿಸುತ್ತದೆ. ಈ ಬಾರಿ ಕೂಡ, ಮುಂಗಾರು ಕೇರಳವನ್ನು ಜೂನ್ 1ರಂದು ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಆದರೆ, ಈ ಮುನ್ಸೂಚನೆಯಲ್ಲಿ ನಾಲ್ಕು ದಿನಗಳಷ್ಟು ಹೆಚ್ಚುಕಡಿಮೆ ಆಗಬಹುದಾದ ಸಾಧ್ಯತೆ ಎಂದೂ ಹೇಳಿತ್ತು. ಕಳೆದ ವರ್ಷ ಮುಂಗಾರು ಇಲ್ಲಿಗೆ ಮೇ 29ರಂದೇ ಕಾಲಿಟ್ಟಿತ್ತು.

ಕೇರಳದಲ್ಲಿ ಕೆಲವು ದಿನಗಳಿಂದ ಈಗಾಗಲೇ ಮಳೆ ಸುರಿಯುತ್ತಿದ್ದರೂ ಮುಂಗಾರು ಅಧಿಕೃತವಾಗಿ ಪ್ರವೇಶವಾಗಿರುವುದು ಮಂಗಳವಾರ ಎಂದು ಹವಾಮಾನ ಇಲಾಖೆ ಪ್ರಕಟಿಸಿದೆ. ಕೊಟ್ಟಾಯಂ, ಅಲಪ್ಪುಳ, ಎರ್ನಾಕುಲಂ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಬಿರುಸಿನ ಮಳೆ ಸುರಿಯುತ್ತಿದೆ. ಅಲಪ್ಪುಳದಲ್ಲಿ ಕಡಲ್ಕೊರೆತದ ಸಮಸ್ಯೆಯೂ ಎದುರಾಗಿದೆ. ಆದರೆ ದಕ್ಷಿಣದ ಜಿಲ್ಲೆಗಳಾದ ಕೊಲ್ಲಂ ಮತ್ತು ತಿರುವನಂತಪುರಗಳಲ್ಲಿ ಒಣಹವೆ ಮುಂದುವರಿದಿದೆ.

ಈ ಮಧ್ಯೆ, `ಮುಂಗಾರು ಆಗಮನ ನಾಲ್ಕು ದಿನ ವಿಳಂಬವಾಗಿರುವ ಬಗ್ಗೆ ತಲೆ ಕೆಡಿಸಿಕೊಳ್ಳಬೇಕಿಲ್ಲ. ಬತ್ತ, ದ್ವಿದಳ ಧಾನ್ಯಗಳ ಬೀಜ ಬಿತ್ತನೆ ಮೇಲೆ ಯಾವ ದುಷ್ಪರಿಣಾಮವನ್ನೂ ಉಂಟು ಮಾಡುವುದಿಲ್ಲ. ಮುಂಗಾರು ಮಾರುತಗಳು ಪ್ರಬಲವಾಗಿದ್ದು, ರಾಷ್ಟ್ರದ ಇತರೆ ಭಾಗಗಳಿಗೆ ಬೇಗನೆ ತಲುಪಲು  ಪೂರಕ ವಾತಾವರಣವಿದೆ.

ಇನ್ನು ಕೆಲವೇ ದಿನಗಳಲ್ಲಿ  ಕರ್ನಾಟಕದಲ್ಲಿ ಕೂಡ ಬಿರುಸಿನ ಮಳೆ ಬೀಳಲಿದೆ. ಮುಂಗಾರು ಮಾರುತಗಳ ಚಲನೆಗೆ ಪೂರಕವಾದ ಪ್ರಶಸ್ತವಾದ ವಾತಾವರಣ ಇದೆ. ಜತೆಗೆ ಅರಬ್ಬಿ ಸಮುದ್ರದ ದಕ್ಷಿಣ ಭಾಗದೆಡೆಗೆ ಕೂಡ ಮಾರುತಗಳು ಚಲಿಸಲು ಅನುಕೂಲಕರ ವಾತಾವರಣವಿದೆ~ ಎಂದು ಭಾರತೀಯ ಹವಾಮಾನ ಇಲಾಖೆಯ ಮಹಾ ನಿರ್ದೇಶಕ ಎಲ್.ಎಸ್. ರಾಥೋಡ್ ಮತ್ತು ರಾಷ್ಟ್ರೀಯ ಹವಾಮಾನ ಕೇಂದ್ರದ ನಿರ್ದೇಶಕರಾದ ಡಿ.ಶಿವಾನಂದ ಪೈ ಹೇಳಿದ್ದಾರೆ.

ಫಿಲಿಪ್ಪೀನ್ಸ್‌ನ ಪೆಸಿಫಿಕ್ ಸಾಗರದಲ್ಲಿ `ಮಾವರ್~ ಚಂಡಮಾರುತ ಕ್ರಿಯಾಶೀಲವಾಗಿದ್ದುದೇ ನೈಋತ್ಯ ಮುಂಗಾರಿನ ಅಲ್ಪ ವಿಳಂಬಕ್ಕೆ ಕಾರಣ. ಅಲ್ಲಿನ ಚಂಡಮಾರುತವು ಈ ಭಾಗದಿಂದ ತೇವಾಂಶ ಹಾಗೂ ಗಾಳಿ ಮಾರುತಗಳನ್ನು ತನ್ನತ್ತ ಸೆಳೆಯುತ್ತಿತ್ತು. ಆದ್ದರಿಂದ ಇಲ್ಲಿನ ಮುಂಗಾರು ಮಾರುತಗಳು ದುರ್ಬಲಗೊಂಡಿದ್ದವು ಎಂಬುದು ತಜ್ಞರ ವಿವರಣೆ.

ಪ್ರಸಕ್ತ ಸಾಲಿನಲ್ಲಿ ಜೂನ್- ಸೆಪ್ಟೆಂಬರ್ ಅವಧಿಗೆ ನೈಋತ್ಯ ಮುಂಗಾರು ವಾಡಿಕೆ ಮಳೆ ಬೀಳುವ ಅಂದಾಜಿದೆ ಎಂದು ಹವಾಮಾನ ಇಲಾಖೆ ಕೆಲವು ದಿನಗಳ ಹಿಂದೆಯೇ ಮುನ್ಸೂಚನೆ ನೀಡಿತ್ತು. ಸಾಮಾನ್ಯವಾಗಿ ರಾಷ್ಟ್ರ ರಾಜಧಾನಿ ದೆಹಲಿಯನ್ನು ಮುಂಗಾರು ಜೂನ್ ಕೊನೆಯ ವೇಳೆಗೆ ತಲುಪುತ್ತದೆ. ಆದರೆ ಈ ಬಗ್ಗೆ ಈಗಲೇ ನಿಖರವಾಗಿ ಹೇಳಲು ಸಾಧ್ಯವಿಲ್ಲ ಎಂದೂ ಅದು ಸ್ಪಷ್ಟಪಡಿಸಿದೆ.

ಕೃಷಿ ತಜ್ಞ ದೇವಿಂದರ್ ಶರ್ಮ ಅವರು, `ಮುಂಗಾರು ಆಗಮನದ ಅಲ್ಪ ವಿಳಂಬದಿಂದ ತೊಂದರೆ ಏನೂ ಆಗದು. ಆದರೆ,  ಜೂನ್- ಜುಲೈನಲ್ಲಿ ಎಷ್ಟು ಪ್ರದೇಶದಲ್ಲಿ ಮುಂಗಾರು ಸುರಿಯಲಿದೆ ಎಂಬುದು ಮುಖ್ಯ. ಹಿಂದಿನ ಕೆಲವು ವರ್ಷಗಳಲ್ಲಿ ಮುಂಗಾರು ಸಮಯಕ್ಕೆ ಸರಿಯಾಗಿಯೇ ಕಾಲಿಟ್ಟರೂ ರಾಜಸ್ತಾನ, ಗುಜರಾತ್ ಮತ್ತು ಬಿಹಾರಗಳಲ್ಲಿ ಅಗತ್ಯವಿರುವಷ್ಟು ಮಳೆಯೇ ಬಾರದೆ ಬೆಳೆಗಳು ವಿಫಲವಾಗಿದ್ದವು~ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT