ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಲೇಜು ತೆರೆಯಲು ಸರ್ಕಾರಕ್ಕೆ ಏನು ಕಷ್ಟ?

ಸಿಇಟಿ ಗೋಜಲು
Last Updated 3 ಜನವರಿ 2014, 19:30 IST
ಅಕ್ಷರ ಗಾತ್ರ

ವೈದ್ಯಕೀಯ, ದಂತವೈದ್ಯಕೀಯ, ಎಂಜಿನಿಯರಿಂಗ್ ಮತ್ತಿತರ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ರಾಜ್ಯದಲ್ಲಿ 20 ವರ್ಷಗಳ ಹಿಂದೆ ಜಾರಿಗೆ ಬಂದ ಸಾಮಾನ್ಯ ಪ್ರವೇಶ ಪರೀಕ್ಷಾ (ಸಿಇಟಿ) ವ್ಯವಸ್ಥೆ ಇಂದು ಕವಲು ಹಾದಿಯಲ್ಲಿದೆ.

1993ರಲ್ಲಿ ಮೊದಲ ಬಾರಿಗೆ ಸಿಇಟಿ  ಮೂಲಕ ವೃತ್ತಿಶಿಕ್ಷಣ ಕೋರ್ಸ್‌ಗಳ ಸೀಟು ಹಂಚಿಕೆ ಮಾಡುವ ಪದ್ಧತಿ ಶುರುವಾಯಿತು. ಆರಂಭದ ವರ್ಷಗಳಲ್ಲಿ ಕರ್ನಾಟಕ ಇಡೀ ದೇಶಕ್ಕೆ ಮಾದರಿಯಾಗಿತ್ತು.

ಆದರೆ, ಟಿ.ಎಂ.ಎ. ಪೈ ಪ್ರತಿಷ್ಠಾನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ 2002ರ ಅಕ್ಟೋಬರ್‌ನಲ್ಲಿ ನೀಡಿದ ತೀರ್ಪಿನ ನಂತರ ಸಿಇಟಿ ವ್ಯವಸ್ಥೆಯ ಬೇರುಗಳು ಸಡಿಲಗೊಂಡಿದ್ದು, ಅದರ ಮೂಲ ಆಶಯಕ್ಕೆ ಧಕ್ಕೆ ಬಂದಿದೆ. ಬುಡಕ್ಕೇ ಕೊಡಲಿ ಏಟು ಬೀಳುವ ಆತಂಕ ಎದುರಾಗಿದೆ.

ಐತಿಹಾಸಿಕ ತೀರ್ಪು: 1993ರಲ್ಲಿ ಸುಪ್ರೀಂ ಕೋರ್ಟ್, ಉನ್ನಿಕೃಷ್ಣನ್ ಪ್ರಕರಣದಲ್ಲಿ ನೀಡಿದ ಐತಿಹಾಸಿಕ ತೀರ್ಪು ಲಕ್ಷಾಂತರ ಮಂದಿ ವಿದ್ಯಾರ್ಥಿಗಳು, ಪೋಷಕರಿಗೆ ವರದಾನವಾಗಿ ಪರಿಣಮಿಸಿತು. ಖಾಸಗಿ ಶಿಕ್ಷಣ ಸಂಸ್ಥೆಗಳು ಕೂಡ ಶೇ 85ರಷ್ಟು ಸೀಟುಗಳನ್ನು ಸರ್ಕಾರಕ್ಕೆ ಬಿಟ್ಟುಕೊಡಬೇಕು, ಶೇ 15ರಷ್ಟು ಸೀಟು ಮಾತ್ರ ಆಡಳಿತ ಮಂಡಳಿ ಕೋಟಾದಡಿ ಭರ್ತಿ ಮಾಡಿಕೊಳ್ಳ­ಬಹುದು ಎಂದು ನ್ಯಾಯಾಲಯ ಹೇಳಿತು.

ವೃತ್ತಿಶಿಕ್ಷಣ ಕೋರ್ಸ್‌ಗಳ ಪ್ರವೇಶಕ್ಕೆ ಎಲ್ಲಾ ರಾಜ್ಯಗಳು ಸಿಇಟಿ ನಡೆಸುವುದು ಕಡ್ಡಾಯ ಎಂದು ನ್ಯಾಯಮೂರ್ತಿ ಜೀವನ ರೆಡ್ಡಿ ನೇತೃತ್ವದ ನ್ಯಾಯಪೀಠ ಐತಿಹಾಸಿಕ ತೀರ್ಪು ನೀಡಿತು. ಖಾಸಗಿ ಶಿಕ್ಷಣ ಸಂಸ್ಥೆಗಳ ಲಾಭಕೋರ ಪ್ರವೃತ್ತಿಯಿಂದ ಬಡವರು, ಮಧ್ಯಮ ವರ್ಗದವರಿಗೆ ಆಗುವ ಅನ್ಯಾಯ ನಿವಾರಿಸಲು ಹಾಗೂ ಸಾಮಾಜಿಕ ನ್ಯಾಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಆ ತೀರ್ಪನ್ನು ನೀಡಲಾಯಿತು ಎಂಬುದು ಮುಖ್ಯವಾಗಿ ಗಮನಿಸಬೇಕಾದ ಅಂಶ.

ಸುಪ್ರೀಂ ಕೋರ್ಟ್‌ನ ಈ ತೀರ್ಪನ್ನು ಆಧರಿಸಿ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ‘ಸಾಮಾನ್ಯ ಪ್ರವೇಶ ಪರೀಕ್ಷೆ’ (ಸಿಇಟಿ) ನಡೆಸುವ ದಿಟ್ಟ ಕ್ರಮವನ್ನು ಕೈಗೊಂಡವರು ಆಗ (1993) ಮುಖ್ಯಮಂತ್ರಿ ಆಗಿದ್ದ ಎಂ.ವೀರಪ್ಪ ಮೊಯಿಲಿ. ಆ ಕಾಲದಲ್ಲಿ ಅವರಿಗೆ ಬೆಂಬಲವಾಗಿ ನಿಂತವರು ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿದ್ದ ತೆರೇಸಾ ಭಟ್ಟಾಚಾರ್ಯ. ಅದರ ಫಲವಾಗಿಯೇ ಐಎಎಸ್ ಅಧಿಕಾರಿ ಶಿವಕುಮಾರ ರೆಡ್ಡಿ ಅವರು ವಿಶೇಷಾಧಿಕಾರಿ­ಯಾಗಿದ್ದ ಸಿಇಟಿ ಘಟಕ ಅಸ್ತಿತ್ವಕ್ಕೆ ಬಂತು. ಸುಮಾರು ಒಂದು ವರ್ಷ ಕಾಲ ಈ ಹುದ್ದೆಯಲ್ಲಿದ್ದ ಶಿವಕುಮಾರ ರೆಡ್ಡಿ ಸಿಇಟಿಯ ಸಿದ್ಧತೆಗಳನ್ನು ಆರಂಭಿಸಿದರೆ, ನಂತರ ಬಂದ ಬಿ.ಎ.ಹರೀಶ್ ಗೌಡ ಈ ವ್ಯವಸ್ಥೆಗೆ ಭದ್ರ ಬುನಾದಿ ಹಾಕಿ ಇದಕ್ಕೊಂದು ಸ್ಪಷ್ಟ ರೂಪ ನೀಡಿದರು. ಇದರ ಫಲವಾಗಿ ರಾಜ್ಯದಲ್ಲಿ ಪ್ರಥಮ ಬಾರಿಗೆ 1994ರಲ್ಲಿ ವೃತ್ತಿಶಿಕ್ಷಣ ಕೋರ್ಸ್‌ಗಳ ಪ್ರವೇಶಕ್ಕೆ ಸಿಇಟಿ ಪರೀಕ್ಷೆ ಪ್ರಾರಂಭವಾಯಿತು.

ಎಲ್ಲರ ಕೊಡುಗೆಯೂ ಇದೆ: ಸಿಇಟಿ ವ್ಯವಸ್ಥೆ ದುರ್ಬಲಗೊಳ್ಳಲು ಎಲ್ಲ ರಾಜಕೀಯ ಪಕ್ಷಗಳೂ ಕೊಡುಗೆ ನೀಡಿವೆ. ಬಹುಪಾಲು ವೃತ್ತಿಪರ ಶಿಕ್ಷಣ ಸಂಸ್ಥೆಗಳ ಮಾಲೀಕರು ರಾಜಕಾರಣಿಗಳೇ ಆಗಿರುವುದು ಇದಕ್ಕೆ ಮುಖ್ಯ ಕಾರಣ. ಕೆಪಿಸಿಸಿ ಅಧ್ಯಕ್ಷ ಡಾ.ಜಿ.­ಪರಮೇಶ್ವರ್‌, ಸಚಿವರಾದ ಶಾಮನೂರು ಶಿವಶಂಕರಪ್ಪ, ಎಂ.ಬಿ.­ಪಾಟೀಲ,  ಸಂಸದರಾದ ಪ್ರಭಾಕರ ಕೊರೆ, ಜಿ.ಎಂ.ಸಿದ್ದೇಶ್, ಬಿ.ವೈ.­ರಾಘವೇಂದ್ರ, ಶಾಸಕರಾದ ಎಂ.ಆರ್‌.ದೊರೆಸ್ವಾಮಿ, ಎಂ.ಆರ್‌.ಸೀತಾರಾಂ, ಮಾಜಿ ಸಚಿವ ಆರ್.ಎಲ್‌.ಜಾಲಪ್ಪ ಸೇರಿದಂತೆ ಹಲವು ರಾಜಕಾರಣಿಗಳು ಕಾಲೇಜುಗಳನ್ನು ನಡೆಸುತ್ತಿದ್ದಾರೆ.

ಖಾಸಗಿ ಕಾಲೇಜುಗಳ ಮಾಲೀಕರ ಗುಂಪು ತಮ್ಮಲ್ಲಿರುವ ಅಪಾರ ಸಂಪನ್ಮೂಲವನ್ನು ಧಾರೆಯೆರೆದು ನ್ಯಾಯಾಂಗ ಹೋರಾಟವನ್ನು ನಡೆಸಿದ ಕಾರಣದಿಂದಾಗಿಯೇ ಉನ್ನಿಕೃಷ್ಣನ್ ಪ್ರಕರಣದ ತೀರ್ಪು ರದ್ದಾಯಿತು ಎಂದು ಶಿಕ್ಷಣ ತಜ್ಞರು ದೂರುತ್ತಾರೆ. ಗ್ರಾಮೀಣ ಭಾಗ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳಿಂದ ಸಿಇಟಿಗೆ ಈಗಲೂ ಹೆಚ್ಚಿನ ಬೇಡಿಕೆ ಇದೆ. ದುಬಾರಿ ಶುಲ್ಕ ನೀಡಿ ಆಡಳಿತ ಮಂಡಳಿ ಕೋಟಾದಡಿ ಪ್ರವೇಶ ಪಡೆಯಲು ಸಾಧ್ಯವಾಗದವರು ಕಷ್ಟಪಟ್ಟು ಓದಿ ಸಿಇಟಿ ಮೂಲಕ ಸರ್ಕಾರಿ ಕೋಟಾದಡಿ ಸೀಟು ಪಡೆಯುತ್ತಿದ್ದಾರೆ.

ಆದರೆ ಸರ್ಕಾರಿ ಕೋಟಾದ ಸೀಟುಗಳು ಪ್ರತೀ ವರ್ಷ ಕಡಿಮೆ ಆಗುತ್ತಿರುವುದರಿಂದ ಆ ವರ್ಗದ ಜನರಲ್ಲಿ ಆತಂಕ ಮನೆ ಮಾಡಿದೆ. 2013–14ನೇ ಸಾಲಿನಲ್ಲಿ ವೈದ್ಯಕೀಯ ವಿಭಾಗದಲ್ಲಿ ಶೇ 40ರಷ್ಟು ಹಾಗೂ ಎಂಜಿನಿಯರಿಂಗ್‌ನಲ್ಲಿ ಶೇ 45ರಷ್ಟು ಸೀಟುಗಳನ್ನು ಮಾತ್ರ ಖಾಸಗಿ ಕಾಲೇಜುಗಳು ಸರ್ಕಾರಕ್ಕೆ ಬಿಟ್ಟುಕೊಟ್ಟಿದ್ದವು. ಉಳಿದ ಸೀಟುಗಳನ್ನು ಆಡಳಿತ ಮಂಡಳಿ ಹಾಗೂ ಕಾಮೆಡ್–ಕೆ ಕೋಟಾ ಮೂಲಕ ತುಂಬಲಾಗಿತ್ತು.

ಕ್ಯಾಪಿಟೇಷನ್ ಲಾಬಿ ಮತ್ತೆ ಮೇಲುಗೈ ಸಾಧಿಸುತ್ತಿದ್ದು ಸಿಇಟಿ ಪದ್ಧತಿ ಜಾರಿಗೆ ಬರುವ ಮುನ್ನ ಇದ್ದ ವ್ಯವಸ್ಥೆಯತ್ತ ವಾಲುತ್ತಿರುವ ಎಲ್ಲ ಲಕ್ಷಣಗಳು ಕಂಡುಬರುತ್ತಿವೆ. ಸರ್ಕಾರ, ಖಾಸಗಿ ಕಾಲೇಜುಗಳ ಲಾಬಿಗೆ ಮಣಿಯದೆ, ನಿಯಮಾವಳಿ ಉಲ್ಲಂಘಿಸುವ ಶಿಕ್ಷಣ ಸಂಸ್ಥೆ ಗಳ ಮಾನ್ಯತೆಯನ್ನು ರದ್ದುಪಡಿಸುವ ದಿಟ್ಟ ನಿಲುವನ್ನು ತೆಗೆದು­ಕೊಳ್ಳಬೇಕು. ಆಗ ಮಾತ್ರ ಸಿಇಟಿ ವ್ಯವಸ್ಥೆ ಉಳಿಯಲು ಸಾಧ್ಯ.

2002ರ ಸುಪ್ರೀಂ ಕೋರ್ಟ್‌ ತೀರ್ಪಿನಿಂದಾಗಿ ಖಾಸಗಿ ಶಿಕ್ಷಣ ಸಂಸ್ಥೆಗಳು ಹೇಳಿದಂತೆ ಸರ್ಕಾರ ಕೇಳುವಂತಹ ಪರಿಸ್ಥಿತಿ ನಿರ್ಮಾಣ­ವಾಗಿದೆ. ಪ್ರತೀ ವರ್ಷ ಖಾಸಗಿ ಶಿಕ್ಷಣ ಸಂಸ್ಥೆಗಳ ಮುಂದೆ ನಮ­ಗಿಷ್ಟು ಸೀಟು ಬಿಟ್ಟುಕೊಡಿ ಎಂದು ಗೋಗರೆಯುವ ಸ್ಥಿತಿ ಉಂಟಾ­ಗಿದೆ. ಈ ಪರಿಸ್ಥಿತಿ ಹೋಗಲಾಡಿಸಲು ಸರ್ಕಾರ ಮುಂದಾಗಬೇಕು.

ಸರ್ಕಾರ ನಿಗದಿ ಮಾಡಿದ ಶುಲ್ಕವನ್ನು ಪಡೆದರೆ ಶಿಕ್ಷಣ ಸಂಸ್ಥೆ­ಗಳನ್ನು ನಡೆಸಲು ಸಾಧ್ಯವಿಲ್ಲ ಎಂದು ಖಾಸಗಿ ಶಿಕ್ಷಣ ಸಂಸ್ಥೆಗಳು ಹೇಳುತ್ತವೆ. ಆದರೆ ಯಾವುದೇ ಖಾಸಗಿ ಶಿಕ್ಷಣ ಸಂಸ್ಥೆ ತನ್ನ ವಾರ್ಷಿಕ ವಹಿವಾಟಿನ ವಿವರಗಳನ್ನು, ಲೆಕ್ಕ ಪರಿಶೋಧಕರ ವರದಿ­ಯನ್ನು ಸಾರ್ವಜನಿಕವಾಗಿ ಬಹಿರಂಗ ಮಾಡಿದ ನಿದರ್ಶನ ಇಲ್ಲ.

2002ರ ನಂತರ ರಾಜ್ಯದಲ್ಲಿ ಸಿಇಟಿ ವ್ಯವಸ್ಥೆ ಹದಗೆಡುತ್ತಿದೆ. ಅದನ್ನು ತಡೆಯಲು ರಾಜ್ಯ ಸರ್ಕಾರ ಕಠಿಣ ಕ್ರಮಕೈಗೊಳ್ಳಲು ಮುಂದಾಗಿಲ್ಲ. 2006ರಲ್ಲಿ ಕಾಯ್ದೆ ರೂಪಿಸಿದರೂ ಅದನ್ನು ಜಾರಿಗೊಳಿಸಲಿಲ್ಲ. ಈ ಕಾಯ್ದೆಯಿಂದ ಬಡ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ರಾಜ್ಯ ಸರ್ಕಾರ 2014–15ನೇ ಸಾಲಿಗೂ ಆ ಕಾಯ್ದೆಯನ್ನು ತಡೆಹಿಡಿದಿದೆ.

2006–07ರಲ್ಲಿ ಹತ್ತು ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜು­ಗಳು, ನಾಲ್ಕು ವೈದ್ಯಕೀಯ ಕಾಲೇಜುಗಳನ್ನು ಆರಂಭಿಸಿದ್ದು ಬಿಟ್ಟರೆ, ಆ ನಂತರ ಹೊಸ ಸರ್ಕಾರಿ ಕಾಲೇಜುಗಳನ್ನು ತೆರೆಯಲಿಲ್ಲ. ಈಗಿನ ಸರ್ಕಾರ ಮುಂದಿನ ವರ್ಷ ಆರು ವೈದ್ಯಕೀಯ ಕಾಲೇಜುಗಳನ್ನು ತೆರೆಯಲು ತೀರ್ಮಾನಿಸಿದೆ. ಅಧಿಕ ಸಂಖ್ಯೆಯಲ್ಲಿ ಸರ್ಕಾರಿ ಎಂಜಿನಿಯರಿಂಗ್‌, ವೈದ್ಯಕೀಯ ಕಾಲೇಜುಗಳನ್ನು ತೆರೆದು ಸರ್ಕಾರಿ ಸೀಟುಗಳ ಸಂಖ್ಯೆಯನ್ನು ಹೆಚ್ಚಿಸಿದ್ದರೆ ಸ್ವಲ್ಪಮಟ್ಟಿಗಾದರೂ ಖಾಸಗಿಯವರ ಪ್ರಾಬಲ್ಯವನ್ನು ತಡೆಯಬಹುದಾಗಿತ್ತು.

ಸರ್ಕಾರಿ ಶಾಲಾ ಕಾಲೇಜುಗಳ ಹಾಗೆಯೇ ಸರ್ಕಾರಿ ಎಂಜಿನಿಯ­ರಿಂಗ್‌ ಮತ್ತು ವೈದ್ಯಕೀಯ ಕಾಲೇಜುಗಳಿಗೆ ವಿದ್ಯಾರ್ಥಿಗಳು ಬರುವು­ದಿಲ್ಲ ಎಂಬ ಮಾತಿದೆ. ಖಾಸಗಿ ಎಂಜಿನಿಯರಿಂಗ್‌ ಮತ್ತು ವೈದ್ಯ­ಕೀಯ ಕಾಲೇಜುಗಳಂತೆಯೇ ಸರ್ಕಾರಿ ಕಾಲೇಜುಗಳನ್ನೂ ಸಜ್ಜುಗೊಳಿಸಲು ಯಾಕೆ ಸರ್ಕಾರಕ್ಕೆ ಸಾಧ್ಯವಿಲ್ಲ? 

‘ವಿದ್ಯಾರ್ಥಿಗಳ ಹಿತ ಕಾಯುತ್ತೇವೆ’
ಕೈಗೆಟಕುವ ಶುಲ್ಕದಲ್ಲಿ ವೃತ್ತಿ ಶಿಕ್ಷಣ ಲಭ್ಯವಾಗುವಂತೆ ಮಾಡುವ ಮೂಲಕ ವಿದ್ಯಾರ್ಥಿಗಳ ಹಿತ ಕಾಯುತ್ತೇವೆ. ಈ ಬಾರಿಯೂ ಸರ್ವ ಸಮ್ಮತ ಒಪ್ಪಂದವನ್ನು ಖಾಸಗಿ ವೃತ್ತಿ ಶಿಕ್ಷಣ ಸಂಸ್ಥೆಗಳ ಜೊತೆ ಮಾಡಿಕೊಳ್ಳುತ್ತೇವೆ.

ಸರ್ಕಾರ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳ ನಡುವೆ ಮಾತುಕತೆ ನಡೆದಿದೆ. ನಮ್ಮ ನಿಲುವನ್ನು ಅವರಿಗೆ ತಿಳಿಸಿದ್ದೇವೆ. ಅವರ ಮಾತು ಆಲಿಸಿದ್ದೇವೆ. ಈ ಬಾರಿ ಸರ್ಕಾರಿ ಕೋಟಾ ಅಡಿ ಎಷ್ಟು ಸೀಟು ಲಭ್ಯ ಎಂಬುದು ಮುಂದಿನ ದಿನಗಳಲ್ಲಿ ತೀರ್ಮಾನವಾಗುತ್ತದೆ.
–ಆರ್‌.ವಿ. ದೇಶಪಾಂಡೆ, ಉನ್ನತ ಶಿಕ್ಷಣ ಸಚಿವ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT