ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವಲಿನವರ ಕಥೆ

Last Updated 29 ಮೇ 2012, 19:30 IST
ಅಕ್ಷರ ಗಾತ್ರ

ರಾತ್ರಿಲ್ಲಾ ಕಣ್ಣಿಗೆ ಎಣ್ಣೆಬಿಟ್ಟು ಕನಸು ಹೆಣೆಯುವ ಖಾಸಗಿ ಭದ್ರತಾ ಸಿಬ್ಬಂದಿಯದ್ದು ಹೋರಾಟದ ಬದುಕು. ಮನೆಯ ಒಡೆಯನಿಗೆ ಸಲಾಂ ಹೊಡೆಯುತ್ತಲೇ ಅವರ ಕಾರು ತೊಳೆಯಬೇಕು. ನೀಳ ರಾತ್ರಿಯ ನೀಲಿ ಆಗಸದಲ್ಲಿ ಚುಕ್ಕಿ ಎಣಿಸುತ್ತ, ತಿಂಗಳ ಕೊನೆಯಲ್ಲಿ ಸಿಗುವ ನೋಟುಗಳಲ್ಲಿ ಎರಡು ಹೆಚ್ಚು ಸಿಕ್ಕರೆ ಮಗಳಿಗೆ ಒಂದು ಜತೆ ಬಟ್ಟೆ, ಮಡದಿಗೊಂದಿಷ್ಟು ಹೂವು ಕೊಳ್ಳಬಹುದು ಎಂದು ಲೆಕ್ಕ ಹಾಕುತ್ತ ಕಾಲ ತಳ್ಳಬೇಕು.

ಕ್ರಾಂಕೀಟ್ ನಗರಿಯಲ್ಲಿ ದಿನವೊಂದಕ್ಕೆ ಎರಡರಂತೆ ತಲೆ ಎತ್ತುವ ಐಷಾರಾಮಿ ಕಟ್ಟಡಗಳು, ಆಕರ್ಷಕ ಅಪಾರ್ಟ್‌ಮೆಂಟ್‌ಗಳು, ಅಪ್ಪನ ಕಿಸೆಯಂತಿರುವ ಎಟಿಎಂ ಕೇಂದ್ರಗಳು, ಅಂದ ನಗರಿಯ ಚಂದ ಹೆಚ್ಚಿಸುವ ಉದ್ಯಾನಗಳು ಎಲ್ಲವೂ ಇವರ ತೆಕ್ಕೆಯಲ್ಲಿಯೇ ಭದ್ರವಾಗಿರುತ್ತವೆ.

ನೂತನ ಬಡಾವಣೆ, ಅಲ್ಲಿ ನಿರ್ಮಾಣ ಹಂತದಲ್ಲಿರುವ ಮನೆಗಳು, ದೊಡ್ಡ ಕಳಸ ಹೊತ್ತ ದೇಗುಲಗಳು, ಭವಿಷ್ಯಕ್ಕೆ ಮುನ್ನುಡಿಯಂತಿರುವ ಶಾಲೆಗಳು, ಹಣದ ಥೈಲಿಗಳಿಂತಿರುವ ಬ್ಯಾಂಕುಗಳು, ಚಿನ್ನಾಭರಣ ಮಳಿಗೆಗಳು ಎಲ್ಲವನ್ನು ಕಣ್ಣರೆಪ್ಪೆಯಲ್ಲಿ ಕಾಪಿಡುವ ಇವರ ಜೀವನ ಮಾತ್ರ ಡೋಲಾಯಮಾನ.

ದೂರದ ರಾಜಸ್ತಾನ, ನೇಪಾಳ, ಮಂಗಳೂರು, ಹುಬ್ಬಳ್ಳಿ, ದಾವಣಗೆರೆ, ವಿಜಾಪುರ ಸೇರಿದಂತೆ ವಿವಿಧ ಪ್ರದೇಶಗಳಿಂದ ತುತ್ತಿನ ಚೀಲ ತುಂಬುವ ಸಲುವಾಗಿ ಮಾಯಾನಗರಿಗೆ ಬರುತ್ತಾರೆ. ಜೋಪಡಿ ಏಕೆ, ಅಲ್ಲೇ ಅಪಾರ್ಟ್‌ಮೆಂಟ್‌ನ ವರಾಂಡದಲ್ಲಿ ಹಾಗೇ ಮಲಗಿ, ನೀರು ಕುಡಿದುಕೊಂಡಾದರೂ ಸರಿ, ದೂರದ್ಲ್ಲಲಿ ಓದುತ್ತಿರುವ ಮಗನಿಗೆ ನೆರವಾಗುವ ಅದೆಷ್ಟೋ ಮಂದಿ ತಂದೆಯರಿದ್ದಾರೆ.

ಏರುತ್ತಿರುವ ಸಾಮಾನ್ಯ ವಸ್ತುಗಳ ಬೆಲೆ ಮಧ್ಯೆಯೂ ಅರೆ ಬರೆ ಇಂಗ್ಲಿಷ್, ಹಿಂದಿ ಮಿಶ್ರಿತ ಭಾಷೆಯಲ್ಲಿ ಮಾತನಾಡುವ ಇವರಿಗೆ ಗಾಡಿ ಬದಿಯಲ್ಲಿ ದೊರೆಯುವ ಊಟವೇ ಮೃಷ್ಟಾನ್ನ. ಉರಿ ಬಿಸಿಲು, ಸುರಿಯುವ ಮಳೆ, ಮೈ ನಡಗಿಸುವ ಚಳಿ ಯಾವುದೂ ಲೆಕ್ಕಕ್ಕಿಲ್ಲ.

ಎಸಿ ಕಾರಿನಲ್ಲಿ ಕುಳಿತು ಗತ್ತಿನಿಂದ ಕಾರು ಓಡಿಸುವ ಮಾಲೀಕನ ಮನೆ ಕಾಯುವ ಇವರ ಸಲಾಂನಲ್ಲಿ ನಿಯತ್ತಿರಲೇಬೇಕು. ಮನೆ ಮಂದಿಯ ಜವಾಬ್ದಾರಿ ತನ್ನ ಬಗಲಲ್ಲಿ ಹೊರುವ ಈ ಕಾಯಕ ಯೋಗಿಗೆ ತಿಂಗಳಿಗೆ ಸಿಗುವುದು ನಾಲ್ಕುವರೆ ಸಾವಿರ ರೂಪಾಯಿ  ಮಾತ್ರ.ಹೊರಗುತ್ತಿಗೆ ಕಾರ್ಮಿಕರಾಗಿಯೇ ಇವರನ್ನು ನೇಮಿಸಿಕೊಂಡಿರುವುದರಿಂದ ದಿನಕ್ಕೆ 150 ರೂಪಾಯಿ ಕೂಲಿ ನೀಡಲಾಗುತ್ತಿದೆ. 

ಆದರೆ ವೇತನ ತಾರತಮ್ಯ, ಸಾಮಾಜಿಕ ಭದ್ರತೆ ಸೇರಿದಂತೆ ಖಾಸಗಿ ಭದ್ರತಾ ಕಾರ್ಮಿಕರ ಸಮಸ್ಯೆಗಳು ಸಾಕಷ್ಟಿವೆ. ಹೆಚ್ಚುತ್ತಿರುವ ಬೆಲೆ ಏರಿಕೆಯನ್ನು ಖಂಡಿಸಿ ವಿವಿಧ ಕಾರ್ಮಿಕ ಸಂಘಟನೆಗಳು ಪ್ರತಿಭಟನೆ ನಡೆಸುತ್ತವೆ. ಆದರೆ ಆ ಸಂಘಟನೆಯಲ್ಲಿ ಇವರು ಕಾಣಿಸಿಕೊಳ್ಳುವುದು ಅಪರೂಪವೇ.

ಪೊಲೀಸ್ ಪೇದೆಯಂತೆಯೇ ಸಮವಸ್ತ್ರ ತೊಟ್ಟು ಮನೆ ಕಾಯುವ ಈ ಮಂದಿಗೆ ಸರ್ಕಾರವಾಗಲಿ, ಇವರದ್ದೇ ಸಂಘಟನೆಯಾಗಲಿ ಸಹಾಯಕ್ಕೆ ಬಂದಿದ್ದಿಲ್ಲ. ಸಂಘಟನೆಯಿದ್ದರೂ, ಅದು ಖಾಸಗಿ ಭದ್ರತಾ ಕಾರ್ಮಿಕರ ಸಮಸ್ಯೆಗಳ ಕುರಿತು ಆಸಕ್ತಿ ತೋರಿದ್ದು  ತೀರಾ ಕಡಿಮೆ. ಹಾಗಾಗಿ ಅಸಂಘಟಿತ ಕಾರ್ಮಿಕ ವಲಯದಲ್ಲಿಯೇ ಇವರು ಅನಾಯಾಸವಾಗಿ ಸೇರ್ಪಡೆಗೊಂಡಿದ್ದಾರೆ.

ರಾತ್ರಿ ಹೊತ್ತಿನಲ್ಲೂ ಹಣದ ಕೇಂದ್ರಗಳನ್ನು ಕಾಯುವ ಸಂದರ್ಭದಲ್ಲಿ ಯಾವುದೇ ಭದ್ರತೆಯಿಲ್ಲದೇ ಪಹರೆ ನಿರ್ವಹಿಸಬೇಕು. ಜೀವ ವಿಮೆ, ಆರೋಗ್ಯ ವಿಮೆಗಳಿಲ್ಲದೆ ಬದುಕಿನ ಜಟಕಾಬಂಡಿ ನೂಕುತ್ತಿರುವ ಭದ್ರತಾ ಸಿಬ್ಬಂದಿಯ ಜೀವನ ಮಾತ್ರ ಭದ್ರತೆಯಿಂದ ದೂರ. ಒಂದು ಅಂದಾಜಿನ ಪ್ರಕಾರ ಆರು ಸಾವಿರಕ್ಕೂ ಹೆಚ್ಚು ಮಂದಿ ನಗರದಲ್ಲಿ ಖಾಸಗಿ ಭದ್ರತಾ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

`ನಮ್ಮೂರಾಗ ತುಂಡು ನೆಲಾ ಐತ್ರಿ, ಆದ್ರ, ಅದರಾಗ ಉಳುಮೆ ಮಾಡಾಕ ಬರಾಂಗಿಲ್ರಿ. ಅದು ಪಾಳು ಬಿದ್ದ ನೆಲಾರ‌್ರಿ. ಹೀಂಗಾಗಿ ಬದುಕ ನಡೆಸೋದು ಕಷ್ಟ ಆಗೈತ್ರಿ. ನನಗಿರೋಳು ಒಬ್ಬಳ ಮಗಳ್ರಿ, ಅವಳ ಲಗ್ನ ಮಾಡಾಕ ದುಡ್ಡು ಬೇಕ್ರಿ. ಆ ದುಡ್ಡು ಹೊಂಚಾಕ ಇಲ್ಲಿ ವಾಚ್‌ಮನ್ ಆಗಿ ಸೇರಿಕಂಡೇನ್ರಿ.

ಇಲ್ಲಿ ಬರೋ ದುಡ್ಡು ಅಂತಾ ದೊಡ್ಡದೆನಲ್ಲ ಬಿಡ್ರಿ. ಉಣ್ಣಾಕ, ತಿನ್ನಾಕ ಸಾಕಾಗತೈತ್ರಿ~ ಎಂದು ವ್ಯೆಲೇಕ್ ಅಪಾರ್ಟ್‌ಮೆಂಟ್‌ನ ಖಾಸಗಿ ಭದ್ರತಾ ಸಿಬ್ಬಂದಿ ಬಾಳಪ್ಪ ಹೇಳುತ್ತಾರೆ.
`ಕೇವಲ ಪಹರೆ ಕೆಲಸ ಮಾತ್ರವಲ್ಲ.

ಈ ಅಪಾರ್ಟ್ ಮಂದಿಯ ಬಟ್ಟೆಯನ್ನು ಇಸ್ತ್ರಿ ಹಾಕಿಸುವುದರಿಂದ ಹಿಡಿದು ಮಕ್ಕಳನ್ನು ಸ್ಕೂಲಿನಿಂದ ಕರೆತರುವ, ಕಾರು ತೊಳೆವ, ತರಕಾರಿ ತರುವ ಕೆಲಸವನ್ನು ಮಾಡುತ್ತೇನೆ. ಆದರೆ ವೇತನ ಮಾತ್ರ ಏರಿಕೆಯಾಗಿಲ್ಲ. ಬಹಳ ವರ್ಷಗಳಿಂದ ಬದುಕಿನ ಬಂಡಿ ಹೀಗೇ ಸಾಗುತ್ತಿದೆ~ ಎಂಬ ನೋವು ಮಯೂರ ಅಪಾರ್ಟ್‌ಮೆಂಟ್‌ನ  ಭದ್ರತಾ ಸಿಬ್ಬಂದಿ ರಾಂಜಿ ಅವರದ್ದು.

ಕಂಗಳಲ್ಲಿ ಸಾವಿರ ಕನಸಿನ ಬಿಂಬ ಹೊತ್ತುಕೊಂಡೇ ಅತ್ತ ಇತ್ತ ಗಸ್ತು ತಿರುಗುತ್ತಾರೆ. ಅಸಂಘಟಿತ ಕಾರ್ಮಿಕರ ವಲಯದಲ್ಲಿದ್ದುಕೊಂಡೇ ಸಮಸ್ಯೆಗಳ ಸರಮಾಲೆಯ ಬಗ್ಗೆ ಮಾತನಾಡಿದರೂ, ತೂಕಡಿಸುತ್ತಿರುವ ಇಡೀ ವ್ಯವಸ್ಥೆಯ ಮುಂದೆ ದನಿ ಅಡಗಿಸಿ ತಲೆ ತಗ್ಗಿಸಿ ಕುಳಿತಿದ್ದಾರೆ.

ಅರ್ಹತೆ ಬೇಕಿಲ್ಲ
`ಬೆಂಗಳೂರು ಸೆಕ್ಯೂರಿಟಿ ಎಂಪ್ಲಾಯಿಸ್ ಯೂನಿಯನ್ ಅಧ್ಯಕ್ಷ ರಾಜನ್ ಪ್ರಕಾರ `ನಮ್ಮದೇ ಯೂನಿಯನ್‌ನಲ್ಲಿ ಇಪ್ಪತ್ತೆರಡು ಸಾವಿರಕ್ಕೂ ಹೆಚ್ಚು ಕಾರ್ಮಿಕರಿದ್ದಾರೆ. ಅವರನ್ನು ನೇಮಿಸಿಕೊಳ್ಳುವಾಗ ಇಂತಹುದ್ದೇ ಅರ್ಹತೆಯಿರಬೇಕು ಎಂಬ ಕಡ್ಡಾಯವನ್ನು ಎಲ್ಲ ಏಜೆನ್ಸಿಗಳು ಪಾಲಿಸುವುದಿಲ್ಲ~.

`ಸೆಲಿಬ್ರಿಟಿ ಹಾಗೂ ರಾಜಕಾರಣಿಗಳ ಭದ್ರತಾ ಅಧಿಕಾರಿಗಳಾಗಬೇಕಾದರೆ ಉನ್ನತ ವಿದ್ಯಾಭ್ಯಾಸ ಪಡೆದಿರಬೇಕು. ಮಿಲಿಟರಿಯಲ್ಲಿ ಕೆಲಸ ಮಾಡಿದ ಹಿನ್ನೆಲೆಯಿರಬೇಕು. ಆದರೆ ಒಬ್ಬ ವಾಚ್‌ಮನ್ ಆಗಿ ಕೆಲಸ ಗಿಟ್ಟಿಸಿಕೊಳ್ಳಲು ಉತ್ತಮ ಆರೋಗ್ಯ ಮತ್ತು ದೇಹದಾರ್ಢ್ಯ ಹೊಂದಿದ್ದರೆ ಸಾಕು~ ಎನ್ನುತ್ತಾರೆ.

                                     `ಮನೆಯವರಂತೆ...~
____________________________________________________
ಮನೆಯ ಸೆಕ್ಯೂರಿಟಿಯವನನ್ನು ನಾನೆಂದೂ ಹೊರಗಿನವರಂತೆ ನಡೆಸಿಕೊಂಡಿಲ್ಲ. ನಮ್ಮ ಮನೆ ಮಂದಿಯಂತೆ ಅವರನ್ನೂ ಪ್ರೀತಿಯಿಂದ ಮಾತನಾಡಿಸುತ್ತೇನೆ. ಅವರು ನಮಗಾಗಿ ತಮ್ಮ ಜೀವವನ್ನೇ ಪಣಕ್ಕಿಟ್ಟಿರುವಾಗ ನಾವು ಅಷ್ಟೂ ಕೇರ್ ಕೊಡದಿದ್ದರೆ ಹೇಗೆ.

ಸೆಕ್ಯೂರಿಟಿಗಳಿಗೆ ಯಾವುದೇ ಬೆಲೆ ನೀಡದೆ ಅವರನ್ನು ತುಚ್ಛವಾಗಿ ಕಾಣುವುದು ತಪ್ಪು. ನನ್ನ ಪ್ರಕಾರ ದೇಶ ಕಾಯುವ ಯೋಧರಿಗೂ ಮನೆ ಕಾಯುವ ಈ ಕಾವಲುಗಾರರಿಗೂ ಹೆಚ್ಚು ವ್ಯತ್ಯಾಸವಿಲ್ಲ. ಬೆಂಗಳೂರಿನಂತಹ ನಗರದಲ್ಲಿ ಇಷ್ಟೆಲ್ಲಾ ಅಪರಾಧಗಳು ಪ್ರತಿನಿತ್ಯ ನಡೆಯುವಾಗ ನಮ್ಮ ರಕ್ಷಣೆಗಾಗಿ ಅವರು ಪ್ರಾಣವನ್ನೇ ಲೆಕ್ಕಿಸದೆ ಕಾಯುತ್ತಾರೆ; ಅದೂ ಸಿಗುವ ಕಡಿಮೆ ಸಂಬಳಕ್ಕಾಗಿ. ಏನೇ ಹೇಳಿ, ಸೆಕ್ಯೂರಿಟಿ ತುಂಬಾ ರಿಸ್ಕೀ ಜಾಬ್.
 -ರಾಗಿಣಿ
                                        `ತಾತ್ಸಾರ ಸಲ್ಲ~
____________________________________________________
ಸೆಕ್ಯೂರಿಟಿ ಒಂದು ಕಾಯಕ. ಅದನ್ನೇ ವೃತ್ತಿಯಾಗಿ ಸ್ವೀಕರಿಸಿ ಬದುಕು ಕಂಡುಕೊಳ್ಳುವವರ ಬಗ್ಗೆ ತಾತ್ಸಾರ ಭಾವ ಸಲ್ಲದು. ದೈಹಿಕವಾಗಿ ಬಲಿಷ್ಠರಾದವರನ್ನು ನೇಮಿಸುವುದು ಸೂಕ್ತ. ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಸಾಧ್ಯವಾಗದ, 50 ವರ್ಷ ಮೀರಿದ ಹಿರಿಯರನ್ನು ಆ ಕುರ್ಚಿಯಲ್ಲಿ ಕೂರಿಸುವುದು ತಪ್ಪು.

ಅವರನ್ನು ಕೀಳಾಗಿ ಕಾಣುತ್ತಾ, ಕಡಿಮೆ ಸಂಬಳ ನೀಡುವುದರ ಬದಲಾಗಿ ಪ್ರೀತಿಯಿಂದ ಮಾತನಾಡಿಸಿದರೆ ಅವರಿಗೂ ತಮ್ಮ ಮನೆ ಎಂಬ ಭಾವ ಮೂಡಿ ಹೆಚ್ಚು ಪ್ರೀತಿ ತೋರುತ್ತಾರೆ. ಗೌರವದಿಂದ ಮಾತನಾಡಿ ಮುಗುಳ್ನಗೆ ಚೆಲ್ಲಿದರೂ ಸಾಕು, ಅವರು ಖುಷಿಪಡುತ್ತಾರೆ. 
 -ಶ್ರೀನಗರ ಕಿಟ್ಟಿ

                                   `ಗೌರವ ಇರಲಿ~
____________________________________________________
ಮನೆಗೆ ಸೆಕ್ಯೂರಿಟಿ ಇದ್ದರೆ ರಿಲ್ಯಾಕ್ಸಾಗಿ ಇರಬಹುದು. ಸೆಕ್ಯುರಿಟಿಯವರಿಗೆ ಗೌರವ ಕೊಡುವುದು ನಮ್ಮ ಕರ್ತವ್ಯ. ಪ್ರೀತಿ ಇದ್ದಾಗಲೇ ಸಂಬಂಧಗಳು ಗಟ್ಟಿ ಆಗುವುದು. ನಾವು ಸೆಕ್ಯೂರಿಟಿ ಅನ್ನೋ ಸ್ಥಾನಕ್ಕಲ್ಲದೇ ಇದ್ದರೂ ಆ ವ್ಯಕ್ತಿಗೆ ಗೌರವ ಕೊಡುವ ಮನಸ್ಥಿತಿ ಹೊಂದಿರಬೇಕು.

ನಮ್ಮ ಮನೆ ಸೆಕ್ಯೂರಿಟಿಯನ್ನು ನಾನು `ಅಣ್ಣಾ~ ಅಂತಲೇ ಕರೆಯುವುದು. ಹಬ್ಬ ಹರಿದಿನಗಳಲ್ಲಿ ಅವರೂ ನಮ್ಮ ಮನೆಯವರಂತೆಯೇ ಎಲ್ಲರ ಜೊತೆ ಬೆರೆಯುತ್ತಾರೆ. ಅವರ ವೈಯಕ್ತಿಕ ಸಮಸ್ಯೆಗಳನ್ನೂ ನಮ್ಮ ಜತೆ ಹಂಚಿಕೊಳ್ಳುತ್ತಾರೆ. ನಾವೂ ಕೈಲಾದ ಸಹಾಯ ಮಾಡುತ್ತೇವೆ. ಎಷ್ಟೋ ಬಾರಿ ಅವರ ಆಶೀರ್ವಾದ ಬೇಡಿದ್ದೂ ಇದೆ.
 -ಯಶ್
 

                                         `ಮನುಷ್ಯರೇ ಅಲ್ವಾ...~
____________________________________________________
ನಮ್ಮ ಮನೇಲಿ ಒಬ್ಬ ಹುಡುಗ ಇದ್ದಾನೆ. ಅವನಿಗೆ ಮನೆಯಲ್ಲೇ ಒಂದು ರೂಮು ಕೊಟ್ಟು ನೋಡಿಕೊಳ್ಳುತ್ತಾ ಇದ್ದೇವೆ. ಶೂಟಿಂಗ್ ಹೊತ್ತಲ್ಲಿ ನಾನು ಹೊರಗಡೆ ಹೋಗಿದ್ದಾಗ ಮನೆಗೆ ಬಂದವರನ್ನು ಮಾತಾಡಿಸಿ ವಾಪಸ್ ಕಳಿಸುವ ಜವಾಬ್ದಾರಿಯೂ ಅವನದ್ದೇ.

ಸೆಕ್ಯೂರಿಟಿ ಸಿಬ್ಬಂದಿಯೂ ಮನುಷ್ಯರೇ ಅಲ್ವಾ... ಅವರನ್ನೂ ಚೆನ್ನಾಗಿ ನೋಡಿಕೊಳ್ಳುವುದು ತುಂಬಾ ಮುಖ್ಯ. 
 -ಗಣೇಶ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT