ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವೇರಿ ವಿವಾದ: ಜೆಡಿಎಸ್ ಅಹೋರಾತ್ರಿ ಧರಣಿ

Last Updated 9 ಅಕ್ಟೋಬರ್ 2012, 8:40 IST
ಅಕ್ಷರ ಗಾತ್ರ

ಅರಕಲಗೂಡು: ತಮಿಳುನಾಡಿಗೆ ನೀರು ಬಿಡು ವುದನ್ನು ವಿರೋಧಿಸಿ ಜೆಡಿಎಸ್ ಕಾರ್ಯಕರ್ತರು ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ನೇತೃತ್ವದಲ್ಲಿ ಇಲ್ಲಿನ ತಾಲ್ಲೂಕು ಕಚೇರಿ ಮುಂದೆ ಅಹೋರಾತ್ರಿ ಧರಣಿಯನ್ನು ಸೋಮವಾರದಿಂದ ಆರಂಭಿಸಿದರು.

ಬೆಳಿಗ್ಗೆ 10 ಗಂಟೆಗೆ ತಾಲ್ಲೂಕಿನ ವಿವಿಧ ಭಾಗದಿಂದ ತಮ್ಮ ಜಾನುವಾರುಗಳೊಂದಿಗೆ ಆಗಮಿಸಿದ ಕಾರ್ಯಕರ್ತರು ತಾಲ್ಲೂಕು ಕಚೇರಿ ಆವರಣದಲ್ಲಿ ಜಾನುವಾರುಗಳನ್ನು ಕಟ್ಟಿದರು. ತಾಲ್ಲೂಕಿನಲ್ಲಿ ಸಾಕಷ್ಟು ಮಳೆಯಾಗದೆ ಇಲ್ಲಿನ ಕೆರೆಕಟ್ಟೆಗಳಲ್ಲಿ ನೀರಿಲ್ಲ. ಕೃಷಿ ಕಾರ್ಯ ಒತ್ತಟ್ಟಿಗಿರಲಿ ಜಾನುವಾರುಗಳಿಗೆ ಮೇವು, ನೀರು ಒದಗಿಸುವುದೆ ದುಸ್ತುರವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಜಲಾಶಯದಲ್ಲಿ ಇರುವ ನೀರನ್ನು ತಮಿಳುನಾಡಿಗೆ ಹರಿಸಿದರೆ ಇಲ್ಲಿನ ರೈತರು ಬದುಕುವುದಾದರೂ ಹೇಗೆ ಎಂದು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.

ತಾಲ್ಲೂಕು ಜೆಡಿಎಸ್ ಕಾರ್ಯಾಧ್ಯಕ್ಷ ಎ.ಆರ್. ಜನಾರ್ಧನಗುಪ್ತ, ಜಿಲ್ಲಾ ಪಂಚಾಯಿತಿ ಸದಸ್ಯ ವಿ.ಎ.ನಂಜುಂಡಸ್ವಾಮಿ, ಮಾಜಿ ಸದಸ್ಯ ಬಿ.ಜೆ. ಅಪ್ಪಣ್ಣ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಂ.ಎಸ್. ಯೋಗೇಶ್, ಸದಸ್ಯ ವಿರೇಶ್, ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಅಬ್ದುಲ್ ಅಲೀಂಪಾಶ, ಸದಸ್ಯ ಶಂಕರಯ್ಯ, ಎಪಿಎಂಸಿ ಅಧ್ಯಕ್ಷ ಎಚ್.ಎಸ್.ಶಂಕರ್, ರೇವಣ್ಣ ಅಭಿಮಾನಿಗಳ ಸಂಘದ ಅಧ್ಯಕ್ಷ ಮುತಾಹಿರ್‌ಪಾಶ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್.ಎಲ್.ಗಣಪತಿ, ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ ಶಶಿಕುಮಾರ್ ಪಕ್ಷದ ಮುಖಂಡರಾದ ಮುದ್ದನಹಳ್ಳಿ ರಮೇಶ್, ಬಾಬು, ಸೇರಿದಂತೆ ಹಲವಾರು ಪ್ರಮುಖರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ನಾಗರಿಕರ ಪ್ರತಿಭಟನೆ
ಹಾಸನ: ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ಸ್ಥಗಿತಗೊಳಿಸುವಂತೆ ಒತ್ತಾಯಿಸಿ ನಗರಸಭೆ ಅಧ್ಯಕ್ಷ ಸಿ.ಆರ್.ಶಂಕರ್ ನೇತೃತ್ವದಲ್ಲಿ ನೂರಾರು ನಾಗರಿಕರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಕೃಷ್ಣನಗರ, ಚನ್ನಪಟ್ಟಣ ಹಾಗೂ ಇತರ ವಿವಿಧ ಬಡಾವಣೆಗಳಿಂದ ಮೆರವಣಿಗೆಯಲ್ಲಿ ಬಂದ ನಾಗರಿಕರು ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ನಂತರ ಜಿಲ್ಲಾಧಿಕಾರಿ ಕಚೇರಿ ಮುಂದೆ ಸೇರಿ ಧರಣಿ ಕುಳಿತು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಅಹೋರಾತ್ರಿ ಧರಣಿ ಆರಂಭ
ಅರಸೀಕೆರೆ:
ತಮಿಳುನಾಡಿಗೆ ಕಾವೇರಿ ನೀರನ್ನು ಹರಿಸುತ್ತಿರುವುದನ್ನು ವಿರೋಧಿಸಿ ಶಾಸಕ ಕೆ.ಎಂ ಶಿವಲಿಂಗೇಗೌಡ ಅವರ ನೇತೃತ್ವದಲ್ಲಿ ಭಾನುವಾರ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿದ್ದ ಕಾರ್ಯಕರ್ತರು ಸೋಮವಾರ ಪಿಪಿ ವೃತ್ತದಲ್ಲಿ ನೀರು ನಿಲ್ಲಿಸುವಂತೆ ಒತ್ತಾಯಿಸಿ ಅಹೋರಾತ್ರಿ ಧರಣಿ ಆರಂಭಿಸಿದರು.
ಪಟ್ಟಣದ ಪಿಪಿ ವೃತ್ತದಲ್ಲಿ ರಾಷ್ಟ್ರೀಯ ಹೆದ್ದಾರಿ ಬದಿ ಜೆಡಿಎಸ್ ಪಕ್ಷದ ವತಿಯಿಂದ ಶಿವಲಿಂಗೇಗೌಡರ ನೇತೃತ್ವದಲ್ಲಿ ಜಿ.ಪಂ, ತಾ.ಪಂ, ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರು ಹಾಗೂ ನೂರಾರು ಕಾರ್ಯಕರ್ತರು ರಾಜ್ಯ ಸರ್ಕಾರ ವಿರುದ್ಧ ಧಿಕ್ಕಾರ ಕೂಗಿದರು.

ಶಾಸಕ ಶಿವಲಿಂಗೇಗೌಡ ಮಾತನಾಡಿ, ತಮಿಳು ನಾಡಿಗೆ ಪ್ರತಿನಿತ್ಯ ಬಿಡುತ್ತಿರುವ ನೀರನ್ನು ತಕ್ಷಣವೇ ನಿಲ್ಲಿಸದಿದ್ದರೆ ಇನ್ನೊಂದು ವಾರದಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದರು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಯಾವುದೇ ಕ್ರಮ ಕೈಗೊಳ್ಳದಿದ್ದರೆ ಇತರರಂತೆ ನಾಟಕದ ರಾಜೀನಾಮೆ ನೀಡದೇ ನೇರವಾಗಿ ತಾವು ವಿಧಾನಸಭಾ ಅಧ್ಯಕ್ಷರಿಗೆ ರಾಜೀನಾಮೆ ಪತ್ರ ಸಲ್ಲಿಸುವುದಾಗಿ ಹೇಳಿದರು.

ಪುರಸಭಾ ಅಧ್ಯಕ್ಷ ಜಿ.ಟಿ. ಗಣೇಶ್, ಮಾಜಿ ಅಧ್ಯಕ್ಷರಾದ ಎಂ.ಸಮೀವುಲ್ಲಾ, ಎನ್.ಎಸ್. ಸಿದ್ದರಾಮಶೆಟ್ಟಿ, ಕೆ.ಎಸ್. ಸಿದ್ದಮ್ಮ, ಪುರಸಭಾ ಸದಸ್ಯರಾದ ಶಾಂತ್ ಕುಮಾರ್, ರೇವಣ್ಣ, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಹಾರನಹಳ್ಳಿ ಶಿವಮೂರ್ತಿ, ಜಿಲ್ಲಾ ಪಂಚಾಯಿತಿ ಸದಸ್ಯ ಬಿಳಿಚೌಡಯ್ಯ, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಎಚ್.ಎಸ್ ಶಂಕರ ಲಿಂಗಪ್ಪ, ಜೆಡಿಎಸ್ ಮುಖಂಡರಾದ ಗೊಲ್ಲರಹಳ್ಳಿ ಹನುಮಪ್ಪ, ಕೇಶವಮೂರ್ತಿ, ಯೋಗೀಶ್, ಧರ್ಮೇಶ್ ಉಪಸ್ಥಿತರಿದ್ದರು.   

ಎತ್ತಿನಗಾಡಿಯಲ್ಲಿ ಪ್ರತಿಭಟನೆ
ಚನ್ನರಾಯಪಟ್ಟಣ: ತಮಿಳುನಾಡಿಗೆ ನೀರು ಹರಿಸಬಾರದು ಎಂದು ಒತ್ತಾಯಿಸಿದ ರೈತ ಸಂಘದ ಕಾರ್ಯಕರ್ತರು ಸೋಮವಾರ ಪಟ್ಟಣದಲ್ಲಿ ಎತ್ತಿನಗಾಡಿಯಲ್ಲಿ ಪ್ರತಿಭಟನೆ ನಡೆಸಿದರು.

ಎತ್ತಿನಗಾಡಿ ಮತ್ತು ಮೋಟರ್ ಬೈಕಿನಲ್ಲಿ ಪಟ್ಟಣದ ಪ್ರಮುಖ ಬೀದಿಯಲ್ಲಿ ಕಾರ್ಯಕರ್ತರು ಮೆರವಣಿಗೆ ನಡೆಸಿದರು. ಕತ್ತೆಯ ಕೊರಳಿಗೆ ತಮಿಳುನಾಡು ಮುಖ್ಯಮಂತ್ರಿ ಜಯಲಲಿತ ಅವರ ನಾಮಫಲಕವನ್ನು ಹಾಕಿ ಟ್ರ್ಯಾಕ್ಟರ್‌ನಲ್ಲಿ ಮೆರವಣಿಗೆ ಮಾಡಿದರು. ಮೆರವಣಿಗೆಯುದ್ದಕ್ಕೂ ಕೇಂದ್ರ, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಮೆರವಣಿಗೆ ಮಿನಿವಿಧಾನಸೌಧದ ಆವರಣಕ್ಕೆ ಆಗಮಿಸಿತು. ಶಿರಸ್ತೇದಾರ್ ಸೋಮಶೇಖರ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ರಾಜ್ಯ ರೈತ ಸಂಘದ ಉಪಾಧ್ಯಕ್ಷ ರಾಮಸ್ವಾಮಿ, ಮುಖಂಡರಾದ ದೊಡ್ಡೇರಿ ಶ್ರೀಕಂಠು, ಸತ್ತಿಗೌಡ, ಎಂ.ಎಲ್.    ಹರೀಶ್, ಎಚ್.ವಿ. ಕೃಷ್ಣೇಗೌಡ, ರಘು ಇತರರು ನೇತೃತ್ವ ವಹಿಸಿದ್ದರು.
ಜೆಡಿಎಸ್‌ನಿಂದ ಪ್ರತಿಭಟನೆ

ಹಿರೀಸಾವೆ: ತಮಿಳುನಾಡಿಗೆ ರಾಜ್ಯದಿಂದ ನೀರು ಹರಿಸುವುದನ್ನು ತಕ್ಷಣ ನಿಲ್ಲಿಸಬೇಕು ಎಂದು ಹಿರೀಸಾವೆ ಹೋಬಳಿಯ ಜೆಡಿಎಸ್ ಘಟಕದವರು ಸೋಮವಾರ ಪ್ರತಿಭಟನೆ ಮೂಲಕ ಒತ್ತಾಯಿಸಿದರು.

ಬೆಳಿಗ್ಗೆ ಶ್ರೀಕಂಠಯ್ಯ ವೃತ್ತದಲ್ಲಿ ಮೆರವಣಿಗೆ ಪ್ರಾರಂಭಿಸಿ, ಶ್ರವಣಬೆಳಗೊಳ ರಸ್ತೆಯಲ್ಲಿ ಸಾಗಿದರು. ನಂತರ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಮಾನವ ಸರಪಳಿ ನಿರ್ಮಿಸಿದರು. ನಂತರ ನಡೆದ ಸಭೆಯಲ್ಲಿ ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಎಚ್.ಜಿ. ರಾಮಕೃಷ್ಣ, ದಿಡಗಪುಟ್ಟ ರಾಜು ಮತ್ತು ಹೇಮಾವತಿ ಸಹಕಾರ ಸಕ್ಕರೆ ಕಾರ್ಖಾನೆಯ ನಿರ್ದೇಶಕ ತೋಟಿ ಜಯರಾಮ್, ಜೆಡಿಎಸ್ ಮುಖಂಡರಾದ ಶ್ರೀನಿವಾಸ್, ಬಸವರಾಜು ಮಾತನಾಡಿದರು.

ತಾಲ್ಲೂಕು ಪಂಚಾಯಿತಿ ಸದಸ್ಯ ಎಚ್.ಎಸ್. ರವಿಕುಮಾರ್, ಎಪಿಎಂಸಿ ಸದಸ್ಯ ರಘುರಾಮ್, ಜೆಡಿಎಸ್ ಮುಖಂಡರಾದ ಅಂನತರಾಜು, ಪಾರ್ಥ ಸಾರಥಿ, ಬೂಕದ ವಾಸು ಫೈನಾನ್ಸ್ ಮಹೇಶ್, ಬದ್ದಿಕೆರೆ ನಂಜಪ್ಪ, ಗ್ರಾಮ ಪಂಚಾಯಿತಿ  ಮತ್ತು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮಾಜಿ ಮತ್ತು ಹಾಲಿ ಅಧ್ಯಕ್ಷರುಗಳು, ಸದಸ್ಯರುಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.


ತೀರ್ಪು ಮುಂದೂಡಿಕೆ: ಆಕ್ರೋಶ
ಹಾಸನ: ಕಾವೇರಿ ನದಿ ನೀರು ಬಿಡುವ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಸೋಮವಾರ ತೀರ್ಪು ನೀಡಬಹುದು ಎಂಬ ನಿರೀಕ್ಷೆಯಲ್ಲಿದ್ದ ಇಲ್ಲಿನ ವಿವಿಧ ಸಂಘಟನೆಗಳವರು ತೀರ್ಪು ಮುಂದೂಡಿದ್ದರಿಂದ ಆಕ್ರೋಶಗೊಂಡು ಸೋಮವಾರ ಸಂಜೆ ಹಠಾತ್ ಪ್ರತಿಭಟನೆ ನಡೆಸಿದರು.

ತೀರ್ಪನ್ನು ಅ.12ಕ್ಕೆ ಮುಂದೂಡಿರುವ ಸುದ್ದಿ ತಿಳಿಯುತ್ತಿದ್ದಂತೆಯೆ ಕರ್ನಾಟಕ ಕಾವಲು ಪಡೆಯ ಕಾರ್ಯಕರ್ತರು ಬೈಪಾಸ್‌ಗೆ ತೆರಳಿ ಅಲ್ಲಿ ರಸ್ತೆ ತಡೆ ನಡೆಸಿದರು. ರಸ್ತೆ ಮಧ್ಯದಲ್ಲಿ ಟೈರ್‌ಗಳನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.

ಇತ್ತ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಬೇಲೂರು ರಸ್ತೆಯಲ್ಲಿರುವ ಆದಾಯ ತೆರಿಗೆ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಪ್ರತಿಭಟನಾಕಾರರ ಆಕ್ರೋಶಕ್ಕೆ ಕೆಲವು ಕಿಟಿಕಿ ಗಾಜುಗಳು, ಹೂವಿನ ಕುಂಡಗಳು ಪುಡಿಯಾದವು.

ನಗರದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಸಂಜೆ ವಿವಿಧ ಸಂಘಟನೆಗಳ ಪ್ರತಿನಿಧಿಗಳು ಸಭೆ ನಡೆಸಿ ತೀರ್ಪು ಮುಂದೂಡಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಸಭೆಯ ಬಳಿಕ ಸಾಹಿತ್ಯ ಪರಿಷತ್ ಭವನದಿಂದ ಹೇಮಾವತಿ ಪ್ರತಿಮೆವರೆಗೆ ಸಾಂಕೇತಿಕ ಮೆರವಣಿಗೆ ನಡೆಸಿ ವಿರೋಧ ವ್ಯಕ್ತಪಡಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT