ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವೇರಿದ ಕೂಗಿಗೆ ಮಲೆನಾಡು ಸ್ತಬ್ಧ

Last Updated 7 ಅಕ್ಟೋಬರ್ 2012, 5:20 IST
ಅಕ್ಷರ ಗಾತ್ರ

ಸಾಗರ: ನಗರದಲ್ಲಿ ನಡೆದ ಬಂದ್ ಸಂಪೂರ್ಣವಾಗಿ ಯಶಸ್ವಿಯಾಯಿತು.ಬೆಳಗ್ಗಿನಿಂದಲೇ ಬಸ್‌ಗಳ ಸಂಚಾರ ಇರಲಿಲ್ಲ. ಶಾಲಾ-ಕಾಲೇಜುಗಳಿಗೆ ಮೊದಲೇ ರಜೆ ಘೋಷಿಸಲಾಗಿತ್ತು. ಬ್ಯಾಂಕಿಂಗ್ ಹಾಗೂ ಹಣಕಾಸು ಸಂಸ್ಥೆಗಳಲ್ಲಿ ಯಾವುದೇ ವಹಿವಾಟು ನಡೆಯಲಿಲ್ಲ. ನ್ಯಾಯಾಲಯದ ಕಾರ್ಯಕಲಾಪಗಳಿಂದ ವಕೀಲರು ದೂರ ಉಳಿದಿದ್ದರು.

ಮಲೆನಾಡು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಸಾಗರ್ ಹೋಟೆಲ್ ವೃತ್ತದಲ್ಲಿ  ಬಹಿರಂಗ ಸಭೆ ನಡೆಸಿದರು.  ಸಾಹಿತಿ ಡಾ.ನಾ. ಡಿಸೋಜ ಮಾತನಾಡಿ, ರಾಜ್ಯದಲ್ಲಿ ಬರಗಾಲದ ಛಾಯೆ ಇರುವಾಗ ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸಬೇಕು ಎಂಬ ತೀರ್ಮಾನ ತೀರಾ ಅವೈಜ್ಞಾನಿಕವಾದುದು ಎಂದರು.

ನಗರಸಭಾ ಸದಸ್ಯ ಟಿ.ಡಿ. ಮೇಘರಾಜ್, ಕೆ.ಆರ್. ಗಣೇಶ್ ಪ್ರಸಾದ್, ಸುದರ್ಶನ್ ಭಂಡಾರಿ, ಜೆಡಿಎಸ್‌ನ ಜಾಕೀರ್, ರಕ್ಷಣಾ ವೇದಿಕೆಯ ಪುರುಷೋತ್ತಮ, ವಿಜಯಕುಮಾರ್, ಎಚ್.ಎಸ್. ಸಾದಿಕ್ ಹಾಜರಿದ್ದರು.
ಇಲ್ಲಿನ ವಕೀಲರು ನಗರದ ಪ್ರಮುಖಬೀದಿಗಳಲ್ಲಿ ಮೆರವಣಿಗೆ ನಡೆಸಿ ಉಪ ವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದರು.

ವಕೀಲರ ಸಂಘದ ಅಧ್ಯಕ್ಷ ಎಚ್.ಕೆ. ಅಣ್ಣಪ್ಪ, ಕಾರ್ಯದರ್ಶಿ ರವೀಶ್, ಖಜಾಂಚಿ ಪ್ರೇಮ್‌ಸಿಂಗ್, ವಕೀಲರಾದ ಎಂ.ಬಿ. ಪುಟ್ಟಸ್ವಾಮಿ, ಎಚ್.ಎಂ. ಸದಾನಂದ್, ಕೆ.ಎನ್. ಶ್ರೀಧರ್, ಬಿ. ನಾಗರಾಜ್, ಐ.ಎನ್. ಸುರೇಶ್‌ಬಾಬು, ಕೆ.ಎಚ್. ಸುದರ್ಶನ, ಮರಿದಾಸ್, ಕೆ.ಎಲ್. ಭೋಜರಾಜ್, ಉಲ್ಲಾಸ್, ವಿನಯ್‌ಕುಮಾರ್, ವಿ. ಶಂಕರ್ ಪಾಲ್ಗೊಂಡಿದ್ದರು.

ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣ ಗೌಡ ಬಣ) ಕಾರ್ಯಕರ್ತರು ಮೆರವಣಿಗೆ ನಡೆಸಿ, ಉಪ ವಿಭಾಗಾಧಿಕಾರಿ ಕಚೇರಿ ಎದುರು ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ಪ್ರತಿಕೃತಿ ದಹಿಸಿದರು.

ವೇದಿಕೆಯ ರವೀಂದ್ರ ಸಾಗರ್, ಟೀಟೂ, ಫ್ರಾಂಕಿ ಲೋಬೋ, ನವೀನ್, ಕಿರಣ್, ವೀರೂಶೆಟ್ಟಿ, ರಾಘವೇಂದ್ರ, ತುಕಾರಾಮ್ ಹಾಜರಿದ್ದರು.ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ಕಾರ್ಯಕರ್ತರು ಸಹ ವಿವಿಧ ಬಡಾವಣೆಗಳಲ್ಲಿ ಮೆರವಣಿಗೆ ಮೂಲಕ ಸಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರು.ವೇದಿಕೆಯ ಕೆ. ಮಂಜುನಾಥ್, ಉಷಾ, ಪಾರ್ವತಮ್ಮ, ರಾಜಣ್ಣ, ಬಿ.ಟಿ. ಲಿಂಗೇಶ್, ಸೋಮಶೇಖರ ಹಾಜರಿದ್ದರು.

ಸೊರಬ ಬಂದ್ ಶಾಂತಿಯುತ
ಸೊರಬ:
ಕರ್ನಾಟಕ ಬಂದ್‌ಗೆ ಸೊರಬದಲ್ಲಿ ವ್ಯಾಪಲ ಬೆಂಬಲ ವ್ಯಕ್ತವಾಯಿತು.  ಕರ್ನಾಟಕ ರಕ್ಷಣಾ ವೇದಿಕೆ ಕರವೇ (ಪ್ರವೀಣ್ ಶೆಟ್ಟಿ ಬಣ) ಕಾರ್ಯಕರ್ತರು ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ಹಾಗೂ ಕರವೇ (ನಾರಾಯಣ ಗೌಡ ಬಣ) ಕಾರ್ಯಕರ್ತರು ಟೈರ್‌ಗೆ ಬೆಂಕಿ ಹಚ್ಚಿದರು.ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಸರ್ಕಾರಿ ಕಚೇರಿಗಳು ಸಿಬ್ಬಂದಿ ಹಾಗೂ ಜನರ ಕೊರತೆಯಿಂದ ಖಾಲಿಯಾಗಿದ್ದವು

ಚಂದ್ರಗುತ್ತಿಯಲ್ಲಿ ಕರವೇ ವತಿಯಿಂದ ಪ್ರತಿಭಟಿಸಿ ಗಾಂಧಿಚೌಕದಲ್ಲಿ ಟೈರ್‌ಗೆ ಬೆಂಕಿ ಹಚ್ಚಲಾಯಿತು.
ಉಳವಿ, ಜಡೆ, ಕುಪ್ಪಗಡ್ಡೆ ಹೋಬಳಿಯಲ್ಲಿ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ತಾಲ್ಲೂಕಿನಾದ್ಯಂತ ಬಂದ್‌ಗೆ ಬೆಂಬಲ ವ್ಯಕ್ತವಾಗಿದ್ದು, ಯಾವುದೇ ಅಹಿತಕರ ಘಟನೆ ನಡೆದ ಬಗ್ಗೆ ವರದಿಯಾಗಿಲ್ಲ. 

ಕಾವೇರಿ ನದಿ ನೀರು ಅಸಮರ್ಪಕ ಹಂಚಿಕೆ ವಿರೋಧಿಸಿ ರಾಜ್ಯಾದ್ಯಂತ ಕರೆದಿದ್ದ ಬಂದ್‌ಗೆ ಆನವಟ್ಟಿಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಲಿಲ್ಲ.  ಶನಿವಾರ ವಾರದ ಸಂತೆಯಾಗಿದ್ದರಿಂದ ಎಂದಿನಂತೆ ವ್ಯಾಪಾರ ವಹಿವಾಟು ನಡೆದಿದ್ದು ಒಂದು ಕಾರಣವಾದರೆ, ಈ ಭಾಗದಲ್ಲಿ ಮಾಳಪಕ್ಷ ಹಬ್ಬಕ್ಕಾಗಿ ಸುತ್ತಮುತ್ತಲ ಗ್ರಾಮಸ್ಥರು ಸಂತೆಯನ್ನು ಆಶ್ರಯಿಸುವುದರಿಂದ ತೊಂದರೆಯಾಗಬಾರದೆಂಬ ದೃಷ್ಟಿಯಿಂದ ಬಂದ್ ಮಾಡದೇ ಸಂತೆಯನ್ನು ನಡೆಸಲಾಯಿತು.

ನೀರಸ ಪ್ರತಿಕ್ರಿಯೆ
ಹೊಸನಗರ:
ಇಲ್ಲಿ ನೀರಸ ಪ್ರತಿಕ್ರಿಯ ಕಂಡು ಬಂದಿತು. ಪಟ್ಟಣದಲ್ಲಿ ಯಾವುದೇ ಕನ್ನಡಪರ ಸಂಘಟನೆಗಳು ಬಂದ್ ಮಾಡುವಂತೆ ಮನವಿ ಮಾಡಿರದ ಕಾರಣ ಹೋಟೆಲ್, ಅಂಗಡಿ, ಮುಂಗಟ್ಟು ಎಂದಿನಂತೆ ತೆರೆದಿದ್ದು ವ್ಯಾಪಾರ ವಹಿವಾಟು ಮಾತ್ರ ಸ್ವಲ್ಪಮಟ್ಟಿಗೆ ಕಡಿಮೆ ಇತ್ತು ಎನ್ನಲಾಗಿದೆ.

ಸರ್ಕಾರಿ ಕಚೇರಿ, ಬ್ಯಾಂಕ್, ನ್ಯಾಯಾಲಯ, ಅಂಚೆ ಕಚೇರಿ ಸೇರಿದಂತೆ ಎಲ್ಲಾ ಕಚೇರಿಗಳು ತೆರೆದಿದ್ದರೂ ಜನರು ಇರಲಿಲ್ಲ. ಶಾಲಾ-ಕಾಲೇಜುಗಳು ತೆರೆದಿದ್ದರೂ ವಿದ್ಯಾರ್ಥಿಗಳು ಇಲ್ಲದ ಕಾರಣ ಅಘೋಷಿತ ಬಂದ್ ಆಗಿತ್ತು.
ಜೆಡಿಎಸ್: ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಬಿ.ಜಿ. ನಾಗರಾಜ್ ಅಧ್ಯಕ್ಷತೆಯಲ್ಲಿ ಪ್ರತಿಭಟನಾ ಮೆರವಣಿಗೆ ಹಾಗೂ ಭಾಷಣ ಮಾಡಿ ತಹಶೀಲ್ದಾರ್‌ಗೆ ಸರ್ಕಾರ ಕ್ರಮವನ್ನು ಖಂಡಿಸಿ ಮನವಿ ನೀಡಿದರು.

ಎಂ.ವಿ. ಜಯರಾಮ್, ಅರುಣ್‌ಕುಮಾರ್ ಎಚ್.ಎನ್. ಶ್ರೀಪತಿರಾವ್, ಕರ್ನಾಟಕ ರಕ್ಷಣಾ ವೇದಿಕೆಯ ರಾಮಚಂದ್ರ ಪಾಲ್ಗೊಂಡಿದ್ದರು.ತಾಲ್ಲೂಕಿನ ನಗರದ ನಾಡಕಚೇರಿ ಎದುರು ಕರುಣಾಕರ ಶೆಟ್ಟಿ ಎಂಬುವರು ಏಕಾಂಗಿಯಾಗಿ ಧರಣಿ ನಡೆಸಿದ್ದು ವಿಶೇಷವಾಗಿತ್ತು

ಭದ್ರಾವತಿ: ಬಂದ್‌ಗೆ ಸ್ತಬ್ಧ
ಭದ್ರಾವತಿ:
ಬಂದ್‌ಗೆ ನಗರ ಸಂಪೂರ್ಣ ಸ್ತಬ್ಧಗೊಂಡಿತ್ತು.ಕಳೆದ ರಾತ್ರಿಯಿಂದಲೇ ಬಂದ್ ಕಾವು ನಗರದಲ್ಲಿ ಏರಿತ್ತು. ಹೋಟೆಲ್, ಅಂಗಡಿ, ಮುಂಗಟ್ಟುಗಳು ಸ್ವತಃ ಬಂದ್‌ಗೆ ಸಹಕರಿಸಿದ್ದವು. ನಗರ ಹಾಗೂ ಗ್ರಾಮಾಂತರ ಬಸ್ ಸಂಚಾರ ಸ್ತಬ್ಧವಾಗಿತ್ತು.

ಆಟೋ, ಟ್ಯಾಕ್ಸಿ, ಚಿತ್ರಮಂದಿರ, ವಾಣಿಜ್ಯ ಸಂಸ್ಥೆಗಳು, ಸರ್ಕಾರಿ ಇಲಾಖೆಗಳು, ಶಾಲಾ-ಕಾಲೇಜುಗಳು ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ಸಹಕಾರ ನೀಡಿದ್ದ ಪರಿಣಾಮ ಇಡೀ ನಗರ ವಾಹನ, ಸಂಚಾರ ದಟ್ಟಣೆ ಕಳೆದುಕೊಂಡು ಬಿಕೋ ಎನ್ನುತ್ತಿತ್ತು.

ವಿಶ್ವೇಶ್ವರಯ್ಯ ಯುವಕರ ಸಂಘ, ರಾಮರಾಜ್ಯ ಯುವಕರ ಸಂಘ, ರೈತ ಸಂಘ, ಹಸಿರುಸೇನೆ... ಹೀಗೆ ವಿವಿಧ ಸಂಘಟನೆಗಳ ಕಾರ್ಯಕರ್ತರು ರಸ್ತೆಗಳಲ್ಲಿ ಘೋಷಣೆ ಕೂಗುತ್ತಾ ಸಾಗಿದ್ದಲ್ಲದೇ, ಪ್ರಮುಖ ವೃತ್ತದಲ್ಲಿ ಟೈರ್‌ಗಳಿಗೆ ಬೆಂಕಿಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡಿಗರ ತಾಳ್ಮೆ ಪರೀಕ್ಷಿಸುವುದು ಸರಿಯಲ್ಲ
ಕಾರ್ಗಲ್:
ಕನ್ನಡಿಗರ ತಾಳ್ಮೆಗೆ ಒಂದು ಇತಿ ಮಿತಿ ಇರುತ್ತದೆ. ಹಾಗೆಂದು ಅದನ್ನು ಪರೀಕ್ಷಿಸುವುದು ಸರಿಯಲ್ಲ ಎಂದು ಮಲೆನಾಡು ಕರವೇ ತಾಲ್ಲೂಕು ಕಾರ್ಯಾಧ್ಯಕ್ಷ ಹಾ.ಸಾ. ಸಾದಿಕ್ ಅಭಿಪ್ರಾಯಪಟ್ಟರು.ಜೋಗ ಅಭಿವೃದ್ಧಿ ಪ್ರಾಧಿಕಾರದ ಪ್ರಮುಖ ದ್ವಾರದ ಮುಂಭಾಗದಲ್ಲಿ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ಜೋಗ ಯುವಕ ಸಂಘದ ಅಧ್ಯಕ್ಷ ಸಿದ್ಧರಾಜು, ಕರವೇ ನಾರಾಯಣಗೌಡ ಬಣದ ಅಧ್ಯಕ್ಷ ಎನ್. ಮಂಜುನಾಥ್, ಸತೀಶ್, ಕೆ. ವಿಜಯಕುಮಾರ್, ದೇವರಮಕ್ಕಿ ಮಂಜು, ಭಾಸ್ಕರ, ಬಿ. ಉಮೇಶ್, ಗುರುಸಿದ್ದಾಚಾರಿ,ಮಲೆನಾಡು ಕರವೇ ಪ್ರಮುಖರಾದ ಜಾನ್, ಶ್ರೀಧರ, ಎಸ್.ಎಂ. ಇಲಿಯಾಸ್, ಆನಂದ, ರತ್ನಾಕರ, ಮಂಟಾಚಾರಿ, ಪ್ರಶಾಂತ್ ವರ್ತಕ ಪ್ರಮುಖರಾದ ಶ್ರೀನಿವಾಸ ಪೈ, ರಾಧಾಕೃಷ್ಣ, ಮುರುಗನ್, ನಾಗೇಂದ್ರ ಮಹಾಲೆ, ಧನಪಾಲ ಜೈನ್, ಚಾಲಕ ಸಂಘದ ಪ್ರಮುಖರಾದ ಟಿ. ಸುರೇಶ್, ಪಿ. ಮಂಜು, ಕೃಷ್ಣಮೂರ್ತಿ, ಗುರುರಾಜ, ಆಟೋ ಸಂಘದ ಸತೀಶ್, ನಂಜುಂಡ, ವನರಾಜ, ಈಶ್ವರ ಇದ್ದರು.

ಬಂದ್ ಯಶಸ್ವಿ
ರಿಪ್ಪನ್‌ಪೇಟೆ:
ಪಟ್ಟಣದಲ್ಲಿ ಬಂದ್ ಸಂಪೂರ್ಣ ಯಶಸ್ವಿಯಾಯಿತು. ಔಷಧಿ ಅಂಗಡಿ ಹೊರತು ಪಡಿಸಿದಂತೆ ಹೋಟೆಲ್ ಹಾಗೂ ಅಂಗಡಿ ಮುಂಗಟ್ಟುಗಳು ಬೆಳಿಗ್ಗೆ 6ರಿಂದ ಸಂಜೆ 6ರ ಸ್ವಯಂಪ್ರೇರಿತವಾಗಿ ಬಂದ್ ಮಾಡುವ ಮೂಲಕ ನಾಡು, ನುಡಿ, ನೆಲ, ಜಲ, ಭಾಷೆಯ ರಕ್ಷಣೆಗೆ ಧಕ್ಕೆಯಾದಲ್ಲಿ ಯಾವುದೇ ಸಂದರ್ಭಕ್ಕೂ ಹೋರಾಟಕ್ಕೆ ಸಿದ್ಧ ಎಂಬುದಕ್ಕೆ ಬಂದ್ ಸಾಕ್ಷಿಯಾಗಿತ್ತು.

ಸ್ಥಳೀಯ ವಿನಾಯಕ ಯುವಕ ಸಂಘ, ಕಲಾ ಕೌಸ್ತುಭ ಕನ್ನಡ ಸಂಘ, ಆಟೋ ಚಾಲಕರ ಸಂಘ, ವಿವಿಧ ಸಂಘಟನೆಯ ಮುಖಂಡರು, ಕರವೇ ಕಾರ್ಯಕರ್ತರು ಬಂದ್‌ನ್ನು ಬೆಂಬಲಿಸಿ ಬೈಕ್‌ರ‌್ಯಾಲಿ ನಡೆಸಿದರು.
ಬಂದ್ ಹಿನ್ನೆಲೆಯಲ್ಲಿ ಪಿಎಸ್‌ಐ ಶಶಿಕಾಂತ್ ಅವರ ನೇತೃತ್ವದಲ್ಲಿ ಪಟ್ಟಣದ ಆಯಕಟ್ಟಿನ ಸ್ಥಳದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ಮುಖಂಡರಾದ ಕೆರೆಹಳ್ಳಿ ರವೀಂದ್ರ, ಅಣ್ಣಪ್ಪ, ಪಾ.ನ. ಜಗದೀಶ, ಟೈಲರ್ ಜಯಪ್ಪ, ರವಿ ಆಚಾರಿ, ಆಟೋ ಲಕ್ಷ್ಮಣ, ಮಾಲತೇಶ, ಪುರುಷೋತ್ತಮ್, ವೆಂಕಟೇಶ, ರಾಜೇಶ್, ಶ್ರೀಧರ್, ಗ್ಯಾರೇಜ್ ರಾಮು, ರೆಹಮನ್, ಕುಷನ್ ದೇವರಾಜ, ಹಿರಿಯಣ್ಣ ಭಂಡಾರಿ ಹಾಗೂ ನವೀನ್ ಹಾಜರಿದ್ದರು.

ಸಂಪೂರ್ಣ ಬೆಂಬಲ
ತೀರ್ಥಹಳ್ಳಿ
: ತೀರ್ಥಹಳ್ಳಿಯಲ್ಲಿ ಸಂಪೂರ್ಣ ಬೆಂಬಲ ವ್ಯಕ್ತವಾಗಿದೆ.ಬಂದ್ ಹಿನ್ನೆಲೆಯಲ್ಲಿ ಶಾಲಾ-ಕಾಲೇಜುಗಳು ಮುಚ್ಚಿದ್ದವು. ಬ್ಯಾಂಕ್‌ಗಳು ತೆರೆದಿದ್ದರೂ ವಹಿವಾಟು ನಡೆಯಲಿಲ್ಲ. ಗ್ರಾಮಾಂತರ ಪ್ರದೇಶಗಳಿಗೆ ಬಸ್ ಸಂಚಾರ ನಿಂತಿದ್ದರಿಂದ ತೊಂದರೆ ಉಂಟಾಯಿತು.ಕನ್ನಡಪರ ಸಂಘಟನೆಗಳು ಪಟ್ಟಣದಲ್ಲಿ ಬೈಕ್ ರ‌್ಯಾಲಿ ನಡೆಸಿ, ತಾಲ್ಲೂಕು ಕಚೇರಿ ಎದುರು ಪ್ರತಿಭಟನಾ ಸಭೆ ನಡೆಸಿದರು.

ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೆಂಪೆ ದೇವರಾಜ್ ಮಾತನಾಡಿ, ಕಾವೇರಿ ಜಲವಿವಾದವನ್ನು ಸೌಹಾರ್ದವಾಗಿ ಬಗೆಹರಿಸಿಕೊಳ್ಳುವ ಮೂಲಕ ಕರ್ನಾಟಕ ಹಾಗೂ ತಮಿಳುನಾಡಿನ ನಡುವೆ ಸೌಹಾರ್ದ ವಾತಾವರಣ ನಿರ್ಮಿಸುವಂತಾಗಬೇಕು ಎಂದು ಹೇಳಿದರು. ಕಸಾಪ ಕಾರ್ಯದರ್ಶಿ ಟಿ.ಕೆ. ರಮೇಶ್ ಶೆಟ್ಟಿ, ಕರವೇ ಮುಖಂಡ ವೆಂಕಟೇಶ್ ಹೆಗ್ಡೆ, ಸುರೇಂದ್ರ, ಹೊಸಕೊಪ್ಪ ಸುಂದರೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT