ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವೇರಿದ ಹೋರಾಟ: ಪಾತಾಳಕ್ಕೆ ಕುಸಿದ ಪ್ರವಾಸೋದ್ಯಮ

Last Updated 6 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಕೃಷ್ಣರಾಜ ಸಾಗರ ಮತ್ತು ಕಬಿನಿ ಜಲಾಶಯಗಳಿಂದ ಬಿಟ್ಟ ನೀರು ತಮಿಳುನಾಡಿಗೆ ಹರಿದು ಹೋಗುತ್ತಿದೆ. ಇದರಲ್ಲಿ ಬರೀ ನೀರು ಮಾತ್ರ ಹರಿದು ಹೋಗುತ್ತಿಲ್ಲ. ಜೊತೆಗೆ ಕಾವೇರಿ ಕೊಳ್ಳದ ಆದಾಯ ಕೂಡ ಹರಿದು ಹೋಗುತ್ತಿದೆ. ಕಾವೇರಿ ಕೊಳ್ಳದಲ್ಲಿ ಬೆಳೆದು ನಿಂತಿರುವ ಬೆಳೆಗಳಿಗೇ ಈಗ ಶೇ 60 ರಷ್ಟು ನೀರಿನ ಕೊರತೆ ಇದೆ. ಇದರಿಂದ ಬೆಳೆ ನಷ್ಟವಾಗುವುದು ಒಂದೆಡೆಯಾದರೆ ಪ್ರವಾಸೋದ್ಯಮವನ್ನೇ ನಂಬಿಕೊಂಡಿದ್ದ ಜನರಿಗೂ ಕೊಡಲಿ ಪೆಟ್ಟು ಬಿದ್ದಿದೆ. ಮೈಸೂರು, ಮಂಡ್ಯ, ಚಾಮರಾಜನಗರ ಮತ್ತು ಕೊಡಗು ಜಿಲ್ಲೆಗಳು ಪ್ರವಾಸೋದ್ಯಮಕ್ಕೆ ಹೆಸರುವಾಸಿ. ಪ್ರತಿ ವರ್ಷ ಅಕ್ಟೋಬರ್‌ನಿಂದ ಪ್ರವಾಸೋದ್ಯಮದ ಸೀಸನ್ ಶುರುವಾಗುತ್ತದೆ. ಆದರೆ ಈ ಬಾರಿ ಕಾವೇರಿ ಸಮಸ್ಯೆ ಪ್ರವಾಸೋದ್ಯಮಕ್ಕೆ ಭಾರೀ ಹಿನ್ನಡೆಯನ್ನು ಉಂಟು ಮಾಡಿದೆ.

ಮೈಸೂರಿನ ಪ್ರಮುಖ ಪ್ರವಾಸಿ ತಾಣಗಳಾದ ಅರಮನೆ, ಮೃಗಾಲಯ, ಚಾಮುಂಡಿಬೆಟ್ಟಕ್ಕೆ ಬರುವವರ ಸಂಖ್ಯೆ ಗಣನೀಯವಾಗಿ ಕುಸಿದಿದೆ. ದೇಶದಲ್ಲಿಯೇ ಅತ್ಯಂತ ಹೆಚ್ಚು ಮಂದಿ ಪ್ರವಾಸಿಗರು ಭೇಟಿ ನೀಡುವ ಸ್ಥಳಗಳಲ್ಲಿ ಮೈಸೂರು ಅರಮನೆ ಕೂಡ ಒಂದು. ಸಾಮಾನ್ಯವಾಗಿ ಪ್ರತಿ ದಿನ ಸರಾಸರಿ 15ರಿಂದ 20 ಸಾವಿರ ಮಂದಿ ಮೈಸೂರು ಅರಮನೆಗೆ ಭೇಟಿ ನೀಡುತ್ತಾರೆ. ಆದರೆ ಕಳೆದ 2 ವಾರದಿಂದ ಇಲ್ಲಿಗೆ ಭೇಟಿ ನೀಡುವವರ ಸಂಖ್ಯೆ ಕಡಿಮೆಯಾಗಿದೆ. 15 ದಿನಗಳ ಹಿಂದಿನ ಭಾನುವಾರ 11,097 ಮಂದಿ ಭೇಟಿ ನೀಡಿದ್ದರೆ, ಕಳೆದ ಭಾನುವಾರ ಭೇಟಿ ನೀಡಿದವರ ಸಂಖ್ಯೆ 3 ಸಾವಿರವನ್ನೂ ದಾಟಿಲ್ಲ. ಇದೇ ಸ್ಥಿತಿ ಮೃಗಾಲಯ, ಚಾಮುಂಡಿಬೆಟ್ಟ, ಜಗನ್ಮೋಹನ ಅರಮನೆ ಮುಂತಾದ ಪ್ರವಾಸಿ ಸ್ಥಳಗಳಲ್ಲಿಯೂ ಇದೆ.

ದಸರಾ ಬಂತೆಂದರೆ ಮೈಸೂರು ಪ್ರವಾಸಿಗರಿಂದ ಗಿಜಿಗುಡುತ್ತಿತ್ತು. ವಾಹನಗಳ ಜಾತ್ರೆಯೇ ನೆರೆಯುತ್ತಿತ್ತು. ಪ್ರವಾಸಿ ತಾಣಗಳಲ್ಲಿ ಕಾಲಿಡಲೂ ಜಾಗ ಸಿಗುತ್ತಿರಲಿಲ್ಲ. ಆದರೆ ಈ ಬಾರಿ ದಸರಾ ಹಬ್ಬಕ್ಕೆ ಜನರು ಬರುವುದೇ ಅನುಮಾನವಾಗಿದೆ.

ಅ.16ರಿಂದ ದಸರಾ ಉತ್ಸವ ಆರಂಭವಾಗುತ್ತದೆ. ದಸರಾ ಉತ್ಸವಕ್ಕೆ ಒಂದು ತಿಂಗಳು ಇರುವಾಗಲೇ ದೇಶ ವಿದೇಶಗಳ ಪ್ರವಾಸಿಗರು ಮೈಸೂರಿನಲ್ಲಿ ರೂಂ ಬುಕ್ ಮಾಡುತ್ತಿದ್ದರು. ಈ ಬಾರಿ ಕೂಡ ಹಲವರು ರೂಂ ಬುಕ್ ಮಾಡಿದ್ದರು. ಆದರೆ ಕಾವೇರಿ ಹೋರಾಟ ಆರಂಭವಾದ ನಂತರ ಬಹುತೇಕ ಎಲ್ಲ ಬುಕಿಂಗ್ ರದ್ದಾಗಿದೆ ಎನ್ನುತ್ತಾರೆ ಮೈಸೂರು ಹೊಟೇಲ್ ಮಾಲಿಕರ ಸಂಘದ ಅಧ್ಯಕ್ಷ ಎಂ.ರಾಜೇಂದ್ರ.

ಪ್ರತಿ ವರ್ಷ ಮೈಸೂರಿನ ಪ್ರವಾಸೋದ್ಯಮ ಕ್ಷೇತ್ರದಿಂದಲೇ ಸರ್ಕಾರಕ್ಕೆ ಸುಮಾರು 180ರಿಂದ 200 ಕೋಟಿ ರೂಪಾಯಿ ಆದಾಯ ಬರುತ್ತದೆ. ಮೈಸೂರಿನಲ್ಲಿಯೇ 400 ಹೋಟೆಲ್‌ಗಳಿವೆ. ಇವುಗಳಲ್ಲಿ ಸುಮಾರು 5 ಸಾವಿರ ರೂಂಗಳಿವೆ. ದಿನಕ್ಕೆ 50 ಸಾವಿರದಿಂದ ಒಂದು ಲಕ್ಷ ರೂಪಾಯಿವರೆಗೆ ವ್ಯಾಪಾರ ಮಾಡುವ ನೂರಾರು ಹೋಟೆಲ್‌ಗಳಿವೆ. ಇವೆಲ್ಲದಕ್ಕೂ ಈಗ ತೊಂದರೆಯಾಗಿದೆ. ಕಳೆದ 15 ದಿನಗಳಿಂದ ಮೈಸೂರು-ಬೆಂಗಳೂರು ಹೆದ್ದಾರಿ ಬಹುತೇಕ ಬಂದ್ ಆಗಿರುವುದರಿಂದ ಮೈಸೂರು ಹೊಟೇಲ್‌ಗಳಲ್ಲಿ ಉಳಿದುಕೊಳ್ಳುವವರ ಸಂಖ್ಯೆ ಶೇ 5ಕ್ಕೆ ಇಳಿದಿದೆ. ಶನಿವಾರ ಕರ್ನಾಟಕ ಬಂದ್ ದಿನವಂತೂ ಬಹುತೇಕ ವಸತಿ ಗೃಹಗಳ ಕೋಣೆಗಳು ಸಂಪೂರ್ಣ ಖಾಲಿ. ಮುಂದಿನ ವಾರಕ್ಕೆ ಬುಕ್ ಆಗಿದ್ದ ರೂಂಗಳೂ ರದ್ದಾಗಿವೆ. ಕಾವೇರಿ ಹೋರಾಟ ಆರಂಭವಾದಾಗಿನಿಂದ ಈವರೆಗೆ ಸುಮಾರು 200 ಕೋಟಿ ರೂಪಾಯಿ ನಷ್ಟವಾಗಿದೆ ಎನ್ನುತ್ತಾರೆ ರಾಜೇಂದ್ರ.

2004ರಲ್ಲಿ ಕೂಡ ಹೀಗೆಯೇ ಆಗಿತ್ತು. ಆಗಲೂ ಪ್ರವಾಸೋದ್ಯಮ ಸಂಪೂರ್ಣ ಹದಗೆಟ್ಟಿತ್ತು. ಪರಿಸ್ಥಿತಿ ಸುಧಾರಿಸಲು ಮತ್ತೆ ನಾಲ್ಕು ವರ್ಷಗಳು ಬೇಕಾದವು. ಈಗಲೂ ಹಾಗೆಯೇ ಆಗಿದೆ. ಈ ಪರಿಸ್ಥಿತಿ ಸುಧಾರಿಸಲು ಇನ್ನೆಷ್ಟು ದಿನ ಬೇಕೋ ಎಂದು ಅವರು ಆತಂಕ ವ್ಯಕ್ತಪಡಿಸುತ್ತಾರೆ.

ಮೈಸೂರು-ಬೆಂಗಳೂರು ಹೆದ್ದಾರಿ ಬಂದ್ ಆಗಿದ್ದರಿಂದ ಕೇವಲ ಹೊಟೇಲ್ ಮಾಲೀಕರಿಗೆ ಮಾತ್ರ ಹೊಡೆತ ಬಿದ್ದಿಲ್ಲ. ಟ್ರಾವೆಲ್ ಏಜನ್ಸಿಯವರಿಗೆ, ಪ್ರವಾಸಿ ಗೈಡ್‌ಗಳಿಗೆ, ಸಣ್ಣ ಸಣ್ಣ ವ್ಯಾಪಾರಿಗಳಿಗೆ, ಕುದುರೆ ಟಾಂಗಾ, ಆಟೊ, ಕರಕುಶಲ ವಸ್ತು ಮಾರಾಟಗಾರರು, ಕಳ್ಳೇಕಾಯಿ, ಸೌತೆಕಾಯಿ ಮಾರಾಟಗಾರರಿಗೂ ತೊಂದರೆ ಉಂಟಾಗಿದೆ.

ಪ್ರವಾಸಿ ತಾಣಗಳ ಸುತ್ತಲೂ ವ್ಯಾಪಾರಿಗಳು ತಮ್ಮ ಬದುಕು ಕಂಡುಕೊಂಡಿದ್ದಾರೆ. ಕನ್ನಡಕ, ನವಿಲುಗರಿ, ರಸ್ತೆಬದಿ ವ್ಯಾಪಾರಿಗಳು, ಎಳೆನೀರು, ಹಣ್ಣು, ಹೂವು ಮಾರಿಕೊಂಡು ಜೀವನ ನಡೆಸುವ ಸಾವಿರಾರು ಮಂದಿ ಇದ್ದಾರೆ. ಅವರ ಬದುಕೂ ಈಗ ಬೀದಿಗೆ ಬಿದ್ದಿದೆ. ಪ್ರವಾಸಿಗರೂ ಹೆಚ್ಚಾಗಿ ಬರುತ್ತಿದ್ದಾಗ ದಿನಕ್ಕೆ 300ರಿಂದ 400 ರೂಪಾಯಿ ವ್ಯಾಪಾರ ಮಾಡುತ್ತಿದ್ದೆ. ಆದರೆ ಈಗ 50 ರೂಪಾಯಿ ವ್ಯಾಪಾರವಾಗುವುದೂ ಕಷ್ಟವಾಗಿದೆ ಎಂದು ಮೈಸೂರು ಅರಮನೆ ಬಳಿ ಕನ್ನಡಕ ವ್ಯಾಪಾರ ಮಾಡುವ ಅಸ್ಲಂ ದುಃಖ ಪಡುತ್ತಾನೆ.

ಅರಮನೆ, ಮೃಗಾಲಯ, ಚಾಮುಂಡಿ ಬೆಟ್ಟಕ್ಕೆ ಬರುವ ಪ್ರವಾಸಿಗರ ಫೋಟೊ ತೆಗೆದು ಜೀವನ ಸಾಗಿಸುವವರಿದ್ದಾರೆ. ಬೆಂಗಳೂರಿನಿಂದ ಮೈಸೂರಿಗೆ ಯಾವುದೇ ಬಸ್, ಕಾರು ಬರುತ್ತಿಲ್ಲ. ರೈಲುಗಳ ಓಡಾಟಕ್ಕೂ ತೊಂದರೆಯಾಗಿದೆ. ಹೀಗಿರುವಾಗ ಇಲ್ಲಿಗೆ ಬಂದು ಫೋಟೊ ತೆಗೆಸಿಕೊಳ್ಳುವವರು ಯಾರು ಎಂದು ಪ್ರಶ್ನಿಸುತ್ತಾನೆ ಶ್ರೀನಿವಾಸ್.

ಇಲ್ಲಿಗೆ ಬರುವ ಪ್ರವಾಸಿಗರೇ ನಮ್ಮ ದೇವರು. ಅವರು ಕಳ್ಳೇಕಾಯಿ ಖರೀದಿ ಮಾಡಿದರೆ ಮಾತ್ರ ನಮ್ಮ ಮನೆಯಲ್ಲಿ ಒಲೆ ಉರಿಯುತ್ತದೆ. ಇಲ್ಲವಾದರೆ ಇಲ್ಲ. ಮಧ್ಯಾಹ್ನದ ವೇಳೆಗೇ ನನ್ನ ವ್ಯಾಪಾರ ಮುಗಿಸಿ ಮನೆಗೆ ಹೋಗಿ ಅಡುಗೆ ತಯಾರು ಮಾಡಬೇಕಿತ್ತು. ಈಗ ಸಂಜೆಯಾದರೂ ಒಂದು ಬುಟ್ಟಿ ಕಳ್ಳೇಕಾಯಿ ಮಾರಾಟವಾಗಲ್ಲ ಎನ್ನುತ್ತಾಳೆ ನಿಂಗಮ್ಮ.

ಟಾಂಗಾ, ಟ್ಯಾಕ್ಸಿ, ಆಟೊ ಚಾಲಕರ ಗೋಳೂ ಇದೇ ಆಗಿದೆ. ಪ್ರವಾಸಿಗರು ಬಂದರೆ ಮಾತ್ರ ನಮ್ಮ ಮನೆಯಲ್ಲಿ ದೀಪ ಬೆಳಗುತ್ತದೆ. ಇಲ್ಲವಾದರೆ ಕತ್ತಲೆಯೇ ಗತಿ ಎಂದು ಅವರು ಗೋಳಿಡುತ್ತಾರೆ. ಮೈಸೂರಿನ ಸುತ್ತ ಸಾಕಷ್ಟು ಪ್ರವಾಸಿ ತಾಣಗಳಿವೆ. ಕೃಷ್ಣರಾಜಸಾಗರ, ತಲಕಾಡು, ಸೋಮನಾಥಪುರ, ನಾಗರಹೊಳೆ, ಬಂಡೀಪುರ, ಶ್ರೀರಂಗಪಟ್ಟಣ, ಹಿಮವದ್ ಗೋಪಾಲಸ್ವಾಮಿ ಬೆಟ್ಟ, ಬಿಳಿಗಿರಿ ರಂಗನಬೆಟ್ಟ, ಮಲೆ ಮಹದೇಶ್ವರ ಬೆಟ್ಟ, ಕುಶಾಲನಗರ, ಮಡಿಕೇರಿ, ಊಟಿ ಹೀಗೆ ಸಾಕಷ್ಟು ಪ್ರವಾಸಿ ಸ್ಥಳಗಳಿಗೆ ಇಲ್ಲಿಂದಲೇ ಪ್ರವಾಸಿಗರು ಹೋಗುತ್ತಾರೆ. ಇವರಿಗೆ ಪ್ರಯಾಣ ಸೌಲಭ್ಯ ಒದಗಿಸುವ ಟ್ರಾವೆಲ್ ಏಜೆನ್ಸಿಗಳು ಈಗ ಕೆಲಸವಿಲ್ಲದೆ ಕೈಕಟ್ಟಿ ಕುಳಿತುಕೊಂಡಿವೆ.

ಇಂತಹ ಗೋಳಿನ ಕತೆ ಕೇವಲ ಇವರದ್ದು ಮಾತ್ರ ಅಲ್ಲ. ರೈತರ ಗೋಳೂ ಬೇಕಾದಷ್ಟಿದೆ. ಮೈಸೂರು, ಶ್ರೀರಂಗಪಟ್ಟಣ, ಪಾಂಡವಪುರ ಮುಂತಾದ ಕಡೆ ತರಕಾರಿಗಳನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ಈ ತರಕಾರಿಗಳು ಮೈಸೂರು, ಬೆಂಗಳೂರು, ಕೊಯಮತ್ತೂರು ಮುಂತಾದ ಪ್ರದೇಶಗಳಿಗೆ ಹೋಗುತ್ತವೆ. ಆದರೆ ಈಗ ಮೈಸೂರು ಬೆಂಗಳೂರು ಹೆದ್ದಾರಿ ಬಂದ್ ಆಗಿರುವುದರಿಂದ ಎಪಿಎಂಸಿ ಮಾರುಕಟ್ಟೆಯಲ್ಲಿ ಬಂದು ಬೀಳುತ್ತಿರುವ ತರಕಾರಿಗಳನ್ನು ಕೇಳುವವರೇ ಇಲ್ಲದಂತಾಗಿದೆ. ಚಾಮರಾಜನಗರದಲ್ಲಿಯೂ ಪ್ರತಿಭಟನೆ ಜೋರಾಗಿದೆ. ಕಳೆದ ಒಂದು ವಾರದಿಂದ ಅಂತರರಾಜ್ಯ ಸಂಚಾರ ಕೂಡ ಬಂದ್ ಆಗಿದೆ. ಇದರಿಂದ ಕೊಯಮತ್ತೂರಿಗೆ ತರಕಾರಿ ಮತ್ತು ಇತರ ಕೃಷಿ ಉತ್ಪನ್ನಗಳು ಹೋಗುತ್ತಿಲ್ಲ.

ಹೆದ್ದಾರಿ ಬಂದ್ ಎನ್ನುವುದು ಮೈಸೂರಿನ ಕೈಗಾರಿಕೋದ್ಯಮದ ಮೇಲೂ ಪರಿಣಾಮ ಬೀರಿದೆ. ಮೈಸೂರಿನಲ್ಲಿ ಇರುವುದು ಬಹುತೇಕ ಬಿಡಿ ಭಾಗಗಳನ್ನು ತಯಾರು ಮಾಡುವ ಕೈಗಾರಿಕೆಗಳು. ಈ ಕೈಗಾರಿಕೆಗಳಿಗೆ ಕಚ್ಚಾ ವಸ್ತುಗಳು ಬೆಂಗಳೂರಿನ ಪೀಣ್ಯ ಮತ್ತು ತಮಿಳುನಾಡಿನ ಹೊಸೂರಿನಿಂದ ಬರಬೇಕು. ಆದರೆ ಈಗ ಅಲ್ಲಿಂದ ಇಲ್ಲಿಗೆ ಕಚ್ಚಾ ಮಾಲು ಬರುವುದಾಗಲೀ ಅಥವಾ ಇಲ್ಲಿಂದ ಸಿದ್ಧ ವಸ್ತುಗಳು ಅಲ್ಲಿಗೆ ಹೋಗುವುದಾಗಲೀ ಕಷ್ಟವಾಗಿದೆ. ಲಾರಿಗಳು ಸುಗಮವಾಗಿ ಸಾಗಲು ತೊಂದರೆಯಾಗುತ್ತಿರುವುದರಿಂದ ಕೈಗಾರಿಕಾ ಉತ್ಪಾದನೆಯ ಮೇಲೂ ಪರಿಣಾಮ ಬೀರಿದಂತಾಗಿದೆ.

ಇದರ ಜೊತೆಗೆ ಇತ್ತೀಚೆಗೆ ಮೈಸೂರಿನಲ್ಲಿ ನಡೆದ ವಲಯ ಬಂಡವಾಳ ಹೂಡಿಕೆದಾರರ ಸಮ್ಮೇಳನದಲ್ಲಿ ಭರವಸೆ ನೀಡಿದ್ದ ಬಂಡವಾಳ ಹೂಡಿಕೆದಾರರೂ ಈಗ ಬಂಡವಾಳ ಹೂಡಲು ಹಿಂದೇಟು ಹಾಕುತ್ತಿದ್ದಾರೆ ಎಂಬ ಆತಂಕವನ್ನು ಕೈಗಾರಿಕಾ ವಲಯದವರು ವ್ಯಕ್ತಪಡಿಸುತ್ತಿದ್ದಾರೆ.

ಬೆಂಗಳೂರು ಮೈಸೂರು ಹೆದ್ದಾರಿ ಬಂದ್ ಆಗಿರುವುದರಿಂದ ಮದ್ದೂರಿನಿಂದ ಮೈಸೂರಿನವರೆಗೆ ಇರುವ ಬಹುತೇಕ ಹೋಟೆಲ್‌ಗಳು, ದಾರಿ ಬದಿಯ ಅಂಗಡಿಗಳೂ ಕೂಡ ನಷ್ಟ ಅನುಭವಿಸುತ್ತಿವೆ. ಜೊತೆಗೆ ಈ ಮಾರ್ಗದಲ್ಲಿ ಬಸ್ ಸಂಚಾರ ಸ್ಥಗಿತವಾಗಿದ್ದರಿಂದ ಸಾಮಾನ್ಯ ಜನರೂ ಕೂಡ ಸಂಕಷ್ಟಕ್ಕೆ ಈಡಾಗಿದ್ದಾರೆ. ಸಾಮಾನ್ಯ ಬಸ್‌ನಲ್ಲಿ ಬೆಂಗಳೂರು ಮೈಸೂರು ಪ್ರಯಾಣ ದರ 110 ರೂಪಾಯಿ ಇತ್ತು. ಈಗ ಬದಲಿ ಮಾರ್ಗವಾಗಿ ಬನ್ನೂರು, ಮಳವಳ್ಳಿ, ಕನಕಪುರದಲ್ಲಿ ಸಾಗಬೇಕಾಗಿರುವುದರಿಂದ ಬಸ್ ಪ್ರಯಾಣ ದರ 135 ರೂಪಾಯಿ ಆಗಿದೆ. ಒಂದು ವಾರದಿಂದ ಈ ಮಾರ್ಗದಲ್ಲಿಯೂ ಬಸ್ ಸಂಚಾರ ಸುಗಮವಾಗಿಲ್ಲ. ಈಗ ಮೈಸೂರಿನಿಂದ ಸುಗಮವಾಗಿ ಬೆಂಗಳೂರಿಗೆ ತಲುಪಬೇಕಾದವರು ಮೈಸೂರಿನಿಂದ ಕೆ.ಆರ್.ನಗರ ಮಾರ್ಗವಾಗಿ ಹೊಳೆನರಸೀಪುರ, ಚನ್ನರಾಯಪಟ್ಟಣಕ್ಕೆ ಹೋಗಿ ಅಲ್ಲಿಂದ ಬೆಂಗಳೂರಿಗೆ ಹೋಗಬೇಕಾಗಿದೆ. ಇದು ಜನಸಾಮಾನ್ಯರಿಗೆ ಇನ್ನಷ್ಟು ನಷ್ಟ ಉಂಟು ಮಾಡುತ್ತಿದೆ. ಬೆಂಗಳೂರು- ಮೈಸೂರು ಹೆದ್ದಾರಿ ಬಂದ್‌ನಿಂದ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ದಿನವೊಂದಕ್ಕೆ ಕನಿಷ್ಠ 15 ಲಕ್ಷ ರೂಪಾಯಿ ನಷ್ಟವಾಗುತ್ತಿದೆ.

ಕಾವೇರಿ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದೆ. ಬರಗಾಲದಲ್ಲಿ ಬಳಲುತ್ತಿರುವ ಕರ್ನಾಟಕದಿಂದ ತಮಿಳುನಾಡಿಗೆ ಕಾವೇರಿ ನೀರು ಬಿಡಬೇಕು ಎನ್ನುವುದು ಯಾರಿಗೂ ಸಂತೋಷ ತರುವ ವಿಷಯ ಅಲ್ಲ. ರೈತರು ಸಂಕಷ್ಟದಲ್ಲಿದ್ದಾರೆ. ಅವರ ಕಷ್ಟದಲ್ಲಿ ನಾವು ಭಾಗಿಯಾಗುವುದು ಹಾಗೂ ಅವರು ಹೋರಾಟ ಆರಂಭಿಸಿದಾಗ ಅವರೊಂದಿಗೆ ಕೈಜೋಡಿಸುವುದು ಎಲ್ಲರ ಕರ್ತವ್ಯ. ಆದರೆ ನಿರಂತರ ಹೋರಾಟದಿಂದ ಇತರ ಜನರ ಮೇಲೆ ಆಗುವ ಪರಿಣಾಮವನ್ನೂ ನಾವು ಆಲೋಚಿಸಬೇಕು. ಬಡ ಜನರಿಗೆ ತೊಂದರೆಯಾಗುವುದರ ಬಗ್ಗೆ ಚಿಂತಿಸಬೇಕು. ನಮ್ಮ ರಾಜಕಾರಣಿಗಳು ಹಾಗೂ ಅಧಿಕಾರಿಗಳು ಪ್ರಧಾನಿ ಅವರನ್ನು ಭೇಟಿ ಮಾಡಿ ರಾಜ್ಯದ ಪರಿಸ್ಥಿತಿಯ ಬಗ್ಗೆ ಸೂಕ್ತ ಮಾಹಿತಿ ನೀಡಬೇಕು. ಆ ಮೂಲಕ ಕಾವೇರಿ ವಿಷಯದಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು ಎನ್ನುವುದು ಇಲ್ಲಿನ ಸಾಮಾನ್ಯ ಜನರ ಭಾವನೆಯಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT