ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವೇರದ ಬಂದ್: ಮಿಶ್ರ ಪ್ರತಿಕ್ರಿಯೆ

Last Updated 7 ಅಕ್ಟೋಬರ್ 2012, 9:35 IST
ಅಕ್ಷರ ಗಾತ್ರ

ಹುಬ್ಬಳ್ಳಿ: ತಮಿಳುನಾಡಿಗೆ ಕಾವೇರಿ ನೀರು ಹರಿಸಿರುವುದನ್ನು ವಿರೋಧಿಸಿ ಕನ್ನಡಪರ ಸಂಘಟನೆಗಳು ಶನಿವಾರ ಕರೆ ನೀಡಿದ್ದ `ಕರ್ನಾಟಕ ಬಂದ್~ಗೆ ನಗರದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಹುತೇಕ ವ್ಯಾಪಾರಿ ಸಂಸ್ಥೆಗಳು ಸ್ವಯಂಪ್ರೇರಿತವಾಗಿ ಮುಚ್ಚಿಕೊಂಡ್ದ್ದಿದವು. ವಾಹನ ಓಡಾಟ ಸರಾಗವಾಗಿತ್ತು. ಆದರೆ ಜನಸಂಚಾರ ವಿರಳವಾಗಿತ್ತು.

ಕಿತ್ತೂರು ಚೆನ್ನಮ್ಮ ವೃತ್ತ, ಕೊಪ್ಪಿಕರ ರಸ್ತೆ, ದುರ್ಗದಬೈಲ್, ರೈಲ್ವೆ ಸ್ಟೇಷನ್ ರಸ್ತೆ ಮುಂತಾದ ಪ್ರಮುಖ ಭಾಗಗಳಲ್ಲಿ ಅಂಗಡಿಮುಂಗಟ್ಟು ಮುಚ್ಚಿಕೊಂಡಿದ್ದವು. ಉಳಿದ ಕಡೆಗಳಲ್ಲಿ ಎಂದಿನಂತೆ ತೆರೆದುಕೊಂಡಿದ್ದವು. ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಹುಬ್ಬಳ್ಳಿ ವಕೀಲರ ಸಂಘದಿಂದ ಬೆಂಬಲ ಸೂಚಿಸಿದ್ದರಿಂದ ಕೋರ್ಟ್ ಕಲಾಪಗಳು ನಡೆಯಲಿಲ್ಲ. ಗ್ರಾಮೀಣ ಭಾಗಗಳಲ್ಲಿ ಇಡೀ ದಿನ ಬಸ್ ಸಂಚಾರ ಮಾಮೂಲಿನಂತೆ ಇತ್ತು.

ಕರವೇ ಕಾರ್ಯಕರ್ತರು ರೈಲು ನಿಲ್ದಾಣದಲ್ಲಿ ಬೆಳಿಗ್ಗೆ ಕೆಲ ಹೊತ್ತು ಮೀರಜ್- ಬಳ್ಳಾರಿ ಲಿಂಕ್ ಎಕ್ಸ್‌ಪ್ರೆಸ್ ರೈಲು ತಡೆದು ಪ್ರತಿಭಟನೆ ನಡೆಸಿದರು. ನಂತರ ಪ್ರಮುಖ ಬೀದಿಗಳಲ್ಲಿ ಬೈಕ್ ರ‌್ಯಾಲಿ ನಡೆಸಿದರು. ಎಚ್.ಡಿ. ಕುಮಾರಸ್ವಾಮಿ ಅಭಿಮಾನಿ ಬಳಗದ ಕಾರ್ಯಕರ್ತರು ಯುಪಿಎ ಸರ್ಕಾರದ ಅಣಕು ಶವಯಾತ್ರೆ ನಡೆಸಿದರು. ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ, ಮಾಜಿ ಸಚಿವರಾದ ಅಲ್ಕೋಡ ಹನುಮಂತಪ್ಪ, ಪಿ.ಸಿ. ಸಿದ್ಧನಗೌಡರ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಕನ್ನಡ ಕ್ರಾಂತಿ ದೀಪ, ಕರ್ನಾಟಕ ನವನಿರ್ಮಾಣ ವೇದಿಕೆ, ಕರ್ನಾಟಕ ಕನ್ನಡ ಸಂಘ, ಸಿದ್ಧಾರೂಢ ಸೇನಾ ಸಮಿತಿ, ಆಟೋ ಚಾಲಕ ಮತ್ತು ಮಾಲೀಕರ ಸಂಘ ಮತ್ತಿತರ ಸಂಘಟನೆಗಳು ಕಿತ್ತೂರು ಚೆನ್ನಮ್ಮ ವೃತ್ತದ ಬಳಿ ಪ್ರತಿಭಟನೆ ನಡೆಸಿ, ಟಯರ್‌ಗಳಿಗೆ ಬೆಂಕಿ ಹಚ್ಚಿ ರಾಜ್ಯ-ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದವು.

ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರಿಂದ ಹಳೆ ಬಸ್ ನಿಲ್ದಾಣದಿಂದ ಕೆಲ ಹೊತ್ತು ಬಸ್ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಮಾರ್ಕೆಟ್ ಪ್ರದೇಶದಲ್ಲಿ ಕೆಲವು ಅಂಗಡಿಗಳು ತೆರೆದುಕೊಂಡಿದ್ದವು. ಆದರೆ ಬೆರಳೆಣಿಕೆಯ ಗ್ರಾಹಕರು ಮಾತ್ರ ಇದ್ದರು. ಬ್ಯಾಂಕ್, ಸರ್ಕಾರಿ ಕಚೇರಿಗಳು ಎಂದಿನಂತೆ ಕರ್ತವ್ಯ ನಿರ್ವಹಿಸಿದವು.

ಹೆಚ್ಚಿನ ಔಷಧಿ ಅಂಗಡಿಗಳು ತೆರೆದುಕೊಂಡಿದ್ದವು. ಆದರೆ ಬಹುತೇಕ ಪೆಟ್ರೋಲ್ ಬಂಕ್‌ಗಳು ಮುಚ್ಚಿಕೊಂಡಿದ್ದವು. ಚಿತ್ರಮಂದಿರಗಳಲ್ಲಿ ಮೊದಲ ಎರಡು ಪ್ರದರ್ಶನಗಳನ್ನು ರದ್ದುಪಡಿಸಲಾಗಿತ್ತು.
ದುರ್ಗದಬೈಲ್ ಹೂವಿನ ಮಾರುಕಟ್ಟೆ ತೆರೆದುಕೊಂಡಿದ್ದರೂ ಗ್ರಾಹಕರಿಲ್ಲದೆ ಭಣಗುಟ್ಟುತ್ತಿತ್ತು. ಮಾರುಕಟ್ಟೆಗೆ ಶನಿವಾರ ಶೇಕಡಾ 20ರಷ್ಟು ಮಾತ್ರ ಹೂ ಬಂದಿದೆ. ಆದರೆ ಎಂದಿನಂತೆ ಗ್ರಾಹಕರಿಲ್ಲದೆ ವ್ಯಾಪಾರ ಇಲ್ಲ ಎಂದು ಹೂವಿನ ವ್ಯಾಪಾರಿ ಎಂ.ಜಿ. ಹತ್ತಾರ ತಿಳಿಸಿದರು.

ನಗರದ್ಲ್ಲೆಲೆಡೆ ಬಿಗಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿತ್ತು. ಯಾವುದೇ ಅಹಿತಕರ ಘಟನೆಗಳು ಸಂಭವಿಸಿಲ್ಲ. ಸಂಜೆ ವೇಳೆಗೆ ನಗರ ಎಂದಿನಂತಿತ್ತು.

ಒತ್ತಾಯಪೂರ್ವಕವಾಗಿ ಅಂಗಡಿ ಬಂದ್

ಧಾರವಾಡ: ತಮಿಳುನಾಡಿಗೆ ರಾಜ್ಯದ ಕೃಷ್ಣರಾಜ ಸಾಗರ ಜಲಾಶಯದಿಂದ ಕಾವೇರಿ ನದಿ ನೀರು ಹರಿಬಿಟ್ಟಿರುವುದನ್ನು ಖಂಡಿಸಿ ವಿವಿಧ ಸಂಘಟನೆಗಳು ಶನಿವಾರ ನೀಡಿದ ಕರ್ನಾಟಕ ಬಂದ್ ಕರೆಗೆ ಸಾರ್ವಜನಿಕರ ಪ್ರತಿಕ್ರಿಯೆ ನೀರಸವಾಗಿತ್ತು.

ಶಾಲಾ ಕಾಲೇಜುಗಳು ಎಂದಿನಂತೆ ಆರಂಭಗೊಂಡಿದ್ದವು. ಸರ್ಕಾರಿ ಬಸ್ಸುಗಳೂ ಸಂಚರಿಸಿದವು. ಕೆಲವನ್ನು ಹೊರತುಪಡಿಸಿದರೆ ಹಲವು ಅಂಗಡಿಗಳು ತೆರೆದುಕೊಂಡಿದ್ದವು. ಬೆಳಿಗ್ಗೆ 11ರಿಂದ ಕರ್ನಾಟಕ ರಕ್ಷಣಾ ವೇದಿಕೆ, ಕರ್ನಾಟಕ ಸೇನೆ ಹಾಗೂ ಜಯ ಕರ್ನಾಟಕ ಸಂಘಟನೆಗಳ ಕಾರ್ಯಕರ್ತರು ಬೈಕ್ ರ‌್ಯಾಲಿ ಮಾಡುವುದರ ಮೂಲಕ ಒತ್ತಾಯ ೂರ್ವಕವಾಗಿ ಅಂಗಡಿಗಳನ್ನು ಬಂದ್ ಮಾಡಿಸಿದರಾದರೂ ಕೆಲ ಹೋಟೆಲ್‌ಗಳು, ಪೆಟ್ರೋಲ್ ಬಂಕ್‌ಗಳು ಕೆಲಸ ನಿರ್ವಹಿಸಿದವು.


ಕರ್ನಾಟಕ ಸೇನೆ ಕಾರ್ಯಕರ್ತರು ನಗರದ ಜ್ಯುಬಿಲಿ ವೃತ್ತದಿಂದ ಬೈಕ್ ರ‌್ಯಾಲಿ ನಡೆಸಿ, ಬೆಳಗಾವಿ ರಸ್ತೆಯಲ್ಲಿರುವ ಭಾರತ ಪೆಟ್ರೋಲ್ ಬಂಕ್, ನಗರದ ಹೊಸ ಬಸ್ ನಿಲ್ದಾಣ ಹಾಗೂ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕನ್ನು ಒತ್ತಾಯಪೂರ್ವಕವಾಗಿ ಬಂದ್ ಮಾಡಿದರು. ಕರ್ನಾಟಕ ರಕ್ಷಣಾ ವೇದಿಕೆಯ  ಕಾರ್ಯಕರ್ತರು ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ, ಕರ್ನಾಟಕದ ಮುಖ್ಯಮಂತ್ರಿ ಜಗದೀಶ ಶೆಟ್ಟರ ಹಾಗೂ ಪ್ರಧಾನಮಂತ್ರಿ ಮನಮೋಹನ ಸಿಂಗ್ ಅವರ ಪ್ರತಿಕೃತಿಯ ಶವಯಾತ್ರೆ ನಡೆಸಿ ಜ್ಯುಬಿಲಿ ವೃತ್ತದಲ್ಲಿ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿದರು.

11.30ರ ಸುಮಾರಿಗೆ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಬಸ್ ಸಂಚಾರವನ್ನು ಸ್ಥಗಿತಗೊಳಿಸಿ ದರಾದರೂ ಮಧ್ಯಾಹ್ನದ ಹೊತ್ತಿಗೆ ಮತ್ತೆ ಬಸ್ ಸಂಚಾರ ಎಂದಿನಂತೆ ಮುಂದುವರಿದಿತ್ತು. ತರಗತಿಗಳು ಆರಂಭವಾದ ಕೆಲ ಹೊತ್ತಿನಲ್ಲಿ ಪರಿಸ್ಥಿತಿ ಗಮನಿಸಿ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಯಿತು.
ನಗರದ ಹಳೆ ಬಸ್‌ನಿಲ್ದಾಣ, ಹೊಸ್ ಬಸ್‌ನಿಲ್ದಾಣ, ಕೋರ್ಟ್ ವೃತ್ತ, ವಿವೇಕಾನಂದ ವೃತ್ತ, ಗಾಂಧಿವೃತ್ತ ಮುಂತಾದ ಪ್ರಮುಖ ವೃತ್ತಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

ಬಂದ್ ಬೆಂಬಲಾರ್ಥ ರೈತ ಸಂಘಟನೆಯ ಕಾರ್ಯರ್ತರು ತೇಗೂರು ಬಳಿ ಇರುವ ರಾಷ್ಟ್ರೀಯ ಹೆದ್ದಾರಿಯನ್ನು ಕೆಲ ಕಾಲ ಬಂದ್ ಮಾಡಿದ್ದರು. ಪ್ರತಿಭಟನೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯಲಿಲ್ಲ.

 ಸಂಚಾರ ವ್ಯತ್ಯಯ


ಕಲಘಟಗಿ: ಬಂದ್‌ಗೆ ಪಟ್ಟಣದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ವ್ಯಾಪಾರ ವಹಿವಾಟು ಎಂದಿನಂತೆ  ಆರಂಭವಾಯಿಗಿತ್ತು. ಆದರೆ, ಜಯಕರ್ನಾಟಕ, ಉತ್ತರ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ, ಡಾ.ರಾಜ್‌ಕುಮಾರ್ ಸಾಂಸ್ಕೃತಿಕ ಸಂಘಟನೆಗಳು ಪ್ರತಿಭಟನಾ ಮೆರವಣಿಗೆ ನಡೆಸಿದ ಹಿನ್ನೆಲೆಯಲ್ಲಿ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು.

ಈ ಸಂದರ್ಭದಲ್ಲಿ ಕಾರವಾರ-ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಒಂದು ತಾಸಿಗೂ ಅಧಿಕ ಕಾಲ ವಾಹನ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಆದರೆ, ಹಳ್ಳಿಗಳಿಂದ ಬರುವವರಿಗೆ ಯಾವುದೇ ಸಮಸ್ಯೆ ಉಂಟಾಗಲಿಲ್ಲ. ಸರ್ಕಾರಿ ಕಚೇರಿಗಳು ತೆರೆದಿದ್ದರೂ ಜನರಿಲ್ಲದೆ ಭಣಗುಡುತ್ತಿದ್ದುವು. ಶಾಲಾ ಕಾಲೇಜುಗಳು ಶನಿವಾರದ ಬೆಳಗಿನ ಅವಧಿಯಲ್ಲಿ ಆರಂಭವಾದರೂ, ವಿದ್ಯಾರ್ಥಿಗಳು ಆಗಮಿಸದೇ ಇದ್ದುದರಿಂದ ಪಾಠ ಪ್ರವಚನಗಳು ನಡೆಯಲಿಲ್ಲ.

ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರವೇಶದ್ವಾರದಿಂದ ಮೆರವಣಿಗೆ ಕೈಗೊಂಡ ಸಂಘಟನೆಗಳು, ಹೆದ್ದಾರಿ ಮೂಲಕ ಮಾರುತಿ ಮಂದಿರದ ಬಳಿಯ ವೃತ್ತದಲ್ಲಿ ಟಯರ್‌ಗಳಿಗೆ ಬೆಂಕಿ ಹಚ್ಚಿ ಘೋಷಣೆ ಕೂಗಿದರು. ನಂತರ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.


ಜಯಕರ್ನಾಟಕ ಸಂಘಟನೆಯ ಜಿಲ್ಲಾ ಅಧ್ಯಕ್ಷ ಅಣ್ಣಪ್ಪ ಓಲೇಕಾರ, ಉಪಾಧ್ಯಕ್ಷ ಶಂಕರ ರೊಟ್ಟಿಗವಾಡ, ತಾಲ್ಲೂಕು ಕಾರ್ಯಾಧ್ಯಕ್ಷ ಬಸವರಾಜ ಮಾದಿ, ತಾಲ್ಲೂಕು ಅಧ್ಯಕ್ಷ ಗಂಗಾಧರ ಚಿಕ್ಕಮಠ, ಸಂಗಯ್ಯ ಹಿರೇಮಠ, ಶಿವು ಚಿಕ್ಕಮಠ, ಆನಂದ ಬಮ್ಮಿಗಟ್ಟಿ, ಗುರು ಹಿರೇಗುಂಜಳ, ಕಸಾಪ ಅಧ್ಯಕ್ಷ ಎಂ.ಎಂ.ಪುರದನಗೌಡ್ರ, ಉತ್ತರ ಕರ್ನಾಟಕ ರಕ್ಷಣಾ ವೇದಿಕೆಯ ಅನಿಲ ಪಮ್ಮೋರ, ಮೈಲಾರಿ ಶಿಂಗನಳ್ಳಿ, ಪರಶುರಾಮ ಲಮಾಣಿ,ಅಶೋಕ ಲಮಾಣಿ, ವಿನಾಯಕ ಗುಡ್ಡದಕೇರಿ, ಯಲ್ಲಪ್ಪ ಹರಿಜನ, ಕರವೇ ಸಂಘಟನೆಯ ಆರ್.ಪಿ.ಬಡಿಗೇರ, ಬಸಯ್ಯ ಹಿರೇಮಠ, ಬಸವಂತ ಗಬ್ಬೂರ, ಬಸವರಾಜ ಧಾರವಾಡ, ಪ್ರಭು ರಂಗಾಪೂರ ಮತ್ತಿತರರಿದ್ದರು. ಮೆರವಣಿಗೆಯುದ್ದಕ್ಕೂ ಸಿ.ಪಿ.ಐ. ಮಹಾಂತೇಶ್ವರ ಜಿದ್ದಿ, ಮತ್ತು ಸಿಬ್ಬಂದಿ ಬಂದೋಬಸ್ತ್ ಒದಗಿಸಿದರು.

ಹೋರಾಟಕ್ಕೆ ಬೆಂಬಲ
ಕುಂದಗೋಳ :
ಕಾವೇರಿ ನದಿ ನೀರು ಹಂಚಿಕೆ ಸಂಬಂಧ ರಾಜ್ಯ ವ್ಯಾಪ್ತಿ ಬಂದ್‌ಗೆ  ತಾಲ್ಲೂಕು ಕರ್ನಾಟಕ ರಕ್ಷಣಾ ಸೇನೆ ಮತ್ತು ಕರ್ನಾಟಕ ರಕ್ಷಣಾ ವೇದಿಕೆ ಮತ್ತು ಜಯ ಕರ್ನಾಟಕ ಕಾರ್ಯಕರ್ತರು ಬೆಂಬಲ ವ್ಯಕ್ತಪಡಿಸಿ ಶನಿವಾರ ಪ್ರತಿಭಟನೆ ನಡೆಸಿದರು. ಕುಂದಗೋಳ-ಲಕ್ಷ್ಮೇಶ್ವರ ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ತಾಲ್ಲೂಕು ಕರ್ನಾಟಕ ರಕ್ಷಣಾ ಸೇನೆ ಘಟಕದ ಅಧ್ಯಕ್ಷ ಚಂದ್ರಶೇಖರ ಕುಂದಗೋಳ ಮತ್ತು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಕಲ್ಲಪ್ಪ ಹರಕುಣಿ ಮತ್ತು ಜಯ ಕರ್ನಾಟಕ ಅಧ್ಯಕ್ಷ ಹಾಲೇಶ ಬೇಲಾಳ, ಅಡಿವೆಪ್ಪ ಹೆಬಸೂರ, ಬಿ.ವಿ. ದ್ಯಾಮನಗೌಡ್ರ, ಶಂಭು ಬೂದಿಹಾಳ ಮತ್ತಿತರರು ಭಾಗವಹಿಸಿದ್ದರು. ಪ್ರತಿಭಟನೆಯಲ್ಲಿ ಶಂಕರಗೌಡ್ರ ದೊಡಮನಿ, ಬಸವರಾಜ ಶಿರಸಂಗಿ, ನಾಗರಾಜ ಬೇವಿನಮರದ, ಮಂಜುನಾಥ ಕಾಲವಾಡ ಮತ್ತಿತರರು ಪಾಲ್ಗೊಂಡಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT