ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವ್ಯ ಕಾರಣ

Last Updated 1 ಡಿಸೆಂಬರ್ 2012, 20:44 IST
ಅಕ್ಷರ ಗಾತ್ರ

ರಸಕರ್ತನ ತಳಮಳ
ಅರವತ್ತೊಂಬತ್ತಕ್ಕೆ ಪ್ರವೇಶ ಈವತ್ತು. ಕಳೆದ ಸುದೀರ್ಘ ಕಾಲ
ಉಪ್ಪು ಹುಳಿ ಸೀ ಖಾರಗಳಿಂದ ಹದಗೊಳಿಸಿದ್ದೇನನ್ನು ಬದುಕಲ್ಲಿ?
ನಿತ್ಯಯತ್ನಕ್ಕಿಂದೂ ಒದಗಿದಂತಿಲ್ಲ ಯಶಸ್ಸು. ಸಮರಸ ರುಚಿ
ಒದಗಲಿಲ್ಲ ಪಾಕಕ್ಕೆ. ಒಂದು ದಿನ ಹುಳಿ, ಮತ್ತೊಂದು ದಿನ ಉಪ್ಪುಪ್ಪು.
ನೆತ್ತಿಗೇರುವಾಂಧ್ರದ ಖಾರ ಮಗದೊಂದು ದಿನ.

ಪ್ರತಿನಿತ್ಯವೂಪಾಕವನ್ನ ಹದಗೊಳಿಸುವ ಯತ್ನ ನಡೆಯುತ್ತಲೇ ಉಂಟು. ಈ
ಅರಿವು ಹಿಂಡುವುದು ಮನವನ್ನು. ವರ್ಷಗಳ ಹಿಂದೆ ಒಲೆಯ ಮೇಲಿಟ್ಟ
ಕೊಳಗವನ್ನಿಳಿಸೇ ಇಲ್ಲ ಕೆಳಕ್ಕೆ. ಮತ್ತೆ ಮತ್ತೆ ಕುದಿಸಿ ಕುದಿಸಿ
ಹದಗೊಳಿಸುವ ಹುನ್ನಾರ ನಡೆದೇ ಇದೆ.

ನನ್ನ ತಳಮಳ ರಸಕ್ಕೆ ಹೀಗೆ ನಿತ್ಯ ನಿತ್ಯ ಹೊಸ ಬೆಲ್ಲ ಉಪ್ಪು ಹುಳಿ ಖಾರಗಳ ಹಾಕುವ
ಕೈ ನನ್ನದು ತಾನೆ? ನಾನೇನೋ ಪಂಕ್ತಿ ಎಲೆ ಹಾಕಿ ಬಡಿಸುತ್ತಲೇ
ಇದ್ದೇನೆ ದಿನ ನಿತ್ಯ. ಯಾರೋ ಉಣ್ಣುತ್ತಾರೆ.

ಯಾರೋ ಉಂಡೆಲೆ ಎತ್ತೆಸೆಯುತ್ತಾರೆ. ಮತ್ತೆ ನಡೆಯುತ್ತದೆ ಗೋಮಯ. ಮತ್ತೆ ಮತ್ತೆ
ಸಾಲೆಲೆ ಪದಾರ್ಥಕ್ಕೆ ಮೇಲೋಗರವ ಬಡಿಸಿ ಕಾಯುವ ನಿರೀಕ್ಷೆ.
  - ಎಚ್.ಎಸ್. ವೆಂಕಟೇಶ ಮೂರ್ತಿ


`ರಸಕರ್ತನ ತಳಮಳ' - ಒಂದು ಸುನೀತ, ಲಯಬದ್ಧ ಕವಿತೆ. ಈ ಕವಿತೆ ಡಾ. ಎಚ್.ಎಸ್. ವೆಂಕಟೇಶಮೂರ್ತಿ ಅವರ `ವೈದೇಹಿ ಮತ್ತು ಇತರ ಕವನಗಳು' ಸಂಕಲನದಲ್ಲಿದೆ. ಇದು ಅವರ `ಉತ್ತರಾಯಣ ಮತ್ತು ಇತರೆ ಕವಿತೆಗಳು' ಮತ್ತು `ಕನ್ನಡಿಯಲ್ಲಿ ಸೂರ್ಯ' ಸಂಕಲನಗಳ ನಂತರ ಬಂದ ಮಹತ್ವದ ಸಂಕಲನ. ಈ ಕವಿತೆ, ಕವಿತೆ ಕುರಿತಾದ ಕವಿತೆ.

ಕವಿಯ  ತಳಮಳ, ಕಾತರ ಇನ್ನಿಲ್ಲವಾಗಿ, ಶಬರಿಯ ಕಾಯುವಿಕೆ ಪ್ರಾಪ್ತಿಯಾಗಿದೆ. ಬಂದೇ ಬರುತ್ತಾನೆ ಅವನು ಎನ್ನುವ ತುಡಿತ ಮಾತ್ರ ಎದೆಯಲ್ಲಿ ಸ್ಥಾಯಿಯಾಗಿ ನಿಂತಿದೆ.

ಅವನನ್ನು ಹುಡುಕಿ ನಾನು ಹೋಗುವುದಲ್ಲ, ನನ್ನಲ್ಲಿಗೇ ಬರುತ್ತಾನೆ ಅವನು ಎನ್ನುವ ನಿಲುವಿಗೆ ತಲುಪಿದ್ದಾಗಿದೆ. ಇದೇ ಪ್ರಭೇದಕ್ಕೆ ಸೇರಿದ `ಹಕ್ಕಿ ಮತ್ತು ನಳ' ಕವಿತೆ `ಕನ್ನಡಿಯ ಸೂರ್ಯ'  ಸಂಕಲನದಲ್ಲಿದೆ. ಹಕ್ಕಿ ಹಿಡಿಯುವ ಕಾಯಕ ಈಗಲೂ ಮುಂದುವರಿದಿದೆ.

ಆದರೆ, ಅಲ್ಲಿ ಕವಿತೆಯನ್ನು ಒಲಿಸಿಕೊಳ್ಳುವ ಪ್ರಯತ್ನವಿದೆ. ಅದು ಉಟ್ಟಬಟ್ಟೆ ಬಿಚ್ಚಿ ನಿಂತಾದರೂ ಸರಿ, ಹಕ್ಕಿ ಹಿಡಿಯುವ ಅದಮ್ಯ ಮೋಹವಿದೆ. ಈ ಕಾವ್ಯ ಮೋಹವೇ ಒಂದು ರೀತಿಯ ಪ್ರೀತಿಯ ಹುಚ್ಚಿನ ಹಾಗೆ.

ರಸಕರ್ತನ ತಳಮಳದಲ್ಲಿ ಈ ಮೋಹ ಮಾಯವಾಗಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಒಂದು ಕರ್ಮವಾಗಿ ಮುಂದುವರಿದಿದೆ. ಪ್ರಯತ್ನ ಮಾತ್ರ ನನ್ನದು ಎನ್ನುವ ಹಂತಕ್ಕೆ ರಸಕರ್ತ ಬಂದು ತಲುಪಿದ್ದಾನೆ. ಹಕ್ಕಿ ಸಿಕ್ಕರೂ ಸಿಗಬಹುದು, ಒಂದಲ್ಲ ಒಂದು ದಿನ ಹದ ಸಿಕ್ಕು ಪಾಕಕ್ಕೆ, ರಸ ಸಮರಸವಾದೀತು ಎನ್ನುವ ಆಶಯವಿದೆ ಕವಿತೆಯಲ್ಲಿ. ಆದ್ದರಿಂದ ಕಾಯುವಿಕೆಗೆ ಒಂದು ಅರ್ಥವಿದೆ. ಒಳಗೆ ಸಾಮರಸ್ಯ ಮೂಡುತ್ತಿದ್ದ ಹಾಗೆ, ಜೀವನ ಸಮರಸವಾಗುತ್ತದೆ ಎನ್ನುವ ತಿಳಿವು ಮೂಡಿದೆ, ಆ ಘಳಿಗೆಗಾಗಿ ಎಣಿಕೆ ಪ್ರಾರಂಭವಾಗಿದೆ. ಹೃದಯದ ಕಣ್ಣಿಗೆ ಹೊಸ ದೃಷ್ಟಿ ಬಂದಿದೆ.

ರಸಕರ್ತನ ತಳಮಳ ಕವಿತೆಯಲ್ಲಿ  `ಉಪ್ಪು'  `ಹುಳಿ'  `ಸಿಹಿ  `ಖಾರ'  `ಪಾಕ'  `ಹದ'  `ರಸ'  ಇತ್ಯಾದಿ ಪದ ಪ್ರಯೋಗಗಳಿವೆ. ದಿನ ನಿತ್ಯ ನಡೆದಿದೆ ಕುದಿಸಿ ಕುದಿಸಿ ಹದಗೊಳಿಸುವ ಹುನ್ನಾರ, ಆದರೂ ಸಮರಸ ರುಚಿ ಒದಗಲಿಲ್ಲ ಪಾಕಕ್ಕೆ. ಭೋಜನ ಸವಿದು ಆಸ್ವಾದಿಸಿದ ಸಹೃದಯ ಸುಖದ ಅನುಭವ ಹಂಚಿಕೊಳ್ಳುವ ಮುನ್ನವೇ ರಸಕರ್ತನಿಗೆ ತಳಮಳ. ದಿನನಿತ್ಯದ ಬದುಕು ಪದ್ಯವಲ್ಲದ ಮಾತು.

ಅದು ಗದ್ಯ, ಕವಿತೆಯಲ್ಲ. ಅಡುಗೆ ಮಾಡಿ ಬಡಿಸುವುದು ದಿನ ನಿತ್ಯದ ಕರ್ಮವಾದರೂ ಅದು ತನಗೆ ಬೇಕಾದವರಿಗೆ, ತನ್ನವರಿಗೆ ಮತ್ತು ತನಗಾಗಿ. ಆದ್ದರಿಂದ ಅಡುಗೆ ಮಾಡುವುದು ಇತರೆ ಕೆಲಸದಂತಲ್ಲ, ಅಲ್ಲಿ ಪ್ರೀತಿಯಿದೆ. ಕವಿತೆ ಪ್ರೀತಿಯ ಸತ್ವವೇ ಆಗಿದೆ. ಅದು ಒಳಗಿನದ್ದು, ಅಂತರಂಗಕ್ಕೆ ಸೇರಿದ್ದು. ಅದು ಒಳದನಿ, ಪಿಸುಮಾತು.

ರಸಕರ್ತನಿಗೆ ಯಾವಾಗಲೂ ತಳಮಳ, ತಾನು ಕುದಿಸಿದ್ದು ಸಮರಸದಿಂದ ಕೂಡಿರಬೇಕು, ಒಮ್ಮೆ ಆ ಹದ ದಕ್ಕಿದರೆ ಸಾಕು, ಈವರೆಗೂ ತಾನು ಪಟ್ಟ ಪಾಡು ಕೊನೆಯಾದೀತು, ಕಟ್ಟಕಡೆಯ ಆನಂದ ಸಿಕ್ಕೀತು, ತನಗೂ ಮತ್ತು ಉಂಡವರಿಗೂ. ರಸದ ಪರಿಕಲ್ಪನೆಯೇ ಹೀಗೆ. ಅದರ ಸ್ವಾದ  ಕೇವಲ ರಸಕರ್ತನಿಗಷ್ಟೇ ಅಲ್ಲ, ಉಂಡವರ ಅನುಭವಕ್ಕೂ ಬರಬೇಕು. ಅದಕ್ಕೇ ತಳಮಳ ಅವನಿಗೆ.

ಬುದ್ಧನಿಗಿಂತಲೂ ಶ್ರೇಷ್ಠನಾದ ಇನ್ನೊಬ್ಬ ಕವಿಯನ್ನು ಕಾಣುವುದು ಕಷ್ಟ. ಆದರೆ ಅವನೆಂದೂ ಒಂದೇ ಒಂದು ಕವಿತೆ ಬರೆಯಲು ಪ್ರಯತ್ನಿಸಿದವನಲ್ಲ. ಆದರೆ ಅವನು ನಿಜಕ್ಕೂ ಕವಿಯಾಗಿದ್ದ. ಆದರೆ ಕವಿತೆ ಬರೆಯುವ ಮಾತು ಒತ್ತಟ್ಟಿಗಿರಲಿ,  ಒಂದು ಹಾಯ್ಕ ಕೂಡ ಬರೆಯಲಿಲ್ಲ ಅವನು. ಮಾತನಾಡುತ್ತಲೇ ಹೋದ, ತನ್ನ ಜೀವಿತದ ಕೊನೆವರೆಗೂ, ರೂಪಕಗಳ ಮುಖಾಂತರ. ಅವನು ಹೊರಗಿನ ಮತ್ತು ಒಳಗಿನ ನಡುವಿನ ಅಂತರ ಇಲ್ಲವಾಗಿಸಿ, ಒಂದು ಸೇತುವೆಯಾದ. `ರಸಕರ್ತ'ನಿಗೆ ಅರವತ್ತೊಂಬತ್ತು. ಅವನೂ ಮಾತಾಡುತ್ತಿದ್ದಾನೆ ಕವಿತೆಗಳ ಮುಖಾಂತರ, ರೂಪಕಗಳ ಮುಖಾಂತರ. ಇಡಿಯಾದದ್ದನ್ನು  ಹೇಳಬೇಕು, ಮಾತನಾಡಬೇಕು, ಅದು ಸಾಧ್ಯವಾಗುವುದು ಹೇಗೆ? ಇದು ಅವನ ಪ್ರಶ್ನೆ.

  `ಈ ಜಗತ್ತು ಒಂದು ಭ್ರಮೆ, ಅದು ಅಸ್ತಿತ್ವದಲ್ಲಿ ಇಲ್ಲವೇ ಇಲ್ಲ, ಇರುವುದು ಪ್ರಜ್ಞೆ ಮಾತ್ರ' ಎಂದರು ಶಂಕರರು. ಮಾರ್ಕ್ಸ್ ಹೇಳುತ್ತಾನೆ,  `ಪ್ರಜ್ಞೆ ಅನ್ನುವುದು ಇಲ್ಲವೇ ಇಲ್ಲ, ಜಗತ್ತು ಮಾತ್ರ ಅಸ್ತಿತ್ವದಲ್ಲಿದೆ'. ಎರಡೂ ಸರಿ, ಎರಡೂ ತಪ್ಪು,  ಎರಡೂ ಸತ್ಯ. ಏಕೆಂದರೆ ಅವು ಹೇಳುತ್ತಿರುವುದು ಅರ್ಧ ಸತ್ಯವನ್ನು; ಎರಡೂ ತಪ್ಪು.

ಏಕೆಂದರೆ, ಅವು ಇನ್ನರ್ಧ ಸತ್ಯವನ್ನು ನಿರಾಕರಿಸುವುದರಿಂದ. ಕವಿತೆ ಮಾತ್ರ ಅದಕ್ಕಿರುವ ಒಂದು ದಾರಿ, ರೂಪಕ ಮಾತ್ರ ಅದಕ್ಕೆ ಪರಿಹಾರ. ಶೂನ್ಯತೆಯನ್ನು ವಿವರಿಸಲು ಮಾತುಗಳನ್ನು ಆಡಬಹುದು, ಶೂನ್ಯತೆಯನ್ನೇ ಶಬ್ದಗಳಲ್ಲಿ ಇಡಲಾಗುವುದಿಲ್ಲ. ನಿತ್ಯ ಹೊಸ ಬೆಲ್ಲ ಉಪ್ಪು ಹುಳಿ ಖಾರಗಳ ಹಾಕುವ ಕೈ ಅವನದ್ದೇ ಆದರೂ, ರೂಪಕಗಳಿಂದ ಮೋಸ ಹೋಗದಂತೆ ಕವಿ ಎಚ್ಚರವಹಿಸುತ್ತಿದ್ದಾನೆ. ಬೆಳಕನ್ನೂ ಕಲ್ಪಿಸಿಕೊಳ್ಳುವ ಸಾಧ್ಯತೆಗಳೇ ಹೆಚ್ಚಿರುವುದನ್ನು ಬಲ್ಲ ಅವನು, ಎಲ್ಲವನ್ನೂ ಕನಸು ಕಾಣುವ ಮನಸ್ಸಿಗಾಗಿ ಹೊಸತೊಂದು ಸಮರಸ ರುಚಿ ಅರಸುತ್ತಿದ್ದಾನೆ.

ಉಪ್ಪು ಹುಳಿ ಖಾರ ಸಿಹಿ ಎಲ್ಲವೂ ಸರಿ ಪ್ರಮಾಣದಲ್ಲಿ ಬೆರೆತು ರಸವಾಗಿ, ಕುದಿ ಬಂದು ಹದ ಸಿಕ್ಕಾಗಲೇ ಎಲ್ಲದೂ ಒಂದಾಗಿ ಕಾಣುವುದು. ಆಗ ಉಪ್ಪು ಹುಳಿಯಲ್ಲಿ, ಖಾರ ಸಿಹಿಯಲ್ಲಿ ಬೆರೆತು ಒಂದಾಗಿ ತಮ್ಮ ಮೂಲ ಗುಣ ಇಲ್ಲವಾಗಿ ಹೊಸತೊಂದು ಹುಟ್ಟುವುದು. ಅದು ಒಂದು ಮರ ಇನ್ನೊಂದರಲ್ಲಿ, ಭೂಮಿ ಮರಗಳಲ್ಲಿ, ಮರಗಳು ಆಗಸದಲ್ಲಿ, ಆಗಸ ಅನಂತದಲ್ಲಿ, ಸಹೃದಯ ರಸಕರ್ತನಲ್ಲಿ, ರಸಕರ್ತ ಸಹೃದಯನಲ್ಲಿ ಕರಗಿ ಕಲೆತು ಬೆರೆತು ಒಂದಾದಂತೆ, ರುಚಿ ಅರುಚಿಯಲ್ಲಿ ಅರುಚಿ ರುಚಿಯಲ್ಲಿ. ಅದು ಇರುಳು ಹಗಲಾದಂತೆ, ಹಗಲು ಇರುಳಾದಂತೆ, ಬದುಕು ಸಾವಿನಲ್ಲಿ, ಸಾವು ಮತ್ತೆ ಜೀವವಾಗಿ ಅರಳುವಲ್ಲಿ, ಎಲ್ಲದೂ ಒಂದಾದಂತೆ. ಹಾಗೆ ಎಲ್ಲದೂ ಸೇರಿ ಒಂದು ಆದಾಗಲೇ ಸಮರಸ - ಸಮರಸವೇ ಜೀವನ. ಅದಕ್ಕಾಗಿ ಮತ್ತೆ ಮತ್ತೆ ಸಾಲೆಲೆ ಪದಾರ್ಥಕ್ಕೆ ಮೇಲೋಗರವ ಬಡಿಸಿ ಕಾಯುವ ನಿರೀಕ್ಷೆಯಲ್ಲಿದ್ದಾನೆ ರಸಕರ್ತ, ಮತ್ತೊಂದು ಮಳೆಗಾಲಕ್ಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT