ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಲೇಜಿನಲ್ಲಿ ಹೇರ್ ಕಟಿಂಗ್ ಕೋರ್ಸ್!

Last Updated 16 ಜುಲೈ 2013, 19:39 IST
ಅಕ್ಷರ ಗಾತ್ರ

ಬೆಂಗಳೂರು:  ಇನ್ನು ಮುಂದೆ ನೀವು ಬೇರೆ ಬೇರೆ ವಿನ್ಯಾಸಗಳ ಹೇರ್‌ಕಟಿಂಗ್ ಕೌಶಲ್ಯವನ್ನು ಕಾಲೇಜಿನಲ್ಲಿ ಕಲಿಯಬಹುದು! ಹೀಗೆ ಕಲಿಯುವುದಕ್ಕೆ ನಿಮಗೆ ತಿಂಗಳಿಗೆ ಒಂದು ಸಾವಿರ ರೂಪಾಯಿ ಶಿಷ್ಯ ವೇತನ ಕೂಡಾ ಸಿಗಲಿದೆ!

ಇದೇನು, ಹೇರ್‌ಕಟಿಂಗ್‌ಗೂ ಕಾಲೇಜಾ ಎಂದು ಆಶ್ಚರ್ಯಪಡಬೇಕಿಲ್ಲ. ಹೌದು, ಸದ್ಯದಲ್ಲೇ ರಾಜ್ಯದ ಕೆಲವು ಕಾಲೇಜುಗಳಲ್ಲಿ ಹೇರ್‌ಕಟಿಂಗ್‌ಗೂ ಪ್ರತ್ಯೇಕ ಕೋರ್ಸ್ ಶುರುವಾಗಲಿದೆ. ಇದು ಕೇಂದ್ರ ಸರ್ಕಾರದ ಯೋಜನೆ.

ಸಾಂಪ್ರದಾಯಿಕ ಶಿಕ್ಷಣ ವ್ಯವಸ್ಥೆಗೆ ವಿದಾಯ ಹೇಳಿ ಪರ್ಯಾಯ ಶಿಕ್ಷಣ ವ್ಯವಸ್ಥೆ ಜಾರಿಗೊಳಿಸಲು ಕೇಂದ್ರದ ಮಾನವ ಸಂಪನ್ಮೂಲ ಇಲಾಖೆ (ಎಂಎಚ್‌ಆರ್‌ಡಿ) ಮುಂದಾಗಿದ್ದು, ರೇಷ್ಮೆ, ಸರ್ವೇ, ವೆಲ್ಡಿಂಗ್, ವೈರಿಂಗ್, ಬ್ಯೂಟೀಷಿಯನ್, ಹೇರ್‌ಕಟಿಂಗ್, ವುಡ್‌ಸೈನ್ಸ್, ಕಾರ್ಪೆಂಟರ್, ಒಳಾಂಗಣ ವಿನ್ಯಾಸ, ಆಟಿಕೆಗಳು, ಗ್ರೀಟಿಂಗ್ಸ್, ಚಿನ್ನಾಭರಣ ತಯಾರಿಕೆ, ಇವೆಂಟ್ ಮ್ಯಾನೇಜ್‌ಮೆಂಟ್ ಸೇರಿದಂತೆ ನೂರಾರು ಕೋರ್ಸ್‌ಗಳ ಬೋಧನೆಗೆ ಸಮುದಾಯ ಕಾಲೇಜುಗಳು ಆರಂಭವಾಗಲಿವೆ.

12ನೇ ಪಂಚವಾರ್ಷಿಕ ಯೋಜನೆಯ ಅವಧಿಯಲ್ಲಿ ದೇಶದಾದ್ಯಂತ 200 ಸಮುದಾಯ ಕಾಲೇಜುಗಳನ್ನು ಆರಂಭಿಸಲು ಎಂಎಚ್‌ಆರ್‌ಡಿ ನಿರ್ಧರಿಸಿದ್ದು, ಈ ವರ್ಷದಿಂದಲೇ ಅದಕ್ಕೆ ಚಾಲನೆ ದೊರೆಯಲಿದೆ. ಪ್ರಸಕ್ತ ವರ್ಷ ರಾಜ್ಯದಲ್ಲಿ 9 ಸಮುದಾಯ ಕಾಲೇಜುಗಳು ಆರಂಭವಾಗಲಿವೆ ಎಂದು ಉನ್ನತ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು `ಪ್ರಜಾವಾಣಿ'ಗೆ ತಿಳಿಸಿದರು.

ಪ್ರಸ್ತುತ ಅಸ್ತಿತ್ವದಲ್ಲಿರುವ ಪದವಿ ಕಾಲೇಜುಗಳಿಗಿಂತ ಸಮುದಾಯ ಕಾಲೇಜುಗಳು ಭಿನ್ನವಾಗಿ ಕಾರ್ಯನಿರ್ವಹಿಸಲಿವೆ. ಮಾರುಕಟ್ಟೆಯಲ್ಲಿನ ಅಗತ್ಯಕ್ಕೆ ತಕ್ಕಂತೆ ಉದ್ಯೋಗ ಆಧಾರಿತ ಅಲ್ಪಾವಧಿ ಹಾಗೂ ದೀರ್ಘಾವಧಿ ಕೋರ್ಸ್‌ಗಳನ್ನು ಆರಂಭಿಸಲಾಗುತ್ತದೆ. ಆರು ತಿಂಗಳ ಸರ್ಟಿಫಿಕೇಟ್ ಕೋರ್ಸ್‌ನಿಂದ ಹಿಡಿದು ಸ್ನಾತಕೋತ್ತರ ಪದವಿವರೆಗೂ ವ್ಯಾಸಂಗ ಮಾಡಲು ಅವಕಾಶ ಇರುತ್ತದೆ.

ಮಾರುಕಟ್ಟೆಯಲ್ಲಿನ ಸ್ಥಳೀಯ ಅಗತ್ಯಗಳಿಗೆ ಅನುಗುಣವಾಗಿ ಬೇರೆ ಬೇರೆ ಸಮುದಾಯ ಕಾಲೇಜುಗಳಲ್ಲಿ ಬೇರೆ ಬೇರೆ ಕೋರ್ಸ್‌ಗಳನ್ನು ಆರಂಭಿಸಲಾಗುತ್ತದೆ. ಸ್ಥಳೀಯ ಕೈಗಾರಿಕೆಗಳಲ್ಲಿ ಕೆಲಸ ಮಾಡಲು ಯಾವ ರೀತಿಯ ಕೌಶಲವುಳ್ಳ ಉದ್ಯೋಗಿಗಳು ಬೇಕು ಎಂಬುದನ್ನು ಕೈಗಾರಿಕೆಗಳ ಮುಖ್ಯಸ್ಥರೊಂದಿಗೆ ಚರ್ಚಿಸಿ ಅದಕ್ಕೆ ಅನುಗುಣವಾಗಿ ಕೋರ್ಸ್ ಹಾಗೂ ಪಠ್ಯಕ್ರಮ ಸಿದ್ಧಪಡಿಸಲಾಗುತ್ತದೆ ಎಂದು ವಿವರಿಸಿದರು.

ಸಾಂಪ್ರದಾಯಿಕ ಶಿಕ್ಷಣ ಪದ್ಧತಿಯಲ್ಲಿ ಪದವಿ ಪಡೆದವರಿಗೆ ಸಮರ್ಪಕವಾಗಿ ಉದ್ಯೋಗಾವಕಾಶಗಳು ಲಭ್ಯವಾಗದೆ ಹಿನ್ನೆಲೆಯಲ್ಲಿ ಪರ್ಯಾಯ ಶಿಕ್ಷಣಕ್ಕೆ ಮುಂದಾಗಿದ್ದು, ಭವಿಷ್ಯದಲ್ಲಿ ಎಲ್ಲ ಪದವಿ ಕಾಲೇಜುಗಳನ್ನು ಸಮುದಾಯ ಕಾಲೇಜುಗಳಾಗಿ ಪರಿವರ್ತಿಸುವ ಉದ್ದೇಶವನ್ನು `ಎಂಎಚ್‌ಆರ್‌ಡಿ' ಹೊಂದಿದೆ. ಸಮುದಾಯ ಕಾಲೇಜುಗಳಿಗೆ ಶೇ 100ರಷ್ಟು ಅನುದಾನವನ್ನು `ಎಂಎಚ್‌ಆರ್‌ಡಿ' ನೀಡಲಿದೆ.

ಇದಲ್ಲದೆ ಪ್ರತಿ ವಿದ್ಯಾರ್ಥಿಗಳಿಗೆ ತಿಂಗಳಿಗೆ ಒಂದು ಸಾವಿರ ರೂಪಾಯಿ ಶಿಷ್ಯವೇತನ ನೀಡುವ ಬಗ್ಗೆ ಚಿಂತನೆ ನಡೆದಿದೆ. ಕನಿಷ್ಠ ಪಿಯುಸಿ ವಿದ್ಯಾರ್ಹತೆವುಳ್ಳವರು ಸಮುದಾಯ ಕಾಲೇಜುಗಳಿಗೆ ಪ್ರವೇಶ ಪಡೆಯಬಹುದು.

ಆರು ತಿಂಗಳ ಕೋರ್ಸ್ ಮಾಡಿದರೆ ಸರ್ಟಿಫಿಕೇಟ್, ಒಂದು ತಿಂಗಳ ಕೋರ್ಸ್ ಆದರೆ ಡಿಪ್ಲೊಮಾ, ಒಂದೂವರೆ ವರ್ಷದ ಕೋರ್ಸ್ ಆದರೆ ಪೋಸ್ಟ್ ಡಿಪ್ಲೊಮಾ, ಎರಡು ವರ್ಷದ ಕೋರ್ಸ್ ಆದರೆ ಅಡ್ವಾನ್ಸಡ್ ಡಿಪ್ಲೊಮಾ ಹಾಗೂ ಮೂರು ವರ್ಷದ ಕೋರ್ಸ್ ಆದರೆ ಪದವಿ ಎಂದು ಪರಿಗಣಿಸಲಾಗುತ್ತದೆ. ಪದವಿ ನಂತರ ಉನ್ನತ ಶಿಕ್ಷಣ ಪಡೆಯಲು ಬಯಸುವುದಾದರೆ ಸ್ನಾತಕೋತ್ತರ ಪದವಿ ಪಡೆಯಲು ಅವಕಾಶ ಇದೆ.

ಸಮುದಾಯ ಕಾಲೇಜುಗಳಲ್ಲಿ ಸಾಂಪ್ರದಾಯಿಕ ಮಾದರಿಯ ಶಿಕ್ಷಣ ಕಲಿಸುವುದಿಲ್ಲ. ಸರ್ಟಿಫಿಕೇಟ್, ಡಿಪ್ಲೊಮಾ ಪಡೆದ ನಂತರ ಕೆಲಸಕ್ಕೆ ಹೋಗಬಹುದು. ಉದ್ಯೋಗಕ್ಕೆ ಸೇರಿದ ಕೆಲ ವರ್ಷಗಳ ನಂತರ ಉನ್ನತ ಶಿಕ್ಷಣ ಪಡೆಯಲು ಬಯಸಿದರೆ, ಅದಕ್ಕೂ ಅವಕಾಶ ಇರುತ್ತದೆ. ಯಾವಾಗ ಬೇಕಾದರೂ ಕೆಲಸಕ್ಕೆ ಹೋಗುವ, ಮತ್ತೆ ಕಾಲೇಜಿಗೆ ಬರುವ ಮುಕ್ತ ಅವಕಾಶ ಕಲ್ಪಿಸಲಾಗಿದೆ.

ಪಠ್ಯಕ್ರಮ: ಸ್ಥಳೀಯ ಉದ್ಯಮಿಗಳೊಂದಿಗೆ ಚರ್ಚಿಸಿ, ಅವರ ಅಗತ್ಯಗಳಿಗೆ ಅನುಗುಣವಾಗಿ ಪಠ್ಯಕ್ರಮ ಸಿದ್ಧಪಡಿಸಲಾಗುತ್ತದೆ. ನಿರ್ದಿಷ್ಟ ಕ್ಷೇತ್ರದಲ್ಲಿ ಕೌಶಲವುಳ್ಳವರ ಅಗತ್ಯವಿದೆ ಎಂದು ಉದ್ಯಮಿಗಳು ಹೇಳಿದರೆ, ಅಂತಹ ಕೋರ್ಸ್‌ಗಳನ್ನೇ ಆರಂಭಿಸಲಾಗುತ್ತದೆ.

ಹೊಸದಾಗಿ ಮೂಲಸೌಕರ್ಯಗಳ ವ್ಯವಸ್ಥೆ ಮಾಡುವುದು ಕಷ್ಟ ಎಂಬ ಕಾರಣಕ್ಕೆ ಸದ್ಯ ಈಗಿರುವ ಪದವಿ ಕಾಲೇಜುಗಳಲ್ಲೇ ಸಮುದಾಯ ಕಾಲೇಜುಗಳು ಆರಂಭವಾಗಲಿವೆ. ಒಂದು ಕೋರ್ಸ್‌ಗೆ 30ರಿಂದ 40 ವಿದ್ಯಾರ್ಥಿಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಈಗಿರುವ ಬೋಧನಾ ಸಿಬ್ಬಂದಿಯ ಜೊತೆಗೆ ಕೈಗಾರಿಕಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಪರಿಣತರು ಹಾಗೂ ಹೊರಗಿನ ವಿಷಯ ತಜ್ಞರನ್ನು ಬೋಧನಾ ಕಾರ್ಯಕ್ಕೆ ಬಳಸಿಕೊಳ್ಳಲಾಗುತ್ತದೆ.

ಕಾಲೇಜಿನ ಸಿಬ್ಬಂದಿಯಾದರೆ ಒಂದು ಗಂಟೆ ಬೋಧನೆಗೆ ರೂ. 500 ಹಾಗೂ ಕೈಗಾರಿಕಾ ಸಿಬ್ಬಂದಿಯಾದರೆ ಒಂದು ಸಾವಿರ ರೂಪಾಯಿ ನೀಡಲಾಗುತ್ತದೆ. ಕೋರ್ಸ್ ಅವಧಿಯಲ್ಲಿ ಇನ್‌ಟರ್ನ್‌ಶಿಪ್ ಕಡ್ಡಾಯ. ಹೀಗಾಗಿ ವಿದ್ಯಾರ್ಥಿಗಳಲ್ಲಿನ ಕೌಶಲವನ್ನು ಗಮನಿಸಿ ಇನ್‌ಟರ್ನ್‌ಶಿಪ್ ಮಾಡುವಾಗಲೇ ಕೈಗಾರಿಕಾ ಸಂಸ್ಥೆಗಳು ಸೇವೆಗೆ ತೆಗೆದುಕೊಳ್ಳುವ ಅವಕಾಶಗಳು ಹೆಚ್ಚಾಗಿರುತ್ತವೆ.

12 ಪ್ರಸ್ತಾವ ಸಲ್ಲಿಸಲು ಸಿದ್ಧತೆ
ಈ ವರ್ಷ 9 ಪದವಿ ಕಾಲೇಜುಗಳು ಹಾಗೂ ಎರಡು ಪಾಲಿಟೆಕ್ನಿಕ್‌ಗಳಲ್ಲಿ, ಸಮುದಾಯ ಕಾಲೇಜು ಹಾಗೂ ಪಾಲಿಟೆಕ್ನಿಕ್ ಶುರುವಾಗಲಿದೆ. ಇದಲ್ಲದೆ ಖಾಸಗಿ ಕೈಗಾರಿಕಾ ಸಂಸ್ಥೆಯೊಂದು ಸಮುದಾಯ ಕಾಲೇಜು ಆರಂಭಿಸಲು ಮುಂದೆ ಬಂದಿದೆ. ಆ ಸಂಸ್ಥೆಯೊಂದಿಗೆ ಸರ್ಕಾರ ಒಪ್ಪಂದ ಮಾಡಿಕೊಳ್ಳಬೇಕಾಗುತ್ತದೆ.

ಇದಲ್ಲದೆ ಇನ್ನೂ 12 ಸರ್ಕಾರಿ ಪದವಿ ಕಾಲೇಜುಗಳಲ್ಲಿ, ಸಮುದಾಯ ಕಾಲೇಜುಗಳನ್ನು ತೆರೆಯಲು ಅನುಮತಿ ನೀಡುವಂತೆ ಕೋರಿ ಕೇಂದ್ರ ಮಾನವ ಸಂಪನ್ಮೂಲ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲು ಸಿದ್ಧತೆ ನಡೆದಿದೆ. ಈ ಸಂಬಂಧ ಕೆಲವು ದಿನಗಳ ಹಿಂದೆ ಕಾಲೇಜುಗಳ ಪ್ರಾಂಶುಪಾಲರ ಸಭೆ ಕರೆದು ಚರ್ಚಿಸಲಾಗಿದೆ ಎಂದು ಉನ್ನತ ಶಿಕ್ಷಣ ಇಲಾಖೆಯ ಮೂಲಗಳು ತಿಳಿಸಿವೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT