ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಳಿಸ್ವಾಮಿ ಮನೆಗೆ ಕರವೇ ದಾಳಿ

Last Updated 15 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಕಡೂರು: ತಾಲ್ಲೂಕಿನ ದೇವನೂರು ಸಮೀಪದ ಟಿ.ಬಿ.ಕಾವಲಿನ ಹತ್ತಿರ ಇರುವ ಕಾಳಿಸ್ವಾಮಿ (ಋಷಿ ಕುಮಾರ್) ಮನೆಗೆ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ಜಿಲ್ಲಾ ಅಧ್ಯಕ್ಷ ರುದ್ರೇಗೌಡರ ನೇತೃತ್ವದಲ್ಲಿ ಕಾರ್ಯಕರ್ತರು ಸೋಮವಾರ ನುಗ್ಗಿ ದಾಂದಲೆ ನಡೆಸಿ ಆವರಣದಲ್ಲಿರುವ ಕುಂಡ, ಗಿಡಗಳನ್ನು ಕಿತ್ತೆಸೆದು ಆಕ್ರೋಶ ವ್ಯಕ್ತಪಡಿಸಿದರು.

ಕಡೂರು ಪಟ್ಟಣದಿಂದ 25 ಕಿ.ಮೀ ದೂರದಲ್ಲಿರುವ ನೀರುಗುಂಡಿ ತಾಂಡ್ಯದಲ್ಲಿ 15 ಎಕರೆ ಭೂಮಿಯಲ್ಲಿ ಆಶ್ರಮ (ಮನೆ) ಕಟ್ಟಿ, ಪಲ್ಲಕ್ಕಿಯಲ್ಲಿ ಕಾಳಿಯ ಭಾವಚಿತ್ರವಿಟ್ಟು ಪೂಜಿಸಲಾಗಿದೆ. ಈ ಮನೆಯಲ್ಲಿ ತಾಯಿ ಚಂದ್ರಮ್ಮ, ತಮ್ಮ ಸಂಪತ್ ವಾಸವಿದ್ದರು. ಇವರು ಸುಮಾರು 20 ಕ್ಕೂ ಹೆಚ್ಚು ಹಸುಗಳನ್ನು ಸಾಕಿಕೊಂಡಿದ್ದರು.

ಎರಡು ದಿನಗಳ ಹಿಂದೆ ದೃಶ್ಯ ಮಾಧ್ಯಮದವರ ಮುಂದೆ `ನಿತ್ಯಾನಂದ ಸ್ವಾಮಿಗೆ ಡೀಲ್ ಮಾಡಿದ್ದೀನಿ, ಪ್ರಮುಖ ಮಠಾಧೀಶರು ನನ್ನ ವಶದಲ್ಲಿದ್ದಾರೆ. ನಾನು ಹೇಳಿದಂತೆ ಅವರೆಲ್ಲ ಕೇಳುತ್ತಾರೆ~ ಎಂದು ಕಾಳಿಸ್ವಾಮಿ ಹೇಳಿದ್ದರು.

ಸಂಘ ಸಂಸ್ಥೆಗಳ ಬಗ್ಗೆ ಹಗುರವಾಗಿ ಹೇಳಿಕೆ ನೀಡಿದ್ದರಿಂದ ಕರವೇ ಕಾರ್ಯಕರ್ತರು ದಾಳಿ ಮಾಡಿದರು ಎನ್ನಲಾಗಿದೆ. ಏಕಾಏಕಿ ಮನೆಗೆ ನುಗ್ಗಿ ಕಾಳಿಸ್ವಾಮಿಯನ್ನು ಹುಡುಕಿದಾಗ ಕಾಳಿ ಪಲಾಯನ ಮಾಡಿರುವುದನ್ನು ಕಂಡ ಕಾರ್ಯಕರ್ತರು ಆಕ್ರೋಶದಿಂದ ಆವರಣದಲ್ಲಿದ್ದ ಗಿಡ, ಕುಂಡಗಳನ್ನು ಧ್ವಂಸ ಮಾಡಿದರು.


`ಕಾಳಿಸ್ವಾಮಿ (ಋಷಿ ಕುಮಾರ್)ಮೂಲತಃ ಅರಸೀಕೆರೆಯವರಾಗಿದ್ದು, ಆರ್ಕೆಸ್ಟ್ರಾಗಳಲ್ಲಿ ನೃತ್ಯ, ಹಾಡಿನ ಕಾರ್ಯಕ್ರಮ ನಡೆಸಿಕೊಡುತ್ತಿದ್ದರು. ನಂತರ ಕೆಲವು ವರ್ಷಗಳ ಕಾಲ ನಾಪತ್ತೆಯಾದವರು ಸ್ವಾಮಿ ವೇಷದಲ್ಲಿ ಪ್ರತ್ಯಕ್ಷರಾದರು. ದೇವಸ್ಥಾನದಲ್ಲಿ ಪೂಜೆ, ಹೋಮಗಳನ್ನು ನಡೆಸುತ್ತಿದ್ದರು. ಇವರಿಗೆ ಪತ್ನಿ, ಇಬ್ಬರು ಮಕ್ಕಳು ಇದ್ದಾರೆ~ ಎಂದು ಶಾಲಾ ಸ್ನೇಹಿತ ಕುಮಾರ್ ಮಾಹಿತಿ ನೀಡಿದರು.

ಕಾಳಿಯ ತಾಯಿ ಮತ್ತು ತಮ್ಮನಿಗೆ ಪೊಲೀಸ್ ರಕ್ಷಣೆ ನೀಡಿ ಕಾರ್ಯಕರ್ತರನ್ನು ಸ್ಥಳದಿಂದ ತೆರಳಲು ಸೂಚಿಸಿದಾಗ ಸೇರಿದ್ದ ಜನ ಕದಲಿದರು. ಸಖರಾಯಪಟ್ಟಣ ಪಿಎಸ್‌ಐ ಚಂದ್ರಕಲಾ ಮತ್ತಿತರರ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT