ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಳಜಿ ಇಲ್ಲದ ವೈದ್ಯರು ಬೇಕೆ?

Last Updated 7 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಕಳೆದ ವಾರ ನಡೆದ ಘಟನೆ ಇದು. ಬೆಂಗಳೂರಿನ ಗಿರಿನಗರ ನಮ್ಮ ಪಕ್ಕದ ಮನೆಯ ಐದು ತಿಂಗಳ ಮಗು ಬೆಳಿಗ್ಗೆ 8.30ರ ವೇಳೆಗೆ ಇದ್ದಕ್ಕಿದ್ದಂತೆ ಉಸಿರುಕಟ್ಟಿ ಅಳಲು ಶುರು ಮಾಡಿತು. ಕೆಲವು ನಿಮಿಷಗಳ ನಂತರವೂ ಮಗು ಅಳು ನಿಲ್ಲಿಸಲಿಲ್ಲ. ಮಗು ಏನನ್ನೋ ನುಂಗಿ ಅದು ಗಂಟಲಲ್ಲಿ ಸಿಕ್ಕಿ ಹಾಕಿಕೊಂಡು ಹೀಗಾಗಿರಬಹುದು ಎಂದು ಮಗುವಿನ ತಾಯಿ ಸೇರಿದಂತೆ ಮನೆಯಲಿದ್ದವರೆಲ್ಲರೂ ಗಾಬರಿಯಾದರು.

ತಕ್ಷಣವೇ ಅಜ್ಜ ಹಾಗೂ ಮಗುವಿನ ತಾಯಿ ಮಗುವನ್ನು ಆ ಪ್ರದೇಶದಲ್ಲಿ ಹೆಸರಾದ ನರ್ಸಿಂಗ್ ಹೋಮ್‌ಗೆ ಕರೆದುಕೊಂಡು ಹೋದರು. ಹೋದ ತಕ್ಷಣ ಅಲ್ಲಿನ ಶುಶ್ರೂಷಕಿಗೆ ತಿಳಿಸಿದರು. ಆ ಶುಶ್ರೂಷಕಿ, `ಸ್ವಲ್ಪ ಇರಿ. ಮಕ್ಕಳ ತಜ್ಞರು ಇಲ್ಲ. ಡ್ಯೂಟಿ ಡಾಕ್ಟರ್ ಮೂರನೇ ಮಹಡಿಯಲ್ಲಿದ್ದಾರೆ. ಬಂದು ನೋಡುತ್ತಾರೆ~ ಎಂದರು. ಮಗುವಿನ ಅಳು ಒಂದೇ ಸಮನೆ ಮುಂದುವರಿದಿತ್ತು.

ವೈದ್ಯರು ಬರುವ ಹೊತ್ತಿಗೆ 10 ನಿಮಿಷ ದಾಟಿತ್ತು. ಬಂದ ಮೇಲೆ ಪುನಃ ವಿವರ ಪಡೆದ ಅವರು, ಮಗುವಿನ ತೂಕ ಅಳೆಯಲು ಸಹಾಯಕರಿಗೆ ಸೂಚಿಸಿದರು. ಗಾಬರಿಯಲ್ಲಿದ್ದ ಅಜ್ಜ ಇದನ್ನು ಆಕ್ಷೇಪಿಸಿ, `ಅಲ್ಲ, ಮಗುವಿಗೆ ತುರ್ತು ಚಿಕಿತ್ಸೆ ಅಗತ್ಯವಿದೆ. ಈಗ ತೂಕ ತೆಗೆದು ಏನು ಮಾಡುತ್ತೀರ? ಮೊದಲು ಏನು ಚಿಕಿತ್ಸೆ ಬೇಕೋ ಅದನ್ನು ನೋಡಿ~ ಎಂದು ಸ್ವಲ್ಪ ಜೋರು ಮಾಡಿದರು.

ಆದರೆ ಡ್ಯೂಟಿ ವೈದ್ಯರು ಇದಕ್ಕೆ ಒಪ್ಪಲಿಲ್ಲ. ಸ್ವಲ್ಪ ಹೊತ್ತಿನ ನಂತರ ಆ ಆಸ್ಪತ್ರೆಯ ಮಾಲೀಕರೂ ಆದ ತಜ್ಞ ವೈದ್ಯರು ಬಂದರು. `ಡಾಕ್ಟರ್, ನೀವೇ ಸ್ವಲ್ಪ ಬೇಗ ನೋಡಿ~ ಎಂದು ವಿನಂತಿಸಿದರು ಅಜ್ಜ ಮತ್ತು ಮಗಳು. ಅದಕ್ಕೆ ಅವರು, `ಇಲ್ಲ, ಈ ಮಗುವನ್ನು ಹಿಂದೆ ನಾನು ಯಾವತ್ತೂ ನೋಡಿಲ್ಲ. ಯಾವ ಚಿಕಿತ್ಸೆಯನ್ನೂ ನೀಡಿಲ್ಲ. ಹೀಗಾಗಿ ಈಗ ನೋಡಲು ಆಗದು~ ಎಂದು ಹೇಳಿ, ಶ್ರೀನಗರದಲ್ಲಿರುವ ಆಸ್ಪತ್ರೆಯೊಂದಕ್ಕೆ ಕರೆದುಕೊಂಡು ಹೋಗಲು ಸೂಚಿಸಿದರು. ಅಜ್ಜನಿಗೆ ಪುನಃ ರೇಗಿತು. `ಅಲ್ಲ ಸಾರ್, ತುರ್ತು ಚಿಕಿತ್ಸೆ ಅಗತ್ಯವಿದ್ದಾಗ, ನಾನು ಈ ಹಿಂದೆ ಯಾವತ್ತೂ ಇವರನ್ನು ನೋಡಿಯೇ ಇಲ್ಲ ಎನ್ನುವುದು ಸರಿಯೇ?~ ಎಂದು ಕೇಳಿದರು. ಇನ್ನಷ್ಟು ಜೋರು ಮಾಡಿದ ಮೇಲೆ ಅಲ್ಲೇ ಇದ್ದ ಉಪಕರಣದ ನೆರವಿನಿಂದ ಮಗುವಿನ ಉಸಿರಾಟದ ಕೊಳವೆ ತಪಾಸಣೆ ಮಾಡಿ, `ಏನೂ ತೊಂದರೆ ಇಲ್ಲ~ ಎಂದರು.  ಇಂತಹ ಆಧುನಿಕ ಆಸ್ಪತ್ರೆಯಲ್ಲಿ ಎಲ್ಲ ಸೌಲಭ್ಯಗಳಿದ್ದು,  ಮಕ್ಕಳ ಬದುಕಿನ ಬಗೆಗೂ ಚೆಲ್ಲಾಟವಾಡುವ ವೈದ್ಯರು ಇರಬೇಕೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT