ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಳು ಮೆಣಸಲ್ಲಿ ಸಾಲ್ಮನೆಲ್ಲಾ

Last Updated 23 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಸಾಂಬಾರು ಪದಾರ್ಥಗಳ ಉತ್ಪಾದನೆಯಲ್ಲಿ ಭಾರತಕ್ಕೆ ಅಗ್ರಸ್ಥಾನ. ಇದಕ್ಕೆ ಕರ್ನಾಟಕವೂ ಒಂದು ಕಾರಣ ಎನ್ನುವುದು ಹೆಗ್ಗಳಿಕೆ.
ಮೆಣಸು, ಜೀರಿಗೆ, ಕೊತ್ತಂಬರಿ ಬೀಜ, ಅರಿಶಿಣ, ತುಳಸಿ ಮತ್ತು ಕಾಳು ಮೆಣಸಿಗೆ ವಿದೇಶದಲ್ಲೂ ಎಲ್ಲಿಲ್ಲದ ಬೇಡಿಕೆ. ಆದರೆ ಈ ಪದಾರ್ಥಗಳಲ್ಲಿ ‘ಸ್ಯಾಲ್ಮನೆಲ್ಲಾ’ ಎಂಬ ಬ್ಯಾಕ್ಟೀರಿಯಾ ಪತ್ತೆಯಾಗಿರುವ ಕಾರಣ, ಅಮೆರಿಕ ಸಾಂಬಾರು ಪದಾರ್ಥಗಳ ರಫ್ತು ಮಾಡುವ ಭಾರತೀಯ ಮೂಲದ ಸುಮಾರು ೨೦೦ ಕಂಪೆನಿಗಳನ್ನು ‘ಕೆಂಪುಪಟ್ಟಿ’ಗೆ ಸೇರಿಸಿದೆ.

ಭೇದಿ, ಜ್ವರ ಮತ್ತು ಹೊಟ್ಟೆ ನೋವಿಗೆ ಈ  ‘ಸ್ಯಾಲ್ಮನೆಲ್ಲಾ’ ಕಾರಣ ಎನ್ನುವುದು ಅದರ ಹೇಳಿಕೆ. ಈ ಪದಾರ್ಥಗಳ ಪೈಕಿ ಕಾಳುಮೆಣಸಿನ ಆಮದನ್ನು ಅಮೆರಿಕ ೧೯೮೭ರಲ್ಲಿಯೇ ನಿರ್ಬಂಧಿಸಿತ್ತು. ನಂತರ ಆ ನಿರ್ಬಂಧವನ್ನು ಹಿಂಪಡೆದಿದೆ. ನಂತರ ನಮ್ಮ ಕೇಂದ್ರ ಸರ್ಕಾರ ಸಾಂಬಾರು ಪದಾರ್ಥಗಳ ರಫ್ತು ಮಾಡುವ ಮುನ್ನ ಶುದ್ಧತೆಯ ತಪಾಸಣೆಯನ್ನು ಕಡ್ಡಾಯಗೊಳಿಸಿದೆ. ಎಫ್‌ಡಿಎ ಮಾರ್ಗದರ್ಶಿ ಸೂತ್ರಗಳನ್ನು ಇಲ್ಲಿಯವರೆಗೆ ಪಾಲಿಸಿಕೊಂಡು ಬರುತ್ತಿದ್ದರೂ ‘ಸ್ಯಾಲ್ಮೊನೆಲ್ಲಾ’ ಪತ್ತೆಯಾಗಿರುವುದು ಭಾರತದ ರಫ್ತಿನ ಮೇಲೆ ಕರಿನೆರಳಾಗಿ ಪರಿಣಮಿಸಿದೆ.

ಏನಿದು ‘ಸ್ಯಾಲ್ಮನೆಲ್ಲಾ’?
‘ಸ್ಯಾಲ್ಮನೆಲ್ಲಾ’ ಜಾತಿಯ ಬ್ಯಾಕ್ಟೀರಿಯಾ ಕಲುಷಿತ ಆಹಾರ ಪದಾರ್ಥಗಳಲ್ಲಿ-, ಪ್ರಮುಖವಾಗಿ ಮೊಟ್ಟೆ, ಮಾಂಸ, ಪಾಶ್ಚರೀಕರಿಸದ ಹಾಲು, ತುಪ್ಪ, ಹಣ್ಣು, ತರಕಾರಿ ಮತ್ತು ಸಾಂಬಾರು ಪದಾರ್ಥ ಇತ್ಯಾದಿಗಳಲ್ಲಿ ಕಾಣಿಸಿಕೊಳ್ಳುತ್ತದೆ. ‘ಸ್ಯಾಲ್ಮನೆಲ್ಲಾ ಎಂಟೆರಿಕಾ’ ಎಂಬ ಉಪಜಾತಿಯ ಬ್ಯಾಕ್ಟೀರಿಯಾವು ಕರುಳಿನ ಸೋಂಕನ್ನು ಉಂಟುಮಾಡುತ್ತದೆ.

ಇದರ ಪ್ರಮುಖ ರೋಗಲಕ್ಷಣಗಳೆಂದರೆ ಭೇದಿ, ಜ್ವರ ಮತ್ತು ಹೊಟ್ಟೆನೋವು. ಅದು ಮೂರರಿಂದ ಐದು ದಿನಗಳವರೆಗೆ ಮುಂದುವರೆಯುತ್ತದೆ. ಈ ಸೋಂಕಿಗೆ ‘ಸ್ಯಾಲ್ಮನೆಲ್ಲೊಸಿಸ್’ ಎಂದು ಕರೆಯುವರು. ಕರುಳಿನ ಸೋಂಕು ರಕ್ತದ ಮೂಲಕ ಇತರೆ ಅಂಗಗಳಿಗೆ ಪ್ರವಹಿಸಿದರೆ ಸಾವಿನ ಸಾಧ್ಯತೆಯು ಹೆಚ್ಚಾಗಿರುತ್ತದೆ. ಅದರ ತೀವ್ರತೆ ಎಳೆಮಕ್ಕಳಲ್ಲಿ ಮತ್ತು ಮುದುಕರಲ್ಲಿ ಹೆಚ್ಚಾಗಿರುತ್ತದೆ.

ರಾಸಾಯನಿಕ ಪರಿಣಾಮ
ಕಾಳುಮೆಣಸಿನ ಬೆಳೆಯಲ್ಲಿ ರಾಸಾಯನಿಕಗಳನ್ನು ಸಾಮಾನ್ಯವಾಗಿ ಬಳಸುವುದಿಲ್ಲ. ಆದರೆ ಮಿಶ್ರಬೆಳೆಯಾಗಿ ಬೆಳೆಯುವಾಗ ಇತರೆ ಬೆಳೆಗಳಿಗೆ ಸಿಂಪಡಿಸುವ ರಾಸಾಯನಿಕ ಕಾಳು ಮೆಣಸಿನಲ್ಲಿ ಸೇರಿಕೊಳ್ಳುವ ಸಾಧ್ಯತೆಯಿದೆ. ಆದ್ದರಿಂದ ರಫ್ತು ಮಾಡುವ ಮುನ್ನ ರಾಸಾಯನಿಕ ಕೀಟನಾಶಕಗಳ ಪತ್ತೆಗೆ ಹಲವು ಬಗೆಯ ತಪಾಸಣೆ ಮಾಡಲಾಗುತ್ತಿದೆ.

ಕೊಯ್ಲಿನ ಪೂರ್ವದಲ್ಲಿ ‘ಸ್ಯಾಲ್ಮನೆಲ್ಲಾ’ದಿಂದ ಕಲುಷಿತವಾಗುವ ಸಾಧ್ಯತೆ ತುಂಬಾ ಕಡಿಮೆ. ಸಾಂಪ್ರದಾಯಿಕ ಪದ್ಧತಿಯಲ್ಲಿ ಕೊಯ್ಲಿನ ನಂತರ ಮೆಣಸುಕಾಳುಗಳನ್ನು ಬಿದಿರಿನ ಚಾಪೆಗಳ ಮೇಲೆ ಅಥವಾ ನೆಲದ ಮೇಲೆ ಒಣಗಿಸಲಾಗುತ್ತದೆ. ಈ ಸಂದರ್ಭದಲ್ಲಿ ಕಸ, ಸಗಣಿ, ದೂಳು ಇತ್ಯಾದಿಗಳ ಮೂಲಕ ಬ್ಯಾಕ್ಟೀರಿಯಾದಿಂದ ಕಲುಷಿತವಾಗುತ್ತದೆ. ಕೊಯ್ಲು ಮಾಡಿರುವ ಮೆಣಸು ಶೇ ೭೫-ರಿಂದ ೮೫ರಷ್ಟು ತೇವಾಂಶದಿಂದ ಕೂಡಿರುತ್ತದೆ. ಸಗಣಿಯಿಂದ ಸಾರಿಸಿದ ಬಿದಿರಿನ ಮೊರಗಳು ಮತ್ತು ಕಲುಷಿತ ಗೋಣಿ ಚೀಲಗಳ ಮೂಲಕವು ಬ್ಯಾಕ್ಟೀರಿಯಾ ಹರಡುತ್ತದೆ.

ಆಧುನಿಕ ಸಂಸ್ಕರಣಾ ವಿಧಾನಗಳು
ಭಾರತದ ಸಾಂಬಾರು ಪದಾರ್ಥಗಳ ಮಂಡಳಿಯು ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಶೋಧನಾ ಸಂಸ್ಥೆಯ (ಸಿಎಎಫ್‌ಟಿಆರ್ಐ) ಕೆಲವು ಸಲಹೆಗಳನ್ನು ಪಾಲಿಸಲು ಬೆಳೆಗಾರರಿಗೆ ಸೂಚಿಸಿದೆ. ಕೊಯ್ದ ಕಾಳುಗಳನ್ನು ಒಣಗಿಸುವ ಮುನ್ನ ಕುದಿಯುವ ನೀರಿನಲ್ಲಿ ಬೇಯಿಸಿ, ನಂತರ ಶುಚಿಯಾದ ಸಿಮೆಂಟ್ ನೆಲದ ಮೇಲೆ ಅಥವಾ ಪಾಲಿಥೀನ್ ಹಾಸಿನ ಮೇಲೆ ಒಣಗಿಸಬೇಕು.

ಹೀಗೆ ನೀರಿನಲ್ಲಿ ಬೇಯಿಸಿ ಒಣಗಿಸುವುದರಿಂದ ದೂಳು ಮತ್ತು ಕಲ್ಮಶಗಳನ್ನು ತಪ್ಪಿಸಬಹುದು ಹಾಗೂ ಎಲ್ಲ ಕಾಳುಗಳ ಬಣ್ಣವೂ ಒಂದೇ ರೀತಿ ಕಪ್ಪಾಗಿರುವುದು. ಮೂರರಿಂದ ನಾಲ್ಕು ದಿನ ಚೆನ್ನಾಗಿ ಒಣಗಿದ ನಂತರ ಕಾಳಿನ ತೇವಾಂಶ ಶೇ ೧೧ಕ್ಕಿಂತ ಕಡಿಮೆಯಿರುತ್ತದೆ. ಒಂದು ವೇಳೆ ತೇವಾಂಶ ಜಾಸ್ತಿಯಿದ್ದರೆ ಶಿಲೀಂಧ್ರ ತಗುಲುವ ಸಾಧ್ಯತೆ ಹೆಚ್ಚಾಗಿರುತ್ತದೆ. ಒಣಗಿಸುವ ಸ್ಥಳ ನೈಲಾನ್ ಅಥವಾ ಇತರೆ ಪರದೆಯಿಂದ ಸುತ್ತುವರಿದಿದ್ದರೆ ಹಕ್ಕಿಗಳಿಂದ ಮತ್ತು ಅವುಗಳ ಹಿಕ್ಕೆಯಿಂದ ಸಂರಕ್ಷಿಸಬಹುದು.

ಸಂಸ್ಕರಣೆಯ ಸಂದರ್ಭದಲ್ಲಿ ಅಗತ್ಯವಾದಲ್ಲಿ ಶುಚಿಯಾದ ಪ್ಲಾಸ್ಟಿಕ್ ಅಥವಾ ಲೋಹದ ಸಲಕರಣೆಗಳನ್ನು ಬಳಸುವುದು ಉತ್ತಮ. ಸಂಸ್ಕರಣೆಯ ಕೆಲಸದಲ್ಲಿ ತೊಡಗುವವರು ಕೈಕಾಲುಗಳನ್ನು ಸೋಪಿನಿಂದ ತೊಳೆದುಕೊಳ್ಳಬೇಕು ಮತ್ತು ಸ್ಥಳವನ್ನು ದೂಳು ಮುಕ್ತವಾಗಿಡಬೇಕು. ಸಂಸ್ಕರಿಸಿದ ಮೆಣಸನ್ನು ಇಲಿ, ಹೆಗ್ಗಣ ಮತ್ತು ಕೀಟಗಳಿಂದ ಮುಕ್ತವಾದ ಸ್ಥಳದಲ್ಲಿ ಶೇಖರಿಸಿಡಬೇಕು. ಸಗಣಿಯಿಂದ ಸಾರಿಸಿದ ಬಿದಿರಿನ ಮೊರಗಳನ್ನು ಯಾವುದೇ ಕಾರಣಕ್ಕೂ ಬಳಸಬಾರದು. ಕೀಟನಿಯಂತ್ರಣ ಅವಶ್ಯವಾಗಿದ್ದಲ್ಲಿ ತಜ್ಞರ ಸಲಹೆಯ ಮೇರೆಗೆ ಮಾತ್ರ ಕೀಟನಾಶಕಗಳನ್ನು ಮತ್ತು ರಾಸಾಯನಿಕಗಳನ್ನು ಬಳಸಬೇಕು.

ಸರಕು ರವಾನಿಸಲು ಶುಚಿಯಾದ ಚೀಲಗಳನ್ನು ಮಾತ್ರ ಬಳಸಬೇಕು. ಒಂದು ವೇಳೆ ರಫ್ತು ಮಾಡುವ ಪದಾರ್ಥಗಳಲ್ಲಿ ಕೀಟನಾಶಕಗಳ ಅಥವಾ ಇತರೆ ಉಳಿಕೆಗಳು ನಿಗದಿಪಡಿಸಿದ ಮಿತಿಗಿಂತ ಹೆಚ್ಚಾಗಿರುವುದು ಕಂಡುಬಂದರೆ ಅಂತಹ ಸರಕುಗಳು ಆಮದು ಮಾಡಿಕೊಳ್ಳುವ ದೇಶದಿಂದ ತಿರಸ್ಕೃತಗೊಳ್ಳುತ್ತವೆ ಮತ್ತು ಅದನ್ನು ಪುನರ್‌ಸಂಸ್ಕರಿಸಲು ಅಥವಾ ಹಿಂದಿರುಗಿಸಲು ತಗಲುವ ವೆಚ್ಚವನ್ನು ರಫ್ತು ಮಾಡುವ ಸಂಸ್ಥೆಯೇ ಭರಿಸಬೇಕಾಗುತ್ತದೆ.

ಉತ್ತಮ ಗುಣಮಟ್ಟದ ಕಾಳುಮೆಣಸನ್ನು ಉತ್ಪಾದಿಸುವುದು ಇಂದಿನ ಅವಶ್ಯಕತೆಯಾಗಿದೆ. ಇದು ಕೇವಲ ವ್ಯಾಪಾರದ ದೃಷ್ಟಿಯ ಪ್ರಶ್ನೆಯಲ್ಲ, ಜಾಗತಿಕ ಮಾರುಕಟ್ಟೆಯಲ್ಲಿ ನಮ್ಮ ದೇಶದ ಒಳಿತಾಗಿಯೂ ಇದು ಮುಖ್ಯ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT