ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಲು ಜಾರಿ ಬೀಳುವುದು, ಏಳುವುದು ಇಲ್ಲಿ ಮಾಮೂಲು

Last Updated 13 ಫೆಬ್ರುವರಿ 2012, 4:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: `ಈ ಘಟನೆ ನಡೆದದ್ದು ಫೆಬ್ರುವರಿ 8ರಂದು. 40-45ರ ಹರೆಯದ ಆ ವ್ಯಕ್ತಿ ಚೀಲದಲ್ಲಿ ಒಂದಷ್ಟು ತರಕಾರಿ ಹಿಡಿದುಕೊಂಡು ಹೋಗುತ್ತಿದ್ದರು. ಒಂದು ಕ್ಷಣ ಪಕ್ಕದ ಅಂಗಡಿ ಕಡೆಗೆ ನೋಡಿದ್ದೇ ತಡ, ಆಯತಪ್ಪಿ ಬಿದ್ದೇ ಬಿಟ್ಟರು. ಕಲ್ಲಿನ ಮೇಲೆ ಬಿದ್ದ ಅವರ ಕಿವಿಯಿಂದ ನೆತ್ತರು ಸರಸರನೇ ಹರಿಯಿತು. ಆಸ್ಪತ್ರೆ ಸೇರಿದ ಅವರು ಅನುಭವಿಸಿದ ನೋವು ಅಷ್ಟಿಷ್ಟಲ್ಲ...~

ನಗರದ ದೊಡ್ಡ ವ್ಯಾಪಾರಿ ಕೇಂದ್ರ, ರಾಷ್ಟ್ರಪಿತನ ಹೆಸರನ್ನು ಇರಿಸಿಕೊಂಡು ಬೀಗುತ್ತಿರುವ ಗಾಂಧಿ ಮಾರ್ಕೆಟ್‌ನಲ್ಲಿ ನಡೆದ ಈ ಘಟನೆಯನ್ನು ವಿವರಿಸುವಾಗ ಧಾನ್ಯ ವ್ಯಾಪಾರಿ ರವಿಶಂಕರ ಕುದರಿ ಅವರಲ್ಲಿ ಯಾವುದೇ ಭಾವೋದ್ವೇಗವಿರಲಿಲ್ಲ. ಯಾಕೆಂದರೆ ಗಾಂಧಿ ಮಾರ್ಕೆಟ್‌ನಲ್ಲಿ ಕಾಲುಜಾರಿ ಬೀಳುವುದು, ಎಡವಿ ಅಡಿ ಮೇಲಾಗುವುದು ಇತ್ಯಾದಿ ಹೊಸತೇನಲ್ಲ. ಇಲ್ಲಿನ ಒಳರಸ್ತೆಗಳಿಗೆ ಹಾಸಿರುವ ಚಪ್ಪಡಿ ಕಲ್ಲುಗಳು ಇದಕ್ಕೆ ಕಾರಣ. ಮಾರ್ಕೆಟ್‌ನ ಬಹುತೇಕ ಎಲ್ಲ ಒಳರಸ್ತೆಗಳಲ್ಲೂ ಕಂಡು ಬರುವ ಚಪ್ಪಡಿ ಕಲ್ಲುಗಳಿಂದಾಗಿ ಸಂಚಾರ ದುರ್ಗಮ, ಗ್ರಾಹಕರು-ವ್ಯಾಪಾರಿಗಳಿಗೆ ನಿತ್ಯ ಸಂಕಷ್ಟ.

ವಿಶಾಲವಾದ ಅಂಗಳದಲ್ಲಿ ಹರಡಿಕೊಂಡಿರುವ ಗಾಂಧಿ ಮಾರ್ಕೆಟ್‌ಗೆ ಹೈಟೆಕ್ ಸ್ಪರ್ಶ ನೀಡಲು ಪಾಲಿಕೆ `ಸರ್ಕಸ್~ ನಡೆಸುತ್ತಿರುವಾಗಲೇ ಒನ್ನೊಂದೆಡೆ ಸಮಸ್ಯೆಗಳ ಸರಮಾಲೆ ಬೆಳೆಯುತ್ತಲೇ ಇದೆ.

ಮಾರ್ಕೆಟ್‌ನ ಒಳರಸ್ತೆಗಳಿಗೆ 15 ವರ್ಷಗಳ ಹಿಂದೆ ಚಪ್ಪಡಿ ಕಲ್ಲುಗಳನ್ನು ಅಳವಡಿಸಲಾಗಿತ್ತು. ಮೊದಮೊದಲು ಇದರಿಂದ ಓಡಾಟಕ್ಕೆ ಅನುಕೂಲವಾಗಿದ್ದರೂ ಹೆಗ್ಗಣಗಳು ನೆಲ ಕೊರೆಯಲು ಆರಂಭಿಸಿದ ನಂತರ ಮಾರ್ಗ ಏರುಪೇರಾಯಿತು. ಈಗ ಮಾರ್ಕೆಟ್‌ನ ಯಾವುದೇ ಭಾಗವನ್ನು ನೋಡಿದರೂ ಅಸ್ತವ್ಯಸ್ತವಾದ ಕಲ್ಲುಗಳು ಕಾಣಸಿಗುತ್ತವೆ. ಕೆಲವು ಕಡೆಗಳಲ್ಲಿ ಡಾಂಬರು ಹಾಕಲಾಗಿದೆಯಾದರೂ ಅದು ಕಿತ್ತು ಹೋಗಿ ಹೊಂಡಗಳು ಬಿದ್ದಿವೆ. ಇಂಥ ಕಡೆಗಳಲ್ಲಿ ಎಡವಿ ಬೀಳುವುದು ನಿತ್ಯದ ನೋಟ. ದ್ವಿಚಕ್ರ ವಾಹನ ಸವಾರರು ಸರ್ಕಸ್ ಮಾಡುವ ನೋಟ ಕೂಡ ಸಾಮಾನ್ಯ.

`ಆತ ಬಿದ್ದು ಕಿವಿಯಿಂದ ರಕ್ತ ಸುರಿಯುತ್ತಿದ್ದಾಗ ನೋಡಲಾಗಲಿಲ್ಲ. ನನ್ನಂಥವರು ಇಲ್ಲೇನಾದರೂ ಬಿದ್ದರೆ ಮತ್ತೆ ಆಸ್ಪತ್ರೆಗೆ ಹೋಗುವ ಅಗತ್ಯವೇ ಬರಲಾರದು~ ಎಂದು 50ರ ಹರೆಯದ ತಿಪ್ಪವ್ವ ನವಲೂರು ಹೇಳಿದರು.

`ಇಲ್ಲಿ ಎಡವಿ ಬೀಳುವುದು ಸಾಮಾನ್ಯವಾಗಿದೆ. ನಾನು ಎರಡು-ಮೂರು ಬಾರಿ ಬಿದ್ದಿದ್ದೇನೆ. ಭಾರದ ಚೀಲ ಹೊತ್ತುಕೊಂಡು ಹೋಗುವಾಗ ಬಿದ್ದರೆ ಕಂಡಿತ ಸೊಂಟ ಮುರಿಯಲಿದೆ~ ಎಂದು ಹಮಾಲಿ ಫಕ್ರು ಸಾಬ್ ಹೇಳಿದರು.

`ಒಳರಸ್ತೆಗಳಿಗೆ ಕಾಂಕ್ರೀಟ್ ಹಾಸಿನ ವ್ಯವಸ್ಥೆ ಮಾಡಬೇಕು ಎಂದು ಅನೇಕ ಬಾರಿ ಸಂಬಂಧಪಟ್ಟವರನ್ನು ಕೋರಿದ್ದೇವೆ. ಆದರೆ ಅವರು ನಮ್ಮ ಮನವಿಗೆ ಕಿವಿಗೊಡಲಿಲ್ಲ. ನಾವು ಹೊರಗಿನವರು. ರಾಜಕೀಯದ ದೃಷ್ಟಿಯಿಂದ ನಮ್ಮಿಂದ ಯಾವುದೇ ಲಾಭವಿಲ್ಲ. ಹೀಗಾಗಿ ರಾಜಕಾರಣಿಗಳು ಕಡೆಗಣಿಸುತ್ತಾರೆ. ಆದರೆ ಅಧಿಕಾರಿಗಳಿಗೆ ನಮ್ಮ ಮೇಲೆ ಯಾಕೆ ಕೋಪ ಎಂದು ಗೊತ್ತಿಲ್ಲ~ ಎಂದು ವ್ಯಾಪಾರಿ ಮುಶ್ತಾಕ್ ಹೇಳಿದರು.

`ರಸ್ತೆ ಸರಿ ಇಲ್ಲದ ಕಾರಣ ಅತಿಕ್ರಮಣಕಾರರ ಸಮಸ್ಯೆಯೂ ಹೆಚ್ಚಾಗಿದೆ. ನಗರ ಮಧ್ಯದ ರಸ್ತೆ, ನೃಪತುಂಗ ಬೆಟ್ಟ, ಉಣಕಲ್ಲ ಕೆರೆಯನ್ನಷ್ಟೇ ಅಭಿವೃದ್ಧಿ ಮಾಡುವ ಪಾಲಿಕೆ ಹಾಗೂ ಜಿಲ್ಲಾಡಳಿತ ನಮ್ಮ ಕಡೆ ಯಾಕೆ ಲಕ್ಷ್ಯ ವಹಿಸುತ್ತಿಲ್ಲ~ ಎಂದು ವಿ.ಜಿ. ಹುರಕಡ್ಲಿ ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT