ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವೇರಿ ಐತೀರ್ಪು ಅಧಿಸೂಚನೆ ವಿಳಂಬ?

Last Updated 2 ಜನವರಿ 2013, 20:06 IST
ಅಕ್ಷರ ಗಾತ್ರ

ನವದೆಹಲಿ: ಕರ್ನಾಟಕ ಮತ್ತು ತಮಿಳುನಾಡು ನಡುವೆ ಕಾವೇರಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ನ್ಯಾಯಮಂಡಳಿ 6ವರ್ಷದ ಹಿಂದೆ ನೀಡಿದ `ಐತೀರ್ಪು' ಅಧಿಸೂಚನೆ ಪ್ರಕಟಣೆ ಇನ್ನಷ್ಟು ವಿಳಂಬವಾಗುವ ಸಾಧ್ಯತೆ ಇದೆ.

ಕೇಂದ್ರ ಜಲ ಸಂಪನ್ಮೂಲ ಸಚಿವಾಲಯ ಕಾವೇರಿ ನ್ಯಾಯಮಂಡಳಿ ಐತೀರ್ಪು ಪ್ರಕಟಣೆಗೆ ಸಂಬಂಧಿಸಿದಂತೆ  ಕಾನೂನು ಸಚಿವಾಲಯದ ಅಭಿಪ್ರಾಯ ಕೇಳಿದೆ. ಆದರೆ, ಕಾನೂನು ಸಚಿವಾಲಯ ಇನ್ನೂ ಸಲಹೆ ನೀಡದಿರುವುದರಿಂದ ಅಧಿಸೂಚನೆ ಪ್ರಕಟಣೆ ಮತ್ತಷ್ಟು ವಿಳಂಬವಾಗಲಿದೆ.

ಕೇಂದ್ರ ಜಲ ಸಂಪನ್ಮೂಲ ಸಚಿವಾಲಯದ ಕಾರ್ಯದರ್ಶಿ ನೇತೃತ್ವದ `ಕಾವೇರಿ ಉಸ್ತುವಾರಿ ಸಮಿತಿ' (ಸಿಎಂಸಿ) ಡಿಸೆಂಬರ್ ಅಂತ್ಯದೊಳಗೆ ನ್ಯಾಯಮಂಡಳಿ ಐತೀರ್ಪು ಬಗ್ಗೆ ಅಧಿಸೂಚನೆ ಹೊರಡಿಸುವುದಾಗಿ ಕಳೆದ ತಿಂಗಳು ಹೇಳಿತ್ತು. ಅನಂತರ ಈ ಬಗೆಗೆ ಅಭಿಪ್ರಾಯ ನೀಡುವಂತೆ ಕಾನೂನು ಸಚಿವಾಲಯಕ್ಕೆ ಕೇಳಲಾಗಿದೆ ಎಂದು ಉನ್ನತ ಮೂಲಗಳು `ಪ್ರಜಾವಾಣಿ' ಗೆ ತಿಳಿಸಿವೆ.

ನ್ಯಾಯಮಂಡಳಿ ಐತೀರ್ಪು ಪ್ರಶ್ನಿಸಿರುವ ಕೆಲವು ಅರ್ಜಿಗಳು ಸುಪ್ರೀಂಕೋರ್ಟ್ ಮುಂದಿರುವ ಹಿನ್ನೆಲೆಯಲ್ಲಿ ಕಾನೂನು ಸಚಿವಾಲಯ ಇನ್ನೂ ಖಚಿತ ತೀರ್ಮಾನಕ್ಕೆ ಬರಲು ಸಾಧ್ಯವಾಗಿಲ್ಲ. `ಕೋರ್ಟ್ ಮುಂದಿರುವ ಅರ್ಜಿಗಳು ಇತ್ಯರ್ಥವಾಗದ ಹೊರತು ಅಧಿಸೂಚನೆ ಪ್ರಕಟಣೆ ಸಾಧುವಲ್ಲ' ಎಂಬ ಅಭಿಪ್ರಾಯವನ್ನು ಕಾನೂನು ಇಲಾಖೆ ಹೊಂದಿದೆ ಎಂದು ಮೂಲಗಳು ಹೇಳಿವೆ.

ಸುಪ್ರೀಂ ಕೋರ್ಟ್ ಈಚೆಗೆ ಕಾವೇರಿ ಜಲ ವಿವಾದದ ವಿಚಾರಣೆ ವೇಳೆ `ನ್ಯಾಯಮಂಡಳಿ ಐತೀರ್ಪು ಅಧಿಸೂಚನೆ ಪ್ರಕಟಣೆ ಇನ್ನೂ ಏಕೆ ಆಗಿಲ್ಲ' ಎಂದು ಕೇಂದ್ರ ಸರ್ಕಾರವನ್ನು ಕೇಳಿತ್ತು. ವಿವಾದದ ಮುಂದಿನ ವಿಚಾರಣೆ ಸಮಯದಲ್ಲಿ ನಿಲುವು ವ್ಯಕ್ತಪಡಿಸುವಂತೆ ಸೂಚಿಸಿತು. ಜಲ ವಿವಾದ ಇದೇ 4ರಂದು ಪುನಃ ವಿಚಾರಣೆಗೆ ಬರಬೇಕಿದೆ. ಆ ಸಮಯದಲ್ಲಿ ಕೇಂದ್ರ ನಿಲುವು ಏನೆಂದು ಸ್ಪಷ್ಟಪಡಿಸಬೇಕಿದೆ.

ಜಲ ಸಂಪನ್ಮೂಲ ಸಚಿವಾಲಯದ ಕಾರ್ಯದರ್ಶಿ ಡಿ.ವಿ.ಸಿಂಗ್ ನೇತೃತ್ವದ `ಕಾವೇರಿ ಉಸ್ತುವಾರಿ ಸಮಿತಿ' (ಸಿಎಂಸಿ) ಡಿಸೆಂಬರ್ 7 ರಂದು ನಡೆದ ಸಭೆಯಲ್ಲಿ ಒಂದು ತಿಂಗಳಲ್ಲಿ ನ್ಯಾಯ ಮಂಡಳಿ ಐತೀರ್ಪು ಅಧಿಸೂಚನೆ ಹೊರಡಿಸುವುದಾಗಿ ಸಂಬಂಧಪಟ್ಟ ರಾಜ್ಯಗಳಿಗೆ ಹೇಳಿತ್ತು. ಬಳಿಕ ಕಾನೂನು ಇಲಾಖೆ ಅಭಿಪ್ರಾಯ ಪಡೆದು ಮುಂದಿನ ಹೆಜ್ಜೆ ಇಡಲು ತೀರ್ಮಾನಿಸಿತು.

ಕಾವೇರಿ ನ್ಯಾಯಮಂಡಳಿ ಐತೀರ್ಪು ಅಧಿಸೂಚನೆ ಹೊರಡಿಸುವಂತೆ ತಮಿಳುನಾಡು ಆಗ್ರಹಿಸುತ್ತಿದೆ. ಸುಪ್ರೀಂ ಕೋರ್ಟ್ ಮುಂದಿರುವ ವಿಶೇಷ ಮೇಲ್ಮನವಿ ಅರ್ಜಿ (ಎಸ್‌ಎಲ್‌ಪಿ) ಇತ್ಯರ್ಥವಾಗುವವರೆಗೂ ಅಧಿಸೂಚನೆ ಪ್ರಕಟಣೆ ಬೇಡ ಎಂದು ಕರ್ನಾಟಕ ಒತ್ತಡ ಹೇರುತ್ತಿದೆ.

ಐತೀರ್ಪು ಅಧಿಕೃತವಾಗಿ ಪ್ರಕಟವಾದರೆ ಪ್ರಧಾನಿ ನೇತೃತ್ವದ `ಕಾವೇರಿ ನದಿ ಪ್ರಾಧಿಕಾರ' ಮತ್ತು ಜಲ ಸಂಪನ್ಮೂಲ ಕಾರ್ಯದರ್ಶಿ ನೇತೃತ್ವದ `ಕಾವೇರಿ ಉಸ್ತುವಾರಿ ಸಮಿತಿ' ಅಸ್ತಿತ್ವ ಕಳೆದುಕೊಳ್ಳಲಿವೆ. ಈ ನದಿ ನೀರು ನಿರ್ವಹಣೆಗೆ ಪ್ರತ್ಯೇಕ ಮಂಡಳಿ ರಚನೆ ಆಗಲಿದೆ.

ಕಾವೇರಿ ನ್ಯಾಯ ಮಂಡಳಿ 2007ರಲ್ಲಿ ನೀಡಿರುವ ತೀರ್ಪಿನಲ್ಲಿ ನದಿ ನೀರಿನ ಪ್ರಮಾಣವನ್ನು 740 ಟಿಎಂಸಿ ಎಂದು ನಿರ್ಧರಿಸಿ ತಮಿಳುನಾಡಿಗೆ 419ಟಿಎಂಸಿ, ಕರ್ನಾಟಕಕ್ಕೆ 270 ಟಿಎಂಸಿ, ಕೇರಳಕ್ಕೆ 30 ಟಿಎಂಸಿ ಹಾಗೂ ಪುದುಚೇರಿಗೆ ಏಳು ಟಿಎಂಸಿ ನಿಗದಿಪಡಿಸಿದೆ. ಕಾವೇರಿ ನ್ಯಾಯಮಂಡಳಿ ಅಂತಿಮ ತೀರ್ಪು ಪ್ರಶ್ನಿಸಿ ಕರ್ನಾಟಕ, ತಮಿಳುನಾಡು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿವೆ.

ಜಲ ಸಂಪನ್ಮೂಲ ಸಚಿವಾಲಯ ಹಿಂದೆಯೂ ಕೋರ್ಟ್ ಮುಂದಿರುವ ವಿವಾದಗಳು ಇತ್ಯರ್ಥವಾಗುವವರೆಗೂ ಅಧಿಸೂಚನೆ ಪ್ರಕಟಣೆ ಬೇಡ ಎಂಬ ನಿಲುವು ವ್ಯಕ್ತಪಡಿಸಿದೆ.ಅಲ್ಲದೆ, ಕಾವೇರಿ ಐತೀರ್ಪು ಕುರಿತು ಕೆಲವು ಸ್ಪಷ್ಟನೆಗಳನ್ನು ಬಯಸಿ ನ್ಯಾಯಮಂಡಳಿ ಮುಂದೆ ಅರ್ಜಿಗಳನ್ನು ಹಾಕಲಾಗಿದೆ. ಕಾವೇರಿ ವಿವಾದ ಸುಪ್ರೀಂ ಕೋರ್ಟ್ ಮುಂದಿರುವ ಕಾರಣದಿಂದ ನ್ಯಾಯಮಂಡಳಿ ಮತ್ತೆ ತನ್ನ ಕಾರ್ಯಕಲಾಪ ಆರಂಭಿಸಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT