ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಶ್ಮೀರ ವಿವಾದ: ಭಾರತ ವಿಳಂಬ ತಂತ್ರ ಬಿಡಬೇಕು

Last Updated 14 ಆಗಸ್ಟ್ 2012, 19:30 IST
ಅಕ್ಷರ ಗಾತ್ರ

ಇಸ್ಲಾಮಾಬಾದ್ (ಪಿಟಿಐ): ಕಾಶ್ಮೀರ ವಿಷಯಕ್ಕೆ ಸಂಬಂಧಿಸಿದಂತೆ ನಿರ್ಣಯ ತೆಗೆದುಕೊಳ್ಳುವಲ್ಲಿ ಭಾರತವು ವಿಳಂಬ ತಂತ್ರವನ್ನು ಬಿಡಬೇಕು ಎಂದು ಪಾಕಿಸ್ತಾನದ ಪ್ರಧಾನಿ ರಜಾ ಪರ್ವೇಜ್ ಅಶ್ರಫ್ ಮಂಗಳವಾರ ಹೇಳಿದರು.

`ವಿಶ್ವಸಂಸ್ಥೆ ನಿರ್ಣಯಗಳನ್ನು ಗೌರವಿಸಿ ಭಾರತವು ಕಾಶ್ಮೀರ ವಿಷಯದಲ್ಲಿ ವಿಳಂಬ ನೀತಿಯನ್ನು ಬಿಡುತ್ತದೆ ಎಂದು ನಾವು ಭಾವಿಸುತ್ತೇವೆ~ ಎಂಬುದಾಗಿ ಪಾಕಿಸ್ತಾನದ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಮಾಡಿದ ಭಾಷಣದಲ್ಲಿ ಅವರು ತಿಳಿಸಿದರು. 

ಈ ಸಂಬಂಧ ಪಾಕಿಸ್ತಾನದ ನಿಲುವನ್ನು ಪುನರುಚ್ಚರಿಸುತ್ತಾ, `ಕಾಶ್ಮೀರಿಗಳ ಆಶೋತ್ತರ ಹಾಗೂ ವಿಶ್ವಸಂಸ್ಥೆಯ ನಿರ್ಣಯಗಳಿಗೆ ಅನುಗುಣವಾಗಿ ಈ ವಿವಾದವನ್ನು ಇತ್ಯರ್ಥಪಡಿಸಬೇಕಿದೆ ಎಂದರಲ್ಲದೆ, ನಾವು ಕಾಶ್ಮೀರದ ಜನರಿಗೆ ರಾಜಕೀಯ, ರಾಜತಾಂತ್ರಿಕ ಹಾಗೂ ನೈತಿಕ ಬೆಂಬಲ ಮುಂದುವರಿಸುತ್ತೇವೆ~ ಎಂದು ನುಡಿದರು.

`ಶಾಂತಿ ಹಾಗೂ ಅಭ್ಯುದಯದ ದೃಷ್ಟಿಯಿಂದ ನಾವು ಭಾರತದೊಂದಿಗೆ ಉತ್ತಮ ಹಾಗೂ ಸೌಹಾರ್ದಯುತ ಸಂಬಂಧವನ್ನು ಬಯಸುತ್ತೇವೆ. ಅಲ್ಲದೆ, ಕಾಶ್ಮೀರ ವಿಷಯ ಸೇರಿದಂತೆ ಎಲ್ಲ ವಿವಾದಗಳನ್ನು ಪರಸ್ಪರ ತಿಳಿವಳಿಕೆ ಹಾಗೂ ಮಾತುಕತೆಯ ಮೂಲಕ ಇತ್ಯರ್ಥಪಡಿಸಲು ಇಷ್ಟಪಡುತ್ತೇವೆ~ ಎಂದೂ ಅವರು ಹೇಳಿದರು.

`ಯಾವುದೇ ವಿವಾದ ಇತ್ಯರ್ಥಕ್ಕೆ ಮಾತುಕತೆಗಿಂತ ಉತ್ತಮ ಮಾರ್ಗ ಇನ್ನೊಂದಿಲ್ಲ. ನಾವು ಭಾರತದೊಂದಿಗೆ ವ್ಯಾಪಾರ ಸಂಬಂಧ ಆರಂಭಿಸಿದ್ದೇವೆ. ಇದರಿಂದ ಉಭಯ ದೇಶಗಳಿಗೂ ಪ್ರಯೋಜನವಾಗಲಿದೆ~ ಎಂದು ಅವರು ಅಭಿಪ್ರಾಯಪಟ್ಟರು.

ಭಯೋತ್ಪಾದನೆ ನಿಗ್ರಹಕ್ಕೆ ಕಠಿಣ ಕಾನೂನು ಬೇಕಿದೆ: ಕಯಾನಿ
`ಭಯೋತ್ಪಾದನೆ ನಿಗ್ರಹಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನಕ್ಕೆ ಕಠಿಣ ಕಾನೂನಿನ ಅಗತ್ಯವಿದೆ~ ಎಂದು ಸೇನಾ ಮುಖ್ಯಸ್ಥ ಜನರಲ್ ಅಶ್ಫಕ್ ಪರ್ವೇಜ್ ಕಯಾನಿ ಅಭಿಪ್ರಾಯಪಟ್ಟಿದ್ದಾರೆ.

ಕಾಕುಲ್ ಪಟ್ಟಣದಲ್ಲಿ ಪಾಕ್ ಸೇನಾ ಅಕಾಡೆಮಿಯ ಪರೇಡ್ ಉದ್ದೇಶಿಸಿ ಮಾತನಾಡಿದ ಅವರು, `ಭಯೋತ್ಪಾದಕರನ್ನು ಶಿಕ್ಷಿಸಲು ಇಡೀ ವಿಶ್ವ ಹೊಸ ಕಾನೂನು ರೂಪಿಸಿದ್ದು, ನಾವು ಹಳೆಯದನ್ನು ಮರೆತು ಮುಂದೆ ಹೆಜ್ಜೆ ಇಡಬೇಕಿದೆ~ ಎಂದರು.

`ಯಾರೂ ಪರಿಪೂರ್ಣರಲ್ಲ, ಎಲ್ಲರೂ ತಪ್ಪು ಮಾಡುತ್ತಾರೆ. ಕೆಲವರು ಕಡಿಮೆ ತಪ್ಪು ಮಾಡಿದರೆ, ಮತ್ತೆ ಕೆಲವರು ಹೆಚ್ಚು ತಪ್ಪು ಮಾಡುತ್ತಾರೆ~ ಎಂದು ಕಯಾನಿ ಮಾಡಿದ ಭಾಷಣವನ್ನು `ಜಿಯೋ ಟಿವಿ~  ಪ್ರಸಾರ ಮಾಡಿದೆ. ಆದರೆ ಕಯಾನಿ ಯಾರನ್ನು ಉದ್ದೇಶಿಸಿ ಈ ಮಾತುಗಳನ್ನು ಆಡಿದ್ದಾರೆ ಎನ್ನುವುದನ್ನು ಅದು ಸ್ಪಷ್ಟಪಡಿಸಿಲ್ಲ.
`ದೇಶದ ಬೆಂಬಲವಿಲ್ಲದೇ ಸೇನೆಯು ಯಶ ಸಾಧಿಸಲು ಸಾಧ್ಯವಿಲ್ಲ~ ಎಂದ ಅವರು, `ರಾಷ್ಟ್ರದ ಜನತೆ ಒಗ್ಗೂಡಬೇಕು~ ಎಂದು ಕರೆ ನೀಡಿದರು.

`ಹಿಂಸಾಪೀಡಿತ ಪ್ರದೇಶದಲ್ಲಿ ಶಾಂತಿಯನ್ನು ಮರುಸ್ಥಾಪಿಸುವುದು ನಮ್ಮ ನಿಜವಾದ ಉದ್ದೇಶ. ಇದೇ ವೇಳೆ ದೇಶದ ಜನರು ಸಂವಿಧಾನ ಹಾಗೂ ಕಾನೂನಿಗೆ ಬದ್ಧರಾಗಿರಬೇಕಾಗುತ್ತದೆ~ ಎಂದೂ ಅವರು ನುಡಿದರು.

ಕಯಾನಿ ತಮ್ಮ ಭಾಷಣದಲ್ಲಿ ಪಾಕ್‌ನಲ್ಲಿರುವ ಹಿಂದೂಗಳ ಬಗ್ಗೆಯೂ ಪ್ರಸ್ತಾಪಿಸಿ, `ಎಲ್ಲ ಅಲ್ಪಸಂಖ್ಯಾತರ ಜೀವ ಮತ್ತು ಆಸ್ತಿ ರಕ್ಷಣೆಗೆ ದೇಶವು ಬದ್ಧವಾಗಿದೆ~ ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT