ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವ್ಯವೇ ಜ್ಞಾನ ಎಂಬ ನಂಬಿಕೆ ನಾಶ

ಕಿ.ರಂ. ನಾಗರಾಜ್ ವ್ಯಕ್ತಿತ್ವ ವಿಚಾರ ಸಂಕಿರಣದಲ್ಲಿ ಪ್ರೊ . ಚೆನ್ನಿ ಬೇಸರ
Last Updated 4 ಆಗಸ್ಟ್ 2013, 19:42 IST
ಅಕ್ಷರ ಗಾತ್ರ

ಬೆಂಗಳೂರು: `ಕಾವ್ಯವೇ ಜ್ಞಾನ ಎಂಬ ನಂಬಿಕೆಯನ್ನು ಹೊಂದಿದಾಗ ಕಾವ್ಯದ ಗುತ್ತಿಗೆ ಪಡೆದುಕೊಂಡಂತೆ ವರ್ತಿಸುತ್ತಿರುವ ಪಶ್ಚಿಮವನ್ನು ಎದುರಿಸಲು ಸಾಧ್ಯವಾಗುತ್ತದೆ' ಎಂದು ಹಿರಿಯ ವಿಮರ್ಶಕ ಪ್ರೊ.ರಾಜೇಂದ್ರ ಚೆನ್ನಿ ಪ್ರತಿಪಾದಿಸಿದರು.

ಕಾವ್ಯಮಂಡಲ ಹಾಗೂ ಜೆನ್ ಸೆಂಟರ್ ಆಶ್ರಯದಲ್ಲಿ ಬಸವನಗುಡಿಯ ನ್ಯಾಷನಲ್ ಕಾಲೇಜು ಸಭಾಂಗಣದಲ್ಲಿ ಭಾನುವಾರ ನಡೆದ `ಕಿ.ರಂ.ನಾಗರಾಜ್-ಮಾತು ಬರಹ ವ್ಯಕ್ತಿತ್ವ' ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

`ಕಾವ್ಯವೇ ಜ್ಞಾನ ಎಂಬ ಬಹು ದೊಡ್ಡ ನಂಬಿಕೆಯನ್ನು ಹೊಂದಿದ್ದವರು ಕಿ.ರಂ.ನಾಗರಾಜ್. ಆದರೆ, ಇಂದು ನಾವು ಕಾವ್ಯವೇ ಜ್ಞಾನ ಎಂಬ ನಂಬಿಕೆಯನ್ನು ಕಳೆದುಕೊಂಡಿದ್ದೇವೆ. ಕಾವ್ಯವನ್ನು ಮಂದ ಸಂವೇದನೆಯ ಮಧ್ಯಮವರ್ಗದಿಂದ ಹಾಗೂ ಮಾರುಕಟ್ಟೆಯ ಚೌಕಟ್ಟಿನಿಂದ ಹೊರಕ್ಕೆ ತರುವ ಅಗತ್ಯ ಇದೆ' ಎಂದು ಅವರು ಅಭಿಪ್ರಾಯಪಟ್ಟರು.

`ಗೊಡ್ಡು ಪಂಡಿತರ ಸ್ವತ್ತು ಆಗಿದ್ದ ಕಾವ್ಯವನ್ನು ಕಿ.ರಂ. ಅವರು ಜನರ ಬಳಿಗೆ ತಲುಪಿಸಿದರು. ಪಂಡಿತರ ಪರಂಪರೆ, ಲಿಖಿತ ಪರಂಪರೆಗಳಿಂದ ಮೌಖಿಕ ನೆಲೆಗೆ ಸಾಹಿತ್ಯವನ್ನು ತಲುಪಿಸಿದರು. ಕಾವ್ಯ ಸಾಮುದಾಯಿಕ ಅನುಭವ ಆಗಬೇಕು ಎಂದು ಅವರು ಆಶಿಸಿದ್ದರು.

ಕಾವ್ಯಕ್ಕೆ ಪ್ರದರ್ಶನ ಗುಣ ಹಾಗೂ ಶಾಶ್ವತ ಸಮಕಾಲೀನತೆ ಇದೆ ಎಂಬ ಅಚಲ ನಂಬಿಕೆಯನ್ನು ಹೊಂದಿದ್ದರು. ಸಾಹಿತ್ಯವನ್ನು ಚಾರಿತ್ರಿಕಗೊಳಿಸಬೇಕು ಎಂಬುದು ಅವರ ಆಶಯವಾಗಿತ್ತು. ಈ ಮೂಲಕ ಎಲ್ಲ ಮಿಥ್ಯಗಳಿಂದ ಹೊರಬರಲು ಸಾಧ್ಯವಾಗುತ್ತದೆ ಎಂದು ಭಾವಿಸಿದ್ದರು' ಎಂದು ನೆನಪಿಸಿಕೊಂಡರು.

`ವಸಾಹತುಶಾಹಿ, ಮತೀಯ ಶಕ್ತಿಗೆ ಪರ್ಯಾಯವಾಗಿ ಕನ್ನಡವನ್ನು ಬೆಳೆಸಬೇಕು ಎಂಬುದು ಕಿ.ರಂ. ಅವರ ಅಭಿಮತವಾಗಿತ್ತು. ಅವರು ಕನ್ನಡತ್ವವನ್ನು ಪುನರ್ ಸೃಷ್ಟಿಸುವ ಕೆಲಸ ಮಾಡಿದರು. ಶಿಷ್ಟ ಹಾಗೂ ಜಾನಪದವನ್ನು ಒಂದುಗೂಡಿಸುವ ಕೆಲಸವನ್ನು ಮಾಡಿದರು' ಎಂದು ಅವರು ತಿಳಿಸಿದರು.

`ಶಾಶ್ವತ ವ್ಯವಸ್ಥೆಯ ವಿರೋಧಿಯಾದ ಗುಪ್ತ ಸಮಾಜದ ಉಸ್ತಾದ್ ಆಗಿ ಕಿ.ರಂ. ನಾಗರಾಜ್ ಇದ್ದರು. ವಸಾಹತುವಾದ, ಯಜಮಾನ ಶಕ್ತಿಗಳ ಅಧಿಕಾರವನ್ನು ಒಡೆಯುವ ಕೆಲಸಕ್ಕೆ ಕಿ.ರಂ. ಅವರ ಮಾರ್ಗದರ್ಶನ ನೀಡುತ್ತಿದ್ದರು. ಆದರೆ, ಇಂದು ಕನ್ನಡ ಸಾಹಿತ್ಯ ಹಾಗೂ ವಿಮರ್ಶೆ ಮಠಗಳಾಗುತ್ತಿದೆ. ಕಿ.ರಂ. ಅವರು ಮಠ ಕಟ್ಟಲಿಲ್ಲ. ಅವರು ಕಟ್ಟಿದ್ದು ಗರಡಿಮನೆ. ಹೀಗಾಗಿ ಅವರು ಎತ್ತರಕ್ಕೆ ಬೆಳೆದರು.

ಕಿ.ರಂ. ಅವರ ಕೆಲಸಗಳ ಮಹತ್ವವನ್ನು ಅರಿತುಕೊಳ್ಳದಿದ್ದರೆ ವೈಚಾರಿಕ ಜಗತ್ತಿಗೆ ಹಿನ್ನಡೆ ಉಂಟಾಗಲಿದೆ' ಎಂದು ಅವರು ಎಚ್ಚರಿಸಿದರು.
ವಿಮರ್ಶಕ ಡಾ.ನಟರಾಜ್ ಹುಳಿಯಾರ್ ಆಶಯ ಭಾಷಣ ಮಾಡಿ, `ಕಿ.ರಂ. ಅವರೊಳಗೆ ಸಾವಿರಾರು ಪಠ್ಯಗಳು ಇದ್ದವು. ಸಾಹಿತ್ಯ ಓದಿನ ಮೇಲೆ ಸಾಮಾಜಿಕ ವಿಜ್ಞಾನದ ದಾಳಿಯನ್ನು ನಿರಂತರವಾಗಿ ವಿರೋಧಿಸುತ್ತಿದ್ದರು.

ಸಾಹಿತ್ಯ ಎಲ್ಲರಿಗೂ ತಲುಪಬೇಕು ಎಂಬ ಆಳವಾದ ನಂಬಿಕೆಯನ್ನು ಹೊಂದಿದ್ದರು. ಕನ್ನಡದ ಪ್ರತಿಷ್ಠಿತ ಶಕ್ತಿಗಳ ವಿರುದ್ಧ ಅವರು ಏಕಾಂಗಿಯಾಗಿ ಹೋರಾಟ ನಡೆದ್ದರು. ಅವರ ಕಾವ್ಯದಲ್ಲಿ ಸಮಾಜವಾದಿ ಚಳವಳಿಯ ಪ್ರೇರಣೆ ಇದೆ. ಅವರ ಎಲ್ಲ ಜಗಳಗಳು ಸಾಹಿತ್ಯಕ್ಕೆ ಸಂಬಂಧಪಟ್ಟವು' ಎಂದು ವಿಶ್ಲೇಷಿಸಿದರು.

`ಕೈಲಾಸಂ ಮಾದರಿ ವ್ಯಕ್ತಿತ್ವ'
`ಕಿ.ರಂ.ನಾಗರಾಜ್ ಅವರನ್ನು ನಮ್ಮ ಮನಸ್ಸಿನಲ್ಲಿ ಜೀವಂತವಾಗಿ ಇಟ್ಟುಕೊಳ್ಳುವುದು ಕನ್ನಡ ಭಾಷೆಯನ್ನು ಜೀವಂತವಾಗಿ ಇರಿಸಿಕೊಳ್ಳುವಷ್ಟು ಮುಖ್ಯ' ಎಂದು ಹಿರಿಯ ಸಾಹಿತಿ ಡಾ.ಯು.ಆರ್.ಅನಂತಮೂರ್ತಿ ಪ್ರತಿಪಾದಿಸಿದರು.

ಸಮಾರಂಭದಲ್ಲಿ ಮಾತನಾಡಿದ ಅವರು, `ಕನ್ನಡ ಇಂದು ಸರ್ಕಾರದ ಭಾಷೆ ಆಗಿಲ್ಲ, ಮಾಧ್ಯಮ ಆಗಿಲ್ಲ. ನಾಡಿನಲ್ಲಿ ಕನ್ನಡ ಏನೂ ಅಲ್ಲ ಎಂಬ ಸ್ಥಿತಿ ಇದೆ. ಈ ಎಲ್ಲವೂ ಕನ್ನಡ ಭಾಷೆ ಎಂದು ಪ್ರತಿಪಾದಿಸಿದವರು ಕಿ.ರಂ. ಅವರು' ಎಂದರು.

`ಕಿ.ರಂ. ನಿಧನರಾಗಿ ಮೂರು ವರ್ಷಗಳು ಕಳೆದವು. ಆದರೆ, ಅವರು ಈಗಲೂ ನನ್ನ ಜತೆ ಇದ್ದಾರೆ ಎಂಬ ಭಾವನೆ ಮೂಡುತ್ತಿದೆ. ಅವರ ಸಿಟ್ಟು, ಪ್ರೀತಿ, ಕಾವ್ಯ ಎಲ್ಲವೂ ನೆನಪಾಗುತ್ತಿದೆ. ಕೈಲಾಸಂ ಅವರನ್ನು ಈಗಲೂ ಜನರು ನೆನಪಿಸಿಕೊಳ್ಳುತ್ತಿದ್ದಾರೆ. ಕಿ.ರಂ. ಅವರದ್ದು ಕೈಲಾಸಂ ಮಾದರಿಯ ವ್ಯಕ್ತಿತ್ವ' ಎಂದು ಬಣ್ಣಿಸಿದರು.

`ಮದ್ಯ ಆರಾಧನೆ ಮುಖ್ಯ'
`ಕಿ.ರಂ. ನಾಗರಾಜ್ ಮೃತಪಟ್ಟ ದಿನದಂದು ಅವರ ನೆನಪಿನಲ್ಲಿ ಸ್ಮಾರಕ ಕಟ್ಟಬಾರದು ಎಂದು ಸ್ನೇಹಿತರೆಲ್ಲ ತೀರ್ಮಾನಿಸಿದ್ದೆವು. ಅದರ ಬದಲು ಅವರ ನೆನಪಿನಲ್ಲಿ ದರ್ಗಾ ಕಟ್ಟಬೇಕು. ಅಲ್ಲಿ ಪ್ರತಿವರ್ಷ ಉರುಸ್ ಆಚರಿಸಬೇಕು ಎಂಬ ಯೋಚನೆ ಮಾಡಿದ್ದೆವು' ಎಂದು ಪ್ರೊ.ರಾಜೇಂದ್ರ ಚೆನ್ನಿ ನೆನಪಿಸಿಕೊಂಡರು.

`ವಡ್ಡಾರಾಧನೆಯಷ್ಟೇ ಮದ್ಯ ಆರಾಧನೆ ಮುಖ್ಯ ಎಂದು ಕಿ.ರಂ. ಹೇಳುತ್ತಿದ್ದರು. ಜಾತಿ ವಿನಾಶ ಮೊದಲು ನಾವು ತೆಗೆದುಕೊಳ್ಳುವ ಪಾನೀಯಗಳಿಂದ ಆಗಬೇಕು ಎಂಬುದು ಅವರ ನುಡಿಯಾಗಿತ್ತು. ಈ ವಿಷಯದಲ್ಲಿ ನಾವು ಪ್ರಬುದ್ಧತೆ ಸಾಧಿಸಿದ್ದೇವೆ' ಎಂದು ನಗೆಚಟಾಕಿ ಹಾರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT