ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವಲ್ ಭೂಮಿ ವಾಪಸಿಗೆ ಒತ್ತಾಯಿಸಿ ಪ್ರತಿಭಟನೆ

ಎಲ್ಲೆಲ್ಲೂ ಜನವೋ ಜನ...ಕಾಲ್ನಡಿಗೆ ಜಾಥಾಕ್ಕೆ ಶಾಸಕರ ಸಾಥ್
Last Updated 4 ಸೆಪ್ಟೆಂಬರ್ 2013, 5:12 IST
ಅಕ್ಷರ ಗಾತ್ರ

ಚಳ್ಳಕೆರೆ: ತಾಲ್ಲೂಕಿನ ಅಮೃತ ಮಹಲ್, ಕುದಾಪುರ, ವರವು ಕಾವಲ್‌ನ ಭೂಮಿಯನ್ನು ದೇಶದ ಪ್ರತಿಷ್ಠಿತ ಸಂಸ್ಥೆಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೀಡಿರುವ ಕ್ರಮವನ್ನು ಖಂಡಿಸಿ ಮಂಗಳವಾರ ಕಾವಲ್ ವ್ಯಾಪ್ತಿಯ ಗ್ರಾಮಸ್ಥರು ಬೃಹತ್ ಸಂಖ್ಯೆಯಲ್ಲಿ ದೊಡ್ಡ ಉಳ್ಳಾರ್ತಿ ಗ್ರಾಮದಿಂದ ಚಳ್ಳಕೆರೆ ತಾಲ್ಲೂಕು ಕಚೇರಿಯವರೆಗೆ ಕಾಲ್ನಡಿಗೆ ಜಾಥಾ ನಡೆಸಿದರು.

ಪರಿಶಿಷ್ಟ ಜಾತಿ, ಪಂಗಡ ಹಾಗೂ ಬುಡಕಟ್ಟು ಸಮುದಾಯದವರೇ ಹೆಚ್ಚಾಗಿ ವಾಸಿಸುವ ಈ ಪ್ರದೇಶದಲ್ಲಿ ತಲತಲಾಂತರದಿಂದ ಪಶು ಸಂಗೋಪನೆ ಮಾಡಿಕೊಂಡು ಜೀವನ ಸಾಗಿಸುವ ಕುಟುಂಬಗಳಿಗೆ ಭೂಮಿ ಪರಭಾರೆಯಿಂದಾಗಿ ಬದುಕಿಗೆ ಪೆಟ್ಟು ಬಿದ್ದಂತಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಕಾವಲ್ ಪ್ರದೇಶದಲ್ಲಿ ವನ್ಯಜೀವಿಗಳು, ವೈವಿಧ್ಯಮಯ ಸಸ್ಯಗಳು, ಗಿಡಮೂಲಿಕೆಗಳು ನಾಶ ಆಗುತ್ತಿವೆ. ಸ್ಥಳೀಯರ ಬದುಕಿನೊಂದಿಗೆ ಹಾಸುಹೊಕ್ಕಾಗಿದ್ದ ಭೂಮಿಯಲ್ಲಿ ಪ್ರವೇಶ ಇಲ್ಲದಂತಾಗಿದೆ. ಅದರಿಂದಾಗಿ ಸ್ಥಳೀಯರು ಗುಳೇ ಹೋಗುವ ಪರಿಸ್ಥಿತಿ ನಿರ್ಮಾಣ ಆಗಿದೆ ಎಂದು ಪ್ರತಿಭಟನಾಕಾರರು ಗೋಳು ತೋಡಿಕೊಂಡರು.

ಜಿಲ್ಲಾಧಿಕಾರಿ ಅಮಾನತಿಗೆ ಆಗ್ರಹ: ಭೂಮಿ ಪರಭಾರೆ ಮಾಡುವ ಮುಂಚೆ ಅಂದಿನ ಜಿಲ್ಲಾಧಿಕಾರಿ ಆಮ್ಲಾನ್ ಆದಿತ್ಯ ಬಿಸ್ವಾಸ್ ಸ್ಥಳೀಯರಿಗೆ ಸುಳ್ಳು ಮಾಹಿತಿ ನೀಡಿದ್ದಾರೆ. ಸ್ಥಳೀಯ ಗ್ರಾಮ ಪಂಚಾಯ್ತಿಯಿಂದ ಯಾವುದೇ ಅನುಮತಿ ಪಡೆಯದೇ ಸಾವಿರಾರು ಎಕರೆ ಭೂಮಿಯನ್ನು ಹಸ್ತಾಂತರಿಸುವ ಮೂಲಕ ಅರಣ್ಯ ಕಾಯ್ದೆಯನ್ನು ಉಲ್ಲಂಘಿಸಲಾಗಿದೆ. ಕೂಡಲೇ ಜಿಲ್ಲಾಧಿಕಾರಿ ಬಿಸ್ವಾಸ್ ಅವರನ್ನು ಅಮಾನತು ಮಾಡಬೇಕು ಎಂದು ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಪ್ರತಿಭಟನಾಕಾರರು ಮನವಿ ಸಲ್ಲಿಸಿದರು.

ಸಂಸತ್ ಸದಸ್ಯ ಜನಾರ್ದನ ಸ್ವಾಮಿ ವಿರುದ್ದ ಆಕ್ರೋಶ: ದೊಡ್ಡ ಉಳ್ಳಾರ್ತಿ ಗ್ರಾಮದಿಂದ ಸಾವಿರಾರು ಜನರು ಕಾಲ್ನಡಿಗೆ ಮೂಲಕ ತಾಲ್ಲೂಕು ಕಚೇರಿಗೆ ಆಗಮಿಸುವ ಸಂದರ್ಭದಲ್ಲಿ ನಾವು ಈ ಸ್ಥಿತಿಗೆ ಬರಲು ಚಿತ್ರದುರ್ಗ ಸಂಸತ್ ಸದಸ್ಯ ಜನಾರ್ದನ ಸ್ವಾಮಿ ಅವರೇ ನೇರ ಕಾರಣ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸುತ್ತಿರುವುದು ಕಂಡುಬಂದಿತು.

ಕಾಲ್ನಡಿಗೆಯಲ್ಲಿ ಜನರೊಂದಿಗೆ ಶಾಸಕರ ಸಾಥ್: ದೊಡ್ಡ ಉಳ್ಳಾರ್ತಿಯಿಂದ ಪ್ರಾರಂಭವಾದ ಕಾಲ್ನಡಿಗೆ ಜಾಥಾದಲ್ಲಿ ಮೊಳಕಾಲ್ಮುರು ಶಾಸಕ ನೇರ‌್ಲಗುಂಟೆ ತಿಪ್ಪೇಸ್ವಾಮಿ ಜಾಥಾಕ್ಕೆ ಬೆಂಬಲ ಸೂಚಿಸಿ ಜನರೊಂದಿಗೆ ಕಾಲ್ನಡಿಗೆಯಲ್ಲಿ ತಾಲ್ಲೂಕು ಕಚೇರಿವರೆಗೂ ಬಂದರು. ಇದಕ್ಕೂ ಮುನ್ನ ನೆಹರೂ ವೃತ್ತದಲ್ಲಿ ನೆಹರು ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.

ಪ್ರತಿಭಟನೆಯಲ್ಲಿ ಅಮೃತ ಮಹಲ್ ಕಾವಲ್ ಹೋರಾಟ ಸಮಿತಿ ಅಧ್ಯಕ್ಷ ದೊಡ್ಡ ಉಳ್ಳಾರ್ತಿ ಕರಿಯಣ್ಣ, ಕಾರ್ಯದರ್ಶಿ ಹನುಮಂತರಾಯಪ್ಪ, ಮೊಳಕಾಲ್ಮೂರು ಶಾಸಕ ನೇರ‌್ಲಗುಂಟೆ ತಿಪ್ಪೇಸ್ವಾಮಿ, ಜಿಲ್ಲಾ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಎಂ. ಜಯಣ್ಣ, ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಮೀಸೆ ಮಹಾಲಿಂಗಪ್ಪ, ಟಿ.ರವಿಕುಮಾರ್, ಹಾಲಿ ಉಪಾಧ್ಯಕ್ಷ ಎ.ಅನಿಲ್ ಕುಮಾರ್, ವರವು ಬೊಮ್ಮಯ್ಯ, ತಾಲ್ಲೂಕು ಪಂಚಾಯ್ತಿ ಸದಸ್ಯೆ ದ್ರಾಕ್ಷಾಯಣಮ್ಮ, ಭೂತಯ್ಯ, ರೆಡ್ಡಿಹಳ್ಳಿ ವೀರಣ್ಣ, ಸೋಮಗುದ್ದು ರಂಗಸ್ವಾಮಿ, ಪಿ.ಟಿ. ರಾಮಚಂದ್ರರೆಡ್ಡಿ, ದೊರೆ ಬೈಯ್ಯಣ್ಣ, ಕೋಡಿಹಟ್ಟಿ ಚಂದ್ರಣ್ಣ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT