ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಷ್ಠದಲ್ಲಿ ಅರಳಿದ ಕಲೆ

Last Updated 1 ಜೂನ್ 2011, 19:30 IST
ಅಕ್ಷರ ಗಾತ್ರ

ರಾಷ್ಟ್ರೀಯ ಹೆದ್ದಾರಿ 48ರಲ್ಲಿ  ಶಿರಾಡಿ ಘಾಟ್ ದಾಟಿ ಸಕಲೇಶಪುರಕ್ಕೆ ಒಂದೆರಡು ಕಿಲೋ ಮೀಟರುಗಳಿರುವಾಗ ಆನೇ ಮಹಲ್ ಎಂಬ ಊರು ಸಿಗುತ್ತದೆ. ಊರಿನ ಎರಡೂ ಮಗ್ಗುಲಿನ ರಸ್ತೆ ಬದಿಯಲ್ಲಿ ವಿವಿಧ ಆಕೃತಿಯ ಕಾಷ್ಠ ಕಲಾಕೃತಿಗಳು ಈ ರಸ್ತೆಯಲ್ಲಿ ಪ್ರಯಾಣ ಮಾಡುವವರ ಗಮನ ಸೆಳೆಯುತ್ತವೆ.

ಇವು ಕಾಫಿಗಿಡದ ಬೇರು, ರೆಂಬೆ ಕೊಂಬೆಗಳಿಂದ ಮಾಡಿದ ವಿಶಿಷ್ಟ ಕಲಾಕೃತಿಗಳು ಹಾಗೂ ಪೀಠೋಪಕರಣಗಳು. ಉರುವಲಾಗಿ ಒಲೆಗೆ ಸೇರುತ್ತಿದ್ದ ಒಣ ಕಾಫಿಗಿಡಗಳು ಕಲಾವಿದನ ಕಣ್ಣಿಗೆ ಬಿದ್ದು ಸುಂದರ ಕಲಾಕೃತಿಗಳಾಗಿ ರೂಪುಗೊಂಡಿವೆ.

ಕಾಫಿ ಗಿಡಗಳ ಆಯುಷ್ಯ ಕೆಲ ವರ್ಷಗಳು. ನಂತರ ಆ ಗಿಡಗಳಲ್ಲಿ ಇಳುವರಿ ನಿರೀಕ್ಷಿಸುವುದು ಕಷ್ಟ. ಹಳೆಯ ಗಿಡಗಳನ್ನು ಕಿತ್ತು ಹೊಸ ಸಸಿಗಳನ್ನು ನೆಡುತ್ತಾರೆ. ಹಳೆಯ ಗಿಡಗಳನ್ನು  ಕರಕುಶಲ ವಸ್ತುಗಳನ್ನು ತಯಾರಿಸುವವರು ಖರೀದಿಸುತ್ತಾರೆ. 

ರೋಬಸ್ಟಾ ಕಾಫಿ ಗಿಡಗಳು ಕಲಾಕೃತಿಗಳನ್ನು ತಯಾರಿಸಲು ಹೆಚ್ಚು ಸೂಕ್ತ. ಕಾಫಿ ಎಸ್ಟೇಟ್‌ನಿಂದ  ಕಿತ್ತು ತಂದ ಗಿಡಗಳನ್ನು ರಾಶಿ ಹಾಕುತ್ತಾರೆ. ಈ ಗಿಡಗಳ ಬೇರು, ಕಾಂಡಗಳನ್ನು ಪರಿಶೀಲಿಸಿ ಅವುಗಳಲ್ಲಿ ನಾನಾ ನಮೂನೆಯ ಕಲಾಕೃತಿಗಳನ್ನು ರೂಪಿಸುತ್ತಾರೆ. ನೂರು ರೂಗಳಿಂದ ಹಿಡಿದು ಸಾವಿರಾರು ರೂ.ವರೆಗೆ ಇವುಗಳನ್ನು ಮಾರಾಟ ಮಾಡುತ್ತಾರೆ.

 `ಚಿಕ್ಕಮಗಳೂರು, ಮೂಡಿಗೆರೆ, ಬಾಳೆಹೊನ್ನೂರು, ಸಕಲೇಶಪುರ ಸುತ್ತಮುತ್ತಲಿನ ಕಾಫಿ ಎಸ್ಟೇಟ್‌ಗಳಿಂದ ಒಣಗಿದ  ಕಾಫಿ ಗಿಡಗಳನ್ನು ತರುತ್ತೇವೆ. ನಂತರ ಅವನ್ನು  ಕತ್ತರಿಸಿ ಕಲಾಕೃತಿಗಳನ್ನಾಗಿಸುತ್ತೇವೆ. ಅವಕ್ಕೆ ವಾರ್ನಿಶ್ ಹಚ್ಚಿ ಆಕರ್ಷಕವಾಗಿ ಜೋಡಿಸುತ್ತೇವೆ. ಈ ರಸ್ತೆಯಲ್ಲಿ ಪ್ರಯಾಣ ಮಾಡುವವರು ಅವನ್ನು ಖರೀದಿಸುತ್ತಾರೆ ಎನ್ನುತ್ತಾರೆ ಕರಕುಶಲ ವ್ಯಾಪಾರಿ ರಿಯಾಝ್.

 ಕಾಫಿ ಗಿಡದ ಕಾಂಡ, ಬೇರುಗಳನ್ನು ನೋಡಿದಾಗ ಅದರಿಂದ ಏನು ಮಾಡಬಹುದು ಎಂದು ನಮಗೆ ಹೊಳೆಯುತ್ತದೆ. ಅವುಗಳನ್ನು ಕತ್ತರಿಸಿ ಜೋಡಿಸುವುದೇ ಕಲಾವಿದನ ಕೆಲಸ ಎನ್ನುತ್ತಾರೆ ಕರಕುಶಲ ಕಲೆಯಲ್ಲಿ ಪಳಗಿದ ವಿನ್ಯಾಸಗಾರ ಆರಿಫ್. 

 ಕಾಫಿ  ಕಾಷ್ಠದಲ್ಲಿ ತಯಾರಿಸಿದ ಕಲಾಕೃತಿಗಳು ಬಹಳ ವಿಶಿಷ್ಟವಾದುದು. ಕೆಲವು ಬೇರುಗಳು ಅನೇಕ ಪ್ರಾಣಿಗಳನ್ನು ಹೋಲುತ್ತವೆ. ಅನೇಕ ಕಲಾಕೃತಿಗಳು ಮೊದಲ ನೋಟಕ್ಕೆ ಸೆಳೆಯುತ್ತವೆ ಎನ್ನುತ್ತಾರೆ ಬೆಂಗಳೂರಿನ ಗೃಹಿಣಿ ಸುಷ್ಮಾ.

ಕಾಫಿ ಗಿಡಗಳ ಬೇರು, ಕಾಂಡ ಬಳಸಿ ಟೀಪಾಯ್ ಮಾಡಬಹುದು. ಬಲಿತ ಕಾಂಡಗಳಿಂದ ಆನೆ, ಮೀನು, ಮನುಷ್ಯನ ಆ ಅಕೃತಿಗಳನ್ನೂ ಮಾಡಬಹುದು. ಒಟ್ಟಿನಲ್ಲಿ ಇವು ಜನರಿಗೆ ಇಷ್ಟವಾಗುತ್ತವೆ. ಚೌಕಾಶಿ ಮಾಡಿದರೆ ಕಡಿಮೆ ಬೆಲೆಗೂ ಸಿಗುತ್ತವೆ ಎನ್ನುವುದು ಅನೇಕರ ಅನುಭವ.

 ಹೆದ್ದಾರಿ ಪ್ರವಾಸಿಗರೇ ಈ ಕಲಾಕೃತಿಗಳ ಗಿರಾಕಿಗಳು. ಕೆಲವರಿಗೆ ಟೀಪಾಯ್ ಇಷ್ಟವಾಗದರೆ ಇನ್ನು ಕೆಲವರಿಗೆ ಟಿ.ವಿ. ಶೋಕೇಸ್ ಇಷ್ಟವಾಗುತ್ತದೆ. ಆನೇಮಹಲ್ ಗ್ರಾಮದ ಉದ್ದಕ್ಕೂ ಇಂತಹ ಹಲವು ಕರ ಕುಶಲ ವಸ್ತುಗಳ ಮಳಿಗೆಗಳಿವೆ.
 
ಈ ಗ್ರಾಮದ ಹಲವು ಕುಟುಂಬಗಳ ಕಸುಬು ಇದೇ ಆಗಿದೆ. ಬೆಳಿಗ್ಗೆ ಎದ್ದು ಮಳಿಗೆ ತೆರೆದು ಕಲಾಕೃತಿಗಳನ್ನು ಆಕರ್ಷಕವಾಗಿ ಜೋಡಿಸಿ ರಾತ್ರಿ ವರೆಗೆ ವ್ಯಾಪಾರ ಮಾಡುತ್ತಾರೆ.  365 ದಿನಗಳೂ ವ್ಯಾಪಾರ ನಡೆಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT