ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವೇರಿ ಯೋಜನೆ ಹಸ್ತಾಂತರ: ಕಾವೇರಿದ ಚರ್ಚೆ

Last Updated 8 ಸೆಪ್ಟೆಂಬರ್ 2011, 9:30 IST
ಅಕ್ಷರ ಗಾತ್ರ

ಹುಣಸೂರು: ಕಾವೇರಿ ಕುಡಿಯುವ ನೀರು ಹಸ್ತಾಂತರದ ವಿಚಾರದಲ್ಲಿ ಸದಸ್ಯರ ನಡುವೆ `ಕಾವೇರಿ~ದ ಚರ್ಚೆ ನಡೆದು ಪುರಸಭೆಯ ಸಾಮಾನ್ಯ ಸಭೆಯನ್ನು ಸೋಮವಾರಕ್ಕೆ ಮುಂದೂಡಲಾಯಿತು.

ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ಕುಡಿಯುವ ನೀರು ಸರಬರಾಜು ಮಂಡಳಿ ಅಧಿಕಾರಿ ರವಿಕೀರ್ತಿ ಮಾತನಾಡಿ ರೂ.22 ಕೋಟಿ ಅನುದಾನದಲ್ಲಿ ಪಟ್ಟಣಕ್ಕೆ ಕಾವೇರಿ ಕುಡಿಯುವ ನೀರು ಕಲ್ಪಿಸಿ ಕಳೆದ 3 ತಿಂಗಳಿಂದ ನಿರ್ವಹಣೆ ಮಾಡಲಾಗುತ್ತಿದ್ದು, ಮುಂದಿನ ನಿರ್ವಹಣೆಯನ್ನು ಹುಣಸೂರು ಪುರಸಭೆ ನಿರ್ವಹಿಸಬೇಕು ಎಂದು ಸದಸ್ಯರಲ್ಲಿ ಮನವಿ ಮಾಡಿದರು. 

 ಈ ಮನವಿಗೆ ಮಾಜಿ ಅಧ್ಯಕ್ಷ ಹಜರತ್‌ಜಾನ್ ವಿರೋಧ ವ್ಯಕ್ತಪಡಿಸಿ, ಪಟ್ಟಣಕ್ಕೆ ಕಾವೇರಿ ಕುಡಿಯುವ ನೀರು ಸರಬರಾಜು ನಡೆಯುತ್ತಿದ್ದು, ಕಾವೇರಿ ಎಲ್ಲರ ಮನೆಗೆ ತಲಪಿಲ್ಲ. ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಪುರಸಭೆ ಕಾವೇರಿ ಕುಡಿಯುವ ನೀರು ಘಟಕದ ಸಂಪೂರ್ಣ ಜವಾಬ್ದಾರಿ ಹೋರುವುದಾದರೂ ಹೇಗೆ? ಎಂದರು. ಪುರಸಭಾ ಮುಖ್ಯಾಧಿಕಾರಿ ಹರೀಶ್ ಮಧ್ಯ ಪ್ರವೇಶಿಸಿ ನ್ಯೂನತೆಯನ್ನು ಹೆಚ್ಚುವರಿ ಅನುದಾನದಲ್ಲಿ ಸರಿಪಡಿಸಿಕೊಳ್ಳುವ ಅವಕಾಶವಿದ್ದು, ಅನು ಮೋದನೆಗೆ ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿದರು.

ಪಟ್ಟಣಕ್ಕೆ ಕೆ.ಆರ್.ನಗರದ ಹೊರ ವಲಯದಿಂದ ಅಂದಾಜು 22 ಕೋಟಿ ಅನುದಾನದಲ್ಲಿ ಕುಡಿಯುವ ನೀರು  ತರಲಾಗಿದೆ. ಪಟ್ಟಣದಲ್ಲಿ ನಿಗದಿಗೊಳಿಸಿದ  ಸ್ಥಳದಲ್ಲಿ ನೀರು ಸಂಗ್ರಹಾಗಾರ ನಿರ್ಮಿಸಿ ಪ್ರತಿ ದಿನ 15-20 ಲಕ್ಷ ಲೀಟರ್ ನೀರು ಪಟ್ಟಣಕ್ಕೆ ಸರಬರಾಜು ಮಾಡುತ್ತಿದ್ದೇವೆ. ಪಟ್ಟಣದಲ್ಲಿ ಮನೆಗಳಿಗೆ ವಿತರಿಸುವ ಪೈಪ್ ಸಾಮರ್ಥ್ಯವಿಲ್ಲದೆ ಸರಬರಾಜಿಗೆ ತೊಂದರೆಯಾಗಿದೆ. ಮನೆಗಳಿಗೆ ವಿತರಣೆ ಜವಾಬ್ದಾರಿ ಮಂಡಳಿಯದಲ್ಲ ಎಂದರು.

ಸದಸ್ಯ ಶಿವರಾಜ್ ಮಾತನಾಡಿ, 22 ಕೋಟಿ ವೆಚ್ಚದಲ್ಲಿ ನೀರು ಪಟ್ಟಣಕ್ಕೆ ಬಂದಿದ್ದರೂ ಹೌಸಿಂಗ್‌ಬೋರ್ಡ್ ವಸತಿ ಕಾಲೋನಿಯ 7 ಸಾವಿರ ನಾಗರಿಕರಿಗೆ ಕಾವೇರಿ ನೀರು ಭಾಗ್ಯವಿಲ್ಲ ಎಂದರು. ಪಟ್ಟಣದಲ್ಲಿ ಹೆಚ್ಚುವರಿ ಮೂರು ಸಂಗ್ರಹಾಗಾರವನ್ನು ನಿರ್ಮಿಸಲು ಸರ್ಕಾರದ ಅನುಮೋದನೆಗೆ ಕಳುಹಿಸಲಾಗಿದೆ ಎಂದರು.

9 ಗ್ರಾಮ ಜವಾಬ್ದಾರಿ ಯಾರಿಗೆ?: ಕಾವೇರಿ ಕುಡಿಯುವ ನೀರು ಕೆ.ಆರ್.ನಗರದಿಂದ ಹುಣಸೂರಿಗೆ ಬರುವ ಮಾರ್ಗ ಮಧ್ಯೆ ಬರುವ 9 ಗ್ರಾಮಗಳಿಗೂ ವಿತರಿಸುತ್ತಿದ್ದು, ವಿತರಣಾ ಜವಾಬ್ದಾರಿಯನ್ನು ಹೊರುವವರು ಯಾರು ? ಎಂದು ಸದಸ್ಯರು ಪ್ರಶ್ನಿಸಿದರು. ಅಧಿಕಾರಿ ಉತ್ತರಿಸಿ 9 ಗ್ರಾಮಗಳ ಜವಾಬ್ದಾರಿ  ಪುರಸಭೆ ಹೊರಬೇಕಿದ್ದು, ಇದಕ್ಕೆ ಹಲವು ನಿಬಂಧನೆಯುಳ್ಳ ಕರಾರು ಪತ್ರಕ್ಕೆ ಗ್ರಾ.ಪಂ ಅಧಿಕಾರಿಯಿಂದ ಸಹಿ ಪಡೆದುಕೊಳ್ಳಬೇಕು. ಕರಾರಿನ ಪ್ರಕಾರ ಗ್ರಾಮಗಳು 6 ತಿಂಗಳ ನೀರು ಸರಬರಾಜಿನ ಖರ್ಚಿನ ಹಣವನ್ನು ಪುರಸಭೆಗೆ ಮುಂಗಡವಾಗಿ ಪಾವತಿಸಬೇಕು ಎಂದರು.

ಹುಣಸೂರು ಪಟ್ಟಣಕ್ಕೆ ನೀರು ಸರಬರಾಜು ಮಾಡುತ್ತಿರುವ ವಿದ್ಯುತ್ ವೆಚ್ಚ ತಿಂಗಳಿಗೆ ರೂ 8-10 ಲಕ್ಷ ಬರುತ್ತಿದ್ದು, ಪುರಸಭೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಈ ಹಣ ಭರಿಸಲು ಹಣಕಾಸು ವ್ಯವಸ್ಥೆ ಮಾಡಿಕೊಳ್ಳಬೇಕಿದೆ ಎಂದು ಸದಸ್ಯರಿಗೆ ತಿಳಿ ಹೇಳಿದರು.

ನೀರು ನಿರ್ವಹಣೆ: ಕಾವೇರಿ ಕುಡಿಯುವ ನೀರು ನಿರ್ವಹಣೆಗೆ ಪುರಸಭೆ ಹೆಚ್ಚುವರಿ 20 ನೌಕರರನ್ನು ನೇಮಿಸಿಕೊಂಡಲ್ಲಿ ಮಾತ್ರ ಸಮರ್ಪಕವಾಗಿ ನೀರು ಸರಬರಾಜು ಮಾಡಲು ಸಾಧ್ಯ. ಹಾಲಿ 6 ನೌಕರರಿಂದ ಸಾಧ್ಯವಿಲ್ಲ ಎಂದ ರವಿಕೀರ್ತಿ, ನೀರು ನಿರ್ವಹಣೆಗೆ ನಿಯೋಜಿಸಿಕೊಳ್ಳುವ ನೌಕರರಿಗೆ ಮಂಡಳಿ ತರಬೇತಿ ನೀಡಲಿದೆ ಎಂದರು.

ಒಳಚರಂಡಿ: ಪಟ್ಟಣದ ಒಳಚರಂಡಿಗೆ ನವೀಕರಿಸಿದ ನಕಾಶೆ ಸಿದ್ಧಗೊಂಡಿದ್ದು, ಈ ಯೋಜನೆಗೆ ಸರ್ಕಾರ 48 ಕೋಟಿ ಬಿಡುಗಡೆ ಮಾಡುವ ಹಂತದಲ್ಲಿದೆ. ಯೋಜನೆಯನ್ನು 2035ರ ಜನಸಂಖ್ಯೆ ಆಧಾರದ ಅನ್ವಯ ಸಿದ್ಧಗೊಳಿಸಲಾಗಿದೆ ಎಂದರು. ಪುರಸಭೆ ಸರ್ವೆಗೆ ತಗಲುವ ಖರ್ಚು ಭರಿಸಬೇಕಿದ್ದು, ಈ ಹಿಂದೆ 7 ಲಕ್ಷ ಪಾವತಿಸಿದ್ದು, ಉಳಿದ ಹಣವನ್ನು ಪಾವತಿಸಿದರೆ ಮುಂದಿನ ವರ್ಷದಲ್ಲಿ ಯೋಜನೆ ಚಾಲನೆಗೆ ಬರಲಿದೆ ಎಂದರು.
ಸಭೆಯ ಅಧ್ಯಕ್ಷತೆಯನ್ನು ಪುರಸಭಾಧ್ಯಕ್ಷೆ ಮಂಜುಳಾಚೆನ್ನಬಸಪ್ಪ ವಹಿಸಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT