ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವೇರಿ: ನೀರು ಬಿಡದಿರಲು ಒತ್ತಾಯ

Last Updated 6 ಡಿಸೆಂಬರ್ 2012, 22:00 IST
ಅಕ್ಷರ ಗಾತ್ರ

ಸುವರ್ಣ ವಿಧಾನಸೌಧ (ಬೆಳಗಾವಿ): ಮಧ್ಯಾಹ್ನ ಕಲಾಪ ಆರಂಭವಾಗುತ್ತಿದ್ದಂತೆಯೇ ಸದನದಲ್ಲಿ ಕಾವೇರಿ ವಿಷಯ ಪ್ರಸ್ತಾಪಿಸಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, `ಸುಪ್ರೀಂಕೋರ್ಟ್ ಆದೇಶದಿಂದ ಉಂಟಾಗಿರುವ ಸಂದಿಗ್ಧ ಪರಿಸ್ಥಿತಿ ಎದುರಿಸುವ ದಿಕ್ಕಿನಲ್ಲಿ ಸರ್ಕಾರದ ನಿಲುವಿಗೆ ಸಂಬಂಧಿಸಿದಂತೆ ಗುರುವಾರ ಹೇಳಿಕೆ ನೀಡುವುದಾಗಿ ಮುಖ್ಯಮಂತ್ರಿಯವರು ಭರವಸೆ ನೀಡಿದ್ದರು. ಅದರಂತೆ ತಕ್ಷಣ ಹೇಳಿಕೆ ನೀಡಬೇಕು' ಎಂದು ಒತ್ತಾಯಿಸಿದರು.

ಆದರೆ, ಮುಖ್ಯಮಂತ್ರಿಯವರು ವಿಧಾನ ಪರಿಷತ್ ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಇದ್ದುದರಿಂದ, ಪ್ರತಿಪಕ್ಷಗಳ ಸದಸ್ಯರನ್ನು ಸಮಾಧಾನಪಡಿಸಲು ಜಲ ಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಪ್ರಯತ್ನಿಸಿದರು. ಮುಖ್ಯಮಂತ್ರಿಯವರ ಹೇಳಿಕೆಗೆ ಪಟ್ಟುಹಿಡಿದ ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರು ಸಭಾಧ್ಯಕ್ಷರ ಪೀಠದ ಎದುರು ಧರಣಿ ಆರಂಭಿಸಿದರು. ಸ್ಪೀಕರ್ ಕೆ.ಜಿ.ಬೋಪಯ್ಯ ಹತ್ತು ನಿಮಿಷಗಳ ಕಾಲ ಸದನವನ್ನು ಮುಂದೂಡಿದರು.

ಮತ್ತೆ ಕಲಾಪ ಆರಂಭವದಾಗ ಸದನಕ್ಕೆ ಬಂದ ಮುಖ್ಯಮಂತ್ರಿ ಹೇಳಿಕೆ ನೀಡಿದರು. ಆದರೆ, ಮುಖ್ಯಮಂತ್ರಿಯವರ ನಿಲುವನ್ನು ಒಪ್ಪದ ಸಿದ್ದರಾಮಯ್ಯ, `ರಾಜ್ಯದಲ್ಲೇ ವಿಷಮ ಪರಿಸ್ಥಿತಿ ಇದೆ. ಇಲ್ಲಿ ನೀರು ಇಲ್ಲದಿರುವಾಗ ತಮಿಳುನಾಡಿಗೆ ಹೇಗೆ ಬಿಡಲು ಸಾಧ್ಯ? ಸರ್ಕಾರ ನೀರು ಬಿಡುಗಡೆ ಮಾಡುವುದು ಗೊತ್ತಾದರೆ ಖಂಡಿತವಾಗಿಯೂ ಕಾವೇರಿ ಕಣಿವೆಯ ಜನರು ಸಂಘರ್ಷಕ್ಕೆ ಇಳಿಯುತ್ತಾರೆ. ರಾಜ್ಯದ ಜಲಾಶಯಗಳಿಂದ ನೀರು ಬಿಡುವುದಿಲ್ಲ ಎಂಬುದನ್ನು ಸ್ಪಷ್ಟವಾಗಿ ಹೇಳಿ' ಎಂದು ಒತ್ತಾಯಿಸಿದರು.

`ಮೆಟ್ಟೂರು ಜಲಾಶಯದಲ್ಲಿ 18 ಟಿಎಂಸಿ ಅಡಿ ನೀರಿನ ಸಂಗ್ರಹವಿದೆ. ಇನ್ನೂ ಎರಡು ತಿಂಗಳ ಕಾಲ ಅಲ್ಲಿ ಮಳೆ ಸುರಿಯುತ್ತದೆ. ಅಲ್ಲಿ ಲಭ್ಯವಿರುವ ಅಂತರ್ಜಲವನ್ನೂ ತಮಿಳುನಾಡು ಬಳಸಿಕೊಳ್ಳುತ್ತಿಲ್ಲ. ಆದರೆ, ರಾಜ್ಯಕ್ಕೆ ಈಗ ನೀರಿನ ಅವಶ್ಯಕತೆ ಹೆಚ್ಚು ಇದೆ. ಈ ಎಲ್ಲ ಅಂಶಗಳನ್ನೂ ಸುಪ್ರೀಂಕೋರ್ಟ್, ಕಾವೇರಿ ಉಸ್ತುವಾರಿ ಸಮಿತಿ ಮತ್ತು ಕಾವೇರಿ ನದಿ ಪ್ರಾಧಿಕಾರದ ಮುಂದೆ ಮಂಡಿಸಿ, ಈಗ ನೀರು ಬಿಡಲು ಸಾಧ್ಯವೇ ಇಲ್ಲ ಎಂಬುದನ್ನು ಖಚಿತವಾಗಿ ಮನವರಿಕೆ ಮಾಡಬೇಕು' ಎಂದರು.

ಮರಣ ಶಾಸನ: ರಾಜ್ಯ ಸರ್ಕಾರ ಈಗ ತಮಿಳುನಾಡಿಗೆ ನೀರು ಬಿಟ್ಟರೆ ಅದು ರಾಜ್ಯದ ರೈತರ ಪಾಲಿಗೆ ಮರಣ ಶಾಸನ ಆಗುತ್ತದೆ. ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ಮೂಲಕ ತನ್ನ ವಾದವನ್ನು ಸುಪ್ರೀಂಕೋರ್ಟ್ ಮುಂದೆ ಇಡಬೇಕು. ಅಲ್ಲಿಯವರೆಗೂ ನೀರು ಬಿಡುವ ತೀರ್ಮಾನವನ್ನು ಕೈಗೊಳ್ಳಬಾರದು. ಈ ವಿಷಯದಲ್ಲಿ ರಾಜ್ಯದ ನೆರವಿಗೆ ಬರುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು. ವಿರೋಧ ಪಕ್ಷದ ನಾಯಕರನ್ನೂ ನಿಯೋಗದಲ್ಲಿ ಕರೆದೊಯ್ಯಬೇಕು ಎಂದು ಜೆಡಿಎಸ್ ನಾಯಕ ಎಚ್.ಡಿ. ರೇವಣ್ಣ ಆಗ್ರಹಿಸಿದರು.

ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಅವರನ್ನೂ ನಿಯೋಗದಲ್ಲಿ ಕರೆದೊಯ್ಯುವಂತೆ ವಿರೋಧ ಪಕ್ಷದ ಉಪನಾಯಕ ಟಿ.ಬಿ.ಜಯಚಂದ್ರ ಸಲಹೆ ಮಾಡಿದರು. ಕಾಂಗ್ರೆಸ್‌ನ ಡಾ.ಎಚ್.ಸಿ. ಮಹದೇವಪ್ಪ, ಸುರೇಶ್ ಗೌಡ, ಕೆ.ಬಿ.ಚಂದ್ರಶೇಖರ್, ನೆ.ಲ.ನರೇಂದ್ರ ಬಾಬು, ಎ.ಮಂಜು, ಜೆಡಿಎಸ್‌ನ ಸಿ.ಎಸ್.ಪುಟ್ಟರಾಜು, ರಮೇಶ್ ಬಂಡಿಸಿದ್ದೇಗೌಡ, ಎಂ.ಕೆ.ಶಿವಲಿಂಗೇಗೌಡ, ಬಿಜೆಪಿಯ ಬಿ.ಎನ್.ವಿಜಯಕುಮಾರ್, ಎಲ್.ಎ.ರವಿಸುಬ್ರಹ್ಮಣ್ಯ ಮತ್ತಿತರರು `ತಮಿಳುನಾಡಿಗೆ ನೀರು ಬಿಡುವುದಿಲ್ಲ' ಎಂಬ ನಿರ್ಣಯ ಮಾಡುವಂತೆ ಒತ್ತಾಯಿಸಿದರು.

ಮತ್ತೆ ಪ್ರತಿಪಕ್ಷಗಳ ಸದಸ್ಯರನ್ನು ಸಮಾಧಾನಪಡಿಸಲು ಯತ್ನಿಸಿದ ಮುಖ್ಯಮಂತ್ರಿ, ಕಾನೂನು ಹೋರಾಟದ ಭರವಸೆ ನೀಡಿದರು. ಅವರ ಉತ್ತರದಿಂದ ತೃಪ್ತರಾಗದ ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರು ಪುನಃ ಧರಣಿ ಆರಂಭಿಸಿದರು. ಪರಿಸ್ಥಿತಿ ನಿಯಂತ್ರಣಕ್ಕೆ ಬಾರದ ಕಾರಣದಿಂದ ಸ್ಪೀಕರ್ ಸದನವನ್ನು ಶುಕ್ರವಾರಕ್ಕೆ ಮುಂದೂಡಿದರು.
ಪರಿಷತ್‌ನಲ್ಲೂ ಇದೇ ಕಾರಣಕ್ಕೆ ವಿರೋಧ ಪಕ್ಷಗಳ ಸದಸ್ಯರು ಧರಣಿ ನಡೆಸಿದ ಕಾರಣ ಸದನವನ್ನು ಮುಂದೂಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT