ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಲುವೆ ಕಾಮಗಾರಿ: ಬಾರದ ಸಚಿವರು

Last Updated 5 ಮೇ 2012, 6:25 IST
ಅಕ್ಷರ ಗಾತ್ರ

ಕೆಂಭಾವಿ: ಚಾಮರಾಜನಗರ ಎಂದರೆ ರಾಜ್ಯದ ಮುಖ್ಯಮಂತ್ರಿಗಳು, ಸಚಿವರು ಒಂದು ಹೆಜ್ಜೆ ಹಿಂದಕ್ಕೆ ಇಡುತ್ತಾರೆ. ಪ್ರತಿ ಬಾರಿಯೂ ಮುಖ್ಯಮಂತ್ರಿಗಳಾಗಿ ಅಧಿಕಾರ ವಹಿಸಿಕೊಂಡವರು ನಾನಾ ಕಾರಣಗಳನ್ನು ಮುಂದಿಟ್ಟು, ಚಾಮರಾಜನಗರಕ್ಕೆ ಹೋಗುವುದನ್ನು ತಪ್ಪಿಸಿಕೊಳ್ಳುತ್ತಲೇ ಇದ್ದಾರೆ. ಚಾಮರಾಜನಗರಕ್ಕೆ ಹೋದರೆ ಅಧಿಕಾರ ಕಳೆದುಕೊಳ್ಳುವ ಭೀತಿ ಮುಖ್ಯಮಂತ್ರಿಗಳದ್ದಾರೆ, ನೀರಾವರಿ ಸಚಿವ ಬಸವರಾಜ ಬೊಮ್ಮಾಯಿ ಅವರಿಗೂ ಯಾದಗಿರಿಯ ಬಗ್ಗೆ ಇಂತಹದ್ದೇ ಹೆದರಿಕೆ ಇದೆಯೇ ಎಂಬ ಪ್ರಶ್ನೆ ಬಹುತೇಕ ಜನರನ್ನು ಕಾಡುತ್ತಿದೆ.

ಜಿಲ್ಲೆಯಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಯ ನಾರಾಯಣಪುರ ಎಡದಂಡೆ ಕಾಲುವೆ ಇದೆ. ನಾರಾಯಣಪುರ ಜಲಾಶಯವಿದೆ. ಮಹತ್ವದ ನೀರಾವರಿ ಇಲಾಖೆಯನ್ನು ಹೊಂದಿರುವ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಯಾದಗಿರಿ ಜಿಲ್ಲೆಯ ನೀರಾವರಿ ವಿಷಯ ಸಂಬಂಧಿವಿದೆಯೋ, ಇಲ್ಲವೋ ಎಂಬ ಪ್ರಶ್ನೆಯನ್ನು ಇಲ್ಲಿಯ ಜನರು ಕೇಳುತ್ತಿದ್ದಾರೆ.

ನೀರಾವರಿ ಸೌಲಭ್ಯ ಒದಗಿಸುವ ನಾರಾಯಣಪುರ ಜಲಾಶಯದ ಮುಖ್ಯಕಾಲುವೆ, ಶಾಖಾ ಕಾಲುವೆ, ವಿತರಣಾ ಕಾಲುವೆಗಳ ಜಾಲವು, ಇಡೀ ಜಿಲ್ಲೆಯನ್ನು ಆವರಿಸಿದೆ. ಶಹಾಪುರ, ಸುರಪುರ ತಾಲ್ಲೂಕುಗಳ ಬಹುತೇಕ ಪ್ರದೇಶಗಳು ನಾರಾಯಣಪುರ ಜಲಾಶಯದಿಂದ ನೀರಾವರಿ ಸೌಲಭ್ಯ ಪಡೆದಿದೆ. ಆದರೂ ನೀರಾವರಿ ಸಚಿವರಿಗೆ ಮಾತ್ರ ಜಿಲ್ಲೆಯ ನೆನಪು ಬರುತ್ತಲೇ ಇಲ್ಲ ಎಂದು ಜನರು ಹೇಳುತ್ತಿದ್ದಾರೆ.

ಜಿಲ್ಲಾ ಕೇಂದ್ರ ಅಧೀಕೃತ ಉದ್ಘಾಟನಾ ಸಮಾರಂಭದಲ್ಲಿ ಜಿಲ್ಲೆಯ ಉಸ್ತುವಾರಿ ಸಚಿವರ ಹೊಣೆ ಬಸವರಾಜ ಬೊಮ್ಮಾಯಿ ಅವರ ಮೇಲಿತ್ತು. ಆ ಸಂದರ್ಭದಲ್ಲಿ ಯಾದಗಿರಿಗೆ ಬಂದು, ಆಗಿನ ಮುಖ್ಯಮಂತ್ರಿ ಯಡಿಯೂರಪ್ಪನವರ ಜೊತೆಗೆ ಜಿಲ್ಲೆಯನ್ನು ಉದ್ಘಾಟನೆ ಮಾಡಿ ಹೋದವರೂ ಇಂದಿಗೂ ಜಿಲ್ಲೆಯತ್ತ ಮುಖ ಮಾಡಿಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆ ಗ್ರಾಮ ಘಟಕದ ಅಧ್ಯಕ್ಷ ಭೀಮನಗೌಡ ಕಾಚಾಪುರ ಹೇಳುತ್ತಾರೆ.

ಪಕ್ಕದ ಗುಲ್ಬರ್ಗ ಜಿಲ್ಲೆಯ ಉಸ್ತುವಾರಿ ಸಚಿವರಾಗಿರುವ ಬಸವರಾಜ ಬೊಮ್ಮಾಯಿ, ಹಲವಾರು ಬಾರಿ ಗುಲ್ಬರ್ಗಕ್ಕೆ ಭೇಟಿ ನೀಡುತ್ತಾರೆ. ಆದರೆ ಪಕ್ಕದಲ್ಲಿಯೇ ಇರುವ ಯಾದಗಿರಿ ಜಿಲ್ಲೆಗೆ ಬರುತ್ತಲೇ ಇಲ್ಲ. ಹಲವಾರು ಬಾರಿ ಮನವಿ ಮಾಡಿದರೂ ಸ್ಪಂದನೆ ಸಿಕ್ಕಿಲ್ಲ.

ಕಾಮಗಾರಿ ವೀಕ್ಷಣೆಗೂ ಬರುತ್ತಿಲ್ಲ: ಈ ಭಾಗದ ಜೀವನಾಡಿಯಾಗಿರುವ ನಾರಾಯಣಪುರ ಎಡದಂಡೆ ಮುಖ್ಯ ಕಾಲುವೆಯ ನವೀಕರಣ ಕಾಮಗಾರಿಯನ್ನು ಸುಮಾರು ರೂ.200 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಮಹತ್ವದ ಈ ಕಾಮಗಾರಿಯ ವೀಕ್ಷಣೆಗೆ ಜಿಲ್ಲಾ ಉಸ್ತುವಾರಿ ಸಚಿವ ನರಸಿಂಹ ನಾಯಕ (ರಾಜೂಗೌಡ), ರಾಜ್ಯ ರೈತ ಸಂಘದ ಅಧ್ಯಕ್ಷ ಚಾಮರಸ ಮಾಲಿಪಾಟೀಲ ಬಂದು ಹೋಗಿದ್ದಾರೆ. ನೀರಾವರಿ ಸಚಿವ ಬಸವರಾಜ ಬೊಮ್ಮಾಯಿ ಮಾತ್ರ ಈವರೆಗೂ ಕಾಲುವೆಯ ಕಾಮಗಾರಿಯ ವೀಕ್ಷಣೆಗೂ ಬಂದಿಲ್ಲ ಎಂದು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ, ಕಾಂಗ್ರೆಸ್ ಮುಖಂಡ ರೇವಣಸಿದ್ಧಪ್ಪ ಯಾಳಗಿ ಹೇಳುತ್ತಾರೆ.

ಬಸವರಾಜ ಬೊಮ್ಮಾಯಿ ಅವರಿಗೆ ಜಿಲ್ಲೆಯ ಬಗ್ಗೆ ಆಸಕ್ತಿಯೇ ಇಲ್ಲ. ಇಂತಹ ಸಚಿವರಿಂದ ಎಷ್ಟರ ಮಟ್ಟಿಗೆ ಜಿಲ್ಲೆಯ ನೀರಾವರಿ ಅಭಿವೃದ್ಧಿ ಆಗಲು ಸಾಧ್ಯ. ಕಾಲುವೆಯ ಮೇಲ್ಭಾಗದ ರೈತರು ಮಾತ್ರ ನೀರು ಪಡೆಯುವಂತಾಗಿದೆ.

ಕೆಳಭಾಗದ ರೈತರಿಗೆ ನೀರು ಮುಟ್ಟುತ್ತಲೇ ಇಲ್ಲ. ಕೊನೆಯ ಭಾಗದ ವಿತರಣಾ ಕಾಲುವೆಗಳು ಶಿಥಿಲಗೊಂಡು ವರ್ಷಗಳೇ ಕಳೆದಿವೆ. ಆದರೂ ಈ ಬಗ್ಗೆ ಚಿಂತಿಸುವ ಗೋಜಿಗೂ ಸಚಿವ ಬೊಮ್ಮಾಯಿ ಹೋಗಿಲ್ಲ. ಹೀಗಾದರೆ ಜಿಲ್ಲೆಯ ರೈತರ ಸ್ಥಿತಿ ಏನು ಎಂಬ ಪ್ರಶ್ನೆ ಗ್ರಾಮ ಪಂಚಾಯಿತಿ ಸದಸ್ಯ ರಂಗಪ್ಪ ವಡ್ಡರ ಕೇಳುತ್ತಾರೆ.

ಕಾಮಗಾರಿ ಮುಗಿದ ನಂತರ ಸುಸಜ್ಜಿತವಾದ ಕಾಲುವೆಯನ್ನು ಉದ್ಘಾಟಿಸುವುದಕ್ಕಾದರೂ ಜಿಲ್ಲೆಗೆ ಬರಲಿದ್ದಾರೆಯೇ ಎಂಬ ಕುತೂಹಲ ಈ ಭಾಗದ ಜನರದ್ದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT