ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವ್ಯೋತ್ಸವ

Last Updated 22 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಕನಸಿನ ದೀಪ
ನಿಡುಗಾಲ ಉರಿವ
ಸುಡುಸುಡು ಸೂರ್ಯನೊಡನೆ
ಎದೆಯ ಮೇಲಿನ ಅಂಗಿ ಹಿಡಿದು
ಈ ಬಂಜೆ ಸಂಜೆಯಲಿ ಜಗಳಕ್ಕೆ ನಿಂತಿದ್ದೇನೆ
ಕನಸಿನ ದೀಪ ಹಚ್ಚಲು
ಸ್ವಲ್ಪ ಕಿಡಿ ಕೊಡು ಇಲ್ಲವೆ
ಬಿದ್ದ ಮನೆಯ ಕೈ ಹಿಡಿದು ಎಬ್ಬಿಸಲು
ಬೆಳಕಾಗಿ ಬಂದು ಬಿಡು
ರೊಟ್ಟಿಯ ತುಂಡಾಗಿಯೂ

ಮಳೆಗಾಲವ ನುಂಗಿರುವ ಬರಗಾಲ
ಸಂಕ್ರಮಣದ ಮಾತೇ ಇಲ್ಲ
ವೈಯಾರದಿ ಹರಿವ ನದಿ ಖರೀದಿ
ಮಾರಿದವರು ನಾವಂತೂ ಅಲ್ಲ
ಕಾಲವೇ ದಣಿಯುವಂತೆ ಸುರಿಸಿದ ಬೆವರು
ಅಷ್ಟೇ ನೀರು ನಮ್ಮ ಪಾಲು
ಅಪ್ಪಣೆಯಿಲ್ಲದೆ ಕುಡಿಯುವಂತಿಲ್ಲ
ಪಡೆಯುವ ದಾರಿ ಸುಲಭದ್ದಲ್ಲ
ಬೊಗಸೆಯೊಡ್ಡಿ ಬೇಡಿ
ನಾಡಪ್ರಭುವಿನ ಸೀಲೊತ್ತಿಸಿಕೊಂಡು
ಸಹಿ ಪಡೆಯಬೇಕು
ಈ ನೆಲ ಈ ನೀರು ನಮ್ಮಪ್ಪನದೇ

ಪ್ರತಿ ಬೆಳಗಿಗೂ ಕನಸಿನ ಬೀಜ ಹೆರುವ ನಮಗೆ
ಕಸಿದುಕೊಂಡು ಎದುರಿಗೇ
ಹುರಿದು ತಿಂದರೂ ತಡವರಿಸದೆ
ಕೇಳುವ ಮನಸು ಬರುವುದಿಲ್ಲ
ಕ್ಷಮಿಸಬೇಕು ದಯಾಳು
ಆಳುವ ಪ್ರಭುವಿನ ರುಚಿ ಮುಖ್ಯ
ಎಷ್ಟೇ ಹರಿದು ತಿನ್ನಲಿ ಅವರಿಗೇ ನಮ್ಮ ಮತ
ಗೊತ್ತಿಲ್ಲ ಎಲ್ಲೋ ಎಡವಟ್ಟಾಗುತ್ತಿದೆ
ಹೀಗೆ ಅನಿಸಿದಾಗಲೆಲ್ಲ
ಕನಸಿನ ದೀಪವೊಂದೇ ಕಣ್ಣಮುಂದೆ

ಆರದಂತೆ ಕಾಯುವ ಜರೂರು
ಈಗ ನಮ್ಮದು
ದೀಪದಿಂದ ದೀಪ ಹಚ್ಚಿ ಸಾಲು ದೀಪವಾಗೊ ತನಕ

ಈ ದೀಪದ ಮೇಲೆ ಎಲ್ಲರದೂ ಕಣ್ಣು
ಆಗಂತುಕ ಮಹಾಶಯರೇ
ನಿಮ್ಮನು ಬೆಳದಿಂಗಳಲಿ ತೊಳೆಯಬೇಕಿದೆ
ಒಳಗೂ ಹೊರಗೂ
ಕನಸಿನ ದೀಪ ಊದಬೇಡಿ
ಹೇಳುವ ಮಾತು ಕೇಳುವ ಮಾತು ಎಲ್ಲವೂ ಮುಗಿಯಿತು
ಬತ್ತಿಗೆ ಹತ್ತಿಯ ಬೀಜ
ಕಿಡಿಗೆ ಉರಿವ ಸೂರ್ಯ
ಎಣ್ಣೆಗೆ ಬೆವರಿರಲು
ಕನಸಿನ ದೀಪ ನನಸಾಗುವುದೊಂದೇ ಬಾಕಿ

ಈ ಮರುಭೂಮಿಯಲಿ
ಕನಸಿನ ಫಲ ಬೆಳೆದವರು ಯಾರೆಂದು
ಮುಖವಿರದ ಚಿತ್ರ ಬರೆಯುವ
ನಮ್ಮ ಮಗು ಅವಳ ಒಳಗೇ ನಗುತ್ತಿದೆ
ಬೆಳಕಿನ ಮರಿಗಾಗಿ ಕಾಯುವ ಸಂಭ್ರಮ ನನ್ನದು
ಕನಸಿನ ದೀಪ ಮರಿ ಹಾಕುತ್ತವೆ
ಹೆಗಲಿಗೆ ಹೆಗಲು ಜೊತೆಗಿರಲು
ಈ ಭುವಿಗೆ ಕೇಡುಗಾಲವಿಲ್ಲ.
-ವೀರಣ್ಣ ಮಡಿವಾಳರ

ಆಟದ ನಡುವೆ ಒಂದು ಆಟ
ಕೊಲಂಬೋನಲ್ಲಿ ಆ ಕ್ರಿಕೆಟ್ ಸ್ಟೇಡಿಯಮ್ಮಿನಲ್ಲಿ
ಇಂಗ್ಲೆಂಡು - ಶ್ರೀಲಂಕಾ ನಡುವಣ ವಿಶ್ವಕಪ್
ಕ್ವಾರ್ಟರ್ ಫೈನಲ್ ಪಂದ್ಯ ನಡೆಯುವಾಗ

ಬಾಲಿನ ಹಿಂದೆ ಅಟ್ಟಿಸಿಕೊಂಡು ಹೋದ ಕ್ಯಾಮೆರಾಮನ್

ಎದೆ ಬೆಚ್ಚಗಾಗಿಸುವ ಹುಡುಗಿಯನ್ನು ತಲುಪಿ
ನಿಂತು ಲೆನ್ಸಿನ ಕಣ್ಣಿಂದ ಕುಣಿವ ಕಣಿವೆಯೆದೆಯ
ಅವಳ ಮೈ ತಡವಿ, ತಡಮಾಡದೆ ಅವಳನ್ನು ದಾಟಿ

ಬೆಚ್ಚನೆ ಗುಬ್ಬಿಯೊಂದರ
ಕೊರಳು ಕೊಂಕಿಸಿದ ಪೋಸನ್ನು
ಕ್ಯಾಚ್ ಮಾಡಿಬಿಟ್ಟ
- ಎಂಥಾ ಸುಂದರ ಗುಬ್ಬಿ ಅಂತೀರಿ

ಅಲ್ಲೇ ಮರದ ಮರೆಯಲ್ಲಿ
ತಲೆ ತಗ್ಗಿಸಿ ಏನೋ ಮಾಡುತ್ತಿದ್ದ
ಆನೆ ಮಾತ್ರ ಹೊರಗೆ ಬರಲೇ ಇಲ್ಲ
ಅದನ್ನು ಅದೆಷ್ಟು ಸಲ
ಅವನ ಕ್ಯಾಮೆರ ತಡವಿದರೂ
ಇಂಗ್ಲೆಂಡ್ ಪಂದ್ಯ ಸೋತುಬಿಟ್ಟಿತು
ಅಥವಾ ಶ್ರೀಲಂಕಾ ಗೆದ್ದುಬಿಟ್ಟಿತು
ಯಾವುದೋ ಒಂದು ಬಿಡಿ ಅದು ಮುಖ್ಯವಲ್ಲ

ಆದರೆ ಆ ಗುಬ್ಬಿ ನನ್ನ ಮನಸ್ಸಿಂದ
ಆಚೆ ಬರಲು ನಿರಾಕರಿಸಿಬಿಟ್ಟಿತು

ಮತ್ತೆ - ಆ ಮರವನ್ನೆ ದಬ್ಬಿ ಮಲಗಿಸುವಂತಿದ್ದ
ಆನೆ ಅದನ್ನು ಮರಕ್ಕೆ ಕಟ್ಟಿಬಿಟ್ಟಿದ್ದರೇ?
ಅಥವಾ ಹಾಗೆಂದು ಅದು ಅಂದುಕೊಂಡಿತ್ತೇ?
-ಆರ್. ವಿಜಯರಾಘವನ್

ಅಮ್ಮನಿಗೆ ಗೊತ್ತಿರದ ವಿಷಯವಲ್ಲ

`ಈ ಮೊಬೈಲು ಕಂಪ್ಯೂಟರ್ ಬಂದು
ಹೂವಂತಿರುವ
ನಮ್ಮ ಹುಡುಗರು ಹುಡುಗಿಯರು
ಹಾಳಾದರು~
ಅಮ್ಮನದು ಸದಾ ಕೊರಗು.
ಯಂತ್ರ ತನ್ನ ಕೆಲಸ ಮಾಡುತಿದೆ
ಸ್ವರ ಅಕ್ಷರ ಚಿತ್ರಗಳನು
ಕಳಿಸುತಿದೆ ಕ್ಷಣಮಾತ್ರದಲಿ
ಭೂಮಿಯುದ್ದಗಲಕೂ
ಜಾಲವೇ ನೇಯ್ದಿದೆ.
ಮಿಕಕೆ ಗೊತ್ತಿರಬೇಕು
ಯಾವುದು ಬಲೆ?
ಯಾವುದು ಸೆಲೆ?
ಹೂವಿನ ಬಳಿಯಲ್ಲೂ ಮುಳ್ಳು
ತೆಂಗಿನ ಮರದಲ್ಲೂ ಕಳ್ಳು
ಹರಿಯುವುದು ಸುಲಭ
ಅರಿಯುವುದು ಕಷ್ಟ
ಮುಷ್ಟಿಯೊಳಗಿನ ವಿಶ್ವ
ಮೈಥುನದಂತೆ
ಚಟವಾದರೆ ಪಾತ
ಮೊಬೈಲು ಅಂತರ್ಜಾಲವಿಲ್ಲದ
ಸಹಸ್ರ-ಮಾನಗಳ ಹಿಂದೆಯೂ
ಅಹಲ್ಯೆ ಶಕುಂತಳೆ
ಪ್ರ-ಚಂಡ ವಿಶ್ವಾಮಿತ್ರನೂ
ಬಲಿ-ಪಶು ಆಗಿಲ್ಲವೆ?
ಅಮ್ಮನಿಗೆ ಗೊತ್ತಿರದ `ವಿಷಯ~ವೇನಲ್ಲ.
ಪಾವಲಿ ಕುಂಕುಮ ಧರಿಸಿದ
ಅವಳ ಹಣೆಯಲ್ಲಿ
ಲಕ್ಷ್ಮಣ ರೇಖೆ
ಮನಸು ಜಾರುವುದಕೆ ಸೆರಗಿನಂತೆ
ಮರ್ಕಟ ಸಾಕ್ಷಿ ಬೇಕಿಲ್ಲ
ಯಂತ್ರಕೆ ಮನಸಿಲ್ಲ
ಮನಸು ಯಂತ್ರವಲ್ಲ
ಇಲ್ಲಿ ಕಟ್ಟು-ಪಾಡುಗಳಿಗೆ
ಉಳಿಗಾಲವಿಲ್ಲ
ಮಗಳ ಉಬ್ಬಿದೆದೆ
ಮಗನ ತುಂಬಿದ ಸೊಂಟ
ಅಮ್ಮನ ಕಣ್ಣಿಗೆ ರಾಚುತಿದೆ
ಆದರೂ...
-ರವಿಶಂಕರ ಒಡ್ಡಂಬೆಟ್ಟು

ಮೊನಾಲೀಸಳ ಹುಡುಕಾಟದಲ್ಲಿ
ಪ್ರತಿ ಮುಖದ ಹಿಂದೆ ಒಂದೊಂದು ಅಪ್ರತಿಮ ಲೋಕ
-ಎಂ.ಗೋಪಾಲಕೃಷ್ಣ ಅಡಿಗ

ಡಾವಿಂಚಿ ಆಕೆಯನ್ನು ಎಲ್ಲಿ ಹುಡುಕಿ ತಂದ
ತನ್ನ ಮನದಲ್ಲಿ ತುಂಬಿಕೊಂಡ ಅಮ್ಮನ
ಅಥವಾ ಅನಾಮಿಕ ಗೆಳತಿಯರ ಭಾವ
ಅನುಭವದ ಕಣಕಣಗಳನ್ನು ಕಲಸಿ
ವರ್ಣಗಳ ವೈವಿಧ್ಯವ ಹುಡುಕಿದವನು
ಲೋಕದ ಹೆಣ್ಣಿನ ದುಃಖ ದುಮ್ಮಾನಗಳನ್ನ
ಒಂದೆಡೆ ಸೇರಿಸಿ ನೋಟದ ಕಣ್ಣಾಲಿಗಳಲ್ಲಿ ಮುಖದ
ಹುಬ್ಬು ತಗ್ಗುಗಳಲ್ಲಿ ಉಸಿರಾಟದ ಮಿಡಿತ
ಜೀವನದ ಅಲೆಗಳಂತೆ ಆಕಾಶದಲ್ಲಿ ತೇಲುವ
ಮೋಡಗಳಂತೆ ಕಾಣುವ ರೂಪಕ್ಕೆ ಪರದಾಡಿದವನು
ಕೊನೆಗೂ ಸ್ಪಂದನದ ಮರ್ಮವ ತಿಳಿಯುವ
ಪರಿಯನ್ನ ಚೆಲಾಪಿಲ್ಲಿಯಾದ ಚೆಲುವ
ಬದಲಾಗುವ ರೂಪ ಸಾದೃಶ್ಯದ ಹೊಳಪಿನ
ಮೌನದ ಬೆಳಕಿನಲಿ ಗೋಚರಿಸುವ
ನಗೆಯ ತರಂಗಗಳ ಗಡಿ ದಾಟಿಸಿದವನು

ಕಾಮ, ಪ್ರೇಮ ಗೆಳೆತನ ತಾಯ್ತನವ
ಪಂಚಾಮೃತದ ರಸ ಸ್ವಾದನದ ನಿಗೂಢ
ಒಂದೇ ಪಾತ್ರೆಯಲ್ಲಿ ತುಂಬಿದವ
ಕಾವ್ಯದ ನುಡಿಗಟ್ಟುಗಳ ಆಕಾಂಕ್ಷೆ ಅತೃಪ್ತ
ನಿಜದ ದೃಷ್ಟಿಗೆ ಅಮೋಘವ ವಿಸ್ತರಿಸಿದವನು

ಕೃಷ್ಣನ, ಕ್ರಿಸ್ತನ, ಬುದ್ಧನ ಮಂದಸ್ಮಿತ ಗಾಥೆಯ
ಧ್ಯಾನಸ್ಥ ಲೋಕದ ನಡಾವಳಿಗಳ
ಯುಗಳ ಗೀತಕ್ಕೆ ಆಲಾಪ ವಿಲಾಪಗಳ
ಚೌಕಟ್ಟಿನಲ್ಲಿ ಎಂದೆಂದೂ ಮುಗಿಯದ
ಪ್ರಚ್ಛನ್ನತೆಯ ಸೂಕ್ಷ್ಮವ ಧ್ವನಿಸಿದವನು
-ಶೂದ್ರ ಶ್ರೀನಿವಾಸ

ಅವ್ವ ಸಹಿ ಕಲಿತಳು
ಅವ್ವ ಖಾಲಿ ಇರದ ಜೀವ
ದುಡಿದು ದಣಿದು ಬಂದಳು
ಅಂಗಳದ ಕಸ ಬಳಿದು
ರಂಗೋಲಿ ಬಿಡಿಸಿ
ಪಾಠಿ ಪೇನೆ ಹಿಡಿದು
ಮುಂದೆ ಕುಳಿತಳು
ಬ್ಯಾಡ ಮಗ
ಬರಾಕಿಲ್ಲ ಅನಕೋತ
ಮುದ್ದು ಪುಟಾಣಿಯ ಹಾಗೆ
ಸೊಟ್ಟಪಟ್ಟ ಗೀಚಿ ನಾಚಿಕೊಂಡಳು
ಸೀರೆ ಸೆರಗಲಿ ವರೆಸಿ
ಮತ್ತೆ ಮತ್ತೆ ತಿದ್ದಿದಳು
ತಮ್ಮ ತಂಗಿ
`ಅವ್ವ ಓದಿ ನೌಕರಿ ತಗೋತಾಳ~
ಕಿಲ ಕಿಲ ನಕ್ಕರು
ಅಪ್ಪ
`ಮುದುಕಿ ಆದ್ಲು
ಏನ ಬರೀತಾಳ~
ಗುನುಗಿದ
ಅ ಆ ಇ ಈ ಬಳ್ಳಿ
ಸುತ್ತಿ ಸುತ್ತಿ ಬರೆದಳು
ಮೊದಲ ಶಬ್ದ ಮಗನ ಹಡೆದಳು
ಬರು ಬರುತ ಅವ್ವ
ಸಹಿ ಮಾಡುವುದು ಕಲಿತಳು
ಅವ್ವನ ಹೆಸರು
ವಜ್ರದ ಹೊಳಪು
ನನ್ನ ಕಣ್ಣಲ್ಲಿ ನೀರುಕ್ಕಿ ಬಂತು
ಪಾಠಿಯ ಮೇಲೆ
ಹನಿಗಳು ಚೆಲ್ಲಾಪಿಲ್ಲಿ
ಅಕ್ಷರಗಳ ಅಳಿಸಲು
ಮನಸು ಬರಲಿಲ್ಲ...
-ಬಸವರಾಜ ಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT