ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವೇರಿ-ಕೃಷ್ಣೆಯರ ಬಿಡದ ಇಮ್ಮನದ ಭೇದ!

Last Updated 9 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಕರ್ನಾಟಕದಲ್ಲಿ ಈಗ `ಕಾವೇರಿ~ದ ವಾತಾವರಣ. ನದಿ ನೀರಿನ ಹಂಚಿಕೆ ವಿಷಯವಾಗಿ ರಾಜ್ಯದಲ್ಲಿ  ನಡೆಯುತ್ತಿರುವ ಹೋರಾಟ ಇದು ಮೊದಲನೆಯದೇನಲ್ಲ. ಪ್ರಾಯಶಃ ಕೊನೆಯದೂ ಆಗಲಿಕ್ಕಿಲ್ಲ. ಕನ್ನಡಿಗರ ರಾಜಕೀಯ ಇಚ್ಛಾಶಕ್ತಿ ಹಾಗೂ ಮುಂದಾಲೋಚನೆಯ ಕೊರತೆ ಕಾರಣವಾಗಿ, ರಾಜ್ಯಕ್ಕೆ ನ್ಯಾಯ ಸಿಗುತ್ತಿಲ್ಲ ಎಂದು ಹೇಳುವಲ್ಲಿ ಸಾಕಷ್ಟು ಅರ್ಥವಿದೆ. 

 ಬಂದ್, ರ‌್ಯಾಲಿ, ಪ್ರತಿಭಟನೆಗಳು ಈ ಸಮಸ್ಯೆಗೆ ಪರಿಹಾರ ತಂದುಕೊಡಲಾರವು ಎಂಬ ರಾಜ್ಯಪಾಲರ ಅಭಿಪ್ರಾಯ ಒಪ್ಪುವಂಥದ್ದು. ನ್ಯಾಯಾಲಯದ ಮೂಲಕ ಹಾಗೂ ಪ್ರಜಾಸತ್ತಾತ್ಮಕ ರೀತಿಯಲ್ಲಿ ನಾವು ಪರಿಹಾರ ಕಂಡುಕೊಳ್ಳಬೇಕೇನೊ ಸರಿ. ಆದರೆ ಈ `ರಾಜ~ಮಾರ್ಗ ಅಂದುಕೊಂಡಷ್ಟು ಸರಳ ಹಾಗೂ ಸುಲಭವಾಗಿಲ್ಲವೆಂಬುದು ಅನುಭವಜನ್ಯ ಸತ್ಯವೇ ಆಗಿದೆಯಲ್ಲ! ಇದು ನಮ್ಮ ಪರ್ಯಾಯ ವ್ಯವಸ್ಥೆಯನ್ನು ಅಣಕಿಸುವಂತಿದೆ. 

 ಕಾವೇರಿ ನದಿಯಲ್ಲಿರುವ ಸದ್ಯದ ನೀರಿನ ಪ್ರಮಾಣ, ಬೇಸಾಯ ಹಾಗೂ ಕುಡಿಯುವುದಕ್ಕಾಗಿ ಅವಶ್ಯವಾಗಿ ಬೇಕಾಗಬಹುದಾದ ನೀರು ಎಷ್ಟು ಎಂಬ್ಲ್ಲೆಲ ಅಂಶಗಳನ್ನು ಸಿಆರ್‌ಎ ಹಾಗೂ ಸುಪ್ರೀಂ ಕೋರ್ಟ್‌ನ ಮುಂದೆ ವಿವರಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ, ಅಥವಾ ಆ ಬಗ್ಗೆ ಅದು ಗಂಭೀರವಾಗಿ ಆಲೋಚಿಸಲಿಲ್ಲವೇನೋ? 

 ಸರ್ಕಾರದ ಪ್ರತಿನಿಧಿಗಳಾಗಿ ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಂಡಿಸಬೇಕಾದವರು ತಮ್ಮ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿರ್ವಹಿಸಲಿಲ್ಲ ಎಂದು ಆರೋಪಿಸಲಾಗುತ್ತದೆ. ಇಂಥವರಿಗಾಗಿ ರಾಜ್ಯದ ಬೊಕ್ಕಸದಿಂದ ಕೋಟಿಗಟ್ಟಲೆ ಹಣ ಶುಲ್ಕದ ರೂಪದಲ್ಲಿ ಸಂದಾಯವಾಗಿರುವುದು ಶ್ರೀಸಾಮಾನ್ಯನ ಹೊಟ್ಟೆ ಉರಿಸದಿದ್ದೀತೇ? ಇದು ಕಾವೇರಿಯ ತಳಮಳದ ಕಥೆ.

 ಇದಕ್ಕಿಂತಲೂ ಘೋರವಾದುದು ಕೃಷ್ಣೆಯ ಕಳವಳದ ವ್ಯಥೆ. ದಕ್ಷಿಣ ಕರ್ನಾಟಕ ಭಾಗದವರಿಗೆ ಕಾವೇರಿ ಹೇಗೋ, ಹಾಗೆಯೇ ಉತ್ತರ ಕರ್ನಾಟಕದವರಿಗೆ ಕೃಷ್ಣಾ ಜೀವನದಿ. ಕೃಷ್ಣಾಕೊಳ್ಳದ ಜನತೆಗೂ ಇಂಥವೇ ಜೀವಹಿಂಡುವ ಸಮಸ್ಯೆಗಳಿವೆ.
ಕುಡಿಯುವ ನೀರಿಗಾಗಿ, ಪ್ರತಿವರ್ಷ ಬೇಸಿಗೆಯ ದಿನಗಳಲ್ಲಿ ಮಹಾರಾಷ್ಟ್ರಕ್ಕೆ ಮೊರೆ ಹೋಗಬೇಕಾಗುತ್ತದೆ.

ಕಳೆದ ಬೇಸಿಗೆಯಲ್ಲಂತೂ ಕೃಷ್ಣಾ ನದಿ ಸಂಪೂರ್ಣ ಬತ್ತಿಹೋಗಿ, ಮೂರು ತಿಂಗಳುಗಳ ಕಾಲ ನದಿ ತೀರದ ಜನ ಹಾಗೂ ಜಾನುವಾರುಗಳು ಪಡಬಾರದ ಕಷ್ಟ ಅನುಭವಿಸಬೇಕಾಯಿತು. ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಕಬ್ಬು, ಜೋಳ ಮುಂತಾದ ಬೆಳೆಗಳು ಒಣಗಿ, ರೈತಾಪಿ ಸಮುದಾಯ ಪರಿತಪಿಸಿತು.

ಉತ್ತರ ಕರ್ನಾಟಕ ಜನತೆಯ ಈ ತೊಂದರೆ, ಬೆಂಗಳೂರು-ಮೈಸೂರು ಕಡೆಯವರಿಗೆ ಸಮಸ್ಯೆಯಾಗಿ ಕಾಡಲೇ ಇಲ್ಲ. ದಕ್ಷಿಣ ಕರ್ನಾಟಕದ ಕೆಲ ಜಿಲ್ಲೆಗಳ (ಮೈಸೂರು, ಮಂಡ್ಯ, ಹಾಸನ ಇತ್ಯಾದಿ) ಜನರು  ಇಂದು ಕಾವೇರಿ ನೀರಿಗಾಗಿ ನಡೆಸುತ್ತಿರುವ ಹೋರಾಟಕ್ಕೆ ನಾವೇಕೆ ಬೆಂಬಲಿಸಬೇಕು ಎಂದು ಈಗ ಕೃಷ್ಣಾತೀರದವರು ಪ್ರಶ್ನಿಸುತ್ತಾರೆ.

ಹೀಗಾಗಿ ಉತ್ತರಕರ್ನಾಟಕದ ಬಹುತೇಕ ಕಡೆ ಕರ್ನಾಟಕ ಬಂದ್‌ಗೆ ಹೇಳಿಕೊಳ್ಳುವಂಥ ಪ್ರತಿಕ್ರಿಯೆ ಕಂಡುಬರಲಿಲ್ಲ. ಅವರಿಗೆ ಕಾವೇರಿಯೆಂದರೆ ಪ್ರಾಣ: ಇವರಿಗೆ ಕೃಷ್ಣೆಯೆಂದರೆ ಜೀವ. ಹೀಗಾಗಿ ನದಿಗಳ ವಿಷಯದಲ್ಲೂ ಕನ್ನಡಿಗರಲ್ಲಿ ಒಮ್ಮನ ಇಲ್ಲ, ಪ್ರಾದೇಶಿಕ ಇಮ್ಮನ.

 ಮಹಾರಾಷ್ಟ್ರದ ಕೊಯ್ನೊ ಅಣೆಕಟ್ಟೆಯಿಂದ ನೀರು ಬಿಡಿಸುವಂತೆ ಆ ಸಂದರ್ಭದಲ್ಲಿ ಉತ್ತರ ಕರ್ನಾಟಕ ಭಾಗದ ಜನರ ಒತ್ತಾಯಕ್ಕೆ ರಾಜಕಾರಣಿಗಳಾಗಲಿ, ಸಿನಿಮಾ ನಟರಾಗಲಿ ಅಷ್ಟಾಗಿ ಸ್ಪಂದಿಸಲಿಲ್ಲ ಎಂಬುದು ಉತ್ತರ ಕರ್ನಾಟಕದವರಿಗೆ ಸಿಟ್ಟು ತಂದಿದೆ. ಶಾಸನ ಸಭೆಗಳಲ್ಲಿ  ಜನಪ್ರತಿನಿಧಿಗಳು `ಕಾಟಾಚಾರ~ಕ್ಕೆಂಬಂತೆ ವಿಷಯ ಪ್ರತಿಪಾದಿಸಿದರೆ ಹೊರತು, ನೀರು ತರಿಸಲಿಲ್ಲ.

`ಅಲ್ಲಿಗೆ ಬಂದಿದೆ ನೀರು, ಇಲ್ಲಿಗೆ ಬಂದಿದೆ, ಒಂದು ವಾರಕ್ಕೆ ಖಂಡಿತ ಬರುತ್ತದೆ~ ಎಂದು ಪತ್ರಿಕಾ ಹೇಳಿಕೆಗಳನ್ನು ಕೊಡುತ್ತ, ಜನಪ್ರತಿನಿಧಿಗಳು ರೈತರ ಮೂಗಿಗೆ ಬೆಣ್ಣೆ ಸವರುತ್ತಲೆ ಬಂದರು. ನೀರಂತೂ ಕಷ್ಟದ ಕಾಲಕ್ಕೆ ಒದಗಲೇ ಇಲ್ಲ. ಅಟ್ಟ ಮೇಲೆ ಒಲೆ ಉರಿದಂತೆ, ಕೊನೆಗೂ ಮಹಾರಾಷ್ಟ್ರದವರು ನೀರು ಬಿಟ್ಟರು, (ಅಲ್ಲಿ ಸಣ್ಣಗೆ ಮಳೆ ಬೀಳುತ್ತಿದ್ದಂತೆ, ರಾಜಾಪುರ ಬ್ಯಾರೇಜ್‌ನ ಸಂಗ್ರಹಿತ ಅದೂ ಮಲೀನ ನೀರು).

 ಒಮ್ಮಮ್ಮೆ ಹೀಗೂ ಸಂಭವಿಸುತ್ತದೆ. ಮಹಾರಾಷ್ಟ್ರದಲ್ಲಿ ಹೆಚ್ಚು ಮಳೆಯಾಗಿ, ಕೊಯ್ನೊ ಡ್ಯಾಂ ಭರ್ತಿಯಾಯಿತೋ. ಹೆಚ್ಚುವರಿ ನೀರನ್ನು ಅವರು ನಮ್ಮ ಕಡೆಗೆ ಕಳಿಸುತ್ತಾರೆ. ಆಗ ಉದ್ಭವಿಸುವ ನೆರೆ ಹಾವಳಿಗೆ ತತ್ತರಿಸಬೇಕಾದವರು ಉತ್ತರ ಕರ್ನಾಟಕದ ಬಡಪಾಯಿಗಳು.

ಮನೆ-ಮಠ ತೊರೆದು, ಸಾಮಾನು-ಸರಂಜಾಮು, ಜಾನುವಾರುಗಳೊಂದಿಗೆ ಗುಡಿ-ಗುಂಡಾರ, ಶಾಲಾ ಆವರಣಗಳಲ್ಲಿ ತಾತ್ಕಾಲಿಕ ನೆಲೆ ಕಾಣುತ್ತಾರೆ. ಮತ್ತೆ ಕೆಲವರಿಗಾಗಿ ಪುನರ್ವಸತಿ ಕೇಂದ್ರಗಳು ಹುಟ್ಟಿಕೊಳ್ಳುತ್ತವೆ. ನೀರಿನ ರಾಜಕೀಯ ತಂದಿರುವ ಅನಿಶ್ಚಿತ ಬದುಕಿನಲ್ಲಿ ಕನ್ನಡಿಗರು ನಲುಗಿ ಹೋಗುತ್ತಿದ್ದಾರೆ. 

 ಅನೇಕ ಸಲ ನಮಗೇ ನೀರು ಇಲ್ಲದಿರುವಾಗ, ನೆರೆಯ ಆಂಧ್ರಪ್ರದೇಶದವರಿಂದ ಬೇಡಿಕೆ-ಒತ್ತಾಯಗಳು ಬರುತ್ತವೆ. ಆಗಲೂ, ನದಿ ನೀರು ಪ್ರಾಧಿಕಾರದ ಸೂಚನೆ ಇಲ್ಲವೆ ನ್ಯಾಯಾಲಯದ ಆದೇಶಕ್ಕೆ ತಲೆಬಾಗಿ ನೀರು ಬಿಟ್ಟುಕೊಟ್ಟ ಪ್ರಸಂಗಗಳೂ ಇವೆ. ಆಲಮಟ್ಟಿ ಅಣೆಕಟ್ಟೆಯನ್ನು ಎತ್ತರಿಸುವ ಕುರಿತಾದ ಆಂಧ್ರಪ್ರದೇಶದೊಂದಿಗಿನ  ವಿವಾದ ಈವರೆಗೂ ಪರಿಹಾರ ಕಂಡಿಲ್ಲ.

ಆಲಮಟ್ಟಿ ಜಲಾಶಯದ ಹಿನ್ನೀರಿನಲ್ಲಿ ನಮ್ಮ ಸಾವಿರಾರು ಗ್ರಾಮಗಳು ಮುಳುಗಿ ಹೋಗಿವೆ. ದುರ್ದೈವವೆಂದರೆ, ಹಾನಿ ನಮಗೆ, ಅದರ ಲಾಭ ಆಂಧ್ರದವರಿಗೆ. ಕರ್ನಾಟಕದವರ ಪಾಲಿಗೆ `ನೆರೆ~ ಹೊರೆಯಾಗಿ ಪರಿಣಮಿಸಿದೆ.

 ಆಳುವವರು ಇದಕ್ಕೆ ಶಾಶ್ವತ ಪರಿಹಾರ ಕಂಡುಹಿಡಿದಾರೆಯೇ! ರಾಜಕೀಯದಿಂದಾಗಿ ನದಿ ನೀರು ಕೂಡಾ ಮುಕ್ತವಾಗಿಲ್ಲ. ಅಭಿವೃದ್ಧಿಗೆ ಪೂರಕವಾಗಬೇಕಿದ್ದ ನದಿಯ ನೀರಿಗೆ ಕೂಡ ರಾಜಕೀಯ ಅಡ್ಡಗಾಲು ಹಾಕಿರುವುದು ವಿಷಾದನೀಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT