ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಲೇಜಿನಲ್ಲಿ ಕ್ರೀಡೆಗೆ ವಿಘ್ನ

Last Updated 20 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಕ್ರೀಡಾ ಚಟುವಟಿಕೆ ದೇಶದಾದ್ಯಂತ ಈಗ ಹೊಸ ಆಯಾಮ ಕಂಡುಕೊಳ್ಳುತ್ತಿದೆ. ಕರ್ನಾಟಕ ಕೂಡಾ ಇದಕ್ಕೆ ಹೊರತಲ್ಲ. ನಮ್ಮ ರಾಜ್ಯದಲ್ಲಿಯೂ ಈಚಿನ ವರ್ಷಗಳಲ್ಲಿ ಎತ್ತರದ ಸಾಮರ್ಥ್ಯ ತೋರಿದ ಕ್ರೀಡಾಪಟುಗಳ ಹೆಸರುಗಳು ಹಲವು ಕ್ರೀಡೆಗಳಲ್ಲಿ ಎದ್ದು ಕಾಣುತ್ತಿವೆ, ನಿಜ. ಆದರೂ ರಾಜ್ಯದಲ್ಲಿ ಕ್ರೀಡಾ ಪ್ರಗತಿ ನಿರೀಕ್ಷಿತ ಮಟ್ಟದಲ್ಲಿ  ನಡೆದಿಲ್ಲ ಎನ್ನುವುದೂ ಸತ್ಯ.

ಯಾವುದೇ ಪ್ರದೇಶದಲ್ಲಿ ಕ್ರೀಡಾ ಅಭಿವೃದ್ಧಿ ದೊಡ್ಡ ಮಟ್ಟದಲ್ಲಿ ನಡೆಯಬೇಕೆಂದರೆ ಅದಕ್ಕೆ ಪೂರಕವಾದಂತಹ  ಮೂಲ ಸೌಕರ್ಯಗಳು ಮತ್ತು ಕ್ರೀಡಾಪಟುಗಳಿಗೆ ಉತ್ತೇಜನ ನೀಡುವಂತಹ ವಾತಾವರಣ ಇರಬೇಕು.

ಉತ್ತಮ ಕ್ರೀಡಾ ಸಾಮರ್ಥ್ಯ, ಕಿರಿಯ ವಯಸ್ಸಿನಲ್ಲಿ ಕಂಡು ಬರುವುದು ಸಾಮಾನ್ಯ. ಆ ವಯಸ್ಸಿನಲ್ಲಿ  ಕ್ರೀಡಾಪಟುಗಳ ಪ್ರತಿಭೆಗೆ ಸಾಣೆ ಹಿಡಿಯುವಂತಹ ಕೆಲಸ ಎಷ್ಟರಮಟ್ಟಿಗೆ ಪರಿಣಾಮಕಾರಿಯಾಗಿ ಆಗುತ್ತದೆಯೋ ಅಷ್ಟರ ಮಟ್ಟಿಗೆ ಪ್ರತಿಭೆಗಳು ಅನಾವರಣಗೊಳ್ಳಲು ಸಾಧ್ಯ. ಶಾಲಾ, ಕಾಲೇಜುಗಳ ಮಟ್ಟದಲ್ಲಿ ಕ್ರೀಡೆಗೆ ಉತ್ತೇಜನಕರವಾದ ವಾತಾವರಣ ರೂಪಿಸ ಬೇಕಿದೆ. ಅಂತಹ ವಾತಾವರಣ ರೂಪುಗೊಳ್ಳಲು ಸರ್ಕಾರ ಮಾಡಬೇಕಾದ ಕೆಲಸ ಬಹಳ ಇದೆ.

ಇವತ್ತು  ವೃತ್ತಿಪರತೆ ವ್ಯಾಪಕವಾಗಿದೆ. ಕಾಲೇಜು ವಿದ್ಯಾರ್ಥಿ ತಾನು ಇಂತಹದ್ದನ್ನು ಓದುವುದರಿಂದ ಅಥವಾ ಇಂತಹ ಪದವಿ ಪಡೆಯುವುದರಿಂದ ತನಗೆ ಒದಗುವ ಪ್ರಯೋಜನ ಏನು ಎಂಬುದರ ಬಗ್ಗೆ ಲೆಕ್ಕಾಚಾರ ಹಾಕುತ್ತಾನೆ. ಇಂತಹ ಪರಿಸ್ಥಿತಿ ಇರುವಾಗ ಕಾಲೇಜು ವಿದ್ಯಾರ್ಥಿಯೊಬ್ಬ ಕ್ರೀಡೆಯಲ್ಲಿ ಎತ್ತರದ ಸಾಮರ್ಥ್ಯ ತೋರಲು ದಿನಕ್ಕೆ ಕನಿಷ್ಠ 3ರಿಂದ 4 ಗಂಟೆ ಕಾಲವಾದರೂ ಮೈದಾನದಲ್ಲಿ ತಾಲೀಮು ನಡೆಸಲೇಬೇಕಾಗುತ್ತದೆ.

ಅದಕ್ಕೆ ತಮ್ಮ ಶೈಕ್ಷಣಿಕ ‘ಸಮಯ’ವನ್ನು ತ್ಯಾಗ ಮಾಡಬೇಕಾಗುತ್ತದೆ. ಈ ಶ್ರಮ ಮತ್ತು ತ್ಯಾಗಕ್ಕೆ ಕ್ರೀಡಾಪಟು ಅಂತಿಮವಾಗಿ  ಗಳಿಸುವುದೇನು? ಈ ಪ್ರಶ್ನೆ ಕ್ರೀಡಾಸಕ್ತರನ್ನು ಕಾಡುತ್ತದೆ. ಸಾಧನೆ ತೋರಿದವರಿಗೂ ‘ಉದ್ಯೋಗದ ಭರವಸೆ’ ಇದೆಯಾ ಎಂಬ ಪ್ರಶ್ನೆ ಎದುರಾಗುತ್ತದೆ. ಅಮೆರಿಕದಂತಹ ದೇಶಗಳಲ್ಲಿ ಉದ್ಯೋಗ ಸಿಗುವವರೆಗೆ ಸರ್ಕಾರ ಭತ್ಯೆ ನೀಡುತ್ತದೆ. ಅದರಿಂದ  ಜೀವನ ನಿರ್ವಹಣೆ ಸಾಧ್ಯವಿದೆ. ಆದರೆ ಭಾರತದಲ್ಲಿ ಆ ರೀತಿ ಇಲ್ಲ. ಅನೇಕ ಯಶಸ್ವಿ  ಕ್ರೀಡಾಪಟುಗಳು ತಮ್ಮ ಕ್ರೀಡಾದಿನಗಳು ಮುಗಿದ ಮೇಲೆ ಪಡಿಪಾಟಲು ಪಡುವುದನ್ನು ನೋಡಿದ್ದೇವೆ.  ಉದ್ಯೋಗದ ಭರವಸೆ ಇಲ್ಲದ ಕಾರಣ ಕಾಲೇಜು ದಿನಗಳಲ್ಲಿ ಕ್ರೀಡಾಪಟುಗಳು ಹೆಚ್ಚಿನ  ಸಂಖ್ಯೆಯಲ್ಲಿ ಕ್ರೀಡಾ ಕ್ಷೇತ್ರದತ್ತ ಒಲವು ತೋರುತ್ತಿಲ್ಲ.

ಸರ್ಕಾರ ಈ ನಿಟ್ಟಿನಲ್ಲಿ ವಿನೂತನ ಕಾರ್ಯಕ್ರಮ ರೂಪಿಸಬಹುದಾಗಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ  ಸಾಧನೆ ಮಾಡಿದವರಿಗಷ್ಟೇ ಸರ್ಕಾರದಲ್ಲಿ ಅಥವಾ ಬಹುರಾಷ್ಟ್ರೀಯ ಕಂಪೆನಿಗಳಲ್ಲಿ ಉದ್ಯೋಗ ಸಿಗುತ್ತದೆ. ಉಳಿದ ಸಾಧಕರಿಗೆ ಅವಕಾಶ ಸಿಗುತ್ತಿಲ್ಲ. ನೇಮಕಾತಿ ಸಂದರ್ಭಗಳಲ್ಲಿ ಎಲ್ಲ  ಕ್ಷೇತ್ರಗಳಲ್ಲೂ  ಶೈಕ್ಷಣಿಕ ಅರ್ಹತೆ ಜತೆಗೆ ಕ್ರೀಡಾ ಸಾಧನೆಗೂ ಹೆಚ್ಚಿನ ಮಾನ್ಯತೆ ಸಿಗಬೇಕು. ಈ ನಿಟ್ಟಿನಲ್ಲಿ ಸರ್ಕಾರದ ಕಡೆಯಿಂದ ಮನವೊಲಿಕೆ ಪ್ರಯತ್ನ ಆಗಬೇಕು.

ಪ್ರತಿಭಾನ್ವೇಷಣೆಯ ಎಡವಟ್ಟು: ಕಾಲೇಜು ಮಟ್ಟದಲ್ಲಿ ಪ್ರತಿಭೆ ಮತ್ತು ಮೂಲ ಸೌಕರ್ಯಗಳ ನಡುವಣ ವೈರುಧ್ಯ ವಿಚಿತ್ರವೆನಿಸುವಂತಿದೆ. ನಾನು ಕಂಡುಕೊಂಡಂತೆ ಬಹುಪಾಲು ಕಾಲೇಜುಗಳಲ್ಲಿ ಇರುವ ಮೂಲ ಸೌಲಭ್ಯಕ್ಕೆ ಪೂರಕವಾಗಿ ಕ್ರೀಡಾ ಪಟುಗಳು ತಮ್ಮ ಪ್ರತಿಭೆಯನ್ನು ಹೊಂದಿಸಿಕೊಳ್ಳಬೇಕಾಗಿದೆ!

ಒಂದು ಕಾಲೇಜಿನಲ್ಲಿ ಬ್ಯಾಸ್ಕೆಟ್‌ಬಾಲ್ ಅಂಗಣವನ್ನು ಅಚ್ಚುಕಟ್ಟಾಗಿ ರೂಪಿಸಿರುತ್ತಾರೆ. ಆದರೆ ವಿದ್ಯಾರ್ಥಿಯೊಬ್ಬ ಅತ್ಯುತ್ತಮವಾಗಿ ಟೇಬಲ್ ಟೆನಿಸ್ ಆಡುವವನಾಗಿರುತ್ತಾನೆ. ಅವನಿಗೆ ಅದರಲ್ಲಿಯೇ ಆಸಕ್ತಿ. ಆದರೆ  ಅದಕ್ಕೆ ಅಗತ್ಯವಾದ ಟೇಬಲ್‌ನ ವ್ಯವಸ್ಥೆ ಇರುವುದಿಲ್ಲ. ಕಾಲೇಜಿನಲ್ಲಿ ಬರೀ  ಎರಡು ವರ್ಷ ಆ ಕ್ರೀಡೆಯಲ್ಲಿ ನಿರಂತರ  ಅಭ್ಯಾಸ ನಡೆಸಿದರೆ ಆತ ರಾಷ್ಟ್ರೀಯ ಎತ್ತರಕ್ಕೆ ಏರುವ ಎಲ್ಲಾ ಸಾಧ್ಯತೆಗಳು ಇರುತ್ತವೆ.

  ಆದರೆ ಹಾಗಾಗುವುದೇ ಇಲ್ಲ. ಅವನ ಎತ್ತರ ಕೂಡಾ ಕಡಿಮೆಯೇ. ಆದರೂ ಆ ಕಾಲೇಜಿನಲ್ಲಿ ಲಭ್ಯವಿದ್ದ ಬ್ಯಾಸ್ಕೆಟ್‌ಬಾಲ್ ಅಂಗಣದಲ್ಲಿಯೇ ಆತ ಆಡತೊಡಗುತ್ತಾನೆ. ಅದರಲ್ಲಿ ಅವನ ಆಸಕ್ತಿಯೂ ಅಷ್ಟಕಷ್ಟೇ. ಅವನು ಈ ಕ್ರೀಡೆಯಲ್ಲಿ ಹೆಚ್ಚೇನನ್ನೂ ಸಾಧಿಸುವುದಿಲ್ಲ.  ಬೆಂಗಳೂರು, ಮೈಸೂರಿನಂತಹ ನಗರಗಳಲ್ಲಿ ಸಾರ್ವಜನಿಕರ ಉಪಯೋಗಕ್ಕೆಂದೇ ಇರುವ ಹತ್ತಾರು ಕ್ರೀಡೆಗಳ ಸೌಕರ್ಯಗಳನ್ನು  ಇಂತಹ ವಿದ್ಯಾರ್ಥಿಗಳು  ಬಳಸಿಕೊಳ್ಳಲು ಪ್ರಯತ್ನಿಸಬಹುದು.  ಆದರೆ ಜಿಲ್ಲಾ ಮಟ್ಟದಲ್ಲಿ ಇಂತಹದಕ್ಕೆಲ್ಲಾ ಅವಕಾಶವೇ ಇರುವುದಿಲ್ಲ.

ಇಂತಹ ಎಡವಟ್ಟುಗಳಿಂದ  ನಮ್ಮಲ್ಲಿ ಸರಿಯಾದ ರೀತಿಯಲ್ಲಿ ಪ್ರತಿಭಾನ್ವೇಷಣೆ ನಡೆಯು ವುದೇ ಇಲ್ಲ. ನಡೆದರೂ ಅಂತಹವರಿಗೆ ಅಗತ್ಯ ವಾದ ಮೂಲ ಸೌಕರ್ಯಗಳು ಸಿಗುವುದೇ ಇಲ್ಲ.

ರಾಜ್ಯದ ಬಹಳಷ್ಟು ಕಡೆ ಶಾಲೆ, ಕಾಲೇಜುಗಳಲ್ಲಿ ಕಬಡ್ಡಿ, ಕೊಕ್ಕೊ ಅಂಗಣಗಳೇ ಎದ್ದು ಕಾಣುತ್ತವೆ. ವಿದ್ಯಾರ್ಥಿಗಳಿಗೆ ಇಷ್ಟವಿರಲೀ ಇಲ್ಲದಿರಲೀ ಅವರು ಆ ಕ್ರೀಡೆಗಳನ್ನೇ ಆಡಬೇಕಾಗು ತ್ತದೆ. ಈ ಕ್ರೀಡೆಗಳ ಮೂಲ ಸೌಕರ್ಯದ ಅಭಿವೃದ್ಧಿಗೆ ದೊಡ್ಡ ಖರ್ಚೇನೂ ಇಲ್ಲ ಎಂಬುದು ಈ ಅಂಗಣಗಳು ಸೃಷ್ಟಿಯಾಗಲು ಕಾರಣ.

ವರ್ಷಕ್ಕೆ ವಿದ್ಯಾರ್ಥಿಯೊಬ್ಬನಿಂದ 60 ರೂಪಾಯಿ ಕ್ರೀಡಾ ಶುಲ್ಕ  ಸಂಗ್ರಹಿಸುವ ಸರ್ಕಾರಿ ಕಾಲೇಜುಗಳಲ್ಲಿ ದೊಡ್ಡಮಟ್ಟದ ಕ್ರೀಡಾ ನಿಧಿ ಇರುವುದಿಲ್ಲ. ಅದರಲ್ಲಿಯೇ ಕ್ರೀಡಾಪಟುಗಳ ಪ್ರಯಾಣ ಭತ್ಯೆ, ಊಟದ ವೆಚ್ಚ, ಸಮ ವಸ್ತ್ರಗಳೆಲ್ಲದರ ಖರ್ಚನ್ನು ಭರಿಸಬೇಕಾಗುತ್ತದೆ.   ಅಂತರ ಕಾಲೇಜು ಕೂಟಗಳಲ್ಲಿ ಪಾಲ್ಗೊಳ್ಳುವುದೇ ಅಂತಹ ಕಾಲೇಜು ತಂಡಗಳಿಗೆ ತತ್ವಾರ ವಾಗಿರುತ್ತದೆ.

ಈಚಿನ ದಿನಗಳಲ್ಲಿ ‘ನ್ಯಾಕ್’  ಪಾಯಿಂಟ್ಸ್ ವೃದ್ಧಿಸಿಕೊಳ್ಳಲು ಎಲ್ಲಾ ಕಾಲೇಜುಗಳೂ ಪೈಪೋಟಿಗೆ ಇಳಿಯುತ್ತಿವೆ. ಹೀಗಾಗಿ ಹತ್ತು ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಲೇ ಇರುತ್ತವೆ. ಅದರಲ್ಲಿಯೂ ಕ್ರೀಡಾಪಟುಗಳೇ ಪಾಲ್ಗೊಳ್ಳುವಂತೆ ಒತ್ತಡವಿರುತ್ತದೆ. ಇದು ನಾನೇ ಕಂಡುಕೊಂಡಂತಹ ವಾಸ್ತವ. ಅಂತಹ ಕ್ರೀಡಾ­ಪಟುಗಳಿಂದ ಹೆಚ್ಚಿನದೇನನ್ನು ನಾವು ನಿರೀಕ್ಷಿಸಲು ಸಾಧ್ಯ?

ಕಾಲೇಜುಗಳ ಪಠ್ಯಕ್ರಮವೂ ಹಿಂದಿನಂತಿಲ್ಲ. ಆರು ತಿಂಗಳಿಗೆ ಎರಡು ಆಂತರಿಕ ಪರೀಕ್ಷೆ ಮತ್ತು ಒಂದು ಪ್ರಧಾನ ಪರೀಕ್ಷೆ ನಡೆಯುವ ಸೆಮಿಸ್ಟರ್ ವ್ಯವಸ್ಥೆ ಇವತ್ತು ಇದೆ. ವಿದ್ಯಾರ್ಥಿಗಳು ಯಾವಾಗಲೂ ಓದುವುದರಲ್ಲಿಯೇ ಮಗ್ನರಾಗಿರ­ಬೇಕಾಗುತ್ತದೆ. ಅವರಿಗೆ ಕ್ರೀಡೆಯತ್ತ ಗಮನ ನೀಡಲು ಸಮಯವಾದರೂ ಎಲ್ಲಿದೆ?

ಪ್ರಮುಖ ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳಲು ಕ್ರೀಡಾಪಟುಗಳಿಗೆ ‘ಮ್ಯಾಚ್ ಎಕ್ಸ್‌ಪೀರಿಯನ್ಸ್’ ಬೇಕೇ ಬೇಕು. ಅವರು ಪ್ರತೀನಿತ್ಯ  ಅಭ್ಯಾಸ ಪಂದ್ಯಗಳಲ್ಲಿ ಆಡುತ್ತಲೇ ಇರಬೇಕಾಗುತ್ತದೆ. ಆದರೆ ಅಂತಹ ಪಂದ್ಯಗಳಿಗೆ ತೆರಳಿದರೆ ತರಗತಿಯಲ್ಲಿ ಹಾಜರಿ ನೀಡುವ ವ್ಯವಸ್ಥೆಯಂತೂ ಬಹಳಷ್ಟು ಕಾಲೇಜುಗಳಲ್ಲಿ ಇಲ್ಲವೇ ಇಲ್ಲ.

ಸ್ನಾತಕೋತ್ತರ ಕೇಂದ್ರಗಳಲ್ಲಿ ಹೆಚ್ಚಿನ ವ್ಯಾಸಂಗಕ್ಕಾಗಿ ಅರ್ಜಿ ಸಲ್ಲಿಸುವಾಗಲೂ ಕ್ರೀಡಾ ಪಟುಗಳಿಗೆ ಅನ್ಯಾಯವಾಗುತ್ತಿದೆ. ಅಲ್ಲಿ ಎನ್‌ಸಿಸಿ, ಎನ್‌ಎಸ್ಎಸ್‌ ಮತ್ತು ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡಿದವರಿಗೆ ಒಂದು ಸೀಟು ಮೀಸಲು ಇರುತ್ತದೆ. ಅದು ಕ್ರೀಡಾಪಟುಗಳಿಗೆ ಸಿಕ್ಕುವುದೇ ಕಡಿಮೆ. ಆ ಸೀಟನ್ನಾದರೂ ಕ್ರೀಡಾಪಟುಗಳಿಗೆ ಮೀಸಲಿರಿಸಬೇಕಲ್ಲವೇ?ಇಂತಹ  ಸಮಸ್ಯೆಗಳನ್ನು ನಿವಾರಿಸುವ ಕಡೆ ಶಿಕ್ಷಣ ಇಲಾಖೆ, ಕ್ರೀಡಾ ಇಲಾಖೆ ಯೋಚಿಸಬೇಕಾದ ಅಗತ್ಯ ಬಹಳಷ್ಟಿದೆ.

(ಲೇಖಕರು: ಮಂಗಳೂರು ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ಸಹಾಯಕ ನಿರ್ದೇಶಕ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT