ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವ್ಯಕ್ಕೆ ಬೇಕಾದುದು ಅನ್ಯಮನಸ್ಕತೆ

‘ಜನ್ನ ಸಾಹಿತ್ಯ ಚರಿತ್ರೆ’ ವಿಚಾರ ಸಂಕಿರಣದಲ್ಲಿ ತೋಳ್ಪಾಡಿ ಅಭಿಮತ
Last Updated 13 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ‘ಧರ್ಮಕ್ಕೆ ಬೇಕಾದುದು ಏಕಾಗ್ರತೆ. ಕಾವ್ಯಕ್ಕೆ ಬೇಕಾದುದು ಅನ್ಯಮನಸ್ಕತೆ. ಕವಿ ಅನ್ಯಮನಸ್ಕ ಆಗದೆ ಉತ್ತಮ ಕಾವ್ಯ ಹುಟ್ಟಲು ಸಾಧ್ಯ ಇಲ್ಲ. ಕಾವ್ಯಕ್ಕೆ ಅನ್ಯಮನಸ್ಕತೆಯನ್ನು ಎಳೆದು ತಂದು ಕನ್ನಡದಲ್ಲಿ ಕಾವ್ಯ ಬೀಜ ಬಿತ್ತಿದ­ವರು ಜೈನರು’ ಎಂದು ಸಂಸ್ಕೃತಿ ಚಿಂತಕ ಲಕ್ಷ್ಮೀಶ ತೋಳ್ಪಾಡಿಅಭಿಪ್ರಾಯಪಟ್ಟರು.

ಬೆಂಗಳೂರು ನಾರ್ಥ್‌ ಎಜುಕೇಷನ್‌ ಸೊಸೈಟಿ (ಬಿಎನ್‌ಇಎಸ್‌ ಸಂಸ್ಥೆ) ವತಿ­ಯಿಂದ ಗಾಂಧಿ ಭವನದಲ್ಲಿ ಶುಕ್ರವಾರ ನಡೆದ ‘ಜನ್ನ ಸಾಹಿತ್ಯ ಚರಿತ್ರೆ’ ಎರಡು ದಿನಗಳ ರಾಷ್ಟ್ರೀಯ ವಿಚಾರ­ಸಂಕಿರಣ­ದಲ್ಲಿ ಆಶಯ ಭಾಷಣ ಮಾಡಿದರು.

‘ಜೈನ ತತ್ವಜ್ಞಾನ ಅನೇಕಾಂತ ತತ್ವಜ್ಞಾನ. ಇದು ಏಕಮುಖವಾದುದು ಅಲ್ಲ. ಭಾಷೆಯ ಅಭಿವ್ಯಕ್ತಿ ಏಳು ರೀತಿಯಲ್ಲಿ ಆಗಲು ಸಾಧ್ಯ ಇದೆ ಎಂದು ಜೈನ ಸಾಹಿತ್ಯ ಹೇಳುತ್ತದೆ’ ಎಂದರು.

‘ಹಳೆ ಕಾವ್ಯದಲ್ಲಿ ಹೊಸ ಸಂಗತಿ ಗುರುತಿಸುವ ಪ್ರಕ್ರಿಯೆ ಅಚ್ಚರಿ ತರುವಂತ­ಹುದು. ಹೊಸ ಸಂಗತಿಯನ್ನು ಗುರುತಿ­ಸಿದ ಕೂಡಲೇ ಗುರುತಿಸಿದವ ಹಳಬ­ನಾಗುತ್ತಾನೆ. ವಿಷಯ ಹೊಸದಾಗು­ತ್ತದೆ. ಇದೊಂದು ರೀತಿಯ ಪಲ್ಲಟ. ಹಳತು ಹಾಗೂ ಹೊಸತು ಸ್ಥಾಯಿ­ಸಂಗತಿ ಅಲ್ಲ. ಸೃಷ್ಟಿಶೀಲ ವಾಗಿ ನೋಡುವ ಪ್ರಯತ್ನ ಮಾಡಿದ ಕೂಡಲೇ ಗೊತ್ತಿಲ್ಲದೆ ನಾವು ಪ್ರಾಚೀನ ಆಗುತ್ತೇವೆ’ ಎಂದು ಅವರು ಹೇಳಿದರು.

‘ಜನ್ನನ ‘ಅನಂತನಾಥ ಪುರಾಣ’ ಹಾಗೂ ‘ಯಶೋಧರ ಚರಿತೆ’ ಕಾವ್ಯ ಈಗಲೂ ಕಾಡುತ್ತದೆ. ಚಿತ್ತಚಂಚಲ ಆಗಲು ಒಂದು ಹಾಡು ಸಾಕು ಎಂದು ಜನ್ನ ಕಾವ್ಯದ ಮೂಲಕ ಹೇಳುತ್ತಾನೆ. ಕಾಮಕ್ಕೆ ಕಣ್ಣಿಲ್ಲ ಎಂದು ಹೇಳುವವರು ಇದ್ದಾರೆ. ಕಾಮಕ್ಕೆ ಕಿವಿ ಇದೆ ಎಂದು ಇಲ್ಲಿ ಹೇಳಬಹುದು. ಒಂದು ಅಂಗ ವಿಕೃತ ಆದರೆ ಇನ್ನೊಂದು ಅಂಗ ಅಸಾ­ಧಾ­ರಣ ಸಂವೇದನಾಶೀಲ ಆಗುತ್ತದೆ’ ಎಂದು ಅವರು ವಿಶ್ಲೇಷಿಸಿದರು.

ಯಶೋಧರ ಚರಿತೆಯಲ್ಲಿ ‘ಗಾನ’, ‘ಮನಸ್ಸು ದಾನ’ ಹಾಗೂ ‘ನಿನ್ನನ್ನು ಬಿಟ್ಟು ಉಳಿದವರೆಲ್ಲ ಸಹೋದರರ ಸಮಾನ’ ಎಂಬ ಮೂರು ಸಂಗತಿಗಳನ್ನು ತಂದು ಜನ್ನ ಕಾವ್ಯ ಧರ್ಮ ಪಾಲಿಸಿದ. ನಮಗೆ ಗೊತ್ತಿಲ್ಲದೆ ಒಳಗಿರುವ ಸಂವೇದನೆಯನ್ನು ಸೂಕ್ಷ್ಮಗೊಳಿಸುವುದು ಹಾಗೂ ಆಳಗೊಳಿಸುವುದು ಕಾವ್ಯ. ಈ ಕೆಲಸವನ್ನು ಜನ್ನ ಕವಿ ಮಾಡಿದ್ದಾನೆ’ ಎಂದರು.

‘ಮಾತಿಗೆ ಅನೇಕ ಸಾಧ್ಯತೆ ಇದೆ ಎಂದು ಗೊತ್ತಾಗುವುದಕ್ಕೂ, ಜೀವನ ಹಾದಿ ತಪ್ಪಿ ಹೊಯ್ದಾಡುವುದಕ್ಕೂ, ಹಾದಿ ಸಿಗುವುದಕ್ಕೂ ಬಹಳ ಹತ್ತಿರ ಸಂಬಂಧ ಇದೆ. ಧರ್ಮ ಸಂಕಟ ಎಂಬ ಪದ ಬಂದ ಕೂಡಲೇ ಮನಸ್ಸು ಸೂಕ್ಷ್ಮ ಆಗುತ್ತದೆ. ಧರ್ಮಸಂಕಟಕ್ಕೆ ಒಳಗಾಗದೆ ಮಾತು ಸೂಕ್ಷ್ಮ ಆಗಲ್ಲ. ಈ ಎಲ್ಲ ಸಂಗತಿಗಳು ಜೈನ ಕಾವ್ಯಗಳಲ್ಲಿ ಅದ್ಭುತವಾಗಿ ವ್ಯಕ್ತ ಆಗುತ್ತವೆ’ ಎಂದು ಅವರು ಬೆಳಕು ಚೆಲ್ಲಿದರು.

ಹಿರಿಯ ಸಾಹಿತಿ ಡಾ.ಚಂದ್ರಶೇಖರ ಕಂಬಾರ ವಿಚಾರಸಂಕಿರಣ ಉದ್ಘಾಟಿಸಿ, ‘ಅನಂತನಾಥ ಪುರಾಣ ಹಾಗೂ ಯಶೋಧರ ಚರಿತೆ ಜನ್ನನ ಪ್ರಮುಖ ಕೃತಿಗಳು. ದೈಹಿಕ ಹಾಗೂ ಮಾನಸಿಕ ಕಾಮವನ್ನು ಪ್ರಮುಖ ವಿಷಯ­ವನ್ನಾಗಿಸಿಕೊಂಡು ಈ ಕೃತಿಗಳನ್ನು ರಚಿಸಲಾಗಿದೆ. ಕಾವ್ಯಪ್ರಿಯರನ್ನು ಬಹು­ವಾಗಿ ಕಾಡಿದ ಕವಿ ಜನ್ನ’ ಎಂದರು.

‘ಅನಂತನಾಥ ಪುರಾಣದಲ್ಲಿ ದೈಹಿಕ ಕಾಮದ ಬಗ್ಗೆ ಬೆಳಕು ಚೆಲ್ಲಲಾಗಿದೆ. ವಸುಶೇಣನ ಪತ್ನಿ ಸುನಂದ ಮಹಾ ಪತಿವೃತೆ. ಚಂಡಶಾಸನ ಆಕೆಯನ್ನು ಬಯಸುತ್ತಾನೆ. ಅದಕ್ಕಾಗಿ ಆತ ವಸು­ಶೇಣನ ಕೃತಕ ದೇಹ ಧರಿಸುತ್ತಾನೆ. ಒಪ್ಪದ ಸುನಂದ ಆತ್ಮಹತ್ಯೆ ಮಾಡಿ­ಕೊಳ್ಳುತ್ತಾಳೆ. ಆಕೆಯ ಚಿತೆಯಲ್ಲಿ  ತನ್ನನ್ನು ಸುಟ್ಟುಕೊಳ್ಳುವ ಮೂಲಕ ಆತ್ಮ ತ್ಯಾಗ ಮಾಡುತ್ತಾನೆ. ಆತನ ಕಾಮ ಶಾಂತ ಆಗುತ್ತದೆ. ಯಶೋಧರ ಚರಿತೆ ಕೃತಿಯಲ್ಲಿ ಮಧುರ ಧ್ವನಿ ಕೇಳಿಯೇ ಅಷ್ಟಾವಕ್ರನನ್ನು ಅಮೃತಮತಿ ಇಷ್ಟ­ಪಡುತ್ತಾಳೆ. ಇಲ್ಲಿಯದು ಮಾನಸಿಕ ಕಾಮ’ ಎಂದು ಅವರು  ವಿಶ್ಲೇಷಿಸಿದರು.

ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಬಸವರಾಜು, ಬಿಎನ್‌ಇಎಸ್‌ ಸಂಸ್ಥೆಯ ಅಧ್ಯಕ್ಷ ಬಿ.ಎಸ್‌.ಅಶ್ವತ್ಥನಾರಾಯಣ, ಕೋಶಾ­ಧ್ಯಕ್ಷ ಬಿ.ವಿ.ಕುಮಾರ್‌, ಆಡಳಿತಾಧಿಕಾರಿ ಪ್ರೊ.ಎಂ.­ಎಸ್‌.­ಕೃಷ್ಣಮೂರ್ತಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT