ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವೇರಿ ಬಂದ್: ನೀರು ಹರಿಸದಂತೆ ಒತ್ತಡ

Last Updated 7 ಅಕ್ಟೋಬರ್ 2012, 7:50 IST
ಅಕ್ಷರ ಗಾತ್ರ

ಕುಣಿಗಲ್: ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ವಿರೋಧಿಸಿ ಕನ್ನಡ ಒಕ್ಕೂಟ ಶನಿವಾರ ಕರೆ ನೀಡಿದ್ದ `ಕರ್ನಾಟಕ ಬಂದ್~ ಪಟ್ಟಣದಲ್ಲಿ ಯಶಸ್ವಿಯಾಯಿತು.

ಬೆಳಿಗ್ಗೆ ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣದ ಬಳಿ ಸಂಘಟಿತರಾದ ವಿವಿಧ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಪಟ್ಟಣದಲ್ಲಿ ಬೈಕ್ ರ‌್ಯಾಲಿ ನಡೆಸಿ ಬಂದ್‌ಗೆ ಬೆಂಬಲ ಸೂಚಿಸುವಂತೆ ಮನವಿ ಮಾಡಿದ ಮೇರೆಗೆ ಹೋಟೆಲ್ ಮಾಲೀಕರು, ವರ್ತಕರು, ಅಂಗಡಿ ಮುಂಗಟ್ಟು ಮುಚ್ಚಿ ಬಂದ್‌ಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದರು.

ನಂತರ ಹುಚ್ಚಮಾಸ್ತಿಗೌಡ ವೃತ್ತದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಪಕ್ಷಾತೀತ, ಜಾತ್ಯತೀತವಾಗಿ ಮುಖಂಡರು ಭಾಗವಹಿಸಿ, ನಿರಂತರ ಸಮಸ್ಯೆ ಸೃಷ್ಟಿ ಮಾಡಿರುವ ಕಾವೇರಿ ವಿವಾದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿದೆ. ಪ್ರಾಧಿಕಾರ ನೀರು ಬಿಡುವಂತೆ ಆದೇಶದ ನೀಡಿರುವುದು ಅವೈಜ್ಞಾನಿಕ ಹಾಗೂ ರೈತ ವಿರೋಧಿಯಾಗಿದೆ. ಪ್ರಾಧಿಕಾರ ತಕ್ಷಣ ಆದೇಶ ಪರಿಶೀಲಿಸಿ, ಈ ಕುರಿತು ರಾಜ್ಯ ಸರ್ಕಾರ ಸಲ್ಲಿಸಿರುವ ಅರ್ಜಿಯ ವಿಚಾರಣೆ ಕೈಗೆತ್ತಿಕೊಂಡು ನ್ಯಾಯ ದೊರಕಿಸಿಕೊಡಬೇಕು ಎಂದು ಒಮ್ಮತವಾಗಿ ಆಗ್ರಹಿಸಿದರು.

ಶಾಸಕ ಬಿ.ಬಿ.ರಾಮಸ್ವಾಮಿಗೌಡ, ಮಾಜಿ ಶಾಸಕ ಎಸ್.ಪಿ.ಮುದ್ದಹನುಮೇಗೌಡ, ಬಿಜೆಪಿ ಮುಖಂಡ ಡಿ.ಕೃಷ್ಣಕುಮಾರ್, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಕೆ.ಎಲ್.ಹರೀಶ್, ಪುರಸಭೆ ಉಪಾಧ್ಯಕ್ಷ ರಂಗಸ್ವಾಮಿ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ದಿನೇಶ್‌ಕುಮಾರ್, ಕರ್ನಾಟಕ ರಕ್ಷಣಾ ವೇದಿಕೆಯ ಮಂಜುನಾಥ್, ಕನ್ನಡ ಸೇನೆಯ ಶ್ರೀನಿವಾಸ್, ಜಯ ಕರ್ನಾಟಕ ಸಂಘಟನೆಯ ಅಪ್ಪುಸುರೇಶ್, ಅಂಬರೀಶ್ ಅಭಿಮಾನಿ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಟಿ.ನಾಗೇಶ್, ತಾಲ್ಲೂಕು ಬಿಜೆಪಿ ಅಧ್ಯಕ್ಷ ಚಿಕ್ಕರಾಮಣ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ್, ಮುಸ್ಲಿಂ ಮುಖಂಡರಾದ ಅಬ್ದುಲ್ ಹಮೀದ್, ಸದಾಕತ್, ರೆಹಮಾನ್ ಷರೀಫ್, ಕನ್ನಡ ಜಾಗೃತಿ ವೇದಿಕೆ ಹೇಮಂತ್‌ಕುಮಾರ್, ಶಿವರಾಜ್‌ಕುಮಾರ್ ಅಭಿಮಾನಿಗಳ ಸಂಘ, ಪುನೀತ್ ರಾಜ್‌ಕುಮಾರ್ ಅಭಿಮಾನಿಗಳ ಸಂಘ, ಸವಿತಾ ಸಮಾಜ, ತಮಿಳರ ಸಂಘದ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದವು. ನಂತರ ತಹಶೀಲ್ದಾರ್ ಎನ್.ಸಿ.ಜಗದೀಶ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಬಂದ್ ಆಚರಿಸುತ್ತಿದ್ದರಿಂದ ಹುಲಿಯೂರುದುರ್ಗ ಕಡೆಯಿಂದ ಆಗಮಿಸಿದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ನ್ನು ತಡೆದ ಕರವೇ ಪದಾಧಿಕಾರಿಗಳು ಘಟಕಕ್ಕೆ ಕಳುಹಿಸಿದರು. ಬಿದನಗೆರೆ-ಮಲ್ಲಾಘಟ್ಟ ಗ್ರಾಮಗಳಲ್ಲಿ ರಸ್ತೆಯಲ್ಲಿ ಟೈರ್ ಸುಟ್ಟು ಪ್ರತಿಭಟನೆ ನಡೆಸುತ್ತಿದ್ದ ಗುಂಪನ್ನು ಪೊಲೀಸರು ಚದುರಿಸಿ ರಸ್ತೆ ತೆರವುಗೊಳಿಸಿದಂತಹ ಸಣ್ಣ ಪುಟ್ಟ ಘಟನೆ ಹೊರತುಪಡಿಸಿ ಬಂದ್ ಸಂಪೂರ್ಣ ಶಾಂತಿಯುತವಾಗಿತ್ತು.

ತಿಪಟೂರು: ಜಯ ವಿರುದ್ಧ ಆಕ್ರೋಶ
ತಿಪಟೂರು: ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ವಿರೋಧಿಸಿ ಕರೆ ನೀಡಿದ್ದ ಕರ್ನಾಟಕ ಬಂದ್‌ಗೆ ನಗರದಲ್ಲಿ ಸಂಪೂರ್ಣ ಬೆಂಬಲ ದೊರೆತು, ಬಂದ್ ಯಶಸ್ವಿಯಾಯಿತು.

ನಗರದ ಎಲ್ಲ ವರ್ತಕರು ಶನಿವಾರ ಸ್ವಯಂ ಪ್ರೇರಿತರಾಗಿ ಅಂಗಡಿ ಮುಗ್ಗಟ್ಟು ಮುಚ್ಚಿದ್ದರು. ಬ್ಯಾಂಕ್, ಶಾಲಾ ಕಾಲೇಜು, ಪೆಟ್ರೋಲ್ ಬಂಕ್, ಚಿತ್ರಮಂದಿರ, ಸರ್ಕಾರಿ ಕಚೇರಿಗಳೂ ಮುಚ್ಚಿದ್ದವು. ಬಸ್ ಸಂಚಾರ ಸ್ಥಗಿತಗೊಂಡಿತ್ತು. ಸಂತೆ ದಿನವಾಗಿದ್ದರೂ ಎಪಿಎಂಸಿ ಮಾರುಕಟ್ಟೆ ಕೂಡ ಬಿಕೋ ಎನ್ನುತ್ತಿತ್ತು.

ಕರ್ನಾಟಕ ರಕ್ಷಣಾ ವೇದಿಕೆ, ಕನ್ನಡ ರಕ್ಷಣಾ ವೇದಿಕೆ, ಜಯಕರ್ನಾಟಕ, ಕನ್ನಡ ಸೇನೆ, ಮುಸ್ಲಿಂ ಯುವಕರು ಸೇರಿದಂತೆ ವಿವಿಧ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಬಂದ್ ಸಂದರ್ಭದ ಪ್ರತಿಭಟನೆಯಲ್ಲಿ ಒಟ್ಟಾಗಿ ಪಾಲ್ಗೊಂಡಿದ್ದರು.

ಕೆಂಪಮ್ಮ ದೇವಾಲಯದಿಂದ ಹೊರಟ ಪ್ರತಿಭಟನಾ ಮೆರವಣಿಗೆ ನಗರದ ಮುಖ್ಯರಸ್ತೆಯಲ್ಲಿ ಸಾಗಿತು. ಸಿಂಗ್ರಿವೃತ್ತದಲ್ಲಿ ಸಮಾವೇಶಗೊಂಡ ಕಾರ್ಯಕರ್ತರು ಕೇಂದ್ರ-ರಾಜ್ಯ ಸರ್ಕಾರ ಹಾಗೂ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ವಿರುದ್ಧ ಘೋಷಣೆ ಕೂಗಿದರು.

ಷಡಕ್ಷರ ಮಠದ ರುದ್ರಮುನಿ ಸ್ವಾಮೀಜಿ, ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಘಟಕದ ಅಧ್ಯಕ್ಷ ಕುಮಾರ್ ಯಾದವ್, ರಾಜ್ಯ ಕನ್ನಡ ರಕ್ಷಣಾ ವೇದಿಕೆ ಅಧ್ಯಕ್ಷ ವಿಜಯಕುಮಾರ್, ಮುಸ್ಲಿಂ ಮುತ್ತುವಲ್ಲಿ ದಸ್ತಗಿರ್, ಜೆಡಿಎಸ್ ಮುಖಂಡರಾದ ಜಕ್ಕನಹಳ್ಳಿ ಲಿಂಗರಾಜು, ಪ್ರಕಾಶ್, ಯಾದವರ ಸಂಘದ ಬಿ.ಶಿವಪ್ಪ, ಮದಕರಿ ಯುವಕ ಸಂಘದ ಜಯಸಿಂಹ, ನಗರಸಭೆ ಸದಸ್ಯರಾದ ಎಂ. ನಾಗರಾಜು ನಿಜಗುಣ, ಬಾಗೇಪಲ್ಲಿ ನಟರಾಜು ಮತ್ತಿತರರು ಇದ್ದರು.

ಮಧುಗಿರಿ: ಪೆಟ್ರೋಲ್ ಬಂಕ್‌ಗೆ ಕಲ್ಲು
ಮಧುಗಿರಿ: ತಮಿಳುನಾಡಿಗೆ ಕಾವೇರಿ ನೀರು ಬಿಡುತ್ತಿರುವುದನ್ನು ವಿರೋಧಿಸಿ ಕನ್ನಡ ಒಕ್ಕೂಟ ಶನಿವಾರ ಕರೆ ನೀಡಿದ್ದ ಕರ್ನಾಟಕ ಬಂದ್‌ಗೆ ಪಟ್ಟಣದಲ್ಲಿ ಸಂಪೂರ್ಣ ಬೆಂಬಲ ವ್ಯಕ್ತವಾಗಿದೆ.

ಪುರಭವನದ ಆವರಣದಲ್ಲಿ ಸೇರಿದ ಕನ್ನಡ ಪರ ಸಂಘಟನೆಗಳ ನೂರಾರು ಕಾರ್ಯಕರ್ತರು ಪಟ್ಟಣದ ಬೀದಿಗಳಲ್ಲಿ ಬೈಕ್ ರ‌್ಯಾಲಿ ನಡೆಸಿ, ಕೇಂದ್ರ-ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು.

ಕಾಂಗ್ರೆಸ್, ಜನತಾದಳ, ಬಿಜೆಪಿ ಜತೆ ಎಲ್ಲ ರಾಜಕೀಯ ಪಕ್ಷಗಳ ಮುಖಂಡರು, ಕನ್ನಡ ಜಾಗೃತಿ ವೇದಿಕೆ, ಕರವೇ, ಕನ್ನಡ ಸೇನೆ, ಕನ್ನಡ ಯುವಕರ ಸಂಘ, ಕನ್ನಡ ಸಾಹಿತ್ಯ ಪರಿಷತ್, ಬಸ್ ಮಾಲೀಕರ ಸಂಘ, ಕನ್ನಡ ರಕ್ಷಣಾ ವೇದಿಕೆ, ಜಯಕರ್ನಾಟಕ, ನಾಗರಿಕ ಹಿತ ರಕ್ಷಣಾ ವೇದಿಕೆ, ರೈತ ಸಂಘ, ಇತರೆ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ಸೇರಿದಂತೆ ಸಾರ್ವಜನಿಕರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಮೆರವಣಿಗೆ ಮೂಲಕ ಉಪವಿಭಾಗಾಧಿಕಾರಿ ಕಚೇರಿಗೆ ತೆರಳಿ ಮನವಿ ಪತ್ರ ಸಲ್ಲಿಸಿದರು.

ಬಂದ್‌ಗೆ ಸಹಕರಿಸಲಿಲ್ಲ ಎಂದು ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಗೌರಿಬಿದನೂರು ರಸ್ತೆಯಲ್ಲಿನ ಬಾಲಾಜಿ ಪೆಟ್ರೋಲ್ ಬಂಕ್‌ಗೆ ಕಲ್ಲು ತೂರಿದ ಘಟನೆ ಹೊರತು ಪಡಿಸಿ, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ಬೆಂಬಲ: ತಾಲ್ಲೂಕು ವಕೀಲರ ಸಂಘದ ವತಿಯಿಂದ ಕರ್ನಾಟಕ ಬಂದ್‌ಗೆ ಬೆಂಬಲ ವ್ಯಕ್ತಪಡಿಸಿ, ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದರು.

ಪ್ರಾಧಿಕಾರದ ತೀರ್ಪಿಗೆ ವಿರೋಧ
ಚಿಕ್ಕನಾಯಕನಹಳ್ಳಿ: ಕಾವೇರಿ ಪ್ರಾಧಿಕಾರದ ತೀರ್ಪು ವಿರೋಧಿಸಿ ವಿವಿಧ ಸಂಘ ಸಂಸ್ಥೆಗಳಿಂದ ಶನಿವಾರ ನಗರದಲ್ಲಿ ಧರಣಿ ಸತ್ಯಾಗ್ರಹ, ರಸ್ತೆತಡೆ ಹಾಗೂ ಸ್ವಯಂ ಪ್ರೇರಿತ ಬಂದ್ ಯಶಸ್ವಿಯಾಗಿ ನಡೆಯಿತು.

ರಾಜ್ಯಾದ್ಯಂತ ನಡೆದ ಬಂದ್ ಹಿನ್ನೆಲೆಯಲ್ಲಿ ಇಲ್ಲಿನ ಕರ್ನಾಟಕ ರಕ್ಷಣಾ ವೇದಿಕೆ, ತಾಲ್ಲೂಕು ಜನಪರ ವೇದಿಕೆಯು ಕಾವೇರಿ ಪ್ರಾಧಿಕಾರದ ತೀರ್ಪು ವಿರೋಧಿಸಿ ಪ್ರತಿಭಟನೆ ಹಾಗೂ ಸ್ವಯಂಘೋಷಿತ ಬಂದ್‌ಗೆ ಕರೆ ನೀಡಿದ ಹಿನ್ನೆಲೆಯಲ್ಲಿ ಪಟ್ಟಣವೂ ಸೇರಿದಂತೆ ತಾಲ್ಲೂಕಿನ ವಿವಿಧ ಪಕ್ಷ, ಸಂಘಟನೆಯಿಂದ ವ್ಯಾಪಕ ಬೆಂಬಲ ವ್ಯಕ್ತವಾಯಿತು.

ಕರ್ನಾಟಕ ರಕ್ಷಣಾ ವೇದಿಕೆ ನೇತೃತ್ವದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್, ಹೋಬಳಿ ಘಟಕ, ಕನ್ನಡ ಸಂಘ, ರೋಟರಿ ಸಂಂಸ್ಥೆ, ರೈತಸಂಘ, ಸ್ನೇಹಕೂಟ, ಟಿಪ್ಪುಸುಲ್ತಾನ್ ಯುವಕ ಸಂಘ, ಕುಂಚಾಂಕುರ ಕಲಾ ಸಂಘ, ಸುಭಾಷ್ ಚಂದ್ರಬೋಸ್ ಆಟೊ ಮಾಲೀಕರು ಹಾಗೂ ಚಾಲಕರ ಸಂಘ, ಭಾರತೀಯ ಜನತಾ ಪಕ್ಷ, ವಿವಿಧ ಸಂಘ-ಸಂಸ್ಥೆಯ ಸದಸ್ಯರಿಂದ ನಡೆದ ಪ್ರತಿಭಟನಾ ಮೆರವಣಿಗೆಗೆ ಹಿರಿಯ ಸಾಹಿತಿ ಎಂ.ವಿ.ನಾಗರಾಜರಾವ್ ಚಾಲನೆ ನೀಡಿದರು. ನಂತರ ನೂರಾರು ಸಂಖ್ಯೆಯ ಕಾರ್ಯಕರ್ತರು ಮುಖ್ಯರಸ್ತೆಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ನಂತರ ಎಸ್‌ಬಿಎಂ ವೃತ್ತದಲ್ಲಿ ರಸ್ತೆತಡೆ ಹಾಗೂ ಬಹಿರಂಗ ಸಭೆ ಸಂಜೆ 5ರವೆರೆಗೂ ನಡೆಯಿತು.

ತಾಲ್ಲೂಕು ಜನಪರ ವೇದಿಕೆ ವತಿಯಿಂದ ಇಲ್ಲಿನ ನೆಹರೂ ವೃತ್ತದಲ್ಲಿ ನಡೆದ ಧರಣಿ ಸತ್ಯಾಗ್ರಹದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಸಂಘ, ಭುವನೇಶ್ವರಿ ಯುವಕ ಸಂಘ, ಸ್ಪಂದನ ಪ್ರಗತಿಪರ ಒಕ್ಕೂಟ, ದಲಿತ ಸಂಘಟನೆ, ಪುರಸಭೆ ಅಧ್ಯಕ್ಷರು, ಸದಸ್ಯರು ಹಾಗೂ ವಿವಿಧ ಪಕ್ಷದ ಮುಖಂಡರು ಪಾಲ್ಗೊಂಡಿದ್ದರು.

ನಂತರ ಎರಡೂ ಸಂಘಟನೆಗಳಿಂದ ಧರಣಿ ಸತ್ಯಾಗ್ರಹ ಮುಂದುವರೆಯಿತು. ವಿವಿಧ ಸಂಘಟನೆ ಹಾಗೂ ಪಕ್ಷದ ಮುಖಂಡರಾದ ಎಂ.ಎಸ್.ರವಿಕುಮಾರ್, ಮಲ್ಲಿಕಾರ್ಜುನಯ್ಯ, ಎಚ್.ಬಿ.ಪಂಚಾಕ್ಷರಿ, ಎಂ.ವಿಶ್ವೇಶ್ವರಯ್ಯ, ಎಸ್.ಮುರುಡಯ್ಯ, ಸಿ.ಕೆ.ಕೃಷ್ಣಮೂರ್ತಿ, ಕೆ.ಜಿ.ಕೃಷ್ಣೇಗೌಡ, ಸಿ.ಡಿ.ಚಂದ್ರಶೇಖರ್, ಕರವೇ ಗುರುಮೂರ್ತಿ, ಎಚ್‌ಬಿಎಸ್ ನಾರಾಯಣಗೌಡ, ನಾರಾಯಣ್, ರುಕ್ಮಿಣಮ್ಮ, ಸಿ.ಎಸ್.ನಟರಾಜ್ ಮುಂತಾದವರು ಮಾತನಾಡಿದರು.

ಅಗತ್ಯ ವಸ್ತುಗಳಿಗೂ ತೊಂದರೆ
ಹುಳಿಯಾರು: ಪ್ರಧಾನಿ ನೇತೃತ್ವದ ಕಾವೇರಿ ನದಿ ಪ್ರಾಧಿಕಾರದ ಆದೇಶದಂತೆ ತಮಿಳುನಾಡಿಗೆ ನೀರು ಬಿಟ್ಟಿರುವ ಕ್ರಮ ವಿರೋಧಿಸಿ ಕನ್ನಡಪರ ಸಂಘಟನೆಗಳು ಶನಿವಾರ ಕರೆ ಕೊಟ್ಟಿದ್ದ `ಕರ್ನಾಟಕ ಬಂದ್~ಗೆ ಹುಳಿಯಾರು ಪಟ್ಟಣದಲ್ಲಿ ಶನಿವಾರ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ಬೆಳಿಗ್ಗೆ 6 ಗಂಟೆಗೆ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪಟ್ಟಣದಿಂದ ವಿವಿಧ ನಗರಗಳಿಗೆ ಹೋಗುವ ರಸ್ತೆಗಳಲ್ಲಿ ಮರದ ತುಂಡುಗಳನ್ನು ಹಾಕಿ ಬಂದ್ ಮಾಡಿದರು. ಇದರಿಂದ ಬೆಳಿಗ್ಗೆಯೇ ಹೊರಡಲಿದ್ದ ಬಸ್‌ಗಳು ರಸ್ತೆಗಿಳಿಯದೆ ನಿಂತಲ್ಲೇ ನಿಲ್ಲ ಬೇಕಾಯಿತು.

ಮುಂಜಾನೆ ಪಟ್ಟಣದಿಂದ ಗ್ರಾಮಾಂತರ ಪ್ರದೇಶಗಳಿಗೆ ಬಸ್ ಮೂಲಕ ಹೋಗಲಿದ್ದ ಪತ್ರಿಕೆ, ಹಾಲು ಮತ್ತಿತರರ ಅಗತ್ಯ ವಸ್ತುಗಳು ತಲುಪುವುದಕ್ಕೂ ತೊಂದರೆಯಾಯಿತು. ಅತಿ ವಿರಳವಾಗಿ ತೆರೆದಿದ್ದ ಟೀ ಅಂಗಡಿಗಳನ್ನು ಸಹ ಬಲವಂತವಾಗಿ ಮುಚ್ಚಿಸಿದರು. ಹತ್ತು ಗಂಟೆ ವೇಳೆಗೆ ಪಟ್ಟಣ ಸ್ತಬ್ದವಾಯಿತು.

ರೈತ ಸಂಘದ ಕೆಂಕೆರೆ ಸತೀಶ್ ಮಾತನಾಡಿದರು. ಅಂಗಡಿ, ಶಾಲಾ-ಕಾಲೇಜು, ಬ್ಯಾಂಕ್‌ಗಳು ಸ್ವಯಂಘೋಷಿತವಾಗಿ ಮುಚ್ಚಿದ್ದವು. ಆಟೊ ಸಂಚಾರವೂ ಇರಲಿಲ್ಲ. ಕರ್ನಾಟಕ ರಕ್ಷಣಾ ವೇದಿಕೆ, ರೈತ ಸಂಘ, ಜಯಕರ್ನಾಟಕ ಸಂಘಟನೆ, ಬಾಪೂಜಿ ಟೈಲರ್ ಅಸೋಷಿಯೇಷನ್, ಟಿಪ್ಪು ಸುಲ್ತಾನ್ ಸಂಘ, ದೇವರಾಜ ಅರಸ್ ಹಿಂದುಳಿದ ವೇದಿಕೆ ಸೇರಿದಂತೆ ವಿವಿಧ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಗುಬ್ಬಿ: ಸ್ವಯಂ ಪ್ರೇರಿತ ಬಂದ್
ಗುಬ್ಬಿ: ಕುಡಿಯುವ ನೀರಿಗೆ ಹಾಹಾಕಾರ ಇರುವ ಪರಿಸ್ಥಿತಿಯಲ್ಲಿ ತಮಿಳುನಾಡಿಗೆ ಕಾವೇರಿ ನದಿ ನೀರು ಬಿಡುಗಡೆ ಖಂಡಿಸಿ ವಿವಿಧ ಸಂಘಸಂಸ್ಥೆಗಳು ಶನಿವಾರ ಸ್ವಯಂಪ್ರೇರಿತ ಬಂದ್ ಆಚರಿಸಿದ್ದರಿಂದ ಬಂದ್ ಸಂಪೂರ್ಣ ಯಶಸ್ವಿಯಾಯಿತು.

ಬೆಳೆ ಬೆಳೆಯದೆ ಸಂಕಷ್ಟದಲ್ಲಿರುವ ರೈತರಿಗೆ ಕುಡಿಯುವ ನೀರಿಗಾಗಿ ಪರದಾಡುವ ಸನ್ನಿವೇಶ ಬಂದಿದೆ. ಮಳೆಯೂ ಸಕಾಲಕ್ಕೆ ಆಗಿಲ್ಲ. ಕುಡಿಯುವ ನೀರಿಗೆಂದು ಇದ್ದ ಕಾವೇರಿ, ಹೇಮಾವತಿ, ಹಾರಂಗಿ ಇತರೆಡೆಯಿಂದ ರಾತ್ರೋರಾತ್ರಿ ನೀರನ್ನು ಹರಿಬಿಟ್ಟಿರುವುದು ರಾಜ್ಯದ ಜನತೆಗೆ ಮಾಡಿದ ದ್ರೋಹ ಎಂದು ವಿವಿಧ ರಾಜಕೀಯ ಪಕ್ಷಗಳು, ಕನ್ನಡ ಪರ ಸಂಘಟನೆಗಳು, ವರ್ತಕರ ಸಂಘ, ವಿವಿಧ ಒಕ್ಕೂಟಗಳ ಮುಖ್ಯಸ್ಥರು ರಸ್ತೆ ಮಧ್ಯದಲ್ಲಿ ಪ್ರತಿಭಟಿಸಿ ತಮಿಳುನಾಡು ಮುಖ್ಯಮಂತ್ರಿ ಜಯಲಲಿತ ಮತ್ತು ಪ್ರಧಾನಿ ಮನಮೋಹನ್‌ಸಿಂಗ್ ಪ್ರತಿಕೃತಿ ದಹಿಸಿದರು.

ವ್ಯಾಪಾರ ವಹಿವಾಟು ಬಂದ್ ಆಗಿ, ಖಾಸಗಿ-ಸರ್ಕಾರಿ ಬಸ್‌ಗಳು ಸಂಚಾರ ಸ್ಥಗಿತಗೊಳಿಸಿದ್ದವು. ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಕಡಬಾ, ಚೇಳೂರು, ನಿಟ್ಟೂರು ಇತರ ಹೋಬಳಿ ಕೇಂದ್ರಗಳಲ್ಲೂ ಬಂದ್ ನಡೆಯಿತು.

ಕೊರಟಗೆರೆ: ಪ್ರತಿಕೃತಿ ದಹನ
ಕೊರಟಗೆರೆ: ತಮಿಳುನಾಡಿಗೆ ಕಾವೇರಿ ನೀರು ಬಿಡುವ ಸರ್ಕಾರದ ನಿರ್ಧಾರದ ವಿರುದ್ಧ ಶನಿವಾರ ಕರೆ ನೀಡಿದ್ದ ಕರ್ನಾಟಕ ಬಂದ್‌ಗೆ ಕೊರಟಗೆರೆಯಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗಿತ್ತು.

ಬೆಳಿಗ್ಗೆ 6ಗಂಟೆಯಿಂದಲೇ ಪಟ್ಟದಲ್ಲಿ ಬಂದ್‌ನ ಬಿಸಿ ಕಾಣುತ್ತಿತ್ತು. ವರ್ತಕರು ಸ್ವಯಂ ಪ್ರೇರಿತರಾಗಿ ಅಂಗಡಿ ಮುಚ್ಚಿ ವ್ಯಾಪಾರ ಸ್ಥಗಿತಗೊಳಿಸುವ ಮೂಲಕ ಬಂದ್‌ಗೆ ಬೆಂಬಲ ವ್ಯಕ್ತ ಪಡಿಸಿದ್ದರು.

ಸದಾ ವಾಹನ ದಟ್ಟಣೆಯಿಂದ ಗಿಜಿಗುಡುತ್ತಿದ್ದ ಮುಖ್ಯ ರಸ್ತೆ ಬಿಕೋ ಎನ್ನುತ್ತಿತ್ತು. ದ್ವಿಚಕ್ರ ವಾಹನ ಬಿಟ್ಟರೆ ಇತರೆ ಯಾವುದೇ ವಾಹನಗಳ ಓಡಾಟ ಸಂಜೆವರೆಗೂ ಇರಲಿಲ್ಲ. ಬಂದ್ ಹಿನ್ನೆಲೆಯಲ್ಲಿ ಬೆಳಗಿನಿಂದಲೇ ಸಾಮಾನ್ಯ ಜನರ ಓಡಾಟವಿಲ್ಲದೆ ಪಟ್ಟಣ ನೀರಸ ಮೌನವಾಗಿತ್ತು. ಪ್ರತಿಭಟನಾಕಾರರು ಹೊರತು ಪಡಿಸಿ ಸಾಮಾನ್ಯ ಜನ ಸಂಜೆವರೆಗೆ ಮನೆ ಬಿಟ್ಟು ಹೊರ ಬರಲೇ ಇಲ್ಲ. ಇದರಿಂದ ಪಟ್ಟಣದ ಎಲ್ಲ ಬೀದಿಗಳು ಸ್ಮಶಾನದಂತೆ ಕಂಡು ಬಂದವು.

ಕರ್ನಾಟಕ ರಕ್ಷಣಾ ವೇದಿಕೆ, ಜಯ ಕರ್ನಾಟಕ ಸೇರಿದಂತೆ ವಿವಿಧ ಕನ್ನಡ ಪರ ಸಂಘಟನೆಗಳು, ಸ್ಥಳೀಯ ಸಂಘ ಸಂಸ್ಥೆಗಳ ಕಾರ್ಯಕರ್ತರು, ಸಾರ್ವಜನಿಕರು, ಮುಸ್ಲಿಂ ಬಾಂಧವರು ಕಾವೇರಿ ನೀರು ತಮಿಳುನಾಡಿಗೆ ಬಿಡುವುದನ್ನು ಖಂಡಿಸಿ ಪಟ್ಟಣದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು. ಮೆರವಣಿಗೆ ನಂತರ ಎಸ್‌ಎಸ್‌ಆರ್ ವೃತ್ತದಲ್ಲಿ ಸಮಾವೇಶಗೊಂಡ ಕಾರ್ಯಕರ್ತರು ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಪ್ರತಿಕೃತಿ ದಹಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

ತುರುವೇಕೆರೆ: ಪುನರ್ ಪರಿಶೀಲನೆಗೆ ಆಗ್ರಹ
ತುರುವೇಕೆರೆ: ತಮಿಳುನಾಡಿಗೆ ಕಾವೇರಿ ನದಿ ನೀರು ಬಿಡುಗಡೆ ವಿರೋಧಿಸಿ ವಿವಿಧ ಕನ್ನಡ ಪರ ಸಂಘಟನೆಗಳು ಶನಿವಾರ ಕರೆ ನೀಡಿದ್ದ ಬಂದ್ ಯಶ ಕಂಡಿತು.

ಶನಿವಾರ ಬೆಳಿಗ್ಗೆಯಿಂದಲೇ ಅಂಗಡಿ ಮುಚ್ಚಿದ್ದವು. ವ್ಯಾಪಾರ ವಹಿವಾಟು ಸ್ಥಗಿತಗೊಂಡಿತ್ತು. ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿದ್ದ ಹಿನ್ನೆಲೆಯಲ್ಲಿ ಇಡೀ ಪಟ್ಟಣದಲ್ಲಿ ಜನ ಸಂಚಾರ ವಿರಳವಾಗಿತ್ತು. ರಸ್ತೆ ಸಾರಿಗೆ ಸಂಸ್ಥೆ ಬಸ್‌ಗಳು ರಸ್ತೆಗಿಳಿಯಲಿಲ್ಲ. ಸರ್ಕಾರಿ ಕಚೇರಿಗಳು, ಬ್ಯಾಂಕ್ ಕಾರ್ಯ ನಿರ್ವಹಿಸಲಿಲ್ಲ. ಕಾರ್ಯ ಪ್ರವೃತ್ತವಾಗಿದ್ದ ಕೆಲ ಕೇಂದ್ರ ಸರ್ಕಾರ ಕಚೇರಿಗಳನ್ನು ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಬಲವಂತವಾಗಿ ಮುಚ್ಚಿಸಿದರು.

ಪಟ್ಟಣದ ವಿವಿಧ ಸಂಘಟನೆಗಳು ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಹರಿಸಬಾರದು ಎಂದು ಆಗ್ರಹಿಸಿ ಹಿಂದೆಂದೂ ಕಂಡರಿಯದ ಉಗ್ರ ಪ್ರತಿಭಟನೆ ನಡೆಸಿದರು. ಕನ್ನಡ ರಕ್ಷಣಾ ವೇದಿಕೆ ಕಾರ್ಯಕರ್ತರು ಶನಿವಾರ ಬೆಳಿಗ್ಗೆ ಪಟ್ಟಣದಾದ್ಯಂತ ಬೈಕ್ ರ‌್ಯಾಲಿ ನಡೆಸಿ ಕೇಂದ್ರ, ತಮಿಳುನಾಡು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ನಂತರ ಮಿನಿ ವಿಧಾನಸೌಧದ ಮುಂದೆ ಮಾನವವೃತ್ತ ನಡೆಸಿ ರಸ್ತೆ ತಡೆ ನಡೆಸಿದರು.

ಆ ನಂತರ ಶಕ್ತಿನಗರ ವಿದ್ಯಾನಗರ ಯುವಕ ಸಂಘದ ಕಾರ್ಯಕರ್ತರು ಡಾ.ನಂಜಪ್ಪ ಹಾಗೂ ಸುನಿಲ್‌ಬಾಬು ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ರಾಜೀನಾಮೆಗೆ ಆಗ್ರಹಿಸಿದರು. ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ಪ್ರತಿಭಟನೆ ನಡೆಸಿ ರಾಜಕೀಯ ಕಾರಣಗಳಿಗಾಗಿ ಸರ್ಕಾರಗಳು ರೈತರ ಹಿತಾಸಕ್ತಿ ಬಲಿಕೊಡುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದರ ಬೆನ್ನಿಗೆ ಕನ್ನಡ ಸಾಹಿತ್ಯ ಪರಿಷತ್, ಕಲಾವಿದರ ಒಕ್ಕೂಟದ ಎಸ್.ದೇವರಾಜ್, ಟಿ.ಎಸ್.ಬೋರೇಗೌಡ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿತು. ಸಾಹಿತಿಗಳು, ಕಲಾವಿದರು ಕೇಂದ್ರದ ನಿಲುವು, ತಮಿಳುನಾಡುವಿನ ಧೋರಣೆಯನ್ನು ಕಟು ಮಾತುಗಳಲ್ಲಿ ಖಂಡಿಸಿದರು. ಕೆಎಸ್‌ಆರ್‌ಟಿಸಿ ಸಿಬ್ಬಂದಿ ಪ್ರತ್ಯೇಕವಾಗಿ ಪಟ್ಟಣದಲ್ಲಿ ಮೆರವಣಿಗೆ ನಡೆಸಿ ತಮಿಳುನಾಡಿಗೆ ಕಾವೇರಿ ನೀರು ಬಿಡಬಾರದು ಎಂದು ಒತ್ತಾಯಿಸಿದರು.

ವಕೀಲರ ಸಂಘದ ಅಧ್ಯಕ್ಷ ಕೆ.ಹುಚ್ಚೇಗೌಡ, ಎಸ್.ಕೆ.ಉಮೇಶ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಶಿರಸ್ತೇದಾರರಿಗೆ ಮನವಿ ಪತ್ರ ಸಲ್ಲಿಸಿತು. ತಾಲ್ಲೂಕಿನ ದಂಡಿನಶಿವರ ಹಾಗೂ ಅಮ್ಮಸಂದ್ರದಲ್ಲೂ  ಕನ್ನಡ ಪರ ಸಂಘಟನೆ ಪ್ರತಿಭಟನೆ ನಡೆಸಿದವು.

ಶಿರಾ: ನ್ಯಾಯಾಲಯ ಕಲಾಪ ಬಹಿಷ್ಕಾರ
ಶಿರಾ: ಕಾವೇರಿ ಕುರಿತು ಕನ್ನಡ ಪರ ಸಂಘಟನೆಗಳು ಕರೆ ನೀಡಿದ್ದ ಕರ್ನಾಟಕ ಬಂದ್‌ಗೆ ನಗರದಲ್ಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಬಂದ್ ಸಂಪೂರ್ಣ ಯಶಸ್ವಿಯಾಯಿತು.

ಮುಂಜಾನೆಯಿಂದಲೇ ಸಾರಿಗೆ ಸಂಸ್ಥೆ ಬಸ್‌ಗಳು ಸೇರಿದಂತೆ ಎಲ್ಲ ರೀತಿಯ ವಾಹನ ಸಂಚಾರ ಅತ್ಯಂತ ವಿರಳವಾಗಿತ್ತು. ಅಂಗಡಿ, ಪೆಟ್ರೋಲ್ ಬಂಕ್, ಹೋಟೆಲ್, ಚಿತ್ರಮಂದಿರಗಳು ಬಾಗಿಲು ಹಾಕಿದ್ದವು. ಕೆಲ ಬ್ಯಾಂಕ್‌ಗಳೂ ಮುಚ್ಚಿದ್ದವು.

ಆಟೊ ಚಾಲಕರ ಸಂಘ ಬಂದ್‌ಗೆ ಬೆಂಬಲ ಘೋಷಿಸಿದ್ದರೂ; ಹಲ ಆಟೊ ಸಂಚರಿಸುತ್ತಿದ್ದು ಕಂಡುಬಂತು. ಖಾಸಗಿ ಬಸ್ ನಿಲ್ದಾಣದಲ್ಲಿ ತೆರೆದಿದ್ದ ಒಂದೆರಡು ಅಂಗಡಿಗಳನ್ನು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಬಾಗಿಲು ಮುಚ್ಚುವಂತೆ ಒತ್ತಾಯಿಸುತ್ತಿದ್ದರು.

ವಾಹನ ಸಂಚಾರವಿಲ್ಲದೆ ರಾಷ್ಟ್ರೀಯ ಹೆದ್ದಾರಿ-4 ಸೇರಿದಂತೆ ನಗರದ ಎಲ್ಲ ಬೀದಿಗಳು ಬಣಗುಡುತ್ತಿದ್ದುವು. ಬಸ್ ನಿಲ್ದಾಣಕ್ಕೆ ಬಂದಿದ್ದ ಕೆಲ ಪ್ರಯಾಣಿಕರು ಅಲ್ಲಿಯೇ ವಿಶ್ರಾಂತಿ ಪಡೆಯುತ್ತಿದ್ದರು.

ಬಿಜೆಪಿ: ಕಾವೇರಿ ಪ್ರಾಧಿಕಾರ ಸಭೆಯ ನಿರ್ಣಯ ಖಂಡಿಸಿ ತಾಲ್ಲೂಕು ಬಿಜೆಪಿ ನಗರದಲ್ಲಿ ಬೈಕ್‌ರ‌್ಯಾಲಿ ಹಮ್ಮಿಕೊಂಡಿತ್ತು. ಕಾವೇರಿ ನೀರು ಬಿಡುವಂತೆ ಪ್ರಧಾನ ಮಂತ್ರಿ ನೀಡಿರುವ ತಮ್ಮ ಆದೇಶ ಹಿಂಪಡೆಯಬೇಕು ಎಂದು ಆಗ್ರಹಿಸಿ ತಾಲ್ಲೂಕು ಕಚೇರಿಯಲ್ಲಿ ಮನವಿ ಸಲ್ಲಿಸಿದರು.

ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಕೆ.ಮಂಜುನಾಥ್,  ಎಸ್.ಎನ್.ಜಯಪಾಲ್, ತುಳಸಿರಾಮ್, ರಮೇಶ್ ಪಡಿ, ರಾಮಲಿಂಗಪ್ಪ, ಸಂತೋಷ್, ಬಸವರಾಜು, ಎಸ್.ಪಿ.ಕುಮಾರಸ್ವಾಮಿ, ಜೀವನ್, ನಾಗರಾಜು, ಕರಿಯಣ್ಣ, ಸಂಪತ್ ಎಂ.ಎಸ್.ಈರಣ್ಣ, ಕಲ್ಲುಕೋಟೆ ಮಂಜುನಾಥ್, ಚನ್ನನಕುಂಟೆ ಹೆಂಜಾರಪ್ಪ ಹಾಗೂ ನೂರಾರು ಕಾರ್ಯಕರ್ತರು ಹಾಜರಿದ್ದರು.

ಕರವೇ: ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಖಾಸಗಿ ಬಸ್ ನಿಲ್ದಾಣದ ಮುಂದೆ ಮಾನವ ಸರಪಳಿ ರಚಿಸಿ ರಸ್ತೆಯಲ್ಲಿ ಟೈರ್‌ಗೆ ಬೆಂಕಿಯಿಟ್ಟು ಪ್ರತಿಭಟಿಸಿದರು. ತಾಲ್ಲೂಕು ಅಧ್ಯಕ್ಷ ನಾಗರಾಜು, ಅಂಜಿನಪ್ಪ, ಬಾಬು ಡೀಲರ್, ರಂಗನಾಥ, ಟಿ.ಹರ್ಷವರ್ಧನ, ಎಸ್.ವಿನಯ್, ಮುರಾದ್, ದಾದು, ಬಿಲಾಲ್, ಕೃಷ್ಣ, ಮುಬಾರಕ್, ರಕ್ಷಿತ್, ಕೋಟೆಗುರು, ಬರಗೂರು ಸತೀಶ್ ಹಾಜರಿದ್ದರು.

ಕನ್ನಡ ಸೇನೆ- ದರ್ಶನ್ ಅಭಿಮಾನಿಗಳು: ತಾಲ್ಲೂಕು ಕನ್ನಡ ಸೇನೆ ಹಾಗೂ ನಟ ದರ್ಶನ್ ಅಭಿಮಾನಿಗಳ ಸಂಘದ ವತಿಯಿಂದ ತಮಿಳುನಾಡಿಗೆ ಕಾವೇರಿ ನೀರು ಹರಿಸಬಾರದು ಎಂದು ಪ್ರತಿಭಟನೆ ನಡೆಸಿ ತಹಶೀಲ್ದಾರ್ ಗ್ರೇಡ್ -2 ಪುಟ್ಟನರಸಯ್ಯ ಅವರಿಗೆ ಮನವಿ ಸಲ್ಲಿಸಿದರು.

ಅಧ್ಯಕ್ಷ ಗುರುಪ್ರಸಾದ್, ಕಾರ್ಯದರ್ಶಿ ಲಿಂಗರಾಜು, ಪುಟ್ಟಮ್ಮ ಮಂಜುನಾಥ್, ದರ್ಶನ್, ಗೌರಿಶಂಕರ್, ಶೇಖರ್, ಮಂಜೇಶ್, ಕೊಟ್ಟರಂಗಯ್ಯ ಹಾಜರಿದ್ದರು.

ವಕೀಲರ ಬೆಂಬಲ: ಬಂದ್‌ಗೆ ಬೆಂಬಲ ವ್ಯಕ್ತಪಡಿಸಿ ತಾಲ್ಲೂಕಿನ ವಕೀಲರು ಸಂಘದ ಅಧ್ಯಕ್ಷ ಪಿಬಿಎಸ್ ಭೂಪತಿಗೌಡ ಹಾಗೂ ಕಾರ್ಯದರ್ಶಿ ಹೊನ್ನಗೊಂಡನಹಳ್ಳಿ ಈರಣ್ಣ ನೇತೃತ್ವದಲ್ಲಿ ಒಂದು ದಿನದ ಮಟ್ಟಿಗೆ ನ್ಯಾಯಾಲಯದ ಕಾರ್ಯ ಕಲಾಪ ಬಹಿಷ್ಕರಿಸಿದ್ದರು.

ಕರವೇ(ಪ್ರವೀಣ್ ಬಣ): ನಗರದ ಪ್ರಮುಖ ಬೀದಿಗಳಲ್ಲಿ ಘೋಷಣೆಗಳೊಂದಿಗೆ ಮೆರವಣಿಗೆ ಸಾಗಿದ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಕುಮಾರ್ ಶೆಟ್ಟಿ ಬಣದ ಕಾರ್ಯಕರ್ತರು ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.

ತಾಲ್ಲೂಕು ಅಧ್ಯಕ್ಷ ಹಾರೋಗೆರೆ ಎಂ.ಮಹೇಶ್, ನಗರಾಧ್ಯಕ್ಷ ಸೈ.ಇರ್ಫಾನ್, ವಿದ್ಯಾರ್ಥಿ ಘಟಕದ ನಾಗೇಶ್ ಗೌಡ, ಆಟೊ ಘಟಕದ ಸಿ.ಈರಣ್ಣ, ಮುನೀರ್ ಅಹ್ಮದ್, ಮಿಲ್ ರಘು, ಅಬ್ದುಲ್ ರೆಹಮಾನ್, ಮಂಜುನಾಥ್, ಗಂಗಾಧರ್, ಫಾಹಿಲ್, ನಯೀಂ ಪಾಷಾ, ಇಮ್ರೋನ್ ಖಾನ್ ಇದ್ದರು.

ಭಗತ್ ಸೇನೆ: ನಗರದಾದ್ಯಂತ ಬೈಕ್ ರ‌್ಯಾಲಿ ನಡೆಸಿದ ಭಗತ್ ಕ್ರಾಂತಿಸೇನೆ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತ ಕಾವೇರಿ ಹರಿಸದಿರುವಂತೆ ಒತ್ತಾಯಿಸಿ ತಹಶೀಲ್ದಾರರಿಗೆ ಮನವಿ ಪತ್ರ ಸಲ್ಲಿಸಿದರು. ಪ್ರಧಾನ ಕಾರ್ಯದರ್ಶಿ ಗುರು, ಪ್ರಸನ್ನ, ಚಂದ್ರು (ಆಟೊ), ಪ್ರವೀಣ, ಮದಕರಿ, ಎಸ್.ಜಿ.ರಂಗನಾಥ್, ಹೂ ಮಹಾಬಲೇಶ್ವರ್, ಹೇಮಂತ್, ಮೂರ್ತಿ, ಹಾಲೇಶ್ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಪಾವಗಡ: ನೀರು ಬಿಡಬೇಡಿ
ಪಾವಗಡ: ಕರ್ನಾಟಕ ಬಂದ್‌ಗೆ ತಾಲ್ಲೂಕಿನಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಯಿತು.
ವಿವಿಧ ರಾಜಕೀಯ ಪಕ್ಷಗಳು, ಸಂಘಟನೆಗಳು ಬಂದ್‌ನಲ್ಲಿ ಪಾಲ್ಗೊಂಡಿದ್ದವು. ಕಾಂಗ್ರೆಸ್ ಕಾರ್ಯಕರ್ತರು ಕಾವೇರಿ ನೀರು ಬಿಡುವುದನ್ನು ವಿರೋಧಿಸಿ ಪ್ರತಿಭಟಿಸಿ ಮೆರವಣಿಗೆ ನಡೆಸಿದರು.

ಮುಖಂಡರಾದ ಅನ್ವರ್, ಕೊಂಡಪ್ಪ, ನಾಗಭೂಷಣರೆಡ್ಡಿ, ಅಮೀರ್, ಮೈಲಾರೆಡ್ಡಿ, ಪ್ರಸಾದ್‌ರೆಡ್ಡಿ, ವೀರಪ್ಪ, ರಿಜ್ವಾನ್, ಮಹಮದ್ ಫಜಲುಲ್ಲಾ ಇತರರು ನೀರು ನಿಲ್ಲಿಸುವಂತೆ ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ನೀಡಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT