ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವ್ಯದಿಂದ ಉದಾತ್ತ ದೃಷ್ಟಿಕೋನ

Last Updated 8 ಸೆಪ್ಟೆಂಬರ್ 2013, 19:39 IST
ಅಕ್ಷರ ಗಾತ್ರ

ಬೆಂಗಳೂರು: `ಕಾವ್ಯ ಸಹೃದಯನಿಗೆ ಉದಾತ್ತವಾದ ಜೀವನ ದೃಷ್ಟಿಕೋನವನ್ನು ನೀಡುತ್ತದೆ' ಎಂದು ಕವಿ ಪ್ರೊ.ಕೆ.ಎಸ್.ನಿಸಾರ್ ಅಹಮ್ಮದ್ ಹೇಳಿದರು.
ಭಾರತೀಯ ವಿದ್ಯಾಭವನದಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ `ವಿ.ಕೃ.ಗೋಕಾಕ್ ಪ್ರಶಸ್ತಿ' ಸ್ವೀಕರಿಸಿ ಅವರು ಮಾತನಾಡಿದರು.

`ಕಾವ್ಯದಿಂದ ಜೀವನವನ್ನು ನೋಡುವ ಕ್ರಮ ಬದಲಾಗುತ್ತದೆ. ಪಂಪ, ರನ್ನ, ಕುವೆಂಪು ಅವರ ಹಿಂದೆ ವ್ಯಾಸ, ವಾಲ್ಮೀಕಿ ಇದ್ದರು. ಅದೇ ರೀತಿ ಗೋಕಾಕರ ಸಾಹಿತ್ಯದ ಹಿಂದೆ ಚರಿತ್ರೆ ಇತ್ತು. ಹೀಗಾಗಿಯೇ ಅವರು ಕುವೆಂಪು ಅವರ `ಶ್ರೀರಾಮಾಯಣ ದರ್ಶನಂ' ಮಹಾಕಾವ್ಯಕ್ಕೆ ಸರಿಸಮನಾದ ಕೃತಿ ರಚನೆಯನ್ನು ಅವರು ಮಾಡಿದರು. ಭಾರತೀಯ ಇತಿಹಾಸವನ್ನು ಅವಲೋಕಿಸುವ ಕಾರ್ಯವನ್ನು ತಮ್ಮ `ಭಾರತ ಸಿಂಧು ರಶ್ಮಿ' ಕೃತಿಯಲ್ಲಿ ಅವರು ಮಾಡಿದ್ದಾರೆ' ಎಂದು ಹೇಳಿದರು.

ನಿಸಾರ್ ಅಹಮ್ಮದ್ ಅವರ ಗದ್ಯದ ಬಗ್ಗೆ ಮಾತನಾಡಿದ ವಿಮರ್ಶಕ ಪ್ರೊ.ಸಿ.ಎನ್.ರಾಮಚಂದ್ರನ್, `ನಿಸಾರ್ ಅಹಮ್ಮದ್ ಅವರು ನಿತ್ಯೋತ್ಸವ ಕವಿತೆಯನ್ನು ಬರೆಯದಿದ್ದರೇ ಚೆನ್ನಾಗಿತ್ತು ಎಂಬುದು ನನ್ನ ಅನಿಸಿಕೆ. ಏಕೆಂದರೆ, ಈ ಕವಿತೆಯ ನಂತರ ಅವರನ್ನು ನಿತ್ಯೋತ್ಸವದ ಕವಿ ಎಂದು ಗುರುತಿಸಿದ್ದೇ ಹೆಚ್ಚು. ಅದನ್ನೂ ಮೀರಿ ಅವರು ಉತ್ತಮ ಗದ್ಯ ರಚನೆ ಮಾಡಿದ್ದಾರೆ. ಅವರ ಅನುವಾದ ಹಾಗೂ ಸಂಕೀರ್ಣ ವಿಷಯಗಳ ಮೇಲಿನ ಗದ್ಯ ಬರಹದ ಸರಳವಾಗಿದೆ. ಆದರೆ, ನಿತ್ಯೋತ್ಸವ ಕವಿತೆಯ ಜನಪ್ರಿಯತೆಯಿಂದಾಗಿ ಅವರ ಗದ್ಯ ಕೃಷಿ ಗೌಣವಾಗಿದೆ' ಎಂದರು.

ಹಿರಿಯ ನಿಘಂಟು ತಜ್ಞ ಪ್ರೊ.ಜಿ.ವೆಂಕಟಸುಬ್ಬಯ್ಯ, `ನಿಸಾರ್ ಅವರ ಬರಹಗಳಲ್ಲಿ ಹೊಸ ಪದಗಳ ಕುಸುರಿತನವಿದೆ. ಅವರ ಗದ್ಯದಲ್ಲಿ ಅಚ್ಚುಕಟ್ಟುತನವಿದೆ. ಗದ್ಯ- ಪದ್ಯಗಳನ್ನು ಸುಲಲಿತವಾಗಿ ಬರೆಯಬಲ್ಲ ಪ್ರತಿಭೆ ಅವರಲ್ಲಿದೆ' ಎಂದರು. ಹಿರಿಯ ಲೇಖಕ ಪ್ರೊ.ಎಂ.ಎಚ್. ಕೃಷ್ಣಯ್ಯ, `ವ್ಯಂಗ್ಯ ಮತ್ತು ವಿಡಂಬನೆಯ ಮೂಲಕ ತಮ್ಮ ಕಾವ್ಯದಲ್ಲಿ ಸಣ್ಣಗೆ ಆಕ್ರೋಶ ವ್ಯಕ್ತಪಡಿಸುವ ಕವಿ ಕೆ.ಎಸ್.ನಿಸಾರ್ ಅಹಮ್ಮದ್. ಅವರ ಕಾವ್ಯದಲ್ಲಿ ಪ್ರತಿಭಟನೆಯ ರೂಪಗಳಿಲ್ಲ. ಬದಲಿಗೆ ನೋವುಗಳು ಒಳಗೊಳಗೇ ಕುದ್ದು ಅನ್ನವಾಗುವ ಆಕ್ರೋಶವಿದೆ' ಎಂದು ನುಡಿದರು.

`ನವ್ಯದ ಕಾಲದಲ್ಲಿ ವಸಾಹತುಶಾಹಿ ಚಿಂತನೆಯಿಂದ ಹೊರಬಂದು ನೆಲಮೂಲವನ್ನು ಕಂಡುಕೊಳ್ಳುವ ಪ್ರಯತ್ನವನ್ನು ನಿಸಾರ್ ಮಾಡಿದರು. ನವ್ಯತೆಯ ತಂತ್ರ, ಭಾಷೆಯ ಬಳಕೆ ಹಾಗೂ ರೂಪಕದೊಂದಿಗೆ ನಗರದ ಆಡಂಬರವನ್ನು ಅವರ ಕಾವ್ಯ ವಿಡಂಬಿಸುತ್ತದೆ' ಎಂದರು. ಕಾರ್ಯಕ್ರಮದಲ್ಲಿ ವಿ.ಕೃ.ಗೋಕಾಕ್ ಅವರ `ಸಮರಸವೇ ಜೀವನ' ಕೃತಿಯ ಮರುಮುದ್ರಣ ಪುಸ್ತಕಗಳನ್ನು ಪ್ರೊ.ಜಿ.ವೆಂಕಟಸುಬ್ಬಯ್ಯ ಬಿಡುಗಡೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT