ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವೇರಿ: ರೈತರೇ ಪರಿಹಾರ ಕಂಡುಕೊಳ್ಳಲಿ- ನಾರಿಮನ್

Last Updated 25 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಮಡಿಕೇರಿ: ಕಾವೇರಿ ನದಿ ನೀರು ಹಂಚಿಕೆ ಕುರಿತು ಎರಡೂ ರಾಜ್ಯಗಳ ರೈತರು ಮಾತುಕತೆ ಮೂಲಕ ಇತ್ಯರ್ಥಪಡಿಸಿಕೊಳ್ಳುವುದೇ ಉತ್ತಮ ಮಾರ್ಗ ಎಂದು ಈ ಪ್ರಕರಣದಲ್ಲಿ ರಾಜ್ಯದ ಪರ ವಕಾಲತು ನಡೆಸುತ್ತಿರುವ ಫಾಲಿ ನಾರಿಮನ್ ಅಭಿಪ್ರಾಯಪಟ್ಟರು.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಮಾನ್ಯವಾಗಿ ಉತ್ತಮವಾಗಿ ಮಳೆ ಸುರಿದರೆ ಈ ಸಮಸ್ಯೆ ಉಲ್ಬಣಿಸುವುದಿಲ್ಲ. ಆದರೆ, ಇತ್ತೀಚಿನ ವರ್ಷಗಳಲ್ಲಿ ಮಳೆಯ ಪ್ರಮಾಣ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಎರಡೂ ರಾಜ್ಯಗಳು ಕಾವೇರಿ ನೀರಿಗಾಗಿ ಒತ್ತಾಯಿಸುತ್ತಿವೆ. ಇಂತಹ ಸಂದರ್ಭದಲ್ಲಿ ಎರಡೂ ರಾಜ್ಯಗಳ ರೈತರು ಮಾತುಕತೆಯ ಮೂಲಕ ಸೌಹಾರ್ದಯುತವಾಗಿ ಚರ್ಚಿಸಿ, ಪರಿಹಾರದ ಮಾರ್ಗಗಳನ್ನು ಕಂಡುಕೊಳ್ಳಬೇಕಾಗಿದೆ ಎಂದರು.

ದೇಶದಲ್ಲಿ ಎಲ್ಲ ಸಮಸ್ಯೆಗಳಿಗೂ ಪರಿಹಾರ ಇದ್ದೇ ಇದೆ. ಇದನ್ನು ಹುಡುಕುವ ಪ್ರಯತ್ನ ಮಾಡಬೇಕಾಗಿದೆ. ಕಾನೂನಿನ ಮಾರ್ಗವಾದರೆ ಸಹಜವಾಗಿ ವಿಳಂಬವಾಗುತ್ತದೆ ಎಂದರು.

ಜೂನ್ ವೇಳೆಗೆ ಅಂತಿಮ ತೀರ್ಪು: ನೀರು ಹಂಚಿಕೆ ಕುರಿತಂತೆ ಸುಪ್ರೀಂ ಕೋರ್ಟ್‌ನಲ್ಲಿ ಎಲ್ಲ ವಾದ-ಪ್ರತಿವಾದಗಳು ಪೂರ್ಣಗೊಂಡಿದ್ದು, ಬಹುಶಃ ಜೂನ್- ಜುಲೈ ವೇಳೆಗೆ ಅಂತಿಮ ತೀರ್ಪು ಹೊರಬೀಳುವ ಸಾಧ್ಯತೆ ಇದೆ ಎಂದರು.

ಬಚಾವತ್ ತೀರ್ಪಿಗೆ ಪ್ರಶಂಸೆ: ಕೃಷ್ಣಾ ನದಿ ನೀರು ಹಂಚಿಕೆ ಕುರಿತಂತೆ ತೀರ್ಪು ನೀಡುವಾಗ ನ್ಯಾಯಮೂರ್ತಿ ಆರ್.ಎಸ್.ಬಚಾವತ್ ಅವರ ನೇತೃತ್ವದಲ್ಲಿ ರಚಿಸಲಾಗಿದ್ದ ನ್ಯಾಯಮಂಡಳಿಯು ಅನುಸರಿಸಿದ ಮಾರ್ಗವನ್ನು ನಾರಿಮನ್ ಪ್ರಶಂಶಿಸಿದರು.

ನದಿ ನೀರು ಹಂಚಿಕೆ ಕುರಿತಂತೆ ವಿಚಾರಣೆ ನಡೆಸುವ ಸಂದರ್ಭದಲ್ಲಿ ನ್ಯಾಯಮೂರ್ತಿ ಬಚಾವತ್ ಅವರು ರೈತ ಮುಖಂಡರನ್ನು ಮತ್ತು ರಾಜಕಾರಣಿಗಳನ್ನು ಹೊರಗೆ ಕಳುಹಿಸಿ ಕರ್ನಾಟಕ ಹಾಗೂ ಆಂಧ್ರ ಪ್ರದೇಶ ಎರಡೂ ರಾಜ್ಯಗಳ ಎಂಜಿನಿಯರ್‌ಗಳ ಜೊತೆ ಚರ್ಚಿಸಿ ತೀರ್ಪು ಪ್ರಕಟಿಸಿದ್ದನ್ನು ಮುಕ್ತಕಂಠದಿಂದ ಹೊಗಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT