ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವೇರಿ: ಕೇಂದ್ರದ ವಿರುದ್ಧ ಚಿತ್ರರಂಗ ಕಿಡಿ

Last Updated 6 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: `ಕಾವೇರಿ ಕರ್ನಾಟಕದ ಉಸಿರು. ರಾಜ್ಯದ ಎದುರಿಸುತ್ತಿರುವ ಗಂಭೀರ ಬರ ಪರಿಸ್ಥಿತಿಯ ಸಂದರ್ಭದಲ್ಲಿ ಕಾವೇರಿ ನೀರು ಬಿಡುಗಡೆಗೆ ಸೂಚನೆ ನೀಡಿರುವುದು ಅಕ್ಷಮ್ಯ. ರಾಜ್ಯ ಸರ್ಕಾರ ತಮಿಳುನಾಡಿಗೆ ನೀರು ಬಿಡುವುದೇ ಇಲ್ಲ ಎಂಬ ಕಠಿಣ ತೀರ್ಮಾನಕ್ಕೆ ಬರಬೇಕು~ ಎಂದು ಚಿತ್ರರಂಗದ ಪ್ರಮುಖರು ಆಗ್ರಹಿಸಿದರು.

 `ಕರ್ನಾಟಕ ಬಂದ್~ಗೆ ಬೆಂಬಲ ಸೂಚಿಸಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ನೇತೃತ್ವದಲ್ಲಿ ಶನಿವಾರ ನಡೆದ  ಮೆರವಣಿಗೆಯಲ್ಲಿ ಮಾತನಾಡಿದ ಚಿತ್ರರಂಗದ ಪ್ರಮುಖರು ಕೇಂದ್ರ ಸರ್ಕಾರದ ಸೂಚನೆ ವಿರುದ್ಧ ಕಿಡಿಕಾರಿದರು.

ಹಿರಿಯ ಚಿತ್ರನಟ, ಕಲಾವಿದರ ಸಂಘದ ಅಧ್ಯಕ್ಷ ಅಂಬರೀಷ್ ಮಾತನಾಡಿ, `ರಾಜ್ಯದ ಜಲಾಶಯಗಳಲ್ಲೇ ನೀರಿಲ್ಲ. ಈಗ ಪ್ರಧಾನಿ ಸೂಚನೆ ನೀಡಿರುವುದು ಒಂದು ರೂಪಾಯಿಯೂ ಇರದವನ ಬಳಿ 50 ರೂಪಾಯಿ ಕೇಳಿದಂತೆ ಆಗಿದೆ. ಇದು ಅನ್ಯಾಯದ ಪರಮಾವಧಿ~ ಎಂದು ಆಕ್ರೋಶ ವ್ಯಕ್ತಪಡಿಸಿದರು.

`ಈ ಸಮಸ್ಯೆ ಬಗೆಹರಿಸಲು ಸರಳ ಸೂತ್ರವನ್ನು ರೂಪಿಸಲು ಸಾಧ್ಯವಿದೆ. ಲಭ್ಯತೆ ಆಧರಿಸಿ ನೀರು ಬಿಡುಗಡೆಗೆ ಸೂಚಿಸಬೇಕು. ಇತರ ರಾಜ್ಯಗಳು ಸುಖವನ್ನು ಹಂಚಿಕೊಂಡ ಹಾಗೆಯೇ  ಸಂಕಷ್ಟವನ್ನೂ ಹಂಚಿಕೊಳ್ಳಬೇಕು~ ಎಂದು ಅವರು ಸಲಹೆ ನೀಡಿದರು.

ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಬಿ.ವಿಜಯ ಕುಮಾರ್ ಮಾತನಾಡಿ, `ಈ ವರ್ಷ ರಾಜ್ಯ ಭೀಕರ ಬರಗಾಲದಿಂದ ತತ್ತರಿಸುತ್ತಿದೆ. ರಾಜ್ಯದ ಜನತೆ ನೀರಿಗಾಗಿ ಹಾಹಾಕಾರ ಪಡುವ ಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ತಮಿಳುನಾಡಿಗೆ ನೀರು ಬಿಡುಗಡೆ ಮಾಡುವಂತೆ ಆದೇಶಿಸಿರುವುದು ತಪ್ಪು. ಕೇಂದ್ರ ಸರ್ಕಾರ ಮಲತಾಯಿ ಧೋರಣೆಯನ್ನು ತಾಳಿದೆ~ ಎಂದು ಆರೋಪಿಸಿದರು.

ಚಲನಚಿತ್ರೋದ್ಯಮದ ಎಲ್ಲ ಅಂಗಸಂಸ್ಥೆಗಳ ಮುಖಂಡರ ನಿಯೋಗವು ಚಲನಚಿತ್ರ ವಾಣಿಜ್ಯ ಮಂಡಳಿಯ ಕಚೇರಿಯ ಮುಂಭಾಗದಿಂದ ರಾಜಭವನದವರೆಗೆ ಮೌನ ಮೆರವಣಿಗೆಯಲ್ಲಿ ತೆರಳಿತು. ಬಂದ್‌ಗೆ ಬೆಂಬಲ ಸೂಚಿಸಿ ಕನ್ನಡ ಚಿತ್ರೋದ್ಯಮದ ಚಟುವಟಿಕೆಯನ್ನು ಒಂದು ದಿನದ ಮಟ್ಟಿಗೆ ಸಂಪೂರ್ಣ ಸ್ಥಗಿತಗೊಳಿಸಲಾಯಿತು.

ಚಲನಚಿತ್ರ ನಿರ್ಮಾಪಕರ ಸಂಘ, ಚಲನಚಿತ್ರ ನಿರ್ದೇಶಕರ ಸಂಘ, ಚಲನಚಿತ್ರ ಕಲಾವಿದರ ಸಂಘ, ಅಖಿಲ ಕರ್ನಾಟಕ ಚಲನಚಿತ್ರ ವಿತರಕರ ಸಂಘ, ತೆಲುಗು ಚಲನಚಿತ್ರ ವಿತರಕರ ಸಂಘ, ಚಲನಚಿತ್ರ ಪ್ರದರ್ಶಕರ ಮಹಾಮಂಡಳಿ, ಚಲನಚಿತ್ರ ಕಾರ್ಮಿಕರ, ಕಲಾವಿದರ, ತಂತ್ರಜ್ಞರ ಒಕ್ಕೂಟ, ಚಲನಚಿತ್ರ ಛಾಯಾಗ್ರಾಹಕರ ಸಂಘ, ಚಲನಚಿತ್ರ ಸಂಗೀತಗಾರರ ಸಂಘದ ಪದಾಧಿಕಾರಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ನಾಯಕನಟರಾದ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಪುನೀತ್ ರಾಜ್‌ಕುಮಾರ್, ರವಿಚಂದ್ರನ್, ಉಪೇಂದ್ರ, ಜಗ್ಗೇಶ್, ಶಶಿಕುಮಾರ್, ಕಾಶಿನಾಥ್, ಪ್ರೇಮ್, `ಮುಖ್ಯಮಂತ್ರಿ~ ಚಂದ್ರು, ನಿರ್ದೇಶಕ ಬಿ.ಸುರೇಶ್, ನಟಿಯರಾದ ಶ್ರುತಿ, ತಾರಾ, ಸುಧಾರಾಣಿ, ಪ್ರಿಯಾ ಹಾಸನ್, ನಟರಾದ ಸಾಧು ಕೋಕಿಲಾ, ರಂಗಾಯಣ ರಘು, ರಾಜ್ ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ. ಗೋವಿಂದು ಮತ್ತಿತರರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಚಿತ್ರನಟರಾದ ಸುದೀಪ್ ಹಾಗೂ ದರ್ಶನ್ ಗೈರು ಹಾಜರಾಗಿದ್ದರು.

ಮನವರಿಕೆ
`ರಾಜ್ಯದ ನೀರಿನ ಸಮಸ್ಯೆಯನ್ನು ರಾಜ್ಯಪಾಲರಿಗೆ ಮನವರಿಕೆ ಮಾಡಿಕೊಡಲಾಗಿದೆ. ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ರಾಜ್ಯಕ್ಕೆ ನ್ಯಾಯ ದೊರಕುವ ವಿಶ್ವಾಸ ಇದೆ~ ಎಂದು ಹಿರಿಯ ನಟ ಅಂಬರೀಷ್ ತಿಳಿಸಿದರು.

ಚಿತ್ರರಂಗದ ಮುಖಂಡರು ಮೌನ ಮೆರವಣಿಗೆ ನಡೆಸಿ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ ಬಳಿಕ ಅವರು ಮಾತನಾಡಿ, `ರಾಜ್ಯಪಾಲರು ರಾಜ್ಯದ ಸ್ಥಿತಿಯನ್ನು ಕೇಂದ್ರಕ್ಕೆ ಮನವರಿಕೆ ಮಾಡಿಕೊಡುವರು ಎಂಬ ವಿಶ್ವಾಸ ಇದೆ~ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT