ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವೇರಿ: ಕರ್ನಾಟಕ ಬಂದ್‌ಗೆ ಬಿಜೆಪಿ ಬೆಂಬಲ

Last Updated 5 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಬಿಡುತ್ತಿರುವುದನ್ನು ವಿರೋಧಿಸಿ ಕನ್ನಡ ಪರ ಸಂಘಟನೆಗಳು ಕರೆ ನೀಡಿರುವ `ಕರ್ನಾಟಕ ಬಂದ್~ಗೆ ಆಡಳಿತಾರೂಢ ಬಿಜೆಪಿ ಬೆಂಬಲ ಸೂಚಿಸಿದೆ.

ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಮತ್ತು ಪಕ್ಷದ ರಾಜ್ಯ ಘಟಕದ ಅಧ್ಯಕ್ಷರೂ ಆದ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಅವರ ನೇತೃತ್ವದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಮುಖ್ಯಮಂತ್ರಿಯವರ ಅಧಿಕೃತ ನಿವಾಸ `ಕಾವೇರಿ~ಯಲ್ಲಿ ಈ ಸಭೆ ನಡೆಯಿತು.

`ಕಾವೇರಿ ನದಿ ಪ್ರಾಧಿಕಾರ ಈ ತಿಂಗಳ 15ರವರೆಗೆ ಪ್ರತಿನಿತ್ಯ 9,000 ಕ್ಯೂಸೆಕ್ ನೀರು ಬಿಡುವಂತೆ ಆದೇಶ ನೀಡಿದೆ. ಇದು ಅವೈಜ್ಞಾನಿಕ ಮತ್ತು ರೈತ ವಿರೋಧಿಯಾಗಿದೆ~ ಎಂದು ಸಭೆ ಬಳಿಕ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಹ್ಲಾದ ಜೋಶಿ ಸುದ್ದಿಗಾರರಿಗೆ ತಿಳಿಸಿದರು.

`ಪ್ರಾಧಿಕಾರ ತಕ್ಷಣ ತನ್ನ ಆದೇಶ  ಮರುಪರಿಶೀಲಿಸಬೇಕು. ಈ ಕುರಿತು ರಾಜ್ಯ ಸರ್ಕಾರ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಳ್ಳಬೇಕು~ ಎಂದೂ ಅವರು ಆಗ್ರಹಪಡಿಸಿದರು.

ಪ್ರಧಾನಿ ಭೇಟಿ: ಕಾವೇರಿ ವಿಚಾರದಲ್ಲಿ ಕೊಟ್ಟಿರುವ ಆದೇಶವನ್ನು ಪುನರ್ ಪರಿಶೀಲಿಸುವಂತೆ ಒತ್ತಾಯಿಸಲು ರಾಜ್ಯದ ಬಿಜೆಪಿ ಸಂಸದರು ಭಾನುವಾರ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಭೇಟಿ ಮಾಡಲಿದ್ದಾರೆ.

ಪ್ರಧಾನಿ ಭೇಟಿಗೆ ಸಮಯ ಕೋರಿ ಲೋಕಸಭೆ ವಿರೋಧ ಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ಅವರ ಕಚೇರಿಯಿಂದ ಪತ್ರ ಕೂಡ ಹೋಗಿದೆ. ಅನಂತಕುಮಾರ್ ನೇತೃತ್ವದಲ್ಲಿ ಎಲ್ಲ ಸಂಸದರೂ ಪ್ರಧಾನಿಯನ್ನು ಭೇಟಿ ಮಾಡಲಿದ್ದಾರೆ ಎಂದರು.

ಕಾವೇರಿ ವಿಚಾರದಲ್ಲಿ ವಿವಿಧ ಪಕ್ಷಗಳಿಗೆ ಸೇರಿದ ರಾಜ್ಯದ ಎಲ್ಲ ಸಂಸದರು ಒಟ್ಟಿಗೆ ಏಕೆ ಪ್ರಧಾನಿಯನ್ನು ಭೇಟಿ ಮಾಡುತ್ತಿಲ್ಲ ಎಂದು ಕೇಳಿದ ಪ್ರಶ್ನೆಗೆ `ಪಕ್ಷದ ತೀರ್ಮಾನವಾದ ಕಾರಣ, ಬಿಜೆಪಿ ಸಂಸದರು ಪ್ರಧಾನಿಯನ್ನು ಭೇಟಿ ಮಾಡುತ್ತಿದ್ದಾರೆ. ಇತರ ಪಕ್ಷಗಳ ಸದಸ್ಯರನ್ನು ಕರೆದೊಯ್ಯುವುದು ಸರ್ಕಾರದ ಜವಾಬ್ದಾರಿ. ಆ ಕೆಲಸವನ್ನು ಸರ್ಕಾರ ಮಾಡಲಿದೆ~ ಎಂದರು.

ನೀರು ಬಿಡುವುದಕ್ಕೆ ಸೋಮವಾರದ ವೇಳೆಗೆ ತಡೆಯಾಜ್ಞೆ ಸಿಗದಿದ್ದರೆ ಕೇಂದ್ರ ಸರ್ಕಾರದ ವಿರುದ್ಧ ಮಂಗಳವಾರದಿಂದ ಪ್ರತಿಭಟನೆ ತೀವ್ರಗೊಳಿಸಬೇಕು ಎಂದೂ ಬಿಜೆಪಿ ನಿರ್ಧರಿಸಿದೆ.

ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ, ಉಪ ಮುಖ್ಯಮಂತ್ರಿ ಆರ್.ಅಶೋಕ, ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತಕುಮಾರ್, ಸಂಘಟನಾ ಪ್ರಧಾನ ಕಾರ್ಯದರ್ಶಿ ಸಂತೋಷ್ ಸೇರಿದಂತೆ ಇತರ ಪ್ರಮುಖರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT