ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಳ್ಗಿಚ್ಚಿನ ಹೊಸ್ತಿಲಲ್ಲಿ ರಕ್ಷಿತ ಅರಣ್ಯ!

Last Updated 26 ಫೆಬ್ರುವರಿ 2012, 6:25 IST
ಅಕ್ಷರ ಗಾತ್ರ

ಸಿದ್ದಾಪುರ: ಇಲ್ಲಿನ ಅರಣ್ಯದೊಳಗೆ ಬೆಂಕಿ ಬಿದ್ದರೆ ಹತೋಟಿಗೆ ತರಲು ಯಾವೊಂದು ಮುಂಜಾಗೃತ ಕ್ರಮ ಕೈಗೊಂಡಿಲ್ಲ. ಇದು ಇಲ್ಲಿನ ರಕ್ಷಿತ ಅರಣ್ಯ ವ್ಯಾಪ್ತಿಯ್ಲ್ಲಲಿ ಆತಂಕದ ಛಾಯೆ ಮೂಡಿದೆ. ಪ್ರಾಣಿ ಪಕ್ಷಿ ಸಂಕುಲ ಅರಣ್ಯದೊಳಗೆ ನಿತ್ಯದ ಆಹಾರಕ್ಕಾಗಿ ಪರಿತಪಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಾಡಾನೆ, ಹುಲಿ, ಕಾಡು ಎಮ್ಮೆ, ಕಡವೆ ಜಿಂಕೆ ಮುಂತಾದ ವನ್ಯಪ್ರಾಣಿಗಳು ಆಹಾರವನ್ನರಸಿ ಕಾಫಿ ತೋಟಗಳಿಗೆ ಲಗ್ಗೆ ಇಡುತ್ತಿವೆ.
ಈ ಪರಿಸ್ಥಿತಿಯ ನಡುವೆ ಈ ವ್ಯಾಪ್ತಿಯ ಅರಣ್ಯ ಅಗ್ನಿಗೆ ಆಹುತಿಯಾಗುವ ಸಾಧ್ಯತೆ ಹೆಚ್ಚಾಗಿದೆ. ಇದರಿಂದ ಅರಣ್ಯ ಮತ್ತು ಅರಣ್ಯದಂಚಿನಲ್ಲಿ ವಾಸಿಸುವ ಜನರಿಗೆ ಆತಂಕವನ್ನುಂಟುಮಾಡಿದೆ.

ಪ್ರತೀ ಬಾರಿ ಅರಣ್ಯದಲ್ಲಿ ಬೆಂಕಿ ಬಿದ್ದಾಗ ಅಮೂಲ್ಯವಾದ ಗಿಡ ಮರಗಳು ನಾಶ ಹೊಂದಿದೆ. ವನ್ಯ ಜೀವಿಗಳು, ಪಕ್ಷಿ ಸಂಕುಲ, ಬೆಂಕಿಯ ಕೆನ್ನಾಲಿಗೆಗೆ ತುತ್ತಾಗಿವೆ. ಕಳೆದ ಬುಧವಾರ ಸಿದ್ದಾಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಅವರೆಗುಂದ ರಕ್ಷಿತಾರಣ್ಯ ಪ್ರದೇಶದಲ್ಲಿ ಕಾಳ್ಗಿಚ್ಚು ಆವರಿಸಿ ನಷ್ಟ ಸಂಭವಿಸಿದೆ. ಇದರಿಂದ ಅಲ್ಲಿನ ನಿವಾಸಿಗಳಲ್ಲಿ ಆತಂಕ ಮನೆ ಮಾಡಿದೆ.

ಗುರುವಾರ ಕುಶಾಲನಗರ ವ್ಯಾಪ್ತಿಯ ಅತ್ತೂರು ಅರಣ್ಯ ಪ್ರದೇಶಕ್ಕೂ ಬೆಂಕಿ ಬಿದ್ದಿದೆ. ನಂಜರಾಯಪಟ್ಟಣ ಅರಣ್ಯ ವ್ಯಾಪ್ತಿಯಲ್ಲಿಯೂ ಒಣಗಿದ ಬಿದಿರಿನ ಮೆಳೆಗಳು ಸುಟ್ಟು ಭಸ್ಮವಾಗಿವೆ. ಜಿಲ್ಲೆಯ ಗಡಿ ಪ್ರದೇಶಗಳಾದ ಸಿದ್ದಾಪುರ, ಪಾಲಿಬೆಟ್ಟ, ಮಾಲ್ದಾರೆ, ನಂಜರಾಯಪಟ್ಟಣ, ವಾಲ್ನೂರು- ತ್ಯಾಗತ್ತೂರು ಮುಂತಾದ ಗ್ರಾ.ಪಂ ವ್ಯಾಪ್ತಿಗಳು ಅರಣ್ಯ ಪ್ರದೇಶಗಳಿಂದ ಅವರಿಸಿದೆ. ಬೇಸಿಗೆ ಕಾಲ ಪ್ರಾರಂಭವಾಗುತ್ತಿದಂತೆ ಈ ವ್ಯಾಪ್ತಿಯ ವಿವಿಧ ಭಾಗಗಳು ಕಾಳ್ಗಿಚ್ಚಿಗೆ ಅಹಾತಿಯಾಗುವುದು ಸರ್ವೇ ಸಾಮಾನ್ಯ. ಕಳೆದ ವರ್ಷ ಮಾಲ್ದಾರೆ ಗ್ರಾ.ಪಂ ವ್ಯಾಪ್ತಿಯ ಅರಣ್ಯ ಪ್ರದೇಶಕ್ಕೆ ಬಿದ್ದ ಬೆಂಕಿಯ ಕಿಡಿ ಬಹುತೇಕ ಕಾಡನ್ನು ಸುಟ್ಟು ಬೂದಿ ಮಾಡಿತ್ತು.

ಬೆಂಕಿ ಬೀಳಲು ಕಾಡಿನಲ್ಲಿ ಒಣಗಿದ ಬಿದಿರಿನ ಮೆಳೆಗಳು ಪ್ರಮುಖ ಕಾರಣ ಎನ್ನಲಾಗುತ್ತದೆ. ಬಿದಿರಿನ ಮೆಳೆಗಳು ಯಥೇಚ್ಛವಾಗಿ ಹರಡಿದ್ದು, ಅಗ್ನಿಯನ್ನು ಆಹ್ವಾನಿಸುವಂತೆ ಇವೆ. ಬೆಂಕಿ ಬೀಳದಂತೆ ತಡೆಯುವ ಸಲುವಾಗಿ ಅರಣ್ಯ ಇಲಾಖೆ ವತಿಯಿಂದ ಕಾಡ್ಗಿಚ್ಚು ನಿಯಂತ್ರಣ ಪಡೆ (ಫಯರ್ ವಾಚರ್ಸ್‌) ಕಾರ್ಯ ನಿರ್ವಹಿಸುತ್ತಿತ್ತು. ಕಾಲಾಂತರದಲ್ಲಿ ಈ ಹುದ್ದೆ ಇಲ್ಲದಾಗಿದೆ. ಈಗ ಅರಣ್ಯ ಇಲಾಖೆಯಲ್ಲಿ ಬಹಳಷ್ಟು ನೌಕರರ ಕೊರತೆಯಿದೆ. ಇಂತಹ ಸಂದಿಗ್ಧ ಪರಿಸ್ಥಿತಿ ನಡವೆ ಸಮಗ್ರ ಅರಣ್ಯ ಪ್ರದೇಶದ ನಿರ್ವಹಣೆ ಅಸಾಧ್ಯ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. 

ಅರಣ್ಯದೊಳಗೆ ಕಾಳ್ಗಿಚ್ಚನ್ನು ನಿಯಂತ್ರಿಸಲು ಮತ್ತು ಕಾಡಿನ ನಿರ್ವಹಣೆಗೆ ತಾತ್ಕಾಲಿಕವಾಗಿ ದಿನಗೂಲಿ ನೌಕರರನ್ನು ನೇಮಿಸಲು ಇಲಾಖೆ ಮುಂದಾಗಿತ್ತು. ಆದರೆ ಇಂತಹ ನೌಕರರಿಗೆ ಸರ್ಕಾರ ನೀಡುವ ಕನಿಷ್ಠ ವೇತನ ಮತ್ತು ಇತರೆ ಸೌಲಭ್ಯಗಳು ಸಿಗದ ಕಾರಣ ಸುಧಾರಣೆ ತರುವುದು ದೂರದ ಮಾತು ಎಂಬುದು ಅರಣ್ಯಾಧಿಕಾರಿಗಳ ನೋವಿನ ನುಡಿ.

ಕಾಫಿ ಕೊಯ್ಲು, ಕರಿಮೆಣಸು ಕೊಯ್ಲು ಮಾಡುವ ದಿನಗೂಲಿ ನೌಕರರಿಗೆ ರೂ.500ರಿಂದ ರೂ. 900ರವರೆಗೆ ಕೂಲಿ ಸಿಗುತ್ತದೆ. ಆದರೆ ಅರಣ್ಯ ಇಲಾಖೆ ತಾತ್ಕಾಲಿಕ ನೌಕರರ ಹುದ್ದೆಗೆ ಪ್ರತಿದಿನ ರೂ.170ವೇತನ ನೀಡುವಂತೆ ಪ್ರಸ್ತಾವನೆ ಸಲ್ಲಿಸಿದ್ದು, ಇಷ್ಟು ಹಣಕ್ಕೆ ದಿನಗೂಲಿ ನೌಕರರು ಬರುವುದು ಅಸಾಧ್ಯ.

ಅರಣ್ಯ ಪ್ರದೇಶದ ಅಂಚಿನಲ್ಲಿ ಮತ್ತು ಹಾಡಿಗಳಲ್ಲಿ ಕಾಲಾಂತರಗಳಿಂದ ವಾಸಿಸುತ್ತಿರುವವರು ಈ ಬಗ್ಗೆ ಎಚ್ಚರ ಮತ್ತು ಕಳಕಳಿ ವಹಿಸಿರುವುದರಿಂದ ಅಲ್ಪ ಪ್ರಮಾಣದಲ್ಲಿ ಕಾಳ್ಗಿಚ್ಚನ್ನು ತಡೆಯುವಲ್ಲಿ ಸಹಕಾರಿಯಾಗಿದೆ. ದಿನದ ಯಾವುದೇ ಸಂದರ್ಭದಲ್ಲಿ ಕಾಳ್ಗಿಚ್ಚನ್ನು ಹತೋಟಿಗೆ ತರಲು ನೆರವಾಗಬಲ್ಲ ಸಹಾಯವಾಣಿ ಸಂಖ್ಯೆ ಸ್ಥಾಪಿಸುವುದು, ಅವಶ್ಯಕ.  ಬೆಂಕಿ ನಂದಿಸಲು ನೂತನ ಸಲಕರಣೆ ಒದಗಿಸುವ ಕಾರ್ಯವನ್ನು ಸರ್ಕಾರ ತುರ್ತಾಗಿ ಮಾಡಬೇಕಾಗಿದೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT