ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವೇರಿ ಪ್ರದೇಶದಲ್ಲಿ ಬಂದ್

Last Updated 6 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ತಮಿಳುನಾಡಿಗೆ ಕಾವೇರಿ ನದಿ ನೀರು ಬಿಡುವುದನ್ನು ವಿರೋಧಿಸಿ ಕನ್ನಡ ಪರ ಸಂಘಟನೆಗಳು ಶನಿವಾರ ಕರೆ ನೀಡಿದ್ದ `ಕರ್ನಾಟಕ ಬಂದ್~ಗೆ ರಾಜ್ಯದ ದಕ್ಷಿಣದ ಬಹುತೇಕ ಜಿಲ್ಲೆಗಳಲ್ಲಿ ಅಭೂತಪೂರ್ವ ಬೆಂಬಲ ವ್ಯಕ್ತವಾಯಿತು. ಸಣ್ಣಪುಟ್ಟ ಅಹಿತಕರ ಘಟನೆಗಳನ್ನು ಹೊರತುಪಡಿಸಿದರೆ ಬಂದ್ ಶಾಂತಿಯುತವಾಗಿತ್ತು. ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿತ್ತು.

ಕರಾವಳಿ ಮತ್ತು ಉತ್ತರ ಕರ್ನಾಟಕದ ಜಿಲ್ಲೆಗಳ ಅನೇಕ ಕಡೆ ಬಂದ್‌ಗೆ ಹೆಚ್ಚಿನ ಪ್ರತಿಕ್ರಿಯೆ ದೊರೆಯಲಿಲ್ಲ. ಹೀಗಾಗಿ ಅಲ್ಲಿ ಜನಜೀವನ ಎಂದಿನಂತೆ ಇತ್ತು. ಆದರೆ ಆ ಭಾಗದ ಹಲವು ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ರಸ್ತೆ ತಡೆ, ಪ್ರತಿಭಟನೆ, ಧರಣಿ ಸತ್ಯಾಗ್ರಹಗಳ ಮೂಲಕ ಕಾವೇರಿ ಪರ ಹೋರಾಟವನ್ನು ಬೆಂಬಲಿಸಲಾಯಿತು.

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ, ಹಾಸನ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿಕ್ಕಮಗಳೂರು, ರಾಯಚೂರು, ಬಳ್ಳಾರಿ, ಹಾವೇರಿ, ರಾಣೆಬೆನ್ನೂರು, ಶಿಗ್ಗಾವಿ, ಹಿರೇಕೆರೂರು, ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ, ಯಲ್ಲಾಪುರಗಳಲ್ಲಿ ಬಂದ್ ಸಂಪೂರ್ಣ ಯಶಸ್ವಿಯಾಯಿತು.

ಅಂಗಡಿ ಮುಂಗಟ್ಟುಗಳು, ಮಾಲ್‌ಗಳು, ಚಿತ್ರಮಂದಿರಗಳು, ಪೆಟ್ರೋಲ್ ಬಂಕ್‌ಗಳು ಮುಚ್ಚಿದ್ದವು. ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಬಹುತೇಕ ಸರ್ಕಾರಿ ಕಚೇರಿಗಳು, ಬ್ಯಾಂಕುಗಳಲ್ಲಿ ಅಘೋಷಿತ ರಜೆಯ ವಾತಾವರಣ ಇತ್ತು. ಕೆಲವೆಡೆ ಎಟಿಎಂಗಳನ್ನು ಮುಚ್ಚಿಸುವ ಯತ್ನವೂ ನಡೆಯಿತು.

ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ರಾಜ್ಯ ರಸ್ತೆ ಸಾರಿಗೆ ನಿಗಮ ಮತ್ತು ಮಹಾನಗರ ಸಾರಿಗೆ ನಿಗಮಗಳ ಬಸ್ಸುಗಳು ರಸ್ತೆಗೆ ಇಳಿಯಲಿಲ್ಲ. ಆಟೊಗಳ ಸಂಚಾರವೂ ಇರಲಿಲ್ಲ. ರಾಷ್ಟ್ರೀಯ ಹೆದ್ದಾರಿ ಮತ್ತು ಮುಖ್ಯ ರಸ್ತೆಗಳಲ್ಲಿ ಸಂಘಟನೆಗಳ ಕಾರ್ಯಕರ್ತರು ರಸ್ತೆ ತಡೆ ನಡೆಸಿದ್ದರಿಂದ ಖಾಸಗಿ ವಾಹನಗಳ ಸಂಚಾರವೂ ವಿರಳವಾಗಿತ್ತು. ಪರಿಣಾಮ ಸದಾ ವಾಹನಗಳಿಂದ ತುಂಬಿ ತುಳುಕುತ್ತಿದ್ದ ರಸ್ತೆಗಳು, ಜನರಿಂದ ಗಿಜಿಗುಡುತ್ತಿದ್ದ ಬಸ್ ನಿಲ್ದಾಣಗಳು ಬಿಕೋ ಎನ್ನುತ್ತಿದ್ದವು.

ಬೆಂಗಳೂರು- ಮೈಸೂರು ನಡುವಿನ ಕೆಲವು ರೈಲುಗಳ ಸಂಚಾರವನ್ನು ರದ್ದು ಮಾಡಲಾಯಿತು. ಪ್ರತಿಭಟನೆಗೆ ಮಣಿದು `ನಮ್ಮ ಮೆಟ್ರೊ~ ರೈಲು ಸಂಚಾರವನ್ನು ಮಧ್ಯಾಹ್ನ 1ರಿಂದ ಸಂಜೆ 6ರವರೆಗೆ ನಿಲ್ಲಿಸಲಾಯಿತು.

ರಾಜಧಾನಿಯಲ್ಲಿ ಕನ್ನಡ ಚಿತ್ರರಂಗದ ಪ್ರಮುಖರು ರಾಜಭವನದವರೆಗೆ ಮೆರವಣಿಗೆ ನಡೆಸಿ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು. ಕಾವೇರಿ ನದಿ ನೀರಿನ ವಿಚಾರದಲ್ಲಿ ರಾಜ್ಯದ ರೈತರ ಹಿತ ರಕ್ಷಿಸುವಂತೆ ಆಗ್ರಹಿಸಿದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಬೆಂಬಲಿಗರು ನಗರದಲ್ಲಿ ಎರಡನೇ ದಿನವೂ ಧರಣಿ ಸತ್ಯಾಗ್ರಹ ಮುಂದುವರೆಸಿದರು. ಸೋಮವಾರದವರೆಗೆ ಅಹೋರಾತ್ರಿ ಧರಣಿ ನಡೆಸುವುದಾಗಿ ಅವರು ಹೇಳಿದ್ದರಾದರೂ ಸಂಜೆ ಭಾರೀ ಮಳೆ ಸುರಿದಿದ್ದರಿಂದ ಅವರು ಧರಣಿ ನಿಲ್ಲಿಸಿದರು.

ಬಂದ್‌ಗೆ ಕರೆ ನೀಡಿದ್ದ ಕನ್ನಡ ಒಕ್ಕೂಟದ ಮುಖಂಡರಾದ ವಾಟಾಳ್ ನಾಗರಾಜ್, ಸಾ.ರಾ.ಗೋವಿಂದು, ಕರ್ನಾಟಕ ರಕ್ಷಣಾ ವೇದಿಕೆಯ (ಪ್ರವೀಣ್ ಶೆಟ್ಟಿ ಬಣ) ಅಧ್ಯಕ್ಷ ಶಿವರಾಮೇಗೌಡ, ದಲಿತ ಸಂಘರ್ಷ ಸಮಿತಿಯ ಅಧ್ಯಕ್ಷ ಎನ್.ಮೂರ್ತಿ ಮೊದಲಾದವರು ಮುಖ್ಯಮಂತ್ರಿಯವರ ಗೃಹ ಕಚೇರಿಗೆ ಮುತ್ತಿಗೆ ಹಾಕಲು ನಡೆಸಿದ ಯತ್ನವನ್ನು ಪೊಲೀಸರು ತಡೆದರು.

ಮಹಾತ್ಮ ಗಾಂಧಿ ರಸ್ತೆಯಲ್ಲಿ `ನಮ್ಮ ಮೆಟ್ರೊ~ ನಿಲ್ದಾಣಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಕರ್ನಾಟಕ ರಕ್ಷಣಾ ವೇದಿಕೆಯ (ನಾರಾಯಣಗೌಡ ಬಣ) ಕಾರ್ಯಕರ್ತರು ಹಾಗೂ ಕೇಂದ್ರ ಸಚಿವ ಎಸ್.ಎಂ.ಕೃಷ್ಣ ಅವರ  ಸದಾಶಿವನಗರದ ನಿವಾಸದ ಮುಂದೆ ಪ್ರತಿಭಟನೆ ನಡೆಸಿದ ಜಯ ಕರ್ನಾಟಕ ಸಂಘಟನೆಯ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ ಬಿಡುಗಡೆ ಮಾಡಿದರು.

ಬೆಳಿಗ್ಗೆಯಿಂದಲೇ ಸ್ವಯಂ ಪ್ರೇರಿತರಾಗಿ ಬೀದಿಗಿಳಿದ ಸಂಘಟನೆಗಳ ಕಾರ್ಯಕರ್ತರು ಪ್ರಮುಖ ವೃತ್ತಗಳಲ್ಲಿ `ಕಾವೇರಿ ನಮ್ಮದು~ ಎಂಬ ಘೋಷಣೆಗಳನ್ನು ಕೂಗಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕನ್ನಡ ಬಾವುಟಗಳನ್ನು ಹಿಡಿದು ಬೈಕ್ ರ‌್ಯಾಲಿ ನಡೆಸಿದರು.

ಮೈಸೂರಿನಲ್ಲಿ ಭಾರತೀಯ ರಿಸರ್ವ್ ನೋಟು ಮುದ್ರಣಾಲಯ (ಆರ್‌ಬಿಐ) ಉದ್ಯೋಗಿ, ಮೂಲತಃ ಚಿತ್ರದುರ್ಗದವರಾದ ಗೌರಣ್ಣ (45) ಬೈಕ್ ರ‌್ಯಾಲಿ ನಡೆಸುವ ವೇಳೆ ತೀವ್ರ ಹೃದಯಾಘಾತಕ್ಕೆ ಒಳಗಾಗಿ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಕೊನೆಯುಸಿರೆಳೆದರು. ಕನ್ನಡಪರ ಸಂಘಟನೆಯ ಗುಂಪೊಂದು ಹೆಬ್ಬಾಳಿನ ವಿಪ್ರೊ ಕಂಪೆನಿಗೆ ನುಗ್ಗಿ ಕಚೇರಿಯಲ್ಲಿದ್ದ ಪೀಠೋಪಕರಣಗಳು, ಎಲೆಕ್ಟ್ರಾನಿಕ್ ಉಪಕರಣಗಳನ್ನು ಧ್ವಂಸ ಮಾಡಿತು.

ಮಂಡ್ಯದಲ್ಲಿ ಯುವಕನೊಬ್ಬ ಮೈ ಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ. ಚಾಮರಾಜನಗರ ಮತ್ತು ಹಾಸನದಲ್ಲಿ ಬಂದ್ ಶಾಂತಿಯುತವಾಗಿ ನಡೆದಿದೆ.

ದಾವಣಗೆರೆ ನಗರ ಸೇರಿದಂತೆ ಜಿಲ್ಲೆಯಲ್ಲಿ ಬಂದ್ ಬಹುತೇಕ ಶಾಂತಿಯುತವಾಗಿ ನಡೆದಿದೆ. ಬಹುತೇಕ ಅಂಗಡಿ- ಮುಂಗಟ್ಟುಗಳು ಮುಚ್ಚಿದ್ದರಿಂದ ವ್ಯಾಪಾರ- ವಹಿವಾಟು ಸ್ಥಗಿತಗೊಂಡಿತ್ತು. ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ, ಹಿರಿಯೂರಿನಲ್ಲಿ ಬಂದ್ ಯಶಸ್ವಿಯಾಯಿತು. ಮೊಳಕಾಲ್ಮುರಿನಲ್ಲೂ ಉತ್ತಮ ಪ್ರತಿಕ್ರಿಯೆ ದೊರೆಯಿತು. ಆದರೆ ಹೊಳಲ್ಕೆರೆಯಲ್ಲಿ ವಿಫಲವಾಯಿತು. ಶಿವಮೊಗ್ಗ ಜಿಲ್ಲೆಯಲ್ಲಿ ಬಂದ್‌ಗೆ ಬೆಂಬಲ ದೊರೆಯಿತು.

ರಾಜ್ಯ ಬಂದ್‌ಗೆ ಶನಿವಾರ ಉತ್ತರ ಕರ್ನಾಟಕದ ಅನೇಕ ಕಡೆ ಅಷ್ಟೇನೂ ಪ್ರೋತ್ಸಾಹಕರ ಪ್ರತಿಕ್ರಿಯೆ ಸಿಗಲಿಲ್ಲ. ಆದರೆ ಗದಗ, ಧಾರವಾಡ, ಹಾವೇರಿ, ಬಾಗಲಕೋಟೆ, ವಿಜಾಪುರ, ಬೆಳಗಾವಿ, ಉತ್ತರಕನ್ನಡ ಜಿಲ್ಲೆಗಳ ಕೆಲವೆಡೆ ಅಂಗಡಿ-ಮುಂಗಟ್ಟುಗಳು ಬೆಳಿಗ್ಗೆ ಮುಚ್ಚಿದ್ದವು. ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ವಾಹನ ಸಂಚಾರ ಮಾತ್ರ ಎಂದಿನಂತೆಯೇ ಇತ್ತು. ಚಿತ್ರಪ್ರದರ್ಶನ ಇರಲಿಲ್ಲ. ಎಲ್ಲೆಡೆ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು. ಹಲವೆಡೆ ರೈಲು ತಡೆ ಚಳವಳಿ ನಡೆಸಲಾಯಿತು.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಬಂದ್‌ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಸರ್ಕಾರಿ, ಖಾಸಗಿ ಬಸ್, ರಿಕ್ಷಾ, ಟ್ಯಾಕ್ಸಿ ಓಡಾಟ ಎಂದಿನಂತಿತ್ತು. ಮಂಗಳೂರಿನ ಹಂಪನಕಟ್ಟೆಯಲ್ಲಿ ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆ ನಡೆಸಿದ 100ಕ್ಕೂ ಅಧಿಕ ಮಂದಿಯನ್ನು ಪೊಲೀಸರು ಬಂಧಿಸಿದರು. ಹೆಬ್ರಿಯಲ್ಲಿ ಬಂದ್ ಬಹುತೇಕ ಯಶಸ್ವಿಯಾಯಿತು. ಕಾರ್ಕಳದಲ್ಲಿ ಖಾಸಗಿ ಬಸ್‌ಗಳ ಓಡಾಟ ವಿರಳವಾಗಿತ್ತು. ಬಂದ್‌ಗೆ ಚಿಕ್ಕಮಗಳೂರು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ಬಂದ್‌ಗೆ ಹೈದರಾಬಾದ್ ಕರ್ನಾಟಕ ಪ್ರದೇಶದ ರಾಯಚೂರು ಜಿಲ್ಲೆ ಹೊರತುಪಡಿಸಿ ಇತರ ಜಿಲ್ಲೆಗಳಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಗುಲ್ಬರ್ಗ, ಬೀದರ್, ಕೊಪ್ಪಳ ಜಿಲ್ಲಾ ಕೇಂದ್ರಗಳು ಮತ್ತು ಈ ಜಿಲ್ಲೆಗಳ ಇತರ ಪಟ್ಟಣಗಳಲ್ಲಿ ಹೆಚ್ಚಿನ ಪ್ರದೇಶದಲ್ಲಿ ಎಂದಿನಂತೆ ವ್ಯಾಪಾರ ವಹಿವಾಟು ನಡೆಯಿತು. ರಾಯಚೂರು ನಗರದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

 1200 ಕೋಟಿ ನಷ್ಟ
ಬೆಂಗಳೂರು: `ಕರ್ನಾಟಕ ಬಂದ್~ ಪರಿಣಾಮದಿಂದಾಗಿ ರಾಜ್ಯದಲ್ಲಿ ವಾಣಿಜ್ಯ ವಹಿವಾಟು, ತೆರಿಗೆ ಸಂಗ್ರಹ ಸೇರಿದಂತೆ ವಿವಿಧ ಚಟುವಟಿಕೆಗಳಿಗೆ ಭಾರಿ ಹೊಡೆತ ಬಿದ್ದಿದ್ದು, 1,200 ಕೋಟಿ ರೂಪಾಯಿ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.

ನಗರದ ದೊಡ್ಡ ಕಂಪೆನಿಗಳು, ಬೃಹತ್ ಕೈಗಾರಿಕೆಗಳು, ಮಧ್ಯಮ ಹಾಗೂ ಸಣ್ಣ ಕೈಗಾರಿಕೆಗಳು ಬಂದ್ ಕಾರಣದಿಂದ ಬಾಗಿಲು ಹಾಕಿದ್ದವು. ಇದರಿಂದಾಗಿ ವಾಣಿಜ್ಯ ಚಟುವಟಿಕೆ ಸಂಪೂರ್ಣ ಸ್ಥಗಿತಗೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT