ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವೇರಿ ತೀರ್ಥೋದ್ಭವ ಸಂಭ್ರಮ

Last Updated 17 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಭಾಗಮಂಡಲ (ಮಡಿಕೇರಿ): ತಲಕಾವೇರಿಯ ಬ್ರಹ್ಮಕುಂಡಿಕೆಯಲ್ಲಿ ಬುಧವಾರ ಬೆಳಗಿನ ಜಾವ ಸುಮಾರು 5.55 ಗಂಟೆಗೆ ಕಾವೇರಿ ಮಾತೆಯು ತೀರ್ಥರೂಪಿಣಿಯಾಗಿ ಉದ್ಭವಿಸಿ ಭಕ್ತರಿಗೆ ದರುಶನ ನೀಡಿದಳು. ಜಿಲ್ಲೆಯವರಲ್ಲದೇ, ನೆರೆಯ ಜಿಲ್ಲೆಯ ಹಾಗೂ ನೆರೆಯ ರಾಜ್ಯದ ಅಪಾರ ಸಂಖ್ಯೆಯ ಭಕ್ತಾದಿಗಳು ದರುಶನ ಪಡೆದು ಕೃತಾರ್ಥರಾದರು.

`ಜೈ ಜೈ ಮಾತಾ... ಕಾವೇರಿ ಮಾತಾ...~, `ಕಾವೇರಮ್ಮೆ ಕಾಪಾಡಮ್ಮಾ...~ ಎನ್ನುವ ಭಕ್ತರ ಘೋಷಣೆ ಆಕಾಶ ಮುಟ್ಟುವಂತಿತ್ತು. ಬ್ರಹ್ಮಕುಂಡಿಕೆಯನ್ನು ಹೂವು, ಆಭರಣಗಳಿಂದ ವಿಶೇಷವಾಗಿ ಅಲಂಕೃತಗೊಳಿಸಲಾಗಿತ್ತು.
ತೀರ್ಥರೂಪಿಣಿ ಕಾವೇರಿಯನ್ನು ವೀಕ್ಷಿಸಲೆಂದು ಭಕ್ತಾದಿಗಳು ಮಂಗಳವಾರ ಸಂಜೆಯಿಂದಲೇ ತಲಕಾವೇರಿಯತ್ತ ಧಾವಿಸಿದ್ದರು. ಭಜನೆ, ದೇವರ ನಾಮಸ್ಮರಣೆ ಮಾಡುವ ಮೂಲಕ ಬುಧವಾರದ ಬೆಳಗಿನ ಜಾವದವರೆಗೂ ಭಕ್ತರು ಕಾದು ಕುಳಿತಿದ್ದರು.

ಕೊಡವ ಸಾಹಿತ್ಯ ಅಕಾಡೆಮಿ, ಅರೆಭಾಷೆ ಸಾಹಿತ್ಯ ಅಕಾಡೆಮಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ರಾತ್ರಿಯಿಡೀ ಭಜನೆ ಸಂಗೀತದ ಕಾರ್ಯಕ್ರಮಗಳು ನಡೆದವು. ದೇವಸ್ಥಾನದ ಸಮಿತಿ ವತಿಯಿಂದ ಕಲಶಾಭಿಷೇಕ, ಚಂಡಿಕಾಯಾಗ, ನವಗ್ರಹ ಹೋಮ, ಮಹಾಸಂಕಲ್ಪ ಪೂಜೆ ಸೇರಿದಂತೆ ವಿವಿಧ ರೀತಿಯ ಪೂಜಾ ಕಾರ್ಯಕ್ರಮಗಳು ನಡೆದವು. ಇದರ ನೇತೃತ್ವವನ್ನು ಗೋಪಾಲಕೃಷ್ಣ ಆಚಾರ್, ನಾರಾಯಣ ಆಚಾರ್, ಪ್ರಶಾಂತ್ ಆಚಾರ್ ವಹಿಸಿಕೊಂಡಿದ್ದರು.

ತೀರ್ಥೋದ್ಭವ ಆಗುತ್ತಿದ್ದಂತೆ ಅರ್ಚಕರು ಭಕ್ತರ ಮೇಲೆ ತೀರ್ಥವನ್ನು ಪ್ರೋಕ್ಷಣೆ ಮಾಡಿದರು. ಇದನ್ನೇ ಕಾಯುತ್ತಿದ್ದ ಹಲವಾರು ಭಕ್ತರು ಕೊಳಕ್ಕೆ ಧುಮುಕಿ ಪುಣ್ಯ ಸ್ನಾನ ಮಾಡಿದರು. ಪುರುಷರು- ಮಹಿಳೆಯರು, ಹಿರಿಯರು- ಮಕ್ಕಳು ಎನ್ನುವ ಭೇದಭಾವ ಇಲ್ಲದೇ ಎಲ್ಲರೂ ಕೊಳದಲ್ಲಿ ಇಳಿದರು. ಬ್ರಹ್ಮಕುಂಡಿಕೆಯಿಂದ ಪವಿತ್ರ ತೀರ್ಥವನ್ನು ಬಿಂದಿಗೆ, ಕ್ಯಾನ್, ಬಾಟಲ್‌ಗಳಲ್ಲಿ ತುಂಬಿಸಿಕೊಂಡು ಮನೆಗಳಿಗೆ ಕೊಂಡೊಯ್ದರು.

ಜಿಲ್ಲಾ ಉಸ್ತುವಾರಿ ಸಚಿವ ಎಂ.ಪಿ. ಅಪ್ಪಚ್ಚು ರಂಜನ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಶಿವಪ್ಪ, ಸದಸ್ಯರಾದ ಎಸ್.ಎನ್. ರಾಜಾರಾವ್, ದೇವಸ್ಥಾನ ಸಮಿತಿಯ ಅಧ್ಯಕ್ಷ ಮನು ಮುತ್ತಪ್ಪ, ಜಿಲ್ಲಾಧಿಕಾರಿ ಡಾ.ಎನ್.ವಿ. ಪ್ರಸಾದ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಂಜುನಾಥ ಅಣ್ಣಿಗೇರಿ ಹಾಗೂ ಇತರರು ತೀರ್ಥೋದ್ಭವಕ್ಕೆ ಸಾಕ್ಷಿಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT