ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವ್ಯಾ ಪ್ರೇಮ ಪ್ರಸಂಗ!

Last Updated 11 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಸಿನಿಮಾ ರಂಗದ ಆಕರ್ಷಣೆಯೋ ಅಥವಾ ಮೊದಲ ಸಿನಿಮಾದ ಶೀರ್ಷಿಕೆಯ ಪರಿಣಾಮವೋ ಹೇಳುವುದು ಕಷ್ಟ- `ಐಯಾಮ್ ಇನ್ ಲವ್~ ಎನ್ನುತ್ತಿದ್ದಾರೆ ಕಾವ್ಯಾ ಶೆಟ್ಟಿ! ಕರಾವಳಿಯ ಈ ಬೆಡಗಿ `ಲವ್ ಯು~ ಎನ್ನುತ್ತಿರುವುದು ಚಿತ್ರರಂಗಕ್ಕೆ!
`ಐಯಾಮ್ ಇನ್ ಲವ್~ ಕಾವ್ಯಾ ಅವರ ಚೊಚ್ಚಿಲ ಚಿತ್ರ. ಮೊದಲ ಅನುಭವವೇ ಹಿತ ಎನ್ನಿಸಿದೆ. ಚಿತ್ರರಂಗದ ತೆಕ್ಕೆಗೆ ಜೋತುಬಿದ್ದಿದ್ದಾರೆ.
 
ಸಿನಿಲೋಕದಲ್ಲೇ ಮನೆಮಾಡಿಕೊಂಡು ವಿಹರಿಸುವ ಕನಸು ಕಟ್ಟುತ್ತಿದ್ದಾರೆ. ಮೊದಲ ಚಿತ್ರದ ಬಿಡುಗಡೆಗೆ ಮುನ್ನವೇ ತಮಿಳು ಮತ್ತು ತೆಲುಗು ಚಿತ್ರರಂಗದ ಅಂಗಳಕ್ಕೂ ಹೋಗಿಬಂದಿದ್ದಾರೆ.

ಉಡುಪಿ ಮೂಲದವರಾದ ಕಾವ್ಯಾ ಓದಿದ್ದು ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್. ಓದು ಸಾಗುತ್ತಿರುವಾಗಲೇ ಮಾಡೆಲಿಂಗ್ ಲೋಕ ಕರೆಯಿತು. ಒಂದು ಕೈ ನೋಡೋಣ ಎಂದು 2011ರಲ್ಲಿ ಫೆಮಿನಾ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಿದರು. ಬಣ್ಣದ ನಂಟು ಅಲ್ಲಿಂದಲೇ ಶುರುವಾಗಿದ್ದು.

ಹಲವು ಮುದ್ರಣ ಜಾಹೀರಾತುಗಳಿಗೆ ರೂಪದರ್ಶಿಯಾಗಿ ನಿಂತರು. ಆಗಿನ್ನೂ ಓದಿನ ಗುಂಗು ತಲೆಯಲ್ಲಿತ್ತು. ಹೀಗಾಗಿ ಸಿನಿಮಾರಂಗದ ಸೆಳೆತ ಅಷ್ಟಾಗಿ ಆಗಲಿಲ್ಲ. ಒಂದೂವರೆ ವರ್ಷ ರೂಪದರ್ಶಿಯಾಗಿ ಕ್ಯಾಮೆರಾ ಬೆಳಕಿಗೆ ಮೈಯೊಡ್ಡಿ ನಿಲ್ಲುತ್ತಲೇ ಓದನ್ನೂ ಮುಗಿಸಿದರು.

ನಿರ್ದೇಶಕ ನಂದಕುಮಾರ್ ನೀಡಿದ್ದ `ಐಯಾಮ್ ಇನ್ ಲವ್~ ಚಿತ್ರದ ಜಾಹೀರಾತು ಅವರ ಗಮನ ಸೆಳೆಯಿತು. ನಟಿಸಲೇಬೇಕೆಂಬ ಹೆಬ್ಬಯಕೆ ಇಲ್ಲದಿದ್ದರೂ ಒಂದು ಪ್ರಯತ್ನವಿರಲಿ ಎಂದು ಆಡಿಷನ್‌ನಲ್ಲಿ ಭಾಗವಹಿಸಿದರು.

ಆಯ್ಕೆಯೂ ಆದರು. ಸ್ಥಿರ ಕ್ಯಾಮೆರಾಗಳೆದುರು ನಿಂತು ಛಾಯಾಚಿತ್ರಗಳಿಗೆ ಪೋಸು ನೀಡುತ್ತಿದ್ದ ಅವರಿಗೆ ನಟನೆ ಆರಂಭದಲ್ಲಿ ಸಲೀಸು ಎನಿಸಲಿಲ್ಲ. ನಂದಕುಮಾರ್ ಅಭಿನಯದ ಪಾಠ ಹೇಳಿಕೊಟ್ಟರು. ನಿಧಾನವಾಗಿ ಅದು ಒಗ್ಗಿಕೊಂಡಿತು.

`ಐಯಾಮ್ ಇನ್ ಲವ್~ನಲ್ಲಿ ಅವರದು ಮುಗ್ಧಮನಸಿನ, ಸರಳ ಹುಡುಗಿಯ ಪಾತ್ರ. ಪಾತ್ರದಲ್ಲಿ ಗ್ಲಾಮರ್ ಇಲ್ಲ. ಆದರೆ ಪ್ರತಿಭೆ ತೋರಲು ಅವಕಾಶವಿದೆ ಎಂಬ ಖುಷಿ ಅವರದು. ಮೊದಲ ಚಿತ್ರ ಬಿಡುಗಡೆಯಾಗುವ ಮೊದಲೇ ತಮಿಳು ಚಿತ್ರದಲ್ಲಿ ಅವಕಾಶ ಅರಸಿ ಬಂತು.
 
ಭಾಷೆ ಗೊತ್ತಿಲ್ಲದಿದ್ದರೂ ಚೆನ್ನೈ ನಗರಿಗೆ ಹೋಗಿ ಬಂದರು. `ಶಿವಾನಿ~ ಅವರು ನಟಿಸಿರುವ ತಮಿಳು ಚಿತ್ರ. ಇದು ತೆಲುಗಿನಲ್ಲೂ ಸಿದ್ಧವಾಗುತ್ತಿದೆ. ಹೀಗಾಗಿ ಒಂದೇ ಚಿತ್ರಕ್ಕಾಗಿ ಎರಡು ಭಾಷೆಗಳಲ್ಲಿ ನಟಿಸುವ ಭಾಗ್ಯ ಅವರದು.

`ಶಿವಾನಿ~ಯಲ್ಲಿ ಕಾವ್ಯಾ ಪತ್ರಕರ್ತೆಯಾಗಿ ಕಾಣಿಸಿಕೊಂಡಿದ್ದಾರೆ. ಇದೊಂದು ರೊಮ್ಯಾಂಟಿಕ್ ಥ್ರಿಲ್ಲರ್ ಚಿತ್ರ ಎನ್ನುವುದು ಅವರ ಬಣ್ಣನೆ. ಅಭಿನಯ ಹೊಸತಾಗಿದ್ದರೂ ಕನ್ನಡದಲ್ಲಿ ಅವರಿಗೆ ಹೆಚ್ಚು ಕಷ್ಟವೆನಿಸಿರಲಿಲ್ಲ.
 
ಆದರೆ ತಮಿಳು-ತೆಲುಗಿನಲ್ಲಿ ಭಾಷೆ ಅವರಿಗೆ ಸವಾಲಾಗಿ ಕಂಡಿದೆ. ಸಂಭಾಷಣೆ ಓದಿ ದಿನಗಟ್ಟಲೆ ಅಭ್ಯಾಸ ನಡೆಸಿದ ಬಳಿಕವೇ ಅವರು ಅಲ್ಲಿ ಕ್ಯಾಮೆರಾ ಮುಂದೆ ನಿಂತಿದ್ದಾರೆ.

ಆಕಸ್ಮಿಕವಾಗಿ ಕಾಲಿಟ್ಟ ಚಿತ್ರರಂಗ ಕಾವ್ಯಾ ಅವರಿಗೆ ರುಚಿಸಿದೆ. ಎಂಜಿನಿಯರಿಂಗ್ ಓದಿದ್ದರೂ ಆ ವೃತ್ತಿಯೆಡೆಗೆ ಒಲವಿಲ್ಲ. ನಟನೆಯೇ ನನ್ನ ವೃತ್ತಿ ಎಂಬ ದೃಢ ನಿರ್ಧಾರ ಅವರದು. ಗ್ಲಾಮರಸ್ ಪಾತ್ರಗಳನ್ನು ಒಪ್ಪಿಕೊಳ್ಳಬೇಕೇ ಬೇಡವೇ ಎಂಬುದರ ಬಗ್ಗೆ ಅವರಿನ್ನೂ ಸ್ಪಷ್ಟ ನಿಲುವು ತಾಳಿಲ್ಲ.

ತಮಗೆ ಸಿಗುವ ಪಾತ್ರಗಳಿಗೆ ಪ್ರಾಮುಖ್ಯತೆ ಇರಬೇಕು. ಅದರಲ್ಲೂ ನಾಯಕಿ ಪ್ರಧಾನ ಸಿನಿಮಾಗಳಲ್ಲಿ ನಟಿಸಬೇಕು ಎಂಬ ಆಸೆ ಕಾವ್ಯಾರದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT