ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಲೇಜಿನಲ್ಲಿ ಆಂಗ್ಲ ಹೆಜ್ಜೆ

Last Updated 10 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಲ್ಲಿ ಇಂಗ್ಲಿಷ್ ಭಾಷಾ ಸಾಮರ್ಥ್ಯ, ಸಂವಹನ ಕೌಶಲ ಹೆಚ್ಚಿಸುವ ಉದ್ದೇಶದಿಂದ `ಹೊಸ ಹೆಜ್ಜೆ' ಕಾರ್ಯಕ್ರಮದಡಿ ರೂಪಿಸಿರುವ `ಆಂಗ್ಲ' ಯೋಜನೆ ಈ ವರ್ಷ 271 ಕಾಲೇಜುಗಳಲ್ಲಿ ಅನುಷ್ಠಾನಗೊಳ್ಳಲಿದೆ.

ಸರ್ಕಾರಿ ಕಾಲೇಜುಗಳಲ್ಲಿ ಗ್ರಾಮೀಣ ಭಾಗದ ಹಾಗೂ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಅವರಲ್ಲಿ ಬಹುತೇಕರು ಇಂಗ್ಲಿಷ್ ಭಾಷಾ ಸಂವಹನದಲ್ಲಿ ಹಿಂದಿದ್ದಾರೆ. ಪದವಿ ಪಡೆದರೂ ಸಂವಹನ ಕೌಶಲ ಕೊರತೆಯಿಂದಾಗಿ ಬಹಳಷ್ಟು ಮಂದಿ ಉದ್ಯೋಗಾವಕಾಶಗಳಿಂದ ವಂಚಿತರಾಗುತ್ತಿದ್ದಾರೆ. ಇದನ್ನು ಮನಗಂಡು ಸರ್ಕಾರ `ಆಂಗ್ಲ' ಯೋಜನೆ ರೂಪಿಸಿದೆ.

`271 ಕಾಲೇಜುಗಳ ಪ್ರಥಮ ಪದವಿಯ 20,000 ವಿದ್ಯಾರ್ಥಿಗಳು ಈ ವರ್ಷ ಹೊಸ ಯೋಜನೆಯಡಿ `ಮಾತನಾಡುವ ಇಂಗ್ಲಿಷ್' (ಸ್ಪೋಕನ್ ಇಂಗ್ಲಿಷ್) ತರಬೇತಿ ಪಡೆಯಲಿದ್ದಾರೆ. ಈ ಸಂಬಂಧ ಜನವರಿ 15ರಂದು ಆದೇಶ ಹೊರಡಿಸಲಾಗಿದೆ. ಈ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಪ್ರಯತ್ನ ನಡೆದಿದೆ' ಎನ್ನುತ್ತಾರೆ ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಡಾ. ಎನ್.ಎಸ್.ಚನ್ನಪ್ಪ ಗೌಡ.

`ಸರ್ಕಾರ ಈಗಾಗಲೇ ಎಂಟು ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಅವು ಎರಡು ಹಂತಗಳಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಿವೆ. 30 ಜಿಲ್ಲೆಗಳ ವ್ಯಾಪ್ತಿಯಲ್ಲಿ ಬರುವ ಗ್ರಾಮೀಣ ಭಾಗದ ಕಾಲೇಜುಗಳನ್ನೇ ಈ ವರ್ಷ ಆಯ್ಕೆ ಮಾಡಿಕೊಳ್ಳಲಾಗಿದೆ. ಕಳೆದ ವರ್ಷ 60 ಕಾಲೇಜುಗಳಲ್ಲಿ ಈ ಯೋಜನೆ ಜಾರಿಗೆ ಬಂದಿತ್ತು. ಮುಂದಿನ ವರ್ಷ ಎಲ್ಲ ಸರ್ಕಾರಿ ಪದವಿ ಕಾಲೇಜುಗಳಿಗೂ ವಿಸ್ತರಿಸಲಾಗುವುದು' ಎನ್ನುತ್ತಾರೆ ಯೋಜನೆಯ ವಿಶೇಷಾಧಿಕಾರಿ ಡಾ. ಮೋನಿಕಾ ಘೋಷ್.

`ಪ್ರತಿ ವಿದ್ಯಾರ್ಥಿಗೆ ತರಬೇತಿ ನೀಡಲು ತಲಾ ್ಙ 1,500 ಪ್ರಕಾರ ಒಟ್ಟು ್ಙ 3 ಕೋಟಿ ವೆಚ್ಚ ಮಾಡಲಾಗುತ್ತದೆ. ಒಂದು ಕಾಲೇಜಿನಿಂದ 40 ವಿದ್ಯಾರ್ಥಿಗಳಿಗೆ ಮಾತ್ರ ತರಬೇತಿ ನೀಡಲು ಅವಕಾಶವಿದೆ. ಇನ್ನೂ ಹೆಚ್ಚಿನ ವಿದ್ಯಾರ್ಥಿಗಳಿಗೆ ಅವಕಾಶ ಮಾಡಿಕೊಡಬೇಕು ಎಂಬ ಬೇಡಿಕೆ ಪ್ರಾಂಶುಪಾಲರ ಕಡೆಯಿಂದ ಬರುತ್ತಿದೆ. ಹೀಗಾಗಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ' ಎಂದು ಅವರು ವಿವರಿಸಿದರು.

ರಾಜ್ಯದ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಬಿ.ಎ, ಬಿ.ಎಸ್ಸಿ, ಬಿ.ಕಾಂ ಸೇರಿದಂತೆ ವಿವಿಧ ಪದವಿ ಕೋರ್ಸ್‌ಗಳಲ್ಲಿ ಸುಮಾರು 1.07 ಲಕ್ಷ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಈ ಪೈಕಿ ಪ್ರಥಮ ಪದವಿ ವಿದ್ಯಾರ್ಥಿಗಳ ಸಂಖ್ಯೆ 50 ಸಾವಿರ ಇರಬಹುದು. ಮುಂದಿನ ವರ್ಷದಿಂದ ಆ ಎಲ್ಲ ವಿದ್ಯಾರ್ಥಿಗಳಿಗೂ ತರಬೇತಿ ನೀಡುವ ಉದ್ದೇಶವನ್ನು ಇಲಾಖೆ ಹೊಂದಿದೆ.

ತರಬೇತಿ ಅವಧಿ
ಪ್ರಥಮ ಪದವಿ ವಿದ್ಯಾರ್ಥಿಗಳು ಎರಡು ಹಂತಗಳಲ್ಲಿ ತಲಾ 50 ಗಂಟೆ ಅವಧಿಯ ತರಬೇತಿ ಪಡೆಯಲಿದ್ದಾರೆ. ತರಬೇತಿಯು ಎರಡನೇ ಸೆಮಿಸ್ಟರ್‌ನಲ್ಲಿ ಪ್ರಾರಂಭವಾಗಲಿದೆ. ಎ `1' ಹಂತದ ತರಬೇತಿ ಮೂರನೇ ಸೆಮಿಸ್ಟರ್ ಪ್ರಾರಂಭವಾಗುವ ಮುಂಚೆ ಹಾಗೂ ಎ `2' ಹಂತದ ತರಬೇತಿ ನಾಲ್ಕನೇ ಸೆಮಿಸ್ಟರ್ ಪ್ರಾರಂಭವಾಗುವ ಮೊದಲೇ ಪೂರ್ಣಗೊಳ್ಳಲಿದೆ.

ಎ `1' ಹಂತದ ತರಬೇತಿ ಪೂರ್ಣಗೊಂಡ ನಂತರ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡಲಾಗುತ್ತದೆ. ಈ ವಿದ್ಯಾರ್ಥಿಗಳು ಎ `2' ಹಂತದ ತರಬೇತಿಗೆ ಅರ್ಹರಾಗಿರುತ್ತಾರೆ. ಎ `2' ತರಬೇತಿ ಪೂರ್ಣಗೊಂಡ ನಂತರ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣ ಪತ್ರ ನೀಡಲಾಗುತ್ತದೆ. ತರಬೇತಿ ಪ್ರಕ್ರಿಯೆ ಪೂರ್ಣಗೊಂಡ ನಂತರವೇ ಸಂಬಂಧಪಟ್ಟ ಸಂಸ್ಥೆಗಳಿಗೆ ಹಣ ಪಾವತಿ ಮಾಡಲಾಗುತ್ತದೆ.

ಆದ್ಯತೆ
ಒಂದು ತಂಡದಲ್ಲಿ 40 ವಿದ್ಯಾರ್ಥಿಗಳಿಗೆ ಅವಕಾಶವಿದ್ದು, ಒಬ್ಬ ತರಬೇತಿದಾರರನ್ನು ನೇಮಕ ಮಾಡಲಾಗುತ್ತದೆ. ಇಂಗ್ಲಿಷ್ ವಿಷಯದ ಉಪನ್ಯಾಸಕರೊಂದಿಗೆ ಸಮಾಲೋಚನೆ ನಡೆಸಿ, ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ಹಾಗೂ ಇಂಗ್ಲಿಷ್ ವಿಷಯದಲ್ಲಿ ಕಡಿಮೆ ಅಂಕ ಪಡೆದ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಆದ್ಯತೆ ನೀಡಲಾಗುತ್ತದೆ.

ಒಂದು ತಂಡದಲ್ಲಿ ಶೇ 75ಕ್ಕಿಂತ ಕಡಿಮೆ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರೆ ಆ ತಂಡದ ತರಬೇತಿ ವೆಚ್ಚ ನೀಡುವುದಿಲ್ಲ. ಆದರೆ, ತರಬೇತಿ ನೀಡಿದ ಸಂಸ್ಥೆಯವರೇ ಎ `1' ಹಂತದಲ್ಲಿ ಅನುತ್ತೀರ್ಣರಾಗಿರುವ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿಯನ್ನು ಅವರ ವೆಚ್ಚದಲ್ಲೇ ನೀಡಬಹುದು. ಪೂರಕ ಪರೀಕ್ಷೆಯಲ್ಲಿ ಶೇ 75ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾದರೆ ಮಾತ್ರ ತರಬೇತಿ ವೆಚ್ಚ ಪಾವತಿಸಲಾಗುತ್ತದೆ.

ಸಮನ್ವಯ ಅಧಿಕಾರಿ ನಿತ್ಯ ಹಾಜರಾತಿ ಪುಸ್ತಕ ಪರಿಶೀಲಿಸಿ ಸಹಿ ಹಾಕಲಿದ್ದಾರೆ. ಅಲ್ಲದೆ, ಕಾಲೇಜಿನ ಪ್ರಾಂಶುಪಾಲರು ಮೇಲ್ವಿಚಾರಣೆ ಮಾಡಲಿದ್ದಾರೆ. ತರಬೇತಿ ಅವಧಿ ಮುಗಿದ ನಂತರ ಪ್ರಾಂಶುಪಾಲರು ದೃಢೀಕರಿಸಿದ ಪ್ರತಿಯನ್ನು ಜಂಟಿ ನಿರ್ದೇಶಕರಿಗೆ ಕಳುಹಿಸಿಕೊಡಲಿದ್ದು, ಅದರ ಆಧಾರದ ಮೇಲೆ ಸಂಸ್ಥೆಗಳಿಗೆ ಹಣ ಬಿಡುಗಡೆ ಮಾಡುವ ಉದ್ದೇಶ ಹೊಂದಲಾಗಿದೆ.

ವಿಸ್ತರಣೆ
ಮುಂದಿನ ಶೈಕ್ಷಣಿಕ ವರ್ಷದಿಂದ ಹೊಸಹೆಜ್ಜೆ ಕಾರ್ಯಕ್ರಮವನ್ನು ಪಾಲಿಟೆಕ್ನಿಕ್‌ಗಳಿಗೂ ವಿಸ್ತರಿಸಲು ಸರ್ಕಾರ ತೀರ್ಮಾನಿಸಿದೆ. ಇದರಿಂದ ಗ್ರಾಮೀಣ ಭಾಗದ ಸಾವಿರಾರು ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಮೂರು ವರ್ಷದ ಡಿಪ್ಲೊಮಾ ಪಡೆದ ನಂತರವೂ ಯುವಕ - ಯುವತಿಯರು ಇಂಗ್ಲಿಷ್ ಭಾಷೆಯ ಸಂವಹನದ ಕೊರತೆಯಿಂದಾಗಿ ಉದ್ಯೋಗಾವಕಾಶದಿಂದ ವಂಚಿತರಾಗುತ್ತಿದ್ದಾರೆ. ಅಂತಹವರಿಗೆ ಆಂಗ್ಲ ಕಾರ್ಯಕ್ರಮ ಸಹಕಾರಿಯಾಗಲಿದೆ ಎಂದು ನಿರೀಕ್ಷಿಸಲಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT