ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವೇರಿದ ಜಿಲ್ಲೆ: ಹರಿದು ಬಂದ ಜನಸಾಗರ

Last Updated 6 ಅಕ್ಟೋಬರ್ 2012, 9:20 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ವಿರೋಧಿಸಿ ಮುಸ್ಲಿಂ ಬಾಂಧವರು ಶುಕ್ರವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

ಪಟ್ಟಣದ ಜುಮ್ಮಾ ಮಸೀದಿಯಿಂದ ಪೂರ್ವ ಕೋಟೆ ಮಾರ್ಗವಾಗಿ ಬೆಂಗಳೂರು- ಮೈಸೂರು ಹೆದ್ದಾರಿ ವೃತ್ತದ ವರೆಗೆ ಕುದುರೆಗಳ ಜತೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಹೆದ್ದಾರಿ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ಆಕ್ರೋಶ ವ್ಯಕ್ತಪಡಿಸಿದರು. ಕಾವೇರಿ ನದಿ ಪ್ರಾಧಿಕಾರ ಹಾಗೂ ತಮಿಳುನಾಡು ಮುಖ್ಯಮಂತ್ರಿ ವಿರುದ್ಧ ಘೋಷಣೆ ಕೂಗಿದರು. ಅಬ್ದುಲ್ಲಾ ಬೇಗ್, ಮುಕ್ತಾರ್ ಅಹಮ್ಮದ್, ಅಜೀಜ್, ಏಜಾಸ್ ಪಾಷ, ಗುಲ್ಜಾರ್‌ಪಾಷ, ಸಲೀಂ, ಸಮಿವುಲ್ಲಾ, ಇರ್ಫಾನ್, ರವೂಫ್, ಮಜರ್‌ಪಾಷ, ನಸ್ರುಲ್ಲಾ ಭಾಗವಹಿಸಿದ್ದರು.

 ಕೊಡಿಯಾಲ: ತಾಲ್ಲೂಕಿನ ಕೊಡಿಯಾಲ ಗ್ರಾಮದ ಮುಸ್ಲಿಂ ಬಂಧುಗಳು ಶುಕ್ರವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು. ಕಾವೇರಿ ಹಿತರಕ್ಷಣಾ ಸಮಿತಿ ನಡೆಸುತ್ತಿರುವ ಧರಣಿಯಲ್ಲಿ ಪಾಲ್ಗೊಂಡು ಬೆಂಬಲ ವ್ಯಕ್ತಪಡಿಸಿದರು. ಮಹಮ್ಮದ್ ಆದಂ, ಸಲೀಂ, ಸಮೀವುಲ್ಲಾ, ಮಹಮ್ಮದ್ ಪೀರ್, ಅನ್ವರ್‌ಪಾಷ, ಬಾಬು ಇದ್ದರು.

ಬಾಗಲಕೋಟೆ ಭೂಪನ ವಿನೂತನ ಪ್ರತಿಭಟನೆ
ಶ್ರೀರಂಗಪಟ್ಟಣ: ಪಟ್ಟಣದ ಕುವೆಂಪು ವೃತ್ತದ ಬಳಿ ಶುಕ್ರವಾರ ನಡೆದ ಕಾವೇರಿ ಚಳವಳಿಯಲ್ಲಿ ಬಾಗಲಕೋಟೆ ಜಿಲ್ಲೆ ಮುಗಳಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಭೀಮನಗೌಡ ಬಜಣ್ಣನವರ್ ಪಾಲ್ಗೊಂಡು ಬೆಂಬಲ ವ್ಯಕ್ತಪಡಿಸಿದರು.

ಬಾಗಲಕೋಟೆಯಿಂದ ಇಲ್ಲಿಗೆ ಬೈಕ್‌ನಲ್ಲಿ ಆಗಮಿಸಿರುವ ಬಜಣ್ಣನವರ್ ತಲೆ ಕೂದಲು ಬೋಳಿಸಿಕೊಂಡು, ಅದರಲ್ಲಿ ಕೃಷ್ಣಾ ಕಾವೇರಿ ನಮ್ಮದು ಎಂಬ ಒಕ್ಕಣೆ ಬರೆದುಕೊಂಡು ಗಮನ ಸೆಳೆದರು. ಕಾವೇರಿ ಹೋರಾಟಕ್ಕೆ ಬೆಂಬಲ ಸೂಚಿದ ಅವರು ನಾಡಿನ ನೆಲ, ಜಲದ ವಿಚಾರ ಬಂದಾಗ ನಾಡಿನ ಎಲ್ಲ ಜನರು ಒಂದಾಗಬೇಕು. ಕೃಷ್ಣಾ, ಕಾವೇರಿ, ಮಹದಾಯಿ ನೀರಿನ ಸಮಸ್ಯೆ, ಗಡಿ ನಾಡಿನ ವಿಚಾರ ಬಂದಾಗ ಒಗ್ಗಟ್ಟು ಪ್ರದರ್ಶಿಸಬೇಕು. ಇಲ್ಲದಿದ್ದರೆ ನ್ಯಾಯ ಸಿಗುವುದಿಲ್ಲ ಎಂದರು.

ಬೈಕ್ ರ‌್ಯಾಲಿ: ತಾಲ್ಲೂಕಿನ ಮೊಬೈಲ್ ಅಂಗಡಿಗಳ ಮಾಲೀಕರು ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ವಿರೋಧಿಸಿ ಶುಕ್ರವಾರ ಪಟ್ಟಣದಲ್ಲಿ ಬೈಕ್ ರ‌್ಯಾಲಿ ನಡೆಸಿದರು. ಪ್ರಮುಖ ಬೀದಿಯಲ್ಲಿ ಸಾಗಿ ಕುವೆಂಪು ವೃತ್ತದ ವರೆಗೆ ರ‌್ಯಾಲಿ ನಡೆಯಿತು. ದೀಪು, ಎಂ.ಸುರೇಶ್, ನವೀನ್, ಕಿರಣ್, ಪ್ರಭಾಕರ್ ಭಾಗವಹಿಸಿದ್ದರು.

  ಮನ್‌ಮುಲ್ ನೌಕರರು: ಮಂಡ್ಯ ಹಾಲು ಒಕ್ಕೂಟದ ನೌಕರರು, ಸಿಬ್ಬಂದಿ ಹಾಗೂ ನಿರ್ದೇಶಕರು ತಮಿಳುನಾಡಿಗೆ ಹರಿಸುತ್ತಿರುವ ಕಾವೇರಿ ನೀರು ಹರಿಸುವುದನ್ನು ವಿರೋಧಿಸಿ ಶುಕ್ರವಾರ ಪ್ರತಿಭಟನೆ ನಡೆಸಿದರು. ಮನ್‌ಮುಲ್ ಕಚೇರಿಯಿಂದ ಬೆಂಗಳೂರು- ಮೈಸೂರು ಹೆದ್ದಾರಿ ವೃತ್ತದ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಿತು. ಮನ್‌ಮುಲ್ ನಿರ್ದೇಶಕ ಬಿ.ಬೋರೇಗೌಡ, ಶ್ರೀಕಾಂತ್, ಬಲ್ಲೇನಹಳ್ಳಿ ಮಂಜುನಾಥ್, ದೇಸಿರಾಜು, ನೆಹರು, ಪ್ರತಾಪ್, ದೇವೇಗೌಡ, ಸುಬ್ಬೇಗೌಡ ಇದ್ದರು.

ಸ್ವಾತಂತ್ರ್ಯ ಹೋರಾಟಗಾರರ ಧರಣಿ
ಶ್ರೀರಂಗಪಟ್ಟಣ: ತಮಿಳುನಾಡಿಗೆ ಹರಿಸುತ್ತಿರುವ ಕಾವೇರಿ ನೀರು ನಿಲ್ಲಿಸುವಂತೆ ಆಗ್ರಹಿಸಿ ಸರ್ಕಾರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ, ಸದಸ್ಯರು ಶುಕ್ರವಾರ ಪಟ್ಟಣದಲ್ಲಿ ಧರಣಿ ನಡೆಸಿದರು.

ಸ್ವಾತಂತ್ರ್ಯ ಹೋರಾಟಗಾರ ಗೋಪಾಲಗೌಡ ನೇತೃತ್ವದಲ್ಲಿ ಧರಣಿ ನಡೆಯಿತು.  ಪ್ರೊ.ಕರಿಮುದ್ದೀನ್, ಪುಟ್ಟೇಗೌಡ, ಸಾ.ವೆ.ರ.ಸ್ವಾಮಿ, ಎಸ್.ಆರ್.ರಾಮಚಂದ್ರರಾವ್ ಮಾತನಾಡಿದರು. ಕಾಳೇಗೌಡ, ಬೋರೇಗೌಡ, ನರಸಿಂಹಮೂರ್ತಿ, ಬೆಟ್ಟೇಗೌಡ, ಲಕ್ಷ್ಮೇಗೌಡ, ಕರಿಯಪ್ಪ ಭಾಗವಹಿಸಿದ್ದರು.

  ಪ್ರತಿಕೃತಿ ದಹನ: ಕಾವೇರಿ ಹಿತರಕ್ಷಣಾ ಸಮಿತಿಯ ಸದಸ್ಯರು ಶುಕ್ರವಾರ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿದರು. ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಸ್ವಾಮಿಗೌಡ, ತಾಲ್ಲೂಕು ಅಧ್ಯಕ್ಷ ಕೆ.ಬಿ.ಬಸವರಾಜು, ಕೃಷ್ಣೇಗೌಡ, ಬಾಲಕೃಷ್ಣ, ದೊಡ್ಡಪಾಳ್ಯ ಶಿವಕುಮಾರ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಪಾಲಹಳ್ಳಿ ಗ್ರಾಮಸ್ಥರಿಂದ ಹೆದ್ದಾರಿ ಬಂದ್
ಶ್ರೀರಂಗಪಟ್ಟಣ: ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ತಕ್ಷಣ ನಿಲ್ಲಿಸುವಂತೆ ಆಗ್ರಹಿಸಿ ತಾಲ್ಲೂಕಿನ ಪಾಲಹಳ್ಳಿ ಗ್ರಾಮಸ್ಥರು ಶುಕ್ರವಾರ ಪಟ್ಟಣದಲ್ಲಿ ಬೆಂಗಳೂರು- ಮೈಸೂರು ಹೆದ್ದಾರಿ ತಡೆ ನಡೆಸಿದರು.

ಖಾಲಿ ಕೊಡ ಪ್ರದರ್ಶನ
ಮದ್ದೂರು: ತಮಿಳುನಾಡಿಗೆ ನೀರು ಹರಿಸುವುದನ್ನು ಖಂಡಿಸಿ ಶುಕ್ರವಾರ ಪಟ್ಟಣದಲ್ಲಿ ವಿವಿಧ ಸಂಘಟನೆಗಳ ಸದಸ್ಯರು ಹೆದ್ದಾರಿ ತಡೆ ಪ್ರತಿಭಟನೆ ನಡೆಸಿದರು.

ತಮಿಳು ಕಾಲೋನಿಯ ಮಹಿಳೆಯರು ಖಾಲಿ ಕೊಡಗಳ ಪ್ರದರ್ಶನ ನಡೆಸಿದರು. ನಂತರ ಶಿವಪುರ ಧ್ವಜಸತ್ಯಾಗ್ರಹ ಸೌಧದರಿಂದ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಪ್ರತಿಕೃತಿಯ ಅಣಕು ಮೆರವಣಿಗೆ ನಡೆಸಿದ ಅವರು, ಟಿಬಿ ವೃತ್ತದಲ್ಲಿ ಶ್ರಾದ್ಧ ಏರ್ಪಡಿಸಿ ಅಡುಗೆ ಸಿದ್ಧಪಡಿಸಿ ಸರತಿ ಸಾಲಿನಲ್ಲಿ ಕುಳಿತು ಊಟ ಮಾಡಿದರು.

ಮಾಜಿ ಶಾಸಕ ಡಿ.ಸಿ.ತಮ್ಮಣ್ಣ, ಶಾಸಕರಾದ ಎಂ.ಶ್ರೀನಿವಾಸ್, ಬಿ.ರಾಮಕೃಷ್ಣ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸ್ವರೂಪ್‌ಚಂದ್, ಮುಖಂಡರಾದ ಆಲೂರು ಶಿವಶಂಕರ್, ಎನ್.ಆರ್.ಪ್ರಕಾಶ್, ಬಿಳಿಯಪ್ಪ, ಕೂಳಗೆರೆ ಶೇಖರ್, ರವಿಚನ್ನಸಂದ್ರ, ಜಿ.ಪಿ.ಯೋಗೇಶ್, ಸುರೇಶ್, ಎಲ್.ತಮ್ಮಣ್ಣಗೌಡ, ರೂಪ, ಕೆ.ಟಿ.ಸುರೇಶ್, ಮೃತ್ಯುಂಜಯ ಭಾಗವಹಿಸಿದ್ದರು.

ಆಟೋ ಮೆರವಣಿಗೆ: ಪಟ್ಟಣದ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಸದಸ್ಯರು ಶುಕ್ರವಾರ ಶಿವಪುರ ಧ್ವಜಸತ್ಯಾಗ್ರಹ ಸೌಧದಿಂದ ಆಟೋ ಮೆರವಣಿಗೆ ನಡೆಸಿದರು. ಪೇಟೆ ಬೀದಿ ಮೂಲಕ ಟಿಬಿ ವೃತ್ತಕ್ಕೆ ತೆರಳಿ ಅಲ್ಲಿ ಕೆಲ ಕಾಲ ಹೆದ್ದಾರಿ ತಡೆ ನಡೆಸಿದರು. ಪುರಸಭಾ ಮಾಜಿ ಅಧ್ಯಕ್ಷ ಎಂ.ಐ.ಪ್ರವೀಣ್, ಅರವಿಂದ್,ಮ.ನ. ಪ್ರಸನ್ನಕುಮಾರ್, ಶಂಕರ್, ಚಂದ್ರಶೇಖರ್, ಶಿವಣ್ಣ, ಅಯ್ಯಪ್ಪ, ನಾಗರಾಜು, ಮಹದೇವು, ವೆಂಕಟೇರ್ಶ, ಸುರೇಶ್ ಭಾಗವಹಿಸಿದ್ದರು.

ಗೆಜ್ಜಲಗೆರೆ: ಸಮೀಪದ ಸಾದೊಳಲು ಗ್ರಾಮದ ಗ್ರಾಮಸ್ಥರು ಶುಕ್ರವಾರ ಇಲ್ಲಿನ ಹೆದ್ದಾರಿಯಲ್ಲಿ ಶಾಮೀಯಾನ ಹಾಕಿ ಅಡುಗೆ ತಯಾರಿಸಿ ಪ್ರತಿಭಟನೆ ನಡೆಸಿದರು. ರೈತಸಂಘದ ಪುಟ್ಟಸ್ವಾಮಿಗೌಡ, ಬಸವರಾಜು, ಬೋರೇಗೌಡ, ರಾಜಣ್ಣ, ಶೇಖರೇಗೌಡ, ನಿಂಗಯ್ಯ, ಚಿಕ್ಕೈದೆಗೌಡ, ಬಸವೇಗೌಡ, ಚನ್ನಪ್ಪ, ಚಂದ್ರಣ್ಣ, ಕೆಂಪಯ್ಯ ಭಾಗವಹಿಸಿದ್ದರು.


ಬಾಲಕಿಯಿಂದ ಉಪವಾಸ: ಕಾವೇರಿ ನೀರಿಗಾಗಿ ಜಿಲ್ಲೆಯಾದ್ಯಂತ ನಡೆಯುತ್ತಿರುವ ಪ್ರತಿಭಟನೆ ಬೆಂಬಲಿಸಿ ಬೆಂಗಳೂರಿನ ಬಾಲೆ ದೀಕ್ಷಿತಾ ಶುಕ್ರವಾರ ಗೆಜ್ಜಲಗೆರೆಗೆ ಆಗಮಿಸಿ ಉಪವಾಸ ಧರಣಿ ಆರಂಭಿಸಿದ್ದಾಳೆ.
ತಾಲ್ಲೂಕಿನ ಕೌಡ್ಲೆ ಮೂಲದ ರಾಜು ಅವರ ಮಗಳಾದ ಈಕೆ ಬೆಂಗಳೂರಿನ  ಎಸ್.ವಿ.ಟಿ ವಿದ್ಯಾಸಂಸ್ಥೆಯಲ್ಲಿ 4ನೇ ತರಗತಿ ಓದುತ್ತಿದ್ದು, ಕಾವೇರಿ ನೀರಿಗಾಗಿ ರೈತರ ಸಂಕಷ್ಟ ನಿವಾರಣೆಗಾಗಿ ಉಪವಾಸ ಧರಣಿ ಮಾಡುತ್ತಿರುವುದಾಗಿ ಆಕೆ ತಿಳಿಸಿದ್ದಾಳೆ.

ಹೆದ್ಧಾರಿ ತಡೆ: ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ಸದಸ್ಯರು ಪಟ್ಟಣದಲ್ಲಿ ಹೆದ್ದಾರಿ ತಡೆ ನಡೆಸಿದರು. ಸಭಾದ ತಾಲ್ಲೂಕು ಅಧ್ಯಕ್ಷ ಬಸವರಾಜು, ಕೃಷ್ಣಚಾರಿ, ಮಂಟೇಸ್ವಾಮಿ, ಸಿದ್ದಾಪ್ಪಾಜಿ, ಸೋಮಚಾರಿ, ತೀರ್ಥಚಾರಿ ಪಾಲ್ಗೊಂಡಿದ್ದರು.

ಅಣುಕು ಶ್ರಾದ್ಧ: ಸಮೀಪದ ಶಿವಪುರದಲ್ಲಿ ಶಾಮೀಯಾನ, ಧ್ವನಿವರ್ಧಕ ಹಾಗೂ ಹೂವಿನ ಅಲಂಕಾರ ಕಾರ್ಮಿಕರ ಸಂಘದ ಸದಸ್ಯರು ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅಣುಕು ಶ್ರಾದ್ಧ ಏರ್ಪಡಿಸಿ, ರಸ್ತೆಯಲ್ಲಿ ತಿಥಿಯೂಟ ತಯಾರಿಸಿ ಪ್ರತಿಭಟನಾಕಾರರಿಗೆ ಉಣಬಡಿಸಲಾಯಿತು.

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಗುರುಚರಣ್, ತಾಲ್ಲೂಕ ಪಂಚಾಯಿತಿ ಸದಸ್ಯ ಸಂದರ್ಶ, ಪುರಸಭಾ ಸದಸ್ಯ ಸೌದೆನಿಂಗಯ್ಯ, ಅಬ್ಬಾಸ್ ಆಲಿ ಬೋಹ್ರ  ಪ್ರತಿಭಟನೆಯಲ್ಲಿ ಪಾಲ್ಗೊಂಡು ಬೆಂಬಲ ಸೂಚಿಸಿದರು. ಸಂಘದ ಅಧ್ಯಕ್ಷ ಮಹಾಲಿಂಗು, ವಿ.ರವಿ, ಶಿವು, ಶಿವಪ್ಪ ಪಾಲ್ಗೊಂಡಿದ್ದರು.

ಎತ್ತಿನಗಾಡಿ ಮೆರವಣಿಗೆ: ಪಟ್ಟಣ ಹಳೇ ಒಕ್ಕಲಿಗರ ಬೀದಿಯ ನಿವಾಸಿಗಳು ಪಟ್ಟಣದಲ್ಲಿ ಎತ್ತಿನ ಗಾಡಿಗಳ ಮೆರವಣಿಗೆ ನಡೆಸಿ ವಿನೂತನ ಪ್ರತಿಭಟನೆ ನಡೆಸಿದರು. ರೈತರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚಿದುಕುಮಾರ್, ಮಧುಕುಮಾರ್, ಸಂತೋಷ್, ಕಿಟ್ಟಿ, ರಾಕೇಶ್, ಲಿಂಗರಾಜು, ಯಶವಂತಗೌಡ, ರಾಕೇಶ್, ಶಿವಲಿಂಗಪ್ಪ, ಪ್ರಶಾಂತ್, ಸುನೀಲ್ ಭಾಗವಹಿಸಿದ್ದರು.

ಪೌರ ಕಾರ್ಮಿಕರ ಸಂಘ: ಪಟ್ಟಣದ ಪುರಸಭೆ ಎದುರು ಪೌರ ಕಾರ್ಮಿಕರ ಸಂಘದ ಸದಸ್ಯರು ಹೆದ್ದಾರಿ ತಡೆ ನಡೆಸಿದರು. ಪುರಸಭಾ ಮಾಜಿ ಅಧ್ಯಕ್ಷ ಅಮರ್‌ಬಾಬು, ಸಂಘದ ಅಧ್ಯಕ್ಷ ಸಂತೋಷ್, ಮಣಿಕಂಠ, ಪಳಿನಿಯಪ್ಪ, ಪದ್ಮ,  ವೆಂಕಟೇಶ್,ಗಣೇಶಮ್ಮ, ಬನ್ನಾರಿಯಮ್ಮ, ಲಕ್ಷ್ಮಮ್ಮ, ಶಿವು, ರಂಗ, ಸೀನು, ತುಳಸಿ ಭಾಗವಹಿಸಿದ್ದರು.
ಶಿಕ್ಷಕರ ಸಂಘ: ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಹಕಾರ ಸಂಘ ಹಾಗೂ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಸದಸ್ಯರು ಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ರಾಜು, ಪತ್ತಿನ ಸಹಕಾರ ಸಂಘದ ಅಧ್ಯಕ್ಷೆ ಹೇಮಾವತಿ, ಉಪಾಧ್ಯಕ್ಷ ನಿಂಗರಾಜು, ನಿರ್ದೇಶಕರಾದ ಜಿ.ಸಿ.ರಮೇಶ್, ಉದಯಪ್ರಕಾಶ್, ಕೈದಾಳಪ್ಪ, ದೊಡ್ಡತಮ್ಮಯ್ಯ, ರಾಜಕುಮಾರ್, ಪ್ರಸನ್ನ ಇತರರು ಭಾಗವಹಿಸಿದ್ದರು.

ಬೀದಿಗಿಳಿದ ವಿದ್ಯಾರ್ಥಿ ಸಮೂಹ
ಪಾಂಡವಪುರ: ಪಾಂಡವಪುರದಲ್ಲಿ ಕಾವೇರಿ ಚಳವಳಿ ತೀವ್ರಗೊಳ್ಳುತ್ತಿದ್ದು, ಶುಕ್ರವಾರ ಪಟ್ಟಣದಲ್ಲಿ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದವು.

ಪಟ್ಟಣದ ವಿಜಯ ಬಿ.ಇಡಿ ಕಾಲೇಜು, ಸರ್ಕಾರಿ ಪದವಿ ಕಾಲೇಜು, ಪಿಯು ಕಾಲೇಜು ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ಬಳಿಕ ಪಟ್ಟಣದ ಐದು ದೀಪಗಳ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ಆಕ್ರೋಶ ವ್ಯಕ್ತಪಡಿಸಿದರು.


ಬೈಕ್ ರ‌್ಯಾಲಿ: ಮೊಬೈಲ್ ಅಂಗಡಿ ಮಾಲೀಕರು, ಕಾರ್ಮಿಕರು ಪಟ್ಟಣದಲ್ಲಿ ಬೈಕ್ ರ‌್ಯಾಲಿ ನಡೆಸಿದರು. ಗಿರೀಶ್, ಕಿಶೋರ್, ಪ್ರದೀಪ್, ನವೀನ, ಪಿಂಟು ಇದ್ದರು.


ಕ್ರೈಸ್ತರ ಪ್ರಾರ್ಥನೆ: ಫಾದರ್ ಡೇವಿಡ್ ಸಗಾಯರಾಜ್ ನೇತೃತ್ವದಲ್ಲಿ ಕಾವೇರಿ ಹೋರಾಟಕ್ಕೆ ಜಯಸಿಗಲಿ ಎಂದು ಏಸುಕ್ರಿಸ್ತನಿಗೆ ಪ್ರಾರ್ಥನೆ ಸಲ್ಲಿಸಿದರು. ಪಟ್ಟಣದ ಬೀರಶೆಟ್ಟಹಳ್ಳಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.


ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಧರಣಿ
ಮಳವಳ್ಳಿ: ತಮಿಳುನಾಡಿಗೆ ಕಾವೇರಿ ನೀರು ಬಿಟ್ಟಿರುವುದನ್ನು ವಿರೋಧಿಸಿ ಶುಕ್ರವಾರ ಪಟ್ಟಣದಲ್ಲಿ ತಾಲ್ಲೂಕು ಕಸಾಪ ವತಿಯಿಂದ ಧರಣಿ ನಡೆಸಲಾಯಿತು.

ಬಳಿಕ ಶಿರಸ್ತೆದಾರ್‌ಗೆ ಮನವಿಪತ್ರ ಸಲ್ಲಿಸಲಾಯಿತು. ಕಸಾಪ ಅಧ್ಯಕ್ಷ ಟಿ.ಮರಿಸ್ವಾಮಿ, ಶಿವನಂಜಯ್ಯ, ಶಿವಮಾದೇಗೌಡ, ಮಲ್ಲಿಕಾ ಮಳವಳ್ಳಿ, ಪ್ರೊ.ದೊಡ್ಡಲಿಂಗೇಗೌಡ, ಮ.ಸಿ.ನಾರಾಯಣ, ಡಾ.ಕೃಷ್ಣೇಗೌಡ ಹುಸ್ಕೂರು ಇದ್ದರು.


ರಸ್ತೆ ತಡೆ: ಪಟ್ಟಣದ ವಿಶ್ವೇಶ್ವರಯ್ಯ ವೃತ್ತದಲ್ಲಿ ಕನಕಪುರ- ಮಳವಳ್ಳಿ ರಸ್ತೆ, ಕಣಿಗಲ್ ಬಳಿ ಕೊಳ್ಳೇಗಾಲ- ಮಳವಳ್ಳಿ ರಸ್ತೆ ತಡೆ ಮಾಡಲಾಯಿತು.


ಪುರಸಭೆ ಮಾಜಿ ಅಧ್ಯಕ್ಷ ಎಂ.ಎ.ಚಿಕ್ಕರಾಜು, ಎಂ.ಎಚ್.ಕೆಂಪಯ್ಯ, ನಂಜುಂಡಯ್ಯ, ಪುರಸಭೆ ಸದಸ್ಯರಾದ ನಂದಕುಮಾರ್, ಬಸವರಾಜು ಇದ್ದರು. ದಲಿತ ಜಾಗೃತಿ ವೇದಿಕೆ ಕಾರ್ಯಕರ್ತರು ಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಮುಖಂಡರಾದ ಶಿವಕುಮಾರ್, ನಟರಾಜು, ಕೆಂಪಯ್ಯ, ಜಯರಾಜು, ನಾಗರಾಜು, ಸಿದ್ದರಾಜು ಪಾಲ್ಗೊಂಡಿದ್ದರು.


ರೈತಸಂಘದ ಕಾರ್ಯಕರ್ತರು ಪಟ್ಟಣದ ಅನಂತರಾಮ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಶ್ರೀನಿವಾಸ್, ದೇವರಾಜು, ಎಳೇಗೌಡ ಭಾಗವಹಿಸಿದ್ದರು.


ಬಂದ್: ತಾಲ್ಲೂಕಿನ ಕಿರುಗಾವಲು ಹೋಬಳಿಲ್ಲಿ ಶುಕ್ರವಾರ ಬಂದ್ ಆಚರಿಸಲಾಯಿತು. ಬಳಿಕ ವಿವಿಧ ಸಂಘಟನೆಗಳ ಮುಖಂಡರು ಮೆರವಣಿಗೆ ನಡೆಸಿ ಮೈಸೂರು- ಮಳವಳ್ಳಿ ರಸ್ತೆ ತಡೆ ನಡೆಸಿದರು. ಜಿಲ್ಲಾ ಪಂಚಾಯಿತಿ ಸದಸ್ಯ ಜಕ್ರಿಯಾಖಾನ್, ತಾಲ್ಲೂಕು ಪಂಚಾಯಿತಿ ಸದಸ್ಯ ಕೆ.ವಿ.ಪ್ರಕಾಶ್, ಆನಂದ್, ಪ್ರಕಾಶ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹದೇವಯ್ಯ ಭಾಗವಹಿಸಿದ್ದರು.


ಭಾಷಣಕ್ಕೆ ಅಡ್ಡಿ: ಶಾಸಕ ಖಂಡನೆ
ಕೃಷ್ಣರಾಜಪೇಟೆ: ಕಾವೇರಿ ಹೋರಾಟ ಬೆಂಬಲಿಸಲು ಗುರುವಾರ ಮಂಡ್ಯಕ್ಕೆ ಆಗಮಿಸಿದ್ದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಅಡ್ಡಿಪಡಿಸಿದ ಘಟನೆಯನ್ನು ಶಾಸಕ ಕೆ.ಬಿ.ಚಂದ್ರಶೇಖರ್ ತೀವ್ರವಾಗಿ ಖಂಡಿಸಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದುಳಿದ ವರ್ಗಗಳ ನೇತಾರರಾದ ಸಿದ್ದರಾಮಯ್ಯ ಸಾರ್ವಜನಿಕ ಸಮಸ್ಯೆಗಳಿಗೆ ಸ್ಪಂದಿಸುತ್ತಾರೆ. ನಾಲ್ಕು ಜಿಲ್ಲೆಯ ಶಾಸಕರು ಸೇರಿದಂತೆ ವಿವಿಧ ಜನಪ್ರತಿನಿಧಿಗಳೊಂದಿಗೆ ಮಂಡ್ಯಕ್ಕೆ ಬಂದಿದ್ದರು. ಕೆಲವು ಕಿಡಿಗೇಡಿಗಳು ಅವರಿಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿದರು.

ರೈತ ಸಂಘದಿಂದ ಪ್ರತಿಭನೆ
ಭಾರತೀನಗರ: ತಮಿಳುನಾಡಿಗೆ ಕಾವೇರಿ ನದಿ ನೀರು ಬಿಟ್ಟಿರುವುದನ್ನು ಖಂಡಿಸಿ ರೈತ ಸಂಘದ ಮುಖಂಡರು, ಕಾರ್ಯಕರ್ತರು ಇಲ್ಲಿನ ರಾಜ್ಯ/ಕೇಂದ್ರ ಸರ್ಕಾರದ ಕಚೇರಿಗಳನ್ನು ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. ನಾಡ ಕಚೇರಿ, ರಾಷ್ಟ್ರೀಕೃತ ಬ್ಯಾಂಕ್, ಅಂಚೆ ಕಚೇರಿ ಸೇರಿದಂತೆ ಹಲವು ಕಚೇರಿಗಳನ್ನು ಶುಕ್ರವಾರ ಬಂದ್ ಮಾಡಿಸಿದರು. ರೈತ ಮುಖಂಡರಾದ ಶಂಕರೇಗೌಡ, ರಾಮಲಿಂಗೇಗೌಡ, ಸಿದ್ದೇಗೌಡ, ರವಿಕುಮಾರ್, ಮಹೇಂದ್ರ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.

ಕ್ಯಾತಘಟ್ಟ ಗ್ರಾಮಸ್ಥರು, ನೀರಾವರಿ ಇಲಾಖೆ ಕಚೇರಿ ಮುಂಭಾಗ ಧರಣಿ ನಡೆಸಿದರು. ಗಿರೀಶ್, ಕ್ಯಾತಘಟ್ಟ ರವಿಕುಮಾರ್, ಮರಿಸ್ವಾಮಿ, ತಿಮ್ಮರಾಜು ಇದ್ದರು. ಭಾರತೀನಗರ-ಮಳವಳ್ಳಿ ಮಾರ್ಗದ ಬಿದರಹೊಸಹಳ್ಳಿಯ 9ನೇ ಮೈಲಿಗಲ್ಲು ಬಳಿ ಕರವೇ ಮತ್ತು ಗ್ರಾಮಸ್ಥರು ರಸ್ತೆತಡೆ ನಡೆಸಿದರು. ಬಿ.ಎಸ್.ಬೋರೇಗೌಡ, ಪುಟ್ಟರಾಜು, ಹನುಮಂತು, ಬೋರೇಗೌಡ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT