ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಳ್ಗಿಚ್ಚಿನ ರಾಜಕೀಯ: ಉನ್ನತ ತನಿಖೆಗೆ ಆದೇಶ

Last Updated 29 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: `ನಾಗರಹೊಳೆ ರಾಷ್ಟ್ರೀಯ ಉದ್ಯಾ ನವನ, ಶಿವಮೊಗ್ಗದ ಶೆಟ್ಟಿಹಳ್ಳಿ ಅಭಯಾರಣ್ಯ ಹಾಗೂ ರಾಜ್ಯದ ವಿವಿಧ ಕಡೆಗಳಲ್ಲಿ ಕಾಳ್ಗಿಚ್ಚಿನಿಂದ ಸಾವಿರಾರು ಎಕರೆ ಅರಣ್ಯ ಸಂಪತ್ತು ನಾಶವಾಗಿದ್ದು, ಈ ಕುರಿತು ಉನ್ನತ ಮಟ್ಟದ ತನಿಖೆಗೆ ಆದೇಶ ನೀಡಲಾಗಿದೆ~ ಎಂದು ಅರಣ್ಯ ಸಚಿವ ಸಿ.ಪಿ.ಯೋಗೇಶ್ವರ್ ಬುಧವಾರ ಇಲ್ಲಿ ತಿಳಿಸಿದರು.

`ನಾಗರಹೊಳೆ ಮತ್ತು ಶೆಟ್ಟಿಹಳ್ಳಿಯಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದ್ದು, ಸುಮಾರು 2000 ಎಕರೆ ಅರಣ್ಯ ನಾಶವಾಗಿದೆ. ಕಾಳ್ಗಿಚ್ಚಿಗೆ ಕಾರಣವಾದ ಅಂಶಗಳ ಬಗ್ಗೆ ಪರಿಶೀಲನೆ ನಡೆದಿದೆ~ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

ಈ ಬೆಂಕಿ ಮೇಲ್ನೋಟಕ್ಕೆ ಸ್ವಾಭಾವಿಕ ಅಲ್ಲ ಎಂದು ಗೊತ್ತಾಗಿದೆ. ಅರಣ್ಯ ಇಲಾಖೆಯ ಕೆಳಹಂತದ ಸಿಬ್ಬಂದಿ ಅಥವಾ ಅರಣ್ಯ ಇಲಾಖೆ ಯೋಜನೆಗಳ ಬಗ್ಗೆ ಅಸಮಾಧಾನ ಹೊಂದಿರುವ ಸ್ಥಳೀಯರೇ ಉದ್ದೇಶಪೂರ್ವಕವಾಗಿ ಕಾಡಿಗೆ ಬೆಂಕಿ ಹಚ್ಚಿರುವ ಸಾಧ್ಯತೆ ಇದ್ದು, ಎಲ್ಲವನ್ನೂ ಪರಿಶೀಲಿಸಲಾಗುವುದು~ ಎಂದು ಅವರು ಹೇಳಿದರು.

ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ ಅವರೂ ಇದೇ ಅಂಶವನ್ನು ಉಲ್ಲೇಖಿಸಿದ್ದಾರೆ. `3 ರಿಂದ 4 ಸಾವಿರ ಸಿಬ್ಬಂದಿ ಗುತ್ತಿಗೆ ಆಧಾರದ ಮೇಲೆ ಅರಣ್ಯ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದು, ಅವರ ಸೇವೆಯನ್ನು ಬಹಳ ದಿನಗಳ ನಂತರವೂ ಕಾಯಂ ಮಾಡಿಲ್ಲ. ಅವರಲ್ಲಿ ಯಾರೋ ಅತೃಪ್ತರು ಕಾಡಿಗೆ ಬೆಂಕಿ ಹಾಕಿರುವ ಸಾಧ್ಯತೆಯೂ ಇರಬಹುದು~ ಎಂದು ಅನುಮಾನ ವ್ಯಕ್ತಪಡಿಸಿದರು.

ಹಿರಿಯ ಐಎಫ್‌ಎಸ್ ಅಧಿಕಾರಿ ಬಿ.ಕೆ.ಸಿಂಗ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ವಿವಿಧ ತಂಡಗಳು ಈ ಸ್ಥಳಗಳಿಗೆ ಭೇಟಿ ನೀಡಿದ್ದು, ಮಾಹಿತಿ ಸಂಗ್ರಹಿಸುತ್ತಿವೆ. ಒಂದೆರಡು ದಿನಗಳಲ್ಲಿ ವರದಿ ಕೈಸೇರಲಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.  

 ಅರಣ್ಯದಲ್ಲಿರುವ ಮೂಲ ನಿವಾಸಿಗಳನ್ನು ಒಕ್ಕಲೆಬ್ಬಿಸಲು ಕಾರ್ಯಯೋಜನೆ ರೂಪಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿಯೂ ಬೆಂಕಿ ಹಚ್ಚಿರಬಹುದಾದ ಸಾಧ್ಯತೆ ಇದೆ ಎಂದು ಶಂಕಿಸಿದರು.

ಉಪಗ್ರಹದಿಂದ ನಿಗಾ: ಕೌಶಿಕ್ ಮುಖರ್ಜಿ ಮಾತನಾಡಿ, `ಕಾಳ್ಗಿಚ್ಚಿನ ಬಗ್ಗೆ ಸದಾ ನಿಗಾ ಇಡಲು ಉಪಗ್ರಹದ ನೆರವು ಪಡೆಯಲಾಗುತ್ತಿದೆ. ಅದರಲ್ಲಿನ ದೃಶ್ಯಗಳನ್ನು ಆಧರಿಸಿ, ಸಿಬ್ಬಂದಿಯನ್ನು ಎಸ್‌ಎಂಎಸ್ ಮೂಲಕ ತಕ್ಷಣ ಎಚ್ಚರಗೊಳಿಸುವ ಕೆಲಸ ನಡೆಯುತ್ತಿದೆ. ಕಾಳ್ಗಿಚ್ಚು ಹೆಚ್ಚಿನ ಪ್ರದೇಶಕ್ಕೆ ವ್ಯಾಪಿಸದಂತೆ ತಡೆಯಲು ಈ ಕ್ರಮ ನೆರವಾಗಲಿದೆ~ ಎಂದು ಹೇಳಿದರು.

ಪಶ್ಚಿಮಘಟ್ಟ ಸಂರಕ್ಷಣೆಗೆ ಶಿಫಾರಸು: ಪಶ್ಚಿಮ ಘಟ್ಟದಲ್ಲಿ ಗಣಿಗಾರಿಕೆ ನಿಷೇಧ ಕುರಿತು ಅಧಿಕೃತ ಆದೇಶ ಹೊರಡಿಸಬೇಕು. ಅರಣ್ಯ ಇಲಾಖೆಯ ಸಂಶೋಧನಾ ವಿಭಾಗವನ್ನು ಪುನರುಜ್ಜೀವನಗೊಳಿಸಬೇಕು ಎಂಬ ಅಂಶಗಳೂ ಸೇರಿದಂತೆ ಒಟ್ಟು 10 ಶಿಫಾರಸುಗಳನ್ನು ಪಶ್ಚಿಮಘಟ್ಟ ಕಾರ್ಯ ಪಡೆಯು ರಾಜ್ಯ ಸರ್ಕಾರಕ್ಕೆ ಮಾಡಿದೆ.

ಕಾರ್ಯಪಡೆಯ ಮೂರನೇ ವರದಿಯನ್ನು ಅದರ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಅವರು ಅರಣ್ಯ ಸಚಿವ ಸಿ.ಪಿ.ಯೋಗೇಶ್ವರ್ ಅವರಿಗೆ ಬುಧವಾರ ಹಸ್ತಾಂತರ ಮಾಡಿದರು. ಪಶ್ಚಿಮ ಘಟ್ಟದಲ್ಲಿ ಗಣಿಗಾರಿಕೆಗೆ ಅವಕಾಶ ನೀಡದಿದ್ದರೂ ಆ ಬಗ್ಗೆ ಅಧಿಕೃತ ಆದೇಶ ಹೊರಡಿಸಿಲ್ಲ.

ಹೀಗಾಗಿ ತಕ್ಷಣ ಈ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಬೇಕು. ಗ್ರಾಮ ಅರಣ್ಯ ಸಮಿತಿಗಳ ವಿಸ್ತರಣೆ ಮತ್ತು ಸಬಲೀಕರಣಕ್ಕೆ ಆದ್ಯತೆ ನೀಡಬೇಕು ಸಹ್ಯಾದ್ರಿ ಪರಿಸರ ಸಂರಕ್ಷಣೆ ನಿಧಿ ಸ್ಥಾಪಿಸಬೇಕು ಎಂದು ವರದಿಯಲ್ಲಿ ಶಿಫಾರಸು ಮಾಡಲಾಗಿದೆ.

ಹುಲ್ಲುಗಾವಲು ಭಸ್ಮ
ಕಳಸ:
ಹೋಬಳಿಯಾದ್ಯಂತ ಕಾಳ್ಗಿಚ್ಚಿನ ಹಾವಳಿ ತೀವ್ರವಾಗಿದ್ದು ಮರಗಿಡಗಳ ಜತೆ ಚಿಕ್ಕಪುಟ್ಟ ವನ್ಯಪ್ರಾಣಿಗಳಿಗೂ ಸಂಕಷ್ಟ ಎದುರಾಗಿದೆ. ಕುದುರೆಮುಖ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಕ್ಯಾತನಮಕ್ಕಿ, ಸಂಸೆಯಲ್ಲಿ ಬೆಂಕಿ ಇಡೀ ಗುಡ್ಡವನ್ನೇ ಸುಟ್ಟು ಕರಕಲಾಗಿಸಿದೆ.

ವೇಗವಾಗಿ ಬೀಸುವ ಗಾಳಿ, ಗುಡ್ಡದಲ್ಲಿ ಒಣಗಿದ ಹುಲ್ಲು ಬೆಂಕಿಯ ತೀವ್ರತೆ ಹೆಚ್ಚಿಸಿದೆ. ಕಿಲೋಮೀಟರ್‌ಗಟ್ಟಲೆ ಹುಲ್ಲುಗಾವಲು ಬೆಂಕಿಯಲ್ಲಿ ಭಸ್ಮವಾಗಿದೆ. ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯಲ್ಲಿ ಬೆಂಕಿ ತಡೆಯಲು ಅರಣ್ಯ ಇಲಾಖೆ ಅಗ್ನಿಮಾರ್ಗ(ಫೈರ್ ಪಾಥ್) ನಿರ್ಮಿಸಿದ್ದರೂ ಬಹಳಷ್ಟು ಪ್ರದೇಶದಲ್ಲಿ ಹಾನಿಯಾಗಿದೆ.

ಹೊರನಾಡು, ಕಳಕೋಡು ನಡುವಿನ ಹೊನ್ನೇಕಾಡು ಬಳಿ ಗುಡ್ಡಕ್ಕೆ ತಗುಲಿದ ಬೆಂಕಿ ಆಸುಪಾಸಿನ ತೋಟಗಳಿಗೆ ವ್ಯಾಪಿಸದಂತೆ ತಡೆಯಲು ಗ್ರಾಮಸ್ಥರು ಹರಸಾಹಸಪಟ್ಟರು.

ನಡೆಸಿದ್ದಾರೆ. ಕಳಸ ಸಮೀಪದ ಅಬ್ಬುಗುಡಿಗೆ- ಹೆಗ್ಗಡೆಕಾನು ಬಳಿ 2 ದಿನಗಳ ಕಾಲ ಬಿದಿರಿನ ಮೆಳೆಗಳು ಹೊತ್ತಿ ಉರಿಯುತ್ತಿದ್ದ ದೃಶ್ಯ ಕಳಸ ಪಟ್ಟಣಕ್ಕೂ ಕಾಣುತ್ತಿತ್ತು. ಅಲ್ಲಿ ವಾಸವಾಗಿರುವ ಕೆಲ ಕುಟುಂಬಗಳು ಅರಣ್ಯ ಸಿಬ್ಬಂದಿಯ ಜತೆಗೂಡಿ ಬೆಂಕಿ ನಂದಿಸಲು ಶ್ರಮಿಸಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT